Tuesday, March 18, 2008

ಅಸ್ತಿತ್ವ

ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ?
ನಾವರಿಯಲಾರದೆಲ್ಲದರೊಟ್ಟು ಹೆಸರೆ?
ಕಾವಿನೋರ್ವ್ನಿರಲ್ಕೆ ಜಗದ ಕಥೆಯೇಕಿಂತು?
ಸಾವು ಹುಟ್ಟುಗಳೇನು? - ಮಂಕುತಿಮ್ಮ

ಈ ಸಮಸ್ಯೆ ಪ್ರತಿಯೊಬ್ಬನಿಗೂ (ತಲೆ ಇರುವ!) ಒ೦ದಲ್ಲ ಒ೦ದು ಬಾರಿ, ಒ೦ದಲ್ಲ ಒ೦ದು ರೀತಿ ಕಾಡಿಯೇ ಇರುತ್ತದೆ. ಜಗತ್ತಿನೆಲ್ಲೆಡೆಯ ಜನರು ತಮ್ಮ ತಮ್ಮ ಮೂಗಿನ ನೇರಕ್ಕೆ ಕಲ್ಪನೆಗಳನ್ನು ಸೃಷ್ಟಿಸಿದ್ದಾರೆ, ಅವನ್ನೇ ಸತ್ಯವೆ೦ದು ನ೦ಬಿಕೊ೦ಡಿದ್ದಾರೆ , ಹಾಗೆ೦ದು ಇತರರನ್ನು ನ೦ಬಿಸಲು ಪ್ರಯತ್ನಿಸಿದ್ದಾರೆ, ಪ್ರಯತ್ನಿಸುತ್ತಿದ್ದಾರೆ. ಹಾಗಿರುವಾಗ ನಾನೊ೦ದು ಕಲ್ಪನೆಯನ್ನು ಹುಟ್ಟು ಹಾಕಿ, ಅದನ್ನೆ ಹೊತ್ತು ತಿರುಗುವುದರಲ್ಲೇನು ತಪ್ಪು? ಮೇಲಾಗಿ ನಾನೊಬ್ಬ ಹಿ೦ದು, ಸ್ವ೦ತ ಕಲ್ಪನೆಗಳನ್ನು ಹೊ೦ದುವುದಕ್ಕೆ ಸ್ವತ೦ತ್ರ! ಅಲ್ವೇ ಮತ್ತೆ? ಅದಕ್ಕೇ, ಹೇಳೋರು ಕೇಳೋರು ಇಲ್ಲದೆ ಆಖೈರು ಮುವತ್ಮೂರು ಕೋಟಿ ದೇವತೆಗಳು ಹುಟ್ಟಿಕೊ೦ಡಿದ್ದಾರೆ ಇಲ್ಲಿ. ಅ೦ಥಾದ್ರಲ್ಲಿ ನ೦ದೂ ಒ೦ದು ಇರ್ಲಿ ಅ೦ತ. ನಾನೇನೂ ನನಗೆ ನಿಮ್ಮ ಸಹಮತ ಬೇಕೇ ಬೇಕು ಎ೦ದು ಧರಣಿ ಹೂಡಿಲ್ಲ! ಸುಮ್ನೇ ತಕರಾರಿಲ್ಲದೆ ಓದಿ ಮು೦ದಕ್ಕೆ.

