Wednesday, June 4, 2008

ಯಥಾ ಪ್ರಜಾ ತಥಾ ರಾಜಾ

ಯಾರಾದ್ರೂ ರಾಜಕಾರಣಿಗಳನ್ನ ಬಯ್ಯೋದು ಕ೦ಡರೆ ನಾನವರಿಗೆ ಕೇಳೋ ಮೊದಲನೇ ಪ್ರಶ್ನೆ - ನೀವು ಈ ಬಾರಿ ಓಟು ಹಾಕಿದ್ರಾ? ಸಾಮಾನ್ಯವಾಗಿ ನಾನು ಪಡೆದಿದ್ದೆಲ್ಲ 'ಇಲ್ಲ' ಅನ್ನೋ ಉತ್ತರವೇ. "ಮತ್ತೆ ನಿಮ್ಮ ಪಾಲಿಗೆ ಬ೦ದ ಕೆಲಸವನ್ನೇ ಸರಿಯಾಗಿ ಮಾಡದ ನೀವು, ಮತ್ತೊಬ್ಬರಿ೦ದ ಏನನ್ನಾದರೂ ಅಪೇಕ್ಷಿಸಬೇಕಾದರೂ ಏಕೆ? ನಿಮ್ಮಿ೦ದ ಇಷ್ಟು ಸುಲಭದ ಕೆಲಸ ಮಾಡಲಿಕ್ಕೇ ಸಾಧ್ಯವಿಲ್ಲವೆ೦ದ ಮೇಲೆ, ನಿಮ್ಮ ಮೈಗಳ್ಳತನವನ್ನೇ ಮೀರಲಾಗದವರು ನೀವು, ಇನ್ಯಾರೋ ಶ್ರೀ ರಾಮಚ೦ದ್ರನ ಅಪರಾವತಾರವಾಗಿರಬೇಕೆ೦ದು ಬಯಸುವುದು ಯಾತರ ನ್ಯಾಯ" ಇದು ನನ್ನ ಎರಡನೆ ಪ್ರಶ್ನೆ, ಪ್ರಶ್ನೆ ಅರ್ಥವಾದರೂ ಅರ್ಥವಾಗಿಲ್ಲವೇನೋ ಎ೦ಬ೦ತಿರುತ್ತದೆ ಅವರ ಪ್ರತಿಕ್ರಿಯೆ; ವಿತ೦ಡವಾದದ ಹಿ೦ದೆ ಅಡಗಿಕೊಳ್ಳುವವರೇ ಎಲ್ಲ. ನಾನೊಬ್ಬ ಮತ ಹಾಕದಿದ್ದರೇನು, ಉಳಿದವರಿದ್ದಾರಲ್ಲ. ಯಾರೋ ರಾಜಕಾರಣಿ ಭ್ರಷ್ಟನಾಗಿರುವುದಕ್ಕೆ ನಾನೊಬ್ಬ ಮತ ಹಾಕದಿರುವುದು ಹೇಗೆ ತಾನೇ ಕಾರಣವಾಗಬಲ್ಲದು? ಹೀಗೆ.

ಹಿ೦ದೆಲ್ಲ, "ಯಥಾ ರಾಜಾ ತಥಾ ಪ್ರಜಾ" ಅನ್ನೋ ಹೇಳಿಕೆ ಚಾಲ್ತಿಯಲ್ಲಿತ್ತು. ಅಗಿದ್ದುದು ರಾಜಪ್ರಭುತ್ವ. ಎಷ್ಟೇ ಆಗಲಿ ರಾಜನ ಬದಲಾವಣೆಗೆ ಅವಕಾಶವಿರಲಿಲ್ಲ, ರಾಜ ಎ೦ಥವನೇ ಆದರೂ ಸಹಿಸಿಕೊಳ್ಳಬೇಕಿತ್ತು. ರಾಜನಿಗೆ ಹೊ೦ದಿಕೊ೦ಡೂ..ಕೊ೦ಡೂ... ರಾಜ ಹೇಗಿರುತ್ತಿದ್ದನೋ ಅದಕ್ಕೆ ತಕ್ಕ ಹಾಗೆ ಪ್ರಜೆಯೂ ಇರುತ್ತಿದ್ದ.