ನಾನು ಹೈಸ್ಕೂಲು ಓದ್ತಾ ಇದ್ದ ಸಮಯ, ಕೊಪ್ಪದಲ್ಲಿ, ನಾವಿದ್ದದ್ದು ಬಾಡಿಗೆ ಮನೆಯಲ್ಲಿ, ಓನರ್ ಮಗ ನನ್ನ ಕ್ಲಾಸ್ ಮೇಟ್ ಕೂಡ. ಅದು ಹೆ೦ಚಿನ ಮನೆ. ಜ೦ತೆ ಸ೦ದಿಗಳಲ್ಲೆಲ್ಲ ಯಾವ ಯಾವ ಪ್ರಾಣಿಗಳು ಓಡಾಡಿಕೊ೦ಡು ಹೋಗ್ತಿದ್ವೋ ಏನೋ ಗೊತ್ತಿಲ್ಲ. ಒಮ್ಮೆಯ೦ತೂ, ನಾವು ಊಟ ಮಾಡ್ತಾ ಇದ್ದಾಗ ನೇರ ತಲೆ ಮೇಲಕ್ಕೆ ಜ೦ತೆಯಲ್ಲಿ ಒ೦ದು ಕೇರೆ ಹಾವು ಕಾಣಿಸ್ಕೊಳ್ತು, ಮಾರುದ್ದ, ಕೈ ದಪ್ಪ. ನಾವದನ್ನ ಬೆದರಿಸಿ ಓಡಿಸ್ಲಿಕ್ಕೆ ಪ್ರಯತ್ನಿಸಿದ್ವಿ. ಅದೇನೂ ಜಪ್ಪಯ್ಯ ಅನ್ಲಿಲ್ಲ. ಉಷ್ ಅ೦ದ್ರೂ ಇಲ್ಲ, ಅಚ್ಚಾ ಅ೦ದ್ರೂ ಇಲ್ಲ, ಕೊನೆಗೆ ಕೋಲು ತಗೊ೦ಡು ತಿವ್ದ್ರೂ ಇಲ್ಲ. ಪಕ್ಕದ್ಮನೆಯವರು ತಡೀದೇ ಹೋಗಿದ್ದಿದ್ರೆ ನಮ್ಮ ತ೦ದೆ ಹಾವನ್ನ ಹೊಡಿತಾ ಇದ್ದದ್ದ೦ತೂ ದಿಟ. ಹೋಗ್ಲಿ ಬಿಡಿ ಪಾಪದ್ದು, ಸ್ವಲ್ಪ ಹೊತ್ತು ಇದ್ದು ಆಮೇಲೆ ಅದರ ಪಾಡಿಗೆ ಅದು ಹೊರಟು ಹೋಗ್ತದೆ ಅ೦ದದ್ದಕ್ಕೆ ಸುಮ್ಮನಾದೆವು. ಅದನ್ನ ಬಿಟ್ಟಿದ್ದೇ ಬಿಟ್ಟಿದ್ದು, ಅದು ಅಲ್ಲಿ೦ದ ಹೊರಡಲೇ ಇಲ್ಲ, ಆರು ತಿ೦ಗಳವರೆಗೆ ಅಲ್ಲೇ ಠಿಕಾಣಿ ಹೂಡಿ ಬಿಡ್ತು. ನಾವು ಊಟ ಮಾಡುವಾಗ, ಮಲಗುವಾಗ ಎಲ್ಲಿ ನಮ್ಮ ಮೇಲೆ ಬಿದ್ದೀತೋ ಅ೦ತ ಜೀವ ಹಿಡಿದುಕೊ೦ಡೇ ಬದುಕ್ತಾ ಇದ್ವಿ. ಆದರೆ ಎಷ್ಟು ದಿನ ಅ೦ತ ಸಹಿಸಿಕೊಳ್ಳೋದು? ಕೊನೆಗೆ ಇದನ್ನು ಹೇಗಾದ್ರೂ ಪರಿಹರಿಸಲೇಬೇಕೆ೦ದು ನಿರ್ಧರಿಸಿದೆವು. ನಮ್ಮ ಓನರ್, ಅವರ ಮಗನನ್ನ ಕರೆದು ಹೇಳಿದರು - "ಒ೦ದು ಲೋಟ ಅರಿಶಿನದ ನೀರು ತಗೊ೦ಡು ಬಾ ಅಪ್ಪಣ್ಣಾ, ಏನಾದ್ರೂ ಪಾಪ ಸುತ್ಕೊಳ್ಲಿ, ಸುಬ್ರಹ್ಮಣ್ಯನಿಗೆ ಮುಡಿ ಕಟ್ಬಿಡ್ತೀನಿ" ಅ೦ದ್ರು. ಅವನು ಅರಿಶಿನದ ನೀರು ತ೦ದ. ಅರಿಶಿನದ ನೀರು ತಗೊ೦ಡು, ಕ್ಷಮೆ ಕೇಳಿ, ನೇರ ಹಾವಿದ್ದ ಜಾಗಕ್ಕೇ ಎರಚಿದರು. ಅದೇನಾಯ್ತೋ ಗೊತ್ತಿಲ್ಲ, ಆರು ತಿ೦ಗಳಿ೦ದ ಮನೆಯಲ್ಲೇ ಠಿಕಾಣಿ ಹೂಡಿದ್ದ ಹಾವು ಒ೦ದು ನಿಮಿಷವೂ ಅಲ್ಲಿ ನಿಲ್ಲಲಾರದೇ ಹೋಯ್ತು. ಮತ್ತೆ೦ದೂ ಅದು ಮನೆ ಕಡೆ ಸುಳಿಯಲಿಲ್ಲ. ನಮಗಿದೊ೦ದು ಅಚ್ಚರಿಯಾಗಿ ಕ೦ಡಿತು. ಅದಕ್ಕೆ ಅವರು ಹೇಳಿದ್ದಿಷ್ಟು - ಅರಿಶಿನ ಹಾವಿನ ಗುರು ಅ೦ತೆ. ಹಾಗಾಗಿ ಅದು ಅರಿಶಿನ ಕ೦ಡ ಕೂಡಲೇ ಗುರು ಅ೦ತ ನಮಸ್ಕರಿಸಿ ಹೊರಟು ಹೋಗುತ್ತದೆ. ಆದರೆ ಅದನ್ನ ಹಾಗೆ ನಮ್ಮ ಉಪಯೋಗಕ್ಕೆ ಬಳಸುವುದು ಪಾಪದ೦ತೆ. ಅದಕ್ಕೇ ಸುಬ್ರಹ್ಮಣ್ಯನಿಗೆ ಮುಡಿ ಕಟ್ಟಿ ಪ್ರಾಯಶ್ಚಿತ್ತ ಮಾಡ್ಕೊಳ್ಬೇಕು ಅ೦ತ ಅ೦ದ್ರು. ಇತ್ತೀಚೆಗೆ ಮನೇಲಿ ಅದರ ಬಗ್ಗೆನೇ ವಿಚಾರ ಮಾಡ್ತಾ ಇದ್ದಾಗ, ನಮಗೊ೦ದು ಹೊಳಹು ಸಿಕ್ತು. ಧಾರ್ಮಿಕ ನ೦ಬಿಕೆಗಳಿರುವವರು ಆ ಸನ್ನಿವೇಶಗಳನ್ನು ವಿವರಿಸುವುದಕ್ಕೆ ಏನೇ ಕಾರಣಗಳನ್ನು ಕೊಡಲಿ, ನಮಗನ್ನಿಸುವುದು ಅರಿಶಿನದಲ್ಲಿ ಹಾವನ್ನು ವಿಕರ್ಷಿಸುವ೦ತಹುದ್ದೇನೋ ರಾಸಾಯನಿಕವಿರಬಹುದು, ಹಾಗಾಗಿ ಹಿ೦ದಿನವರು ಯಾರೋ ಜನರಿಗೆ ಇದನ್ನ ಅರ್ಥ ಮಾಡಿಸಲು ಕಷ್ಟ ಎ೦ದೆಣಿಸಿ ಈ ರೀತಿ ಕತೆ ಕಟ್ಟಿರಬಹುದು ಎನ್ನಿಸುತ್ತದೆ. ಬಹುಶಃ ಪ್ರತಿದಿನ ಬೆಳಗ್ಗೆ ನಮ್ಮ ಹಿ೦ದು ಮನೆಗಳಲ್ಲಿ ಹೊಸ್ತಿಲನ್ನು ಪೂಜಿಸಿ ಅರಿಶಿನ ಕು೦ಕುಮ ಇಡುವುದರ ಗೂಢಾರ್ಥ ಇದೇ ಇರಬಹುದೇನೋ. ಹಾವುಗಳು ಮನೆಯನ್ನು ಪ್ರವೇಶಿಸದ೦ತೆ ಅದೊ೦ದು ಲಕ್ಷ್ಮಣ ರೇಖೆಯ೦ತೆ ಇರಬಹುದೆನಿಸುತ್ತದೆ.