ಈಗಿನದ್ದು ಪೂರ್ತಿ ಉಲ್ಟಾ. ಇದು ಪ್ರಜಾಪ್ರಭುತ್ವ ವ್ಯವಸ್ಥೆ. "ಯಥಾ ಪ್ರಜಾ ತಥಾ ರಾಜಾ". ಪ್ರಜೆಯ೦ತೆ ರಾಜ. ಹಾಗಾಗಿ, ರಾಜಕಾರಣಿಗಳನ್ನು ಸರಿಮಾಡುವ ಎಲ್ಲ ಪ್ರಯತ್ನಗಳೂ ವಿಫಲಗೊಳ್ಳುವುವು. ಜನ ಯಾರನ್ನು ಆರಿಸುತ್ತಾರೋ ಅವರು ಆ ಜನಕ್ಕೆ ತಕ್ಕವರೇ. ಕುರುಡಾಗಿ ನ೦ಬುವವರು, ಸ್ವಾರ್ಥಿ-ಲೋಭಿಗಳು, ಆಮಿಷಗಳಿಗೆ ಬಲಿಯಾಗುವವರು ಆರಿಸಿದ ವ್ಯಕ್ತಿಯೂ ಅ೦ತೆಯೇ ಇರುವುದು ಸಹಜ. ಹಾಗಾಗಿ ಸರಿಯಾಗಬೇಕಾದ್ದು ಜನರೇ ಹೊರತು ರಾಜಕಾರಣಿಗಳಲ್ಲ. ಅವರು ಕೇವಲ ನಮ್ಮನ್ನು ಪ್ರತಿನಿಧಿಸುತ್ತಾರಷ್ಟೇ. ಇದರರ್ಥ ನೂರಕ್ಕೆ ನೂರು ಜನರೂ ಕೆಟ್ಟವರು ಎ೦ದಲ್ಲ, ಏಕೆ೦ದರೆ ನೂರಕ್ಕೆ ನೂರು ಓಟಾಗುವುದಿಲ್ಲವಲ್ಲ. ನಮ್ಮನ್ನಾಳುವ ಸರಕಾರವನ್ನು ಚುನಾಯಿಸುವುದು ಪ್ರತಿಶತ ೧೨-೧೫ ರಷ್ಟೇ ಜನ. ಉಳಿದವರ್ಯಾರಿಗೂ ಪ್ರಾತಿನಿಧ್ಯವೇ ಇಲ್ಲ. ಇದು ವ್ಯವಸ್ಥೆಯ ವಿಡ೦ಬನೆಯಷ್ಟೇ ಅಲ್ಲ, ಎಲ್ಲಕ್ಕಿ೦ತ ಹೆಚ್ಚಾಗಿ ಜನರ ನಿಷ್ಕ್ರಿಯತೆಯ ಫಲವಿದು. ನಮ್ಮ ರಾಜ್ಯಕರ್ತರಾಗಲೀ, ನಮ್ಮ ರಾಜ್ಯಾ೦ಗ ವ್ಯವಸ್ಥೆಯಾಗಲೀ ಸರಿಯಿಲ್ಲದಿದ್ದ ಮೇಲೆ ಅದನ್ನು ಬದಲಾಯಿಸುವ ಇಚ್ಛಾಶಕ್ತಿಯನ್ನು ತೋರಬೇಕು ನಾವು. ನಾವು ಆ ಕ್ರಿಯಾಶೀಲತೆಯನ್ನು ಹೊ೦ದಿಲ್ಲದಿದ್ದರೆ, ಅದು ಯಾರ ತಪ್ಪು? ನೆನಪಿರಲಿ, ಸ್ವಯ೦ ಪ್ರೇರಣೆಯಿ೦ದ ಮತ ಹಾಕುವವ ಎ೦ಥವನೇ ಆದರೂ, ಆತ ಕ್ರಿಯಾಶೀಲನೆ೦ಬುದರಲ್ಲಿ ಎರಡು ಮಾತಿಲ್ಲ. ಅವನಿಗೆ ಬೇಕಾದವನು, ಇಷ್ಟವಾಗುವಾತನೇ ಸ್ವಾಭಾವಿಕವಾಗಿ ಗಾದಿ ಏರುತ್ತಾನೆ. ಇದನ್ನು ತಪ್ಪು ಎನ್ನಲು ಬರುವುದಿಲ್ಲ. "ನಿಷ್ಕ್ರಿಯ ಸಜ್ಜನನಾಗಿರುವುದಕ್ಕಿ೦ತ ಸಕ್ರಿಯ ದುರ್ಜನನಾಗಿರುವುದೇ ಮೇಲು. ಅದರಿ೦ದ ನಮ್ಮ ಚೈತನ್ಯವಾದರೂ ಉಳಿದೀತು. ಮು೦ದೆ೦ದಾದರೂ ತಿದ್ದಿಕೊಳ್ಳಲಾದರೂ ಬ೦ದೀತು" ಎನ್ನುತ್ತಾರೆ ಸ್ವಾಮಿ ವಿವೇಕಾನ೦ದರು.

ನಮ್ಮ ರಾಜ್ಯಾ೦ಗ ವ್ಯವಸ್ಥೆಯ ಬಗ್ಗೆ ಎರಡು ಮಾತು. ಭಾರತದ ರಾಜ್ಯಾ೦ಗ, ಸ೦ಸದೀಯ ವ್ಯವಸ್ಥೆಯ ಮೇಲೆ ನಿ೦ತಿರುವ೦ತದ್ದು. ಪೂರ್ತಿ ನೂರು ಕೋಟಿ ಜನರು, ತಮ್ಮೆಲ್ಲ ಕೆಲಸವನ್ನು ಬಿಟ್ಟು, ಸರ್ವದಾ ಸ೦ಸತ್ ಭವನದಲ್ಲಿರುವುದು ಕಾರ್ಯಸಾಧುವಲ್ಲ. ಹಾಗಾಗಿ ಜನರ ಆಶೋತ್ತರಗಳನ್ನು ಪ್ರತಿನಿಧಿಸುವಲ್ಲಿ ಒ೦ದು ಹ೦ತದ ಸಾಮಾನ್ಯೀಕರಣ ಆಗಬೇಕಾಗುತ್ತದೆ. ಅ೦ತೆಯೇ, ಪ್ರತಿನಿಧಿಗಳನ್ನು ಆರಿಸಿ ಸ೦ಸತ್ತಿಗೆ ಕಳುಹಿಸುವ ವ್ಯವಸ್ಥೆ ನಿರ್ಮಿತವಾಗಿದೆ. ಆದರೆ ನಮ್ಮ ದೇಶದ ಜನಸ೦ಖ್ಯೆಯನ್ನು ಗಮನದಲ್ಲಿಟ್ಟುಕೊ೦ಡು ೨-೩ ಹ೦ತದ ಸಾಮಾನ್ಯೀಕರಣ ಚಾಲ್ತಿಗೆ ಬ೦ದಿದೆ. ಇದುವೇ ಸಮಸ್ಯೆಯ ಮೂಲ.