ಹಿ೦ದಿನವರ ಕಲ್ಪನೆಗಳನ್ನು ಸಾರಸಗಟಾಗಿ, ಪೂರ್ವ ಅಪರ ವಿಚಾರಿಸದೆ ಮೌಢ್ಯವೆ೦ದು ಜರೆದು ಮೂಲೆಗೆ ಒತ್ತುವವರನ್ನು ಕ೦ಡಾಗ ಇನ್ನೊ೦ದು ಸ೦ಗತಿ ನೆನಪಾಗುತ್ತದೆ. ವಾಸ್ತವ ರಾಮಾಯಣ ಪುಸ್ತಕ ಓದುತ್ತಿದ್ದೆ. ವಾಲ್ಮೀಕಿ ರಾಮಾಯಣ ಒ೦ದು ಕಪೋಲ ಕಲ್ಪಿತ ಕಥೆಯಲ್ಲ, ಅದೊ೦ದು ನೈಜ ಇತಿಹಾಸದ ದಾಖಲೆ ಎ೦ದು ಸಾಬೀತುಪಡಿಸುವ ಪ್ರಯತ್ನ ಅದು. ಅದರಲ್ಲಿ ಪುರಾಣಗಳಲ್ಲಿ ಬರುವ ಸಪ್ತ ಲೋಕಗಳ (ಅತಲ, ವಿತಲ, ಸುತಲ, ಮಹಾತಲ, ರಸೌತಲ, ತಲಾತಲ, ಪಾತಲ) ಅರ್ಥವನ್ನು, ತಮ್ಮದೇ ರೀತಿಯಲ್ಲಿ ವಿಮರ್ಶಿಸಿದ್ದಾರೆ. ಯಾರೇ ಆದರೂ ಪಾತಲದ ಅರ್ಥ ತಿಳಿಸುವಾಗ, ನೀವು ನಿ೦ತಿರುವ ಭೂಮಿಯಿ೦ದ ನೇರ ಕೆಳಕ್ಕೆ ಕೊರೆದುಕೊ೦ಡು ಹೋದರೆ ಕೊನೆಗೆ ಸಿಗುವ ಲೋಕವೇ ಪಾತಾಳ ಎ೦ದು ವಿವರಣೆ ನೀಡುತ್ತಾರೆ. ಯಥಾರ್ಥದ೦ತೆ ಈಗ ನಾವು ಹಾಗೆ ಭೂಮಿಯನ್ನು ಕೊರೆದುಕೊ೦ಡು ಹೊರಟರೆ ಬಹುಶಃ ನಮಗೆ ಸಿಗುವುದು ಅಮೆರಿಕಾ ಖ೦ಡಗಳು. ಆ ಪುಸ್ತಕದ ಲೇಖಕರು ಅದುವೇ ಪಾತಲದ ನೈಜ ಅರ್ಥವೆ೦ದು ಅಭಿಪ್ರಾಯಪಡುತ್ತಾರೆ. ಅವರ ಪ್ರಕಾರ ಅಮೆರಿಕ ಖ೦ಡದ "ಮಾಯಾ" ನಾಗರಿಕತೆಯು ರಾಕ್ಷಸಶಿಲ್ಪಿ ಮಯ ನಿರ್ಮಿತವಾದುದು. ಬಲಿ ಚಕ್ರವರ್ತಿಯಿ೦ದ ತ್ರಿಲೋಕಗಳನ್ನು ದಾನ ಪಡೆದ ವಾಮನ, ಆತನನ್ನು ಪಾತಲಕ್ಕೆ ತುಳಿದುದರ ಅರ್ಥ, ಏಶಿಯಾ, ಆಫ್ರಿಕಾ, ಯುರೋಪ್ ಖ೦ಡಗಳನ್ನು ದಾನವಾಗಿ ಪಡೆದು ಆತನನ್ನು ಅಮೆರಿಕ ಖ೦ಡಕ್ಕೆ ಗಡೀಪಾರು ಮಾಡಿದ್ದೆ೦ದು ಅರ್ಥೈಸುತ್ತಾರೆ. ಈಗಲೂ ಅಲ್ಲಿನ ಬುಡಕಟ್ಟುಗಳಲ್ಲಿ ಬಲಿಯ ಹೆಸರಿನಲ್ಲಿ ಉತ್ಸವಗಳು ನಡೆಯುತ್ತಿರುವುದಾಗಿ ಉದಾಹರಿಸಿದ್ದಾರೆ. ಅರ್ವಾಚೀನ ಕಾಲದಲ್ಲಿ ಈ ಎರಡೂ ಭೂಭಾಗಗಳ ನಡುವೆ ಸ೦ಪರ್ಕ ಇದ್ದಿತೆ೦ದು ತೋರುತ್ತದೆ. ಅಲ್ಲಿ೦ದ ಇಲ್ಲಿಗೆ ಬ೦ದವರನ್ನು ಇಲ್ಲಿನವರು ಸ್ಥಳ, ಹಿನ್ನೆಲೆ ವಿಚಾರಿಸಿದಾಗ, ಆ ಸ೦ಗತಿಯನ್ನು ಇವರಿಗೆ ವಿವರಿಸಬಹುದಾಗಿತ್ತಾದರೂ ಹೇಗೆ? ಭೂಮಿ ದು೦ಡಾಗಿದೆ ಎ೦ದು ಹೇಳಿ ಸುಮ್ಮನೆ ಅಪಹಾಸ್ಯ ಎದುರಿಸುವ ಬದಲು, ಈ ರೀತಿಯ ವಿವರಣೆಯ ಮೊರೆ ಹೋಗಿರಬಹುದು.

ಹಾಗಾಗಿ ಹಿ೦ದಿನವರ ಕಲ್ಪನೆಗಳಲ್ಲಿ ಏನೋ ವಿಶೇಷ ಇರಬೇಕೆ೦ಬುದೇ ನನ್ನ ನ೦ಬಿಕೆ. ಚಿಕ್ಕ೦ದಿನಿ೦ದಲೂ, ಈ ಬ್ರಹ್ಮ, ವಿಷ್ನು, ಶಿವ, ಇವ್ರೆಲ್ಲಾ ಯಾರು ಅನ್ನೋ ಜಿಜ್ಞಾಸೆ ನನಗೆ. ತ್ರಿಮೂರ್ತಿಗಳ ಪಾತ್ರವನ್ನು ತಿಳಿಸುವಾಗ ಬ್ರಹ್ಮನನ್ನು ಸೃಷ್ಟಿಗೆ, ವಿಷ್ಣುವನ್ನು ಸ್ಥಿತಿಗೆ, ಶಿವನನ್ನು ಲಯಕ್ಕೆ ಆರೋಪಿಸಿದ್ದಾರೆ. ಈ ಮೂರು ಪಾತ್ರಗಳನ್ನು ಸ್ವಲ್ಪ ಗಮನಿಸೋಣ.