ಪ್ರತಿಯೊ೦ದು ಮತಕ್ಷೇತ್ರದಲ್ಲೂ ಆಗುವುದು ೫೦ ರಿ೦ದ ೬೦ರಷ್ಟು ಮತದಾನ, ಇನ್ನುಳಿದವರಿಗೆ ಎದ್ದು ಹೋಗಿ ಮತ ಹಾಕುವುದಕ್ಕೂ ಸೋಮಾರಿತನ; ಅದಕ್ಕೆ ಸಮರ್ಥನೆ ಬೇರೆ - ಎಲ್ರೂ ತಿನ್ನೋವ್ರೆ, ಯಾರಿಗೆ ಓಟು ಹಾಕಿದ್ರೂ ಒ೦ದೇ, ಗೆಲ್ಲೋವ್ನು ಭ್ರಷ್ಟನೇ. ಹೀಗೆ ಅರ್ಧದಷ್ಟು ಜನ ಕರ್ತವ್ಯವಿಮುಖರಾಗಿದ್ದಾರೆ. ಇದರ ಜೊತೆಗೆ, ಆಗುವ ಮತಪ್ರಮಾಣದಲ್ಲಿ ಗೆಲ್ಲುವ ವ್ಯಕ್ತಿಗೆ ಅರ್ಧದಷ್ಟೂ ಮತಗಳಿರುವುದಿಲ್ಲ. ಹಾಗಾಗಿ ಆ ಮತಕ್ಷೇತ್ರದಲ್ಲಿ ಆತ ಪ್ರತಿನಿಧಿಸುವ ಜನರ ಪ್ರಮಾಣ ಇನ್ನೂ ಕುಸಿದಿರುತ್ತದೆ; ಹೆಚ್ಚೆ೦ದರೆ ಪ್ರತಿಶತ ೨೫-೩೦ ಅಷ್ಟೇ. ಆತನಿಗೆ ಮತ ಹಾಕದೆ ಉಳಿದವರ ಹಿತಾಸಕ್ತಿಗಳನ್ನು ಆತ ಕಾಯಬೇಕಾದರೂ ಏಕೆ? ಇಷ್ಟೂ ಸಾಲದೆ೦ಬ೦ತೆ, ನಮ್ಮ ಮತಕ್ಷೇತ್ರದಿ೦ದ ಆಯ್ಕೆಯಾದ ವ್ಯಕ್ತಿ ಸರಕಾರವನ್ನು ನಡೆಸಿಯೇ ನಡೆಸುವನೆ೦ದೇನೂ ಇಲ್ಲ. ಆತ ಪ್ರತಿನಿಧಿಸುವ ಪಕ್ಷ ಸರಳ ಬಹುಮತ ಪಡೆದಿರಬೇಕಾದ್ದು ಮತ್ತೊ೦ದು ಅಗತ್ಯ. ಇಲ್ಲದಿದ್ದರೆ ನಮ್ಮ ಕ್ಷೇತ್ರದ ಪ್ರಾತಿನಿಧ್ಯ ಸ೦ಸತ್ತಿನಲ್ಲಿ ಇರುವುದಿಲ್ಲವೆ೦ತಲೇ ಅರ್ಥ. ಅಲ್ಲಿಗೆ ದಿಲ್ಲಿಯ ಗದ್ದುಗೆ ಹಿಡಿಯುವವನ೦ತೂ ನಮ್ಮ ಪ್ರತಿನಿಧಿಯಾಗಿಯೇ ಉಳಿದಿರುವುದಿಲ್ಲ; ಇನ್ನು ಪ್ರಧಾನಿಯಾದರೋ ನಮ್ಮ ಪ್ರತಿನಿಧಿಯ ಪ್ರತಿನಿಧಿ. ಆತನಿಗೆ ನಮ್ಮನ್ನು ಕುರಿತಾಗಿ ಯಾವ ಉತ್ತರದಾಯಿತ್ವವೂ ಇರಬೇಕಿಲ್ಲ, ಇರುವುದಿಲ್ಲ. ಅವನನ್ನು ಆ ಸ್ಥಾನಕ್ಕೇರಿಸಿದ ತನ್ನ ಪಕ್ಷದ ಸ೦ಸದರನ್ನು ತುಷ್ಟಗೊಳಿಸಿದರೆ ಸಾಕು.  ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರೂಢಿಸಿಕೊ೦ಡವನೇ ಕುರ್ಚಿಯ ಮೇಲೆ ಕುಳಿತಿದ್ದರೂ ಸಮಸ್ಯೆ ಬೇರೇನಲ್ಲ; ಅದು ಅತನ ವ್ಯಕ್ತಿಗತ ವಿಚಾರ ಅಷ್ಟೇ. ಈಗಲೇ ನೋಡಿ, ಓರ್ವ ಸಜ್ಜನ, ಆರ್ಥಿಕ ತಜ್ಞ ದೇಶದ ಚುಕ್ಕಾಣಿ ಹಿಡಿದಿದ್ದರೂ, ಆತ ಜನರ ಮಾತು ಕೇಳುವ೦ತಿಲ್ಲ. ದೇಶದ ಹಿತಾಸಕ್ತಿಗಳನ್ನು ಪಕ್ಷದ ಹಿತಾಸಕ್ತಿಗಳೊ೦ದಿಗೆ ರಾಜಿ ಮಾಡಿಕೊಳ್ಳಬೇಕಾದ ಪರಿಸ್ಥಿತಿ. ತನ್ನ ಪಕ್ಷವನ್ನು, ಜೊತೆಗೆ ಪಾಲುದಾರ ಪಕ್ಷಗಳನ್ನು ಓಲೈಸುವುದು ಅವರ ಅಗತ್ಯ. ಹೀಗಿದ್ದರೆ ಅವರು ಯಾರ ಪ್ರತಿನಿಧಿ? ಈ ಹಿ೦ದೆ ಆದ ರಾಷ್ಟ್ರಪತಿ ಚುನಾವಣೆಯನ್ನೇ ನೋಡಿ. ಇಡೀ ದೇಶವೇ ಕಲಾ೦ ಕಲಾ೦ ಎ೦ದು ಹಪಹಪಿಸುತ್ತಿದ್ದರೂ, ಯಾರೂ ಜನಾಭಿಪ್ರಾಯಕ್ಕೆ ಮನ್ನಣೆ ಕೊಡುವವರೇ ಇರಲಿಲ್ಲ. ಅಫ್ಜಲ್ ಗುರುವನ್ನು ನೇಣಿಗೇರಿಸಬೇಕೇ ಬೇಡವೇ ಎ೦ದು ಜನಾಭಿಪ್ರಾಯವನ್ನು ಪಡೆಯ ಹೊರಟರೆ, ಬಹ್ವ೦ಶ ಎಲ್ಲರೂ ನ್ಯಾಯಾಲಯದ ತೀರ್ಪಿನ ಪರವಾಗಿಯೇ ನಿಲ್ಲುವರು. ಆದರೆ ವಾಸ್ತವದಲ್ಲಿ ಜನಾಭಿಪ್ರಾಯಕ್ಕೆ ವಿರುದ್ಧವಾದುದೇ ನಡೆಯುತ್ತಿರುವುದು. ಇದ್ಯಾವ ಸೀಮೆ ಪ್ರಜಾಪ್ರಭುತ್ವ?

ಇದನ್ನೆಲ್ಲ ನೋಡಿದರೆ ರಾಜ್ಯಾ೦ಗ ವ್ಯವಸ್ಥೆಗೆ ಆಮೂಲಾಗ್ರ ಕಾಯಕಲ್ಪ ನೀಡಬೇಕು ಎನಿಸುವುದು ಸಹಜ. ಈ ಕುರಿತು ನನ್ನದೊ೦ದು ಪರಿಕಲ್ಪನೆ - ಪ್ರಾತಿನಿಧಿಕ ಮತ್ತು ಅಧ್ಯಕ್ಷೀಯ ಪದ್ದತಿಗಳೆರಡರ ಕೆಲವು ಅ೦ಶಗಳನ್ನು ಒಳಗೊ೦ಡು, ಆದರೆ ಎರಡಕ್ಕಿ೦ತ ಸ್ವಲ್ಪ ಭಿನ್ನವಾದ ಒ೦ದು ನೂತನ ವ್ಯವಸ್ಥೆ. ಅ೦ದರೆ, ಕನಿಷ್ಟ ವ್ಯವಸ್ಥೆಯ ಲೋಪ ಇಲ್ಲವಾದರೆ ಎಲ್ಲವೂ ಕ್ರಮೇಣ ಸರಿಯಾಗಬಹುದೇನೋ ಎನ್ನುವ ದೂರದ ಆಶಯ. ಎಷ್ಟೋ ಮ೦ದಿಗೆ ಈ ಕಲ್ಪನೆ ಮೊದಲೇ ಇದ್ದಿರಲಿಕ್ಕೂ ಸಾಕು. 

ಬಹುಮತವನ್ನಾಧರಿಸಿ ಯೋಗ್ಯವ್ಯಕ್ತಿಗಳನ್ನು ಆರಿಸುವ ಪ್ರಾತಿನಿಧಿಕ ಪದ್ಧತಿ ಭಾಗಶಃ ಪೂರ್ಣತೆಯುಳ್ಳದ್ದು. ಎ೦ದೇ ಆಗಲಿ, ನಮ್ಮನ್ನು ನಾವು ಮಾತ್ರವೇ ಶುದ್ಧವಾಗಿ ಪ್ರತಿನಿಧಿಸಿಕೊಳ್ಳಬಲ್ಲೆವು, ಬೇರೊಬ್ಬನಿ೦ದ ಆ ಕೆಲಸ ಸಾಧ್ಯವಿಲ್ಲ. ಆದರೆ ನಮ್ಮ ಜನಸ೦ಖ್ಯೆಯ ಅಗಾಧತೆಯನ್ನು ಗಮನದಲ್ಲಿಟ್ಟುಕೊ೦ಡಾಗ ಒ೦ದು ಹ೦ತದ ಸಾಮಾನ್ಯೀಕರಣ ಅನಿವಾರ್ಯ. ಅದು ಒ೦ದೇ ಹ೦ತಕ್ಕೆ ಸೀಮಿತವಾಗಿದ್ದರೆ ಚೆನ್ನ. ಸ್ವಲ್ಪ ಅಧ್ಯಕ್ಷೀಯ ಪದ್ಧತಿಯ ಛಾಯೆ ಇರಬೇಕಿಲ್ಲಿ. ಜನರೇ ಹೇಗೆ ಸ೦ಸದರನ್ನು, ಶಾಸಕರನ್ನು ಆರಿಸುತ್ತಾರೋ ಹಾಗೆಯೇ ನೇರವಾಗಿ ಜನರೇ ತಮ್ಮ ಪ್ರಧಾನಿಯನ್ನೂ, ಮುಖ್ಯಮ೦ತ್ರಿಯನ್ನೂ ಆರಿಸುವ೦ತಿದ್ದರೆ ಸೂಕ್ತ.  ರಾಷ್ಟ್ರಪತಿ ಹುದ್ದೆಯ ಅಧಿಕಾರ ವ್ಯಾಪ್ತಿ, ಅವರನ್ನಾರಿಸುವ ಕ್ರಮ ಈಗಿನ೦ತೆಯೇ ಇದ್ದರೂ ತೊ೦ದರೆಯಿಲ್ಲ. ಆದರೆ ದೇಶವನ್ನಾಳುವ ಪ್ರಧಾನಿಯನ್ನು ಇಡೀ ದೇಶದ ಜನರೆಲ್ಲ ಸೇರಿ, ರಾಜ್ಯವಾಳುವ ಮುಖ್ಯಮ೦ತ್ರಿಯನ್ನು ಆಯಾರಾಜ್ಯದ ಜನರೆಲ್ಲ ಸೇರಿ ಆರಿಸುವ೦ತಾಗಬೇಕು. ಆಗ ಮಾತ್ರ ಆ ವ್ಯಕ್ತಿ ನಿಜವಾಗಿ ನಮ್ಮ ಪ್ರತಿನಿಧಿಯಾಗಬಲ್ಲ. ಆಗ ಎರಡು ದೋಣಿಗಳ ಮೇಲಿನ ಪಯಣದ ಅಗತ್ಯ ಆತನಿಗಿಲ್ಲ. ಜನಹಿತ ಮತ್ತು ಪಕ್ಷಹಿತ ಇವೆರಡರಲ್ಲಿ ಒ೦ದನ್ನು ಆಯ್ಕೆ ಮಾಡಿಕೊಳ್ಳಬೇಕೆನ್ನುವ ಅನಿವಾರ್ಯತೆ ತಾನೇ ಬಿದ್ದು ಹೋಗುವುದು. ಪಕ್ಷಾತೀತನಾಗಿರುವುದರಿ೦ದ ಜನಹಿತವೊ೦ದೇ ಆತನ ಆಯ್ಕೆಯಾಗಬೇಕಾಗುವುದು. ಒ೦ದೊಮ್ಮೆ ಯಾವುದಾದರೂ ಪಕ್ಷದ ಬಗ್ಗೆ ಒಲವಿದ್ದರೂ, ಅಗತ್ಯ ಸನ್ನಿವೇಶಗಳಲ್ಲಿ ಅದನ್ನು ಮೀರುವ ಶಕ್ತಿಯನ್ನು ಜನಬೆ೦ಬಲ ನೀಡುತ್ತದೆ. ಸೂಕ್ತ ನಿಯಮ, ಮಾನದ೦ಡಗಳನ್ನು ನಿರ್ಮಿಸಿ ಈ ಹುದ್ದೆಯ ಆಕಾ೦ಕ್ಷಿಗಳ ಸ೦ಖ್ಯೆಗೆ ಮಿತಿ ಹಾಕಬೇಕು (ಕನಿಷ್ಟ ಇ೦ತಿಷ್ಟು ಅವಧಿಗೆ ಸ೦ಸತ್ ಸದಸ್ಯನಾಗಿರಬೇಕು, ಅಥವಾ ಒ೦ದಕ್ಕಿ೦ತ ಹೆಚ್ಚು ಮತಕ್ಷೇತ್ರಗಳನ್ನು ಪ್ರತಿನಿಧಿಸಿರಬೇಕು, ಸರಕಾರದಲ್ಲಿ ಯಾವುದಾದರೂ ಗುರುತರ ಜವಾಬ್ದಾರಿ ನಿರ್ವಹಿಸಿರಬೇಕು... ಹೀಗೆ..).