ಸೃಷ್ಟಿ ಎ೦ದರೇನು? ನಮ್ಮ ಸುತ್ತಮುತ್ತ ಕಾಣುತ್ತಿರುವ ಎಲ್ಲವೂ ಸೃಷ್ಟಿಯೇ ತಾನೆ? ಸೃಷ್ಟಿಯ ವೈವಿಧ್ಯತೆ, ನಿರ೦ತರ ಬದಲಾವಣೆ, ವ್ಯಾಪಕತೆ ಎಷ್ಟೇ ಇರಲಿ, ಸೃಷ್ಟಿ ಆಗಿರುವುದು ದ್ರವ್ಯ ಅಥವಾ ವಸ್ತುವಿನಿ೦ದ. ಆ ಒ೦ದು ಪದದಲ್ಲಿ ಇಡೀ ಸೃಷ್ಟಿಯ ಅರ್ಥವನ್ನೆ ಹಿಡಿದಿಡಬಹುದು. ನನ್ನ ತಾತ ಒ೦ದು ಪುಸ್ತಕ ಓದುತ್ತಿದ್ದರು, ಯಾವುದೋ ಪುರಾಣಕ್ಕೆ ಸ೦ಬ೦ಧಿಸಿದ್ದು - ಆದಿಯಲ್ಲಿ ಬ್ರಹ್ಮನೊಬ್ಬನೇ ಇದ್ದನ೦ತೆ. ಆತನಲ್ಲಿ "ಏಕೋಹ೦ ಬಹುಸ್ಯಾಮ" (ಒಬ್ಬನಿದ್ದೇನೆ ಹಲವರಾಗೋಣ) ಎ೦ಬ ಭಾವನೆ ಸ್ಫುರಿಸಿತ೦ತೆ, ಅದರ ಪರಿಣಾಮವೇ ಈ ಸೃಷ್ಟಿ. ಇದನ್ನು ಗಮನಿಸಿದಾಗ, ದ್ರವ್ಯ ಅಥವಾ ವಸ್ತು ಎನ್ನವುದಕ್ಕೆ ಪರ್ಯಾಯವಾಗಿ ಬ್ರಹ್ಮ ಎ೦ಬ ಪದ ಪ್ರಯೋಗ ಸೃಷ್ಟಿಯಾಗಿರಬೇಕು ಎನ್ನುವ ಅನುಮಾನ ದೃಢವಾಗುತ್ತದೆ. ನನ್ನ ಈ ಊಹೆ ನಿಜವಾದಲ್ಲಿ, ಆ ತಥಾಕಥಿತ ಬ್ರಹ್ಮನ ಸ್ವರೂಪವಾದರೂ ಎ೦ಥದ್ದು? ವಸ್ತುವಿನ ನೈಜರೂಪ, ಮೂಲರೂಪ ಹೇಗಿದೆ ಎನ್ನುವುದನ್ನು ಸ್ವಲ್ಪ ನೋಡುವಾ. ಸೃಷ್ಟಿಯ ವೈವಿಧ್ಯತೆಗೆ ಮಿತಿ ಇರುವ ಹಾಗ೦ತೂ ಕಾಣುತ್ತಿಲ್ಲ. ಅ೦ತೆಯೇ ಇತರದಿ೦ದ ಭಿನ್ನವಾಗಿ ರೂಪುಗೊ೦ಡಿರುವ ಪ್ರತಿಯೊ೦ದನ್ನೂ ಅರ್ಥ ಮಾಡಿಕೊಳ್ಳುವ ಸಾಧ್ಯತೆ ಇಲ್ಲವೇ ಇಲ್ಲ. ಹಾಗಾಗಿಯೇ ಈ ಎಲ್ಲ ವೈವಿಧ್ಯತೆಗಳ ಹಿ೦ದೆ ಸಮಾನವಾದುದು ಏನಾದರೂ ಇದೆಯೇ ಎ೦ಬುದರ ಶೋಧನೆ ನಿರ೦ತರವಾಗಿ ನಡೆಯುತ್ತಿದೆ. ಶತಮಾನಗಳ ಕಾಲ ಪ್ರಯತ್ನ ಪಟ್ಟು ಈ ಅನ೦ತ ವಸ್ತು ವೈವಿಧ್ಯಗಳನ್ನು ನೂರು ಚಿಲ್ಲರೆ ವಸ್ತುಗಳ ಸ೦ಯೋಜನೆಗಳ ಭಿನ್ನ ಭಿನ್ನ ಅಭಿವ್ಯಕ್ತಿಗಳಾಗಿ ಗುರುತಿಸಿದ್ದಾರೆ. ಅವುಗಳೇ ಮೂಲವಸ್ತುಗಳು ಎ೦ದು ಅನೇಕ ದಶಕಗಳಿ೦ದ ನ೦ಬಿಕೊ೦ಡಿದ್ದೆವು. ಇನ್ನೂ ಮು೦ದುವರೆದ ಸ೦ಶೋಧನೆಗಳ ಫಲವಾಗಿ ಆ ಭಾವನೆ ಶಿಥಿಲವಾಗಿ ಪರಮಾಣುವೇ ಅ೦ತಿಮವಲ್ಲ, ಮೂಲವಸ್ತು ಎ೦ಬ ಅಭಿದಾನಕ್ಕೆ ಪರಮಾಣು ಪಾತ್ರವಲ್ಲ ಎನ್ನುವುದು ಖಚಿತವಾಗಿದೆ. ಹೋಗಲಿ, subatomic particleಗಳಿಗಾದರೂ ಈ ಸವಾರಿ ನಿ೦ತೀತೇ ಎ೦ದರೆ, ಅವುಗಳಿಗೂ ಮೂಲಭೂತವಾದ ಅ೦ಶಗಳನ್ನು ಗುರುತಿಸಿದ್ದಾರೆ, quarks (in protons, neutrons) ಅ೦ತೆ. ಇದಿನ್ನೂ ಎಷ್ಟು ಆಳಕ್ಕೆ ಹೋಗುವುದೋ ಗೊತ್ತಿಲ್ಲ, ಹಾಗು ಇದಕ್ಕೊ೦ದು ಅ೦ತ್ಯವಿದ್ದ೦ತೆ ತೋರುತ್ತಿಲ್ಲ. ಸ್ಥೂಲದಿ೦ದ ಸೂಕ್ಷ್ಮದ ಕಡೆಗಾದರೂ ಚಲಿಸಿರಿ, ಅಥವಾ ಸೂಕ್ಷ್ಮದಿ೦ದ ಸ್ಥೂಲದ ಕಡೆಗಾದರೂ ಚಲಿಸಿರಿ, ನಾವೊ೦ದು ಅ೦ತಿಮ ನೆಲೆಯನ್ನು ತಲುಪುವುದೇ ಇಲ್ಲ. ಸೃಷ್ಟಿಯ ವೈವಿಧ್ಯತೆಗೆ ಮಿತಿಯಿಲ್ಲ, ಅ೦ತ್ಯವಿಲ್ಲ. ವಿವರಣೆಗೆ ಸಿಲುಕದ್ದು, ನಿಲುಕದ್ದು. ಇನ್ನು ವ್ಯಾಪಕತೆ? ಆಕಾಶ ಮುಗಿಯದ ಹೊರತು ವಿಶ್ವದಲ್ಲಿನ ದ್ರವ್ಯರಾಶಿ ಇ೦ತಿಷ್ಟೇ ಎ೦ದು ಸೀಮಿತಗೊಳಿಸಲಾದೀತೇ? ಹೋಗಲಿ ಕಾಲದಿ೦ದಾದರೂ ಸರಿ ಇದನ್ನು ಬ೦ಧಿಸಲಾದೀತೇ? ಸೃಷ್ಟಿ ಪ್ರಾರ೦ಭವಾದದ್ದು ಯಾವಾಗ ಎನ್ನುವುದಕ್ಕೆ ಉತ್ತರ ಕೊಟ್ಟೇವೆ೦ದರೂ, ಅದಕ್ಕೂ ಮು೦ಚೆ ಏನಿತ್ತು ಎ೦ಬ ಪ್ರಶ್ನೆ ಉಳಿದೇ ಉಳಿಯುತ್ತದೆ. ಇನ್ನು ನಾಶದ ಬಗ್ಗೆ ಹೇಳುವುದಾದರೂ ಏನು, ಈಗಾಗಲೇ ಅಸ್ತಿತ್ವದಲ್ಲಿರುವುದು ಹೋಗುವುದಾದರೂ ಎಲ್ಲಿಗೆ? ಹೌದು, ಬ್ರಹ್ಮ - ಅನಾದಿ, ಶಾಶ್ವತ, ಅನ೦ತ, ಅಪ್ರಮೇಯ, ಅಚಿ೦ತ್ಯ. ನನ್ನ ಕಲ್ಪನೆಯಲ್ಲಿ ಬ್ರಹ್ಮ=ವಸ್ತು.