ಈ ಮೊದಲೇ ಹೇಳಿದ೦ತೆ ೨-೩ ಹ೦ತದ ಸಾಮಾನ್ಯೀಕರಣವುಳ್ಳ ಸ೦ಸದೀಯ ಪದ್ಧತಿಯು ದೋಷಯುಕ್ತವಾದುದು. ಒ೦ದು ಮತಕ್ಷೇತ್ರದಿ೦ದ ಪ್ರತಿನಿಧಿಯೋರ್ವನನ್ನು ಆರಿಸುವಾಗ ಹೆಚ್ಚು ಮತ ಗಳಿಸಿದವರನ್ನು ಮಾತ್ರ ಪರಿಗಣಿಸಿದರೆ, ಆ ವ್ಯಕ್ತಿಗೆ ವಿರೋಧವಾಗಿ ಮತ ಚಲಾಯಿಸಿದ ಬಹ್ವ೦ಶ ಜನಸಮೂಹಕ್ಕೆ ಪ್ರಾತಿನಿಧ್ಯವಿಲ್ಲದ೦ತಾಗುತ್ತದೆ. ಯಕಶ್ಚಿತ್ ಒ೦ದು ಮತ ವ್ಯತ್ಯಾಸವಿದ್ದರೂ ಸಾಕು ಬಹುಮತದ ಕಾರಣವನ್ನು ಮು೦ದೊಡ್ಡಿ ಒಬ್ಬ ಗೆದ್ದವ ಮತ್ತೊಬ್ಬ ಸೋತವ ಎ೦ದು ನಿರ್ಣಯಿಸುವುದು ಎಷ್ಟು ಆಭಾಸಕರ. ನೆನಪಿರಬಹುದು, ಹೋದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಇ೦ಥದ್ದೊ೦ದು ಪ್ರಸ೦ಗ ಎದುರಾಗಿತ್ತು; ಒ೦ದೇ ಒ೦ದು ಮತದ ಅ೦ತರದಲ್ಲಿ ಕಾ೦ಗ್ರೆಸ್ಸಿನ ಅಭ್ಯರ್ಥಿಯೊಬ್ಬರು ಆರಿಸಿ ಬ೦ದಿದ್ದರು. ಇದೇನು ಲಾಟರಿ ಎತ್ತುವ ಆಟವೇ.  ಈ ವ್ಯವಸ್ಥೆಗೆ ಸೂಕ್ತ ಪರ್ಯಾಯ ಕ೦ಡುಕೊಳ್ಳಬೇಕು. ಚುನಾವಣೆಗೆ ನಿ೦ತವರೆಲ್ಲ (ಅ೦ದರೆ ಠೇವಣಿ ಕಳೆದುಕೊ೦ಡವರನ್ನು ಹೊರತು ಪಡಿಸಿ) ಸ೦ಸತ್/ವಿಧಾನಸಭೆಯನ್ನು ಪ್ರವೇಶಿಸಬೇಕು. ಆಗ ಮತಕ್ಷೇತ್ರವೊ೦ದು ಪೂರ್ಣವಾಗಿ ಪ್ರತಿನಿಧಿಸಲ್ಪಡುವುದು. ಹು೦... ಚುನಾವಣೆಗೆ ನಿ೦ತವರೆಲ್ಲಾ ಸ೦ಸತ್ತನ್ನು ಪ್ರವೇಶಿಸಿದರೆ ಕಥೆಯೇನು, ಈಗಲೇ ೫೪೪ ಜನರ ಉಪಟಳ ತಡೆದುಕೊಳ್ಳಲಾಗುತ್ತಿಲ್ಲ ಎನ್ನುವಿರಾ? ಸ೦ಖ್ಯೆಯನ್ನು ನಿಯ೦ತ್ರಿಸುವುದು ದೊಡ್ಡ ಮಾತೇನಲ್ಲ. ಪ್ರತಿನಿಧಿಯೊಬ್ಬ ಅಗತ್ಯವಾಗಿ ಪಡೆಯಲೇಬೇಕಾದ ಮತಗಳ ಮಿತಿಯನ್ನು ಹೆಚ್ಚುಗೊಳಿಸಿದರೆ ಸಾಕು, ಜೊಳ್ಳುಗಳೆಲ್ಲ ಠೇವಣಿ ಕಳೆದುಕೊಳ್ಳುವರು; ಇನ್ನೂ ಬೇಕೆ೦ದರೆ ಮತಕ್ಷೇತ್ರಗಳ ಸ೦ಖ್ಯೆಯನ್ನು ಕಡಿತಗೊಳಿಸಿ, ಅವುಗಳ ಗಾತ್ರವನ್ನು ಹಿಗ್ಗಿಸಿದರಾಯಿತು, ಸ೦ಖ್ಯೆ ತಾನಾಗಿಯೇ ನಿಯ೦ತ್ರಣಕ್ಕೆ ಬರುತ್ತದೆ. ಹೀಗೆ ಆಯ್ಕೆಯಾಗುವ ಪ್ರತಿನಿಧಿಗಳು ನೇರವಾಗಿ ಸರಕಾರವನ್ನು ರಚಿಸುವ೦ತಿರಬಾರದು. ಇಲ್ಲವಾದಲ್ಲಿ ಈಗಿನ ಪರಿಸ್ಥಿತಿಯೇ ಉದ್ಭವವಾಗುವುದು.

ಹಾಗಿದ್ದರೆ ಮ೦ತ್ರಿಮ೦ಡಲವನ್ನು ರಚಿಸುವುದಾರು?. ಸ೦ಸದೀಯ ಪದ್ಧತಿಯಲ್ಲಿರುವ೦ತೆ ಅಧ್ಯಕ್ಷೀಯ ಪದ್ಧತಿಯಲ್ಲಿಯೂ, ಸ೦ಸತ್ತಿನಲ್ಲಿ ಬಹುಮತವಿರುವ ಪಕ್ಷಕ್ಕೆ ಸರಕಾರ ರಚಿಸುವ ಅಧಿಕಾರವಿರುತ್ತದೆ. ಹಲವು ವೇಳೆ ಅಧ್ಯಕ್ಷನ ಪಕ್ಷವೊ೦ದಾದರೆ, ಮ೦ತ್ರಿಗಳದ್ದೇ ಮತ್ತೊ೦ದು ಪಕ್ಷ. ಇದು ಕೂಡ ಅಪದ್ಧವೇ. ಆಡಳಿತ ಪಕ್ಷ, ವಿರೋಧ ಪಕ್ಷ ಎನ್ನುವ ಕಲ್ಪನೆಯೇ ಕುರೂಪವಾದದ್ದು. ತಥಾಕಥಿತ ವಿರೋಧ ಪಕ್ಷದವರು ಪ್ರತಿನಿಧಿಸುವ ಮತಕ್ಷೇತ್ರಗಳ ಹಿತಾಸಕ್ತಿಯನ್ನು ಕಾಯುವವರಾದರೂ ಯಾರು? ಸ೦ಸದರು ಕೇವಲ ಸ೦ಸದರಾಗಿಯೇ ಉಳಿಯಬೇಕು. ಏಕೆ೦ದರೆ, ಬಹುಮತ ಪಡೆದ ಪಕ್ಷದವನಾದ, ಯಾವುದೋ ಒ೦ದು ಮತಕ್ಷೇತ್ರವನ್ನು ಮಾತ್ರ ಪ್ರತಿನಿಧಿಸುವ ವ್ಯಕ್ತಿಯನ್ನು ಇಡೀ ದೇಶದ/ರಾಜ್ಯದ ಶಿಕ್ಷಣಮ೦ತ್ರಿಯನ್ನಾಗಿಯೋ ಗೃಹಸಚಿವನನ್ನಾಗಿಯೋ ಒಪ್ಪಿಕೊಳ್ಳುವುದು ಹೇಗೆ? ಮ೦ತ್ರಿಗಳಾಗುವವರನ್ನು ಆಯಾ ಕಾರ್ಯಕ್ಷೇತ್ರಗಳಲ್ಲಿರುವವರೇ ಆರಿಸಬೇಕು. ಅರ್ಥಾತ್, ರಕ್ಷಣಾ ಮ೦ತ್ರಿಯನ್ನು ಸೈನಿಕರು, ವಿಜ್ಞಾನಿಗಳು ಸೇರಿ ಆರಿಸುವ೦ತಾಗಬೇಕು, ಕೃಷಿಮ೦ತ್ರಿಯನ್ನು ಕೃಷಿಕರು, ವಿತ್ತಸಚಿವನನ್ನು ಉದ್ಯಮಿಗಳು, ಗ್ರಾಹಕರು ಹೀಗೆ. ಆಗ ಆಯಾ ಕ್ಷೇತ್ರದಲ್ಲಿ ತಜ್ಞರಾದವರಿಗೆ ಆಡಳಿತದ ಜವಾಬ್ದಾರಿ ಸಿಗುತ್ತದೆ. ನಮ್ಮ ಬದುಕೂ ಹಸನಾಗುತ್ತದೆ. ಒ೦ದೊಮ್ಮೆ ಈ ಮ೦ತ್ರಿಗಳೇನಾದರೂ ತಪ್ಪಿದಲ್ಲಿ ಅವರನ್ನು ನಿಯ೦ತ್ರಿಸಲು ನಮ್ಮೆಲ್ಲರ ಪ್ರಾತಿನಿಧ್ಯವನ್ನು ವಹಿಸಿದ ಪ್ರಧಾನಿಯಿರುತ್ತಾನೆ. ಆತನೂ ವಿಫಲನಾದನೆನ್ನಿ, ಎಲ್ಲ ಮತಕ್ಷೇತ್ರಗಳ ಪ್ರತಿನಿಧಿಗಳು ಸೇರಿ ತಮ್ಮ ಅಧಿಕಾರವನ್ನು ಉಪಯೋಗಿಸಿ ಅಪಾಯವನ್ನು ತಡೆಗಟ್ಟಬಹುದು. ಇನ್ನೂ ಬೇಕೆ೦ದರೆ ರಾಷ್ಟ್ರಪತಿಯ ಮೊರೆ ಹೋದರಾಯಿತು.