ಸ್ಥಿತಿಯ ಅರ್ಥ? ಇರುವಿಕೆ! ಇರುವಿಕೆಗೆ ಮೂಲಭೂತವಾದ ಅಗತ್ಯವೇನು? - ಇರುವ೦ತದ್ದು ಮತ್ತು ಇರುವಿಕೆಗೆ ಅವಕಾಶ ಕೊಡುವ೦ತದ್ದು. ಇರುವ೦ತದ್ದು ಸಹಜವಾಗಿಯೇ ವಸ್ತು, ವಸ್ತುವಿಗೆ ಮಾತ್ರ ಇರುವಿಕೆ ಸಾಧ್ಯ. ಇರುವಿಕೆಗೆ ಬೇಕಾದ್ದು ಅವಕಾಶ, ಜಾಗ, ಸ್ಥಳ, ಆಕಾಶ. ವಿಷ್ಣು ಸ್ಥಿತಿಕಾರಕನೆ೦ದರೆ, ಇರುವಿಕೆಗೆ ಅವಕಾಶ ಮಾಡಿಕೊಡುವ೦ತವನು, ಆಕಾಶ. ನಮ್ಮಲ್ಲಿ ಅಗ್ನಿ, ವರುಣ, ವಾಯು ಇತ್ಯಾದಿ ಅಧಿದೇವತೆಗಳು ಇದ್ದಾಗ್ಯೂ ಆಕಾಶಕ್ಕೆ ಯಾರೂ ಇದ್ದ೦ತಿಲ್ಲ. ವಿಷ್ಣುವನ್ನು ಖಪ್ರಭ, ಗಗನಸದೃಶನೆ೦ದು ಕರೆದಿದ್ದಾರೆ. ಸಾಮಾನ್ಯವಾಗಿ ನೀಲಿ ಬಣ್ಣವೇ ವಿಷ್ಣುವಿನ ಮೇಲೆ ಆರೋಪಿತವಾಗಿರುವ೦ತದ್ದು. ಬಹುಶಃ ಆಕಾಶವೇ ವಿಷ್ಣು ಇರಬೇಕು. ಇನ್ನು ಆಕಾಶದ ಸ್ವಭಾವಗಳು - ಸೀಮಾತೀತ, ಅನ೦ತಕ್ಕೆ ಮತ್ತೊ೦ದು ಹೆಸರೇ ಆಕಾಶ, ಎ೦ದೂ, ಎಲ್ಲೂ ಮುಗಿಯುವುದೇ ಇಲ್ಲ. ಇನ್ನು ಆಕಾಶ ಹುಟ್ಟಿದ್ದು ಯಾವಾಗ ಅನ್ನೋ ಪ್ರಶ್ನೆಯೇ ಮೂರ್ಖತನದ್ದೆನಿಸುತ್ತದೆ. ಸಾಯುವುದು ಸಾಧ್ಯವಿಲ್ಲದ ಮಾತು, ಸತ್ತು ಹೋಗುವುದಾದರೂ ಎಲ್ಲಿಗೆ. ಆಕಾಶದ ವಿನಃ ಎಲ್ಲಿಗೆ ಅನ್ನುವುದಕ್ಕೆ ಅರ್ಥವಾದರೂ ಎಲ್ಲಿದೆ? ಇನ್ನೊ೦ದು ಸ೦ಗತಿ, ಆಕಾಶ ಇಲ್ಲದ ಜಾಗ ಎಲ್ಲಿಯಾದರೂ ನೋಡಿದ್ದೀರೇನು? ಎಷ್ಟು ಹಾಸ್ಯಾಸ್ಪದವಾದ ಪ್ರಶ್ನೆ. ಜಾಗವೇ ಅಲ್ಲವೇ ಆಕಾಶ ಎನ್ನುವುದು? ಭೇದಗಳೇ ಇಲ್ಲ, ಅಷ್ಟು ಅಖ೦ಡ! ವಿವರಣೆಗೆ ಸಿಲುಕದ್ದು, ನಿಲುಕದ್ದು. ವಿಷ್ಣು - ಅನಾದಿ, ಅನ೦ತ, ಅಖ೦ಡ, ಅಪ್ರಮೇಯ.

ಲಯವೆ೦ದರೆ ನಾಶವಲ್ಲ. ಕೇವಲ ರೂಪಾ೦ತರ ಅಷ್ಟೇ. ಸ೦ಯುಕ್ತಕ್ಕೆ ಮಾತ್ರ ಲಯವಿರಬಲ್ಲುದು. ಈ ಸೃಷ್ಟಿಯೆಲ್ಲ ಸ೦ಯುಕ್ತವೇ. ವಸ್ತುವಿನ (ಇಲ್ಲಿ ಸ೦ಯುಕ್ತ) ಹುಟ್ಟಿನಿ೦ದಲೇ ಅದರ ಸಾವೂ ಪ್ರಾರ೦ಭವಾಗುತ್ತದೆ. ಲಯದ ಮೂಲಭೂತ ಅಗತ್ಯ ಸಮಯ, ಕಾಲ. ಪ್ರತಿಯೊ೦ದು ಜೀವಿ, ನಿರ್ಜೀವಿ ಕೂಡ, ಆಯಸ್ಸು ಅದೆಷ್ಟೇ ದೀರ್ಘವಾಗಿರಲಿ ಸಮಯದ ಪರಿಮಿತಿಗೆ ಒಳಪಡಲೇಬೇಕು. ಶಿವಶತನಾಮಾವಳಿಯಲ್ಲಿ ಈಶ್ವರನನ್ನು ಮಹಾಕಾಲನೆ೦ದು ಸ೦ಬೋಧಿಸಿದ್ದಾರೆ, ಸ್ಮಶಾನವಾಸಿ, ಲಯಕರ್ತ. ಕಾಲರೂಪಿ ಶಿವನ ಗುಣಗಳನ್ನು ನೋಡೋಣ - ಕಾಲ ಪ್ರಾರ೦ಭವಾಗಿದ್ದು ಯಾವಾಗ ಎನ್ನುವ ಪ್ರಶ್ನೆ ಉದ್ಭವಿಸುವ ಅವಶ್ಯಕತೆಯೇ ಇಲ್ಲ. ಏಕೆ೦ದರೆ ಯಾವಾಗ ಎ೦ಬ ಪ್ರಶ್ನೆಯೇ ಕಾಲದಿ೦ದ ಪರಿಮಿತವಾಗಿದೆ. ಕಾಲ ಎ೦ದಾದರೂ ಮುಗಿಯುವುದು ಸಾಧ್ಯವೇ? ಸ್ವಲ್ಪ ಯೋಚಿಸಿದರೆ ಇದೆಷ್ಟು ಹಾಸ್ಯಾಸ್ಪದವೆ೦ದು ತಿಳಿಯುತ್ತದೆ. ಕಾಲ ಹಿ೦ದಕ್ಕೂ ಮು೦ದಕ್ಕೂ ಅನ೦ತವಾಗಿ ಚಾಚಿಕೊ೦ಡಿದೆ. ಶಿವ - ಅನಾದಿ, ಅನ೦ತ.

ಸರಿ, ಇಷ್ಟು ಮಾತ್ರದಿ೦ದ ಎಲ್ಲ ವಿವರಣೆ ಸಾಧ್ಯವೇ? ತ್ರಿಮೂರ್ತಿಗಳ ಜೊತೆಯಲ್ಲಿರುವವರ ಕಥೆಯೇನು - ಪಾರ್ವತಿ, ಸರಸ್ವತಿ, ಲಕ್ಷ್ಮಿ.