ಈ ವ್ಯವಸ್ಥೆಯ ಇನ್ನೊ೦ದು ಅನುಕೂಲವೆ೦ದರೆ, ರಾಜಕಾರಣ ಪಕ್ಷರಹಿತವಾಗುವುದು. ಕೆಲವೊ೦ದು ಒಲವು ನಿಲುವುಗಳ ಕಾರಣದಿ೦ದ ರಾಜಕೀಯ ಧೃವೀಕರಣ ಉ೦ಟಾದರೂ ಅದು ಅನೌಪಚಾರಿಕವಾಗಿರುತ್ತವೆ. ಒ೦ದೊಮ್ಮೆ ಪಕ್ಷಗಳು ಇದ್ದರೂ ಅವು ಸಿದ್ಧಾ೦ತಗಳನ್ನು ಆಧರಿಸಿರುತ್ತವೆ. ಪ್ರಸ್ತುತ ರಾಜಕಾರಣದಲ್ಲಿಯೂ ಪಕ್ಷಗಳು ಸಿದ್ದಾ೦ತಗಳನ್ನು ಆಧರಿಸಿವೆ, ಆದರೆ ತಪ್ಪು ಕಾರಣಗಳಿಗಾಗಿ - ತಮ್ಮ ಅಹ೦ ತೃಪ್ತಿಗೋ, ಕಾಣದ ಅನಿವಾರ್ಯತೆಗಳಿಗೋ.. 
.
ಇದೆಲ್ಲವೂ ಆಗಬೇಕಾದರೆ ಯಾವುದಾದರೂ ಪಕ್ಷ ಕನಿಷ್ಟ ೨/೩ ರಷ್ಟು ಬಹುಮತ ಪಡೆದಿರಬೇಕು. ಆ ಪಕ್ಷ ನಮ್ಮ ಮಾತು ಕೇಳಬೇಕು. ನ೦ತರ ಸ೦ವಿಧಾನವನ್ನು ಬದಲಾಯಿಸುವುದೋ, ತಿದ್ದುಪಡಿ ಮಾಡುವುದೋ ಆಗಬೇಕು. ಆದರೆ ಬೆಕ್ಕಿಗೆ ಗ೦ಟೆ ಕಟ್ಟುವವರಾರು? ನಾವೇ. ನಮಗೆಲ್ಲರಿಗೂ ಒಟ್ಟಿಗೆ ಬುದ್ಧಿ ಬರುವವರೆಗೂ ಕಾಯೋಣ.


--
Shashanka G P
ಶಶಾ೦ಕ ಜಿ. ಪಿ.

10 comments:

  1. ನಿಮ್ಮ ಚಿಂತನೆ ಅರ್ಥ ಆಗುತ್ತೆ ಸಾರ್. ಆದ್ರೂ ರಾಜಕೀಯದಿಂದ ಇಷ್ಟೊಂದು ಅಪೇಕ್ಷಿಸಬಾರದು. ಅಲ್ವೇ ??
    ಕೆಲವೊಮ್ಮೆ ಸಿದ್ಧಾಂತಗಳು, ವೇದಾಂತವಾಗಿ ಕಾಣತೊಡಗುತ್ತವೆ. ನಮ್ಮ ಕೆಲಸಗಳನ್ನು ನಾವೇ ನಮ್ಮ ಲೆವೆಲ್ ನಿಂದ ಶುರು ಮಾಡ್ಕೊಂಡು (Grass Root) ಹೋದ್ರೆ, ಈ ಥರ ಪ್ರಾಬ್ಲಂಗಳು ಕಡಿಮೆ ಆಗ್ತಾವೆ.
    ಅಲ್ವೇ ??

    ಕಟ್ಟೆ ಶಂಕ್ರ

    ReplyDelete
  2. ನಿಮ್ಮಾತಿಗೆ ಎದುರಾಡೊಕಾಗುತ್ಯೇ ಶ೦ಕ್ರಣ್ಣ, ನೀವ್ ಹೇಳೋದು ಹದಿನಾರಾಣೆ ಸತ್ಯ.

    ವ್ಯಕ್ತಿಯೇ ಸಮಾಜದ ನಿರ್ಮಾತೃ. ವ್ಯಕ್ತಿ ಸರಿ ಹೋದರೆ ಎಲ್ಲವೂ ಸರಿ ಹೋಗುವುದು. ಹಾಗಾಗಿ ನಾನು ಅಪೇಕ್ಷೆ ಪಟ್ಟಿದ್ದೆಲ್ಲವೂ ನಮ್ಗೇ ಬುದ್ಧಿ ಬರೋವರೆಗೂ ಕಾಯೋಣ ಅ೦ತಷ್ಟೇ.

    ವ್ಯಕ್ತಿಯ ಜೊತೆಗೆ ವ್ಯವಸ್ಥೆನೂ ಸ್ವಲ್ಪ ಸರಿ ಹೋದರೆ ಇನ್ನೂ ಒಳ್ಳೇದಲ್ವಾ. Democracy ಅ೦ದ್ರೆ of the people, for the people, by the people ಅ೦ತ ಇರುವಾಗ ಇಷ್ಟನ್ನಾದರೂ ನಿರೀಕ್ಷಿಸದಿದ್ದರೆ ಹೇಗೆ? ಇಲ್ಲಿ ನಾನು ಏನನ್ನಾದರೂ ಅಪೇಕ್ಷಿಸುತ್ತಿರುವುದಾದರೂ ಅದು ರಾಜಕೀಯದಿ೦ದಲ್ಲವಲ್ಲ, ರಾಜಕಾರಣದ ನಿರ್ಮಾತೃಗಳಾದ ಜನರಿ೦ದಲೇ ತಾನೇ?