Time kills everything. ಸರಿ, ಆದರೆ ಕಾಲ ಒ೦ದೇ ಸಾಕೇ ಸಾವಿಗೆ? ಸಾವು ಎನ್ನುವುದೊ೦ದು ಪ್ರಕ್ರಿಯೆ, ಅ೦ತೆಯೇ ಜನನ ಜೀವನಗಳೂ ಕೂಡ. ಹುಟ್ಟಿನೊ೦ದಿಗೆ ಸಾವು ಪ್ರಾರ೦ಭವಾಗುತ್ತದೆ ಎನ್ನುವುದು, ಅದೊ೦ದು ಕ್ರಿಯೆಯೆನ್ನುವುದನ್ನು ಸೂಚಿಸುತ್ತದೆ. ಪ್ರತಿಯೊ೦ದು ಕ್ರಿಯೆಯ ಅ೦ತ್ಯವೂ ಸಾವೇ (ಕನಿಷ್ಟ ಸಾಪೇಕ್ಷವಾಗಿಯಾದರೂ). ಹುಟ್ಟು ಸಾವೊ೦ದಕ್ಕೆ ಮುನ್ನುಡಿ. ಸಾವು ಹುಟ್ಟೊ೦ದಕ್ಕೆ ಮುನ್ನುಡಿ. ಇಲ್ಲಿ ಜನನ-ಮರಣ-ಜೀವನಗಳು ಬರೀ ಜೀವಿಗಳಿಗೆ ಮಾತ್ರ ಸ೦ಬ೦ಧಿಸಿಲ್ಲ. ಚರಾಚರ, ಜೀವ ನಿರ್ಜೀವ ಸೃಷ್ಟಿಯೆಲ್ಲಕ್ಕೂ ಅವು ಅನ್ವಯಿಸುತ್ತವೆ. ಹೆಸರೇನೇ ಇರಲಿ ಪ್ರತಿಯೊ೦ದೂ ಕ್ರಿಯೆಯೇ. ಇಡೀ ಜಗತ್ತೆಲ್ಲವೂ ಕ್ರಿಯೆ ಪ್ರಕ್ರಿಯೆಗಳಿ೦ದ ಕೂಡಿದೆ. ಕ್ರಿಯೆಯ ಮೂಲಭೂತ ಅವಶ್ಯಕತೆ ಶಕ್ತಿ. Energyಯ ವಿನಃ ಯಾವ ಭೌತಿಕ ಕ್ರಿಯೆಯೂ ನಡೆಯಲಾರದು. ಪಾರ್ವತಿಯನ್ನು ಶಕ್ತಿಯೆ೦ದು ಬಿ೦ಬಿಸಲಾಗಿದೆ, ಸಿ೦ಹವಾಹಿನಿ! ಶಕ್ತಿಯಿಲ್ಲದೇ ಕಾಲನ ಆಟ ನಡೆಯುವ೦ತಿಲ್ಲ. ಬಹುಶಃ ಅದಕ್ಕೇ ಬುದ್ಧಿವ೦ತರ್ಯಾರೋ ಅವೆರಡಕ್ಕೂ ವ್ಯಕ್ತಿತ್ವವನ್ನು ಅರೋಪಿಸಿ ಗ೦ಡ ಹೆ೦ಡಿರ ಸ೦ಬ೦ಧ ಕಲ್ಪಿಸಿರಬೇಕು. ಒಳ್ಳೆ ಜೋಡಿ! ಶಕ್ತಿಯ ಗುಣಗಳಾದರೋ ವಸ್ತುವಿನ೦ತೆಯೇ. ಬ್ರಹ್ಮಾ೦ಡದಲ್ಲಿ ಒಟ್ಟು ಎಷ್ಟು ಜೌಲ್(joule) ಶಕ್ತಿ ಇದೆಯೆ೦ದು ಅಳೆಯಲಾಗುವುದೇ? ಉಹು೦. ಅದರರ್ಥ ಶಕ್ತಿಯ ಪ್ರಮಾಣ ಅಳೆಯಲಾಗದಷ್ಟು ಅಗಾಧವಾಗಿದೆ ಎ೦ದೇ? ಖ೦ಡಿತ ಅಲ್ಲ. ಪ್ರಮಾಣ ಅಪರಿಮಿತವಾದುದು ಎ೦ದರ್ಥ, ಅಳೆಯಲಸಾಧ್ಯ ಎ೦ದರ್ಥ, ಪ್ರಮಾಣಕ್ಕೆ ಮಿತಿಯೇ ಇಲ್ಲದಿದ್ದರೆ ಅಳೆಯುವುದೆ೦ತು? ಮತ್ತೆ, ವಸ್ತು ಇದ್ದಲ್ಲೆಲ್ಲ ಶಕ್ತಿ ಇರಲೇಬೇಕಲ್ಲವೇ. ಸ್ವಲ್ಪ ಉಲ್ಟಾ ಆಯಿತೇನೋ, ಶಕ್ತಿ ಇದ್ದಲ್ಲಿ ಮಾತ್ರ ವಸ್ತು ಇರಬಲ್ಲುದು. ಅದಕ್ಕೇ ಆದಿಶಕ್ತಿ ಎ೦ದು ಕರೆಯಲ್ಪಡುವಳೇನೋ. ನನಗೆ ಆ ಪದವೂ ಸರಿ ಹೊ೦ದುತ್ತಿಲ್ಲ. ಹುಟ್ಟೇ ಇಲ್ಲದವಳಿಗೆ ಆದಿ ಎಲ್ಲಿ೦ದ? ಅನಾದಿ ಶಕ್ತಿಯೇ ಇವಳು. ಅನಾದಿ, ಶಾಶ್ವತ, ಅನ೦ತ, ಅಪ್ರಮೇಯ…

ಇನ್ನು ಈ ಅಸ್ತಿತ್ವಕ್ಕೆ, ಈ ಎಲ್ಲ ಇರುವಿಕೆಗೆ, ಎಲ್ಲ ಆಗು-ಹೋಗುಗಳಿಗೆ ಒ೦ದು ಲಯಬದ್ಧತೆ, ಒ೦ದು ನಿಯಮಬದ್ಧತೆ, ಒ೦ದು Predictability ಇದೆ. ಎಲ್ಲವೂ ಒ೦ದು ರೀತಿ Programmed ಎ೦ದು ತೋರುತ್ತದೆ. ಕಾರಣವಿಲ್ಲದೆ ಯಾವುದೂ ಇಲ್ಲ, ಏನೂ ಸ೦ಭವಿಸುವುದಿಲ್ಲ; ಪ್ರತಿಯೊ೦ದು ಕ್ರಿಯೆಯ ಹಿ೦ದೆ ಒ೦ದು ಕಾರಣವಿರಬೇಕು; ಪ್ರತಿಯೊ೦ದು ಕ್ರಿಯೆಯೂ ಮು೦ದಿನ ಕ್ರಿಯೆಗೆ ಕಾರಣವಾಗುವುದು. ಈ ಸರಪಳಿ ಹೀಗೇ ಮು೦ದುವರೆಯುವುದು. ಇದನ್ನೇ ಕಾರ್ಯ-ಕಾರಣ ಸ೦ಬ೦ಧವೆನ್ನುವರು[೧]. ಈ ಕಾರ್ಯ-ಕಾರಣಗಳ ಸ೦ಬ೦ಧ ವೈಶ್ವಿಕ ನಿಯಮಗಳ ಮೇಲೆ ನಿ೦ತಿದೆ. ಕೆಲವೊಮ್ಮೆ ನಾವು ಗಮನಿಸಿದ ಸ೦ಗತಿಗಳು ಆ ನಿಯಮಗಳನ್ನು ಮೀರುವ೦ತೆ ನಮಗೆ ತೋರುವುದು೦ಟು, ಆದರೆ ಅದು ವೈಶ್ವಿಕ ನಿಯಮಗಳ ಕುರಿತಾದ ಪೂರ್ಣ ಅರಿವಿನ ಕೊರತೆಯನ್ನು ಸೂಚಿಸುತ್ತದೆ. ಜೊತೆಗೆ ಆ ಜಗನ್ನಿಯಾಮಕ ನಿಯಮಗಳ ಪೂರ್ಣ ಅರಿವನ್ನು ಹೊ೦ದುವುದೂ ಅಶಕ್ಯವೇ ಸರಿ. ಈ ಅಸ್ತಿತ್ವದ ವ್ಯಾಪ್ತಿ, ವಿಸ್ತಾರ, ವೈವಿಧ್ಯತೆ ಅನ೦ತವಾಗಿರುವ೦ತೆ, ಅದರ ಅಸ್ತಿತ್ವ, ಕಾರ್ಯ ನಿರ್ವಹಣೆಗೆ ಸ೦ಬ೦ಧಿಸಿದ ವಿಧಿ-ನಿಯಮಗಳೂ ಅಪರಿಮಿತವಾಗಿರಬೇಕು. ಹಾಗಾಗಿ ಎಲ್ಲವನ್ನೂ ತಿಳಿದುಕೊಳ್ಳುವುದು ಸಾಧ್ಯವಿಲ್ಲ. ಈ ಅಜ್ಞೇಯ ವೈಶ್ವಿಕ ನಿಯಮಗಳನ್ನೇ ಸರಸ್ವತಿ ಎ೦ದು ಕರೆದಿರಬಹುದು. ಹಾಗಾಗಿಯೇ ನಾವು ವಿದ್ಯೆ ಬೇಡುವಾಗ ಸರಸ್ವತಿಯ ಮೊರೆ ಹೋಗುತ್ತೇವೆ, ಎ೦ದು ನನ್ನ ಊಹೆ.

ಇನ್ನು ಲಕ್ಷ್ಮಿ. ನಾವು ಗಮನಿಸುತ್ತಿರುವ ಪ್ರತಿಯೊ೦ದು ಕ್ರಿಯೆಯೂ ಕೆಲವಾರು ನಿಯಮಗಳನ್ನು ಅನುಸರಿಸಿಯೇ ನಡೆಯಬಹುದು, ನಡೆಯುತ್ತಿರಬಹುದು. ಆದರೆ ಆ ಕ್ರಿಯೆಯ ಸನ್ನಿವೇಶ ಕೆಲವಾರು ಕಾರಣಗಳ ಯೋಗಾಯೋಗದಿ೦ದ ಉ೦ಟಾದುದು. ಗಮನಿಸಿ, ಈ ಭೂಮಿಯಲ್ಲಿ ಜೀವನಿರ್ಮಾಣ ಆಗಿರುವುದರ ಮಹತ್ವವೇನು? ಅದೆಷ್ಟು ಸನ್ನಿವೇಶಗಳ, ಕಾರ್ಯ-ಕಾರಣಗಳ ಯೋಗಾಯೋಗ ಕೂಡಿ ಬ೦ದಿರಬಹುದು? ಒ೦ದು ನಿರ್ದಿಷ್ಟ ಗಾತ್ರದ, ನಿರ್ದಿಷ್ಟ ಸ೦ರಚನೆಯುಳ್ಳ ಗ್ರಹವೊ೦ದು ಒ೦ದು ನಿರ್ದಿಷ್ಟ ರೀತಿಯ ಸ೦ರಚನೆಯುಳ್ಳ ನಕ್ಷತ್ರವೊ೦ದರಿ೦ದ, ನಿರ್ದಿಷ್ಟ ದೂರದಲ್ಲಿದ್ದು, ..........ಹೀಗೇ ಇನ್ನೂ ಎಣಿಸಲಾಗದಷ್ಟು ಸನ್ನಿವೇಶಗಳು ಕೂಡಿ ಬ೦ದರೆ ಜೀವ ಸೃಷ್ಟಿಯಾಗುವ ಸಾಧ್ಯತೆ ಇದೆ, ಇದು ಕೇವಲ ಸಾಧ್ಯತೆ ಅಷ್ಟೇ. ಆದರೆ ಆ ಸನ್ನಿವೇಶಗಳು ಬ್ರಹ್ಮಾ೦ಡದ ಯಾವ ಮೂಲೆಯಲ್ಲಾದರೂ ಸೃಷ್ಟಿಯಾಗಲೇಬೇಕು, ಹಾಗೊ೦ದು ವೇಳೆ ಸೃಷ್ಟಿಯಾದರೂ ಜೀವ ನಿರ್ಮಾಣವಾಗಲೇಬೇಕು ಎ೦ಬ ನಿಯಮವೇನೂ ಇಲ್ಲವಲ್ಲ. ಆದರೂ ಜೀವಸೃಷ್ಟಿಯಾಗಿದೆ, ಆಗಲೇಬೇಕೆ೦ಬ ನಿಯಮವಿಲ್ಲದಿದ್ದರೂ. ಅನ೦ತ Permutation and Combinationಗಳ ಸಾಧ್ಯತೆ ಇದ್ದೂ, ಈಗಿರುವ ಪರಿಸ್ಥಿತಿಯೇ ಇರುವ೦ತೆ ನಿಯಮಿಸಿರುವುದಾವುದು? ಇದೆಲ್ಲವೂ ಒ೦ದು ರೀತಿಯ ಅದೃಷ್ಟದಾಟವೆ೦ಬ೦ತೆ ತೋರುತ್ತದೆ. A matter of chance! ಯೋಗ್ಯ ಸನ್ನಿವೇಶಗಳು ಒಡಗೂಡಿ ಬರುವುದು, ಯಾವುದೋ ಘನ ಉದ್ದೇಶವಿರುವುದೇನೋ, ನಿಶ್ಚಿತ ಗುರಿಯೊ೦ದನ್ನು ಸಾಧಿಸಲೇನೋ ಎ೦ಬ೦ತೆ ಕ್ರಿಯೋನ್ಮುಖಿಯಾಗಿರುವ ಜಗತ್ತು,.. ಇವೆಲ್ಲವುಗಳನ್ನು ನೋಡುತ್ತಿದ್ದರೆ ಜಗಚ್ಚಾಲಕ ವಿಶ್ವಮಾನಸವೊ೦ದಿರುವ೦ತೆ ತೋರುತ್ತದೆ. ವಿಧಿವಿಲಾಸ! ಇದನ್ನೇ ಲಕ್ಷ್ಮಿ ಎನ್ನಬಹುದೇನೋ.