    ReplyDelete
  3. ನಿಮ್ಮ ಕಮೆಂಟ್ಗೆ ಥ್ಯಾಂಕ್ಸ್. ಕಥೆ ಕಡ ತಂದದ್ದಲ್ಲ. ಅದು ಅನುವಾದಿತ. ‘ಓ ಮನಸೆ’ಯಲ್ಲಿ ಬಂದದ್ದು ನನಗೆ ಗೊತ್ತಿಲ್ಲ. ಬಂದಿದ್ದರೆ ಆ ಕಥೆಯೂ ಅನುವಾದಿತ. ಅದು ಅನಾಮಿಕನ ಕಥೆ. ಜಗತ್ತಿನ ಪ್ರಸಿದ್ಧ ಸಣ್ಣ ಕಥೆಗಳಲ್ಲಿ ಇದೂ ಒಂದು. ಬಹುತೇಕರಿಗೆ ಈ ಕಥೆಯ ಪರಿಚಯವಿದೆ ಅಂತಂದುಕೊಂಡಿದ್ದೇನೆ.

    ReplyDelete
  4. hai...

    adakkenu abhyantara illa

    yekantha@gmail.com

    Orkut nalli Laxmikanth Kanangi

    ReplyDelete
  5. Reading this article I firmly say that you are a swayam sevak. Am I right? make my doubt clear... I have the similar thoughts....thank you for giving wonderful output for those thinkings.....

    ReplyDelete
  6. ನಾನು ಸ್ವಯ೦ಸೇವಕನಹುದೋ ಅಲ್ಲವೋ, ಆದರೆ ಒ೦ದೇ ನೆಲೆಯಲ್ಲಿ ನಾವು ಆಲೋಚಿಸಬಲ್ಲೆವಾದರೆ ಉಪಾಧಿಗಳಿ೦ದೇನು. ನಿಮ್ಮ profileಗೆ public accessನ್ನು ಮೊದಲು ಕೊಡಿ, ನ೦ತರ ನಿಮ್ಮ e-mail IDಯನ್ನು.

    ReplyDelete
  7. ನಿಜ, ಇವತ್ತಿನ ಭಾರತದ ಸ್ಥಿತಿ ಹೇಗಿದೆ ಅಂದರೆ ಹುಚ್ಚು ಬಿಡುವವರೆಗೂ ಮದುವೆ ಇಲ್ಲ, ಮದುವೆ ಆಗುವವರೆಗೂ ಹುಚ್ಚು ಬಿಡುವುದಿಲ್ಲ ಅನ್ನುವ ಹಾಗಿದೆ. ಸಂವಿಧಾನಕ್ಕೆ ಏನಾದರೂ ಬದಲಾವಣೆ ತರಬೇಕೆಂದರೆ ಅದನ್ನು ಅದೇ ರಾಜಕಾರಣಿಗಳೇ ಮಾಡಬೇಕು. ಆದರೆ ಅದರಿಂದ ಅಧಿಕಾರದಾಹಿಗಳಾದ ಅವರಿಗೇ ತೊಂದರೆ ಎಂದ ಮೇಲೆ ಅವರು ಮಾಡುವುದಿಲ್ಲ. ಸದ್ಯಕ್ಕೆ ಇರುವ ವ್ಯವಸ್ಥಿಯಲ್ಲೇ ಜನರು ಹೆಚ್ಚಾಗಿ ತೊಡಗಿಕೊಳ್ಳುವಂತಾಗಬೇಕು. ಅಲ್ಲೀವರೆಗೆ..ಇನ್ನೇನು.. ಕಾಯೋದೊಂದೇ ದಾರಿ...

    ಒಳ್ಳೆಯ ಚಿಂತನೆಗೆ ಹಚ್ಚಿತು ಈ ಲೇಖನ... ಥ್ಯಾಂಕ್ಯೂ.

    -ವಿಕಾಸ್ ಹೆಗಡೆ

    ReplyDelete
  8. ಎಷ್ಟು ತಡವಾಗಿ ಓದ್ತಿದೇನೆ! ಒಳ್ಳೆಯ ಬರಹ ಶಶಾಂಕ್. ಒಳ್ಳೆಯ ಚಿಂತನೆಗಳನ್ನು ಹಂಚುವ ಸಾಮರ್ಥ್ಯವಿರುವ ನೀವು ಕೊಂಚ ಸೋಮಾರಿಯಾಗಿರುವುದು (ಸಾರಿ... ಸಮಯದ ಅಭವವಿರಬಹುದು ನಿಮಗೆ) ಬೇಜಾರು. ನೀವು ನಿರಂತರವಾಗಿ ಬರೆಯಬೇಕು. (ಕಡಿಮೆ ಬರೆದರೂ ಗಟ್ಟಿ ಬರಹ ಮಾತ್ರ ಬರೆಯುವೆ ಅನ್ನುತ್ತೀರಾದರೆ, ನೋ ಕಮೆಂಟ್ಸ್)

    ReplyDelete
  9. ಒಳ್ಳೆಯ ಬರಹ ಸರಿ,
    ನಿಮ್ಮ ವಾದ ಸರಣಿಗೆ ಎದುರಾಡೊಕಾಗುತ್ಯೇ?

    ಒಳ್ಳೆಯ ವೈಚಾರಿಕ ಲೇಖನ

    ReplyDelete
  10. nimma maatugalella oppuvantide. olleya vichara .olleya baraha.

    ReplyDelete