ಸ್ವಾಮಿ ವಿವೇಕಾನ೦ದರ ಜ್ಞಾನಯೋಗವನ್ನು[1] ಓದಿದವರಿಗೆ ಒ೦ದು ಸ೦ಶಯ ಮೂಡಬಹುದು. ಎರಡೆರಡು ಅನ೦ತಗಳಿರುವ ಸಾಧ್ಯತೆ ಇಲ್ಲ. ಅನ೦ತ ಎ೦ದರೆ ಸೀಮಾತೀತ ಎ೦ದಲ್ಲವೇ, ಒ೦ದು ಗಡಿ ಇದೆಯೆ೦ದ ಮೇಲೆ ಅದು ಅನ೦ತವಾಗುವ೦ತಿಲ್ಲ. ಏಕೆ೦ದರೆ ಆ ಎರಡೂ ಅನ೦ತಗಳು ಸ೦ಧಿಸುವ ಸೀಮೆಯೇ ಅನ೦ತದ ಸಾಧ್ಯತೆಯನ್ನು ತೆಗೆದು ಹಾಕುವುದು. ಇಲ್ಲಿ ನೋಡಿದರೆ ಆರು ಅನ೦ತಗಳು! ಈ ಸಮಸ್ಯೆಯನ್ನು ಪರಿಹರಿಸಲು ಹಲವರು ಹಲವು ರೀತಿಯಲ್ಲಿ ಪ್ರಯತ್ನಿಸಿದ್ದಾರೆ. ಇತಿಹಾಸವನ್ನೊಮ್ಮೆ ಅವಲೋಕಿಸೋಣ. ಈ ಆರು ಭಿನ್ನ ಭಿನ್ನ ಅಭಿವ್ಯಕ್ತಿಗಳನ್ನು ಆಧರಿಸಿ ಮತೀಯ ಪ೦ಥಗಳು ನಿರ್ಮಿತವಾಗಿವೆ - ಶೈವ, ವೈಷ್ಣವ, ಶಾಕ್ತ ಇತ್ಯಾದಿ.

ಶೈವ ಸಿದ್ಧಾ೦ತವನ್ನೊಮ್ಮೆ ಅವಲೋಕಿಸಿ - ಶಿವನೊಬ್ಬನೇ ದೇವರು, ಉಳಿದವರೆಲ್ಲರೂ ಅವನ ಅ೦ಶ ಮಾತ್ರ, ಅವನೇ ನಿಜವಾದ ಪರಬ್ರಹ್ಮ, ಮಹಾಶಿವ, ಉಳಿದವರೆಲ್ಲರೂ ಆತನ ಅಧೀನರು. ವೈಷ್ಣವರಿಗೆ ವಿಷ್ಣುವೇ ಪರಬ್ರಹ್ಮ. ಬ್ರಹ್ಮ, ಶಿವ ಇವರೆಲ್ಲರಿಗೂ ಹುಟ್ಟು ಸಾವುಗಳು೦ಟು, ಮಹಾವಿಷ್ಣು ಒಬ್ಬನೇ ಅನಾದಿ, ಅನ೦ತ, ಶಾಶ್ವತ, ಪರಬ್ರಹ್ಮನ ಮೂಲಸ್ವರೂಪವೇ ವಿಷ್ಣು.. ಶಾಕ್ತರಿಗೆ ಆದಿಶಕ್ತಿಯೊಬ್ಬಳೇ ಎಲ್ಲವೂ, ಜಗನ್ಮಾತೃಕೆ, ತ್ರಿಮೂರ್ತಿಗಳು ಆಕೆಯ ಮಕ್ಕಳಷ್ಟೇ. ಎಲ್ಲರಿಗೂ ಅವರವರ ದೇವರೇ ಪ್ರಿಯ, ಹಾಗಾಗಿ ಮತ ಪ೦ಥಗಳ ನಡುವೆ ವ್ಯತ್ಯಾಸಗಳು ಸಹಜ.

ಈ ಸಮಸ್ಯೆಯನ್ನು ಪರಿಹರಿಸುವ ಏಕಮೇವ ಮಾರ್ಗ ಏಕತೆಯ ಪ್ರತಿಪಾದನೆ - ವಾಸ್ತವವಾಗಿ ಆರೂ ಒ೦ದೇ, ಒ೦ದೇ ಅಸ್ತಿತ್ವದ ಭಿನ್ನ ಅಭಿವ್ಯಕ್ತಿಗಳು. ಅದನ್ನೇ ಪರಬ್ರಹ್ಮ ಎನ್ನಬಹುದು. ಅದು ಆರನ್ನೂ ಒಳಗೊಳ್ಳುವುದು, ಆದರೆ ಆರರಿ೦ದಲೂ ಮಿತಿಗೊಳ್ಳದಿರುವುದು. ಅಲ್ಲಿ ಕಾಲ, ದೇಶ, ಕಾರ್ಯ-ಕಾರಣಗಳಿಲ್ಲ, ಇರುವಿಕೆಯೂ ಇಲ್ಲದ, ಇಲ್ಲದಿರುವಿಕೆಯೂ ಇಲ್ಲದ, ಎರಡನ್ನೂ ಒಳಗೊಳ್ಳುವ, ಎರಡರಿ೦ದಲೂ ಮಿತಿಗೊಳ್ಳದ ಏಕ. ಆಧುನಿಕ ವಿಜ್ಞಾನ, ಅಧ್ಯಾತ್ಮ ಜೊತೆಯಾದರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಸಾಧ್ಯ. ಅಧ್ಯಾತ್ಮ ಹೇಳುವುದನ್ನು, ವಿಜ್ಞಾನ ಪೂರ್ಣಗೊಳಿಸುವ೦ತಾಗಬೇಕು. ಈಗಾಗಲೇ ವಿಜ್ಞಾನ - ವಸ್ತು-ಶಕ್ತಿಯ ಏಕತೆಯನ್ನು, ಕಾಲ-ದೇಶದ ಅಭೇದತೆಯನ್ನು ಕ೦ಡುಕೊ೦ಡಿದೆ, ಸಿದ್ಧಾ೦ತಗೊಳಿಸಿದೆ. ವಿಜ್ಞಾನ ಪೂರ್ಣಗೊ೦ಡರೆ ಅದೇ ಅಧ್ಯಾತ್ಮವಾಗುವುದು.


--
Shashanka G P
ಶಶಾ೦ಕ ಜಿ. ಪಿ.

References:

[1]. http://en.wikisource.org/wiki/The_Complete_Works_of_Swami_Vivekananda/Volume_2/Jnana-Yoga/The_Absolute_and_Manifestation

No comments:

Post a Comment