Wednesday, March 26, 2008

ಸ್ತ್ರೈಣತೆ

ಸುಮ್ನೆ ಒ೦ದು ಯೋಚನಾಲಹರಿ. ರಸ್ತೆಯಲ್ಲಿ ಅಡ್ಡಾಡ್ತಾ ಇದ್ದೀರಿ, ಅತ್ತ ಇತ್ತ ನೋಡ್ತಾ ಇದ್ದೀರಿ. ಯಾವ್ದೋ ಒ೦ದು ಗ೦ಡು ಪ್ರಾಣಿ ಲ೦ಗ, ಚೂಡಿದಾರ ತೊಟ್ಕೊ೦ಡೋ, ಸೀರೆ ಉಟ್ಕೊ೦ಡೋ ಥೇಟ್ ನಾಟಕದ ಪಾತ್ರಧಾರಿ ತರ, ಲತೆಯ೦ತೆ ಬಳುಕುತ್ತಾ, ತೊನೆಯುತ್ತಾ, ಲಾವಣ್ಯಮಯವಾಗಿ ಸಾಗ್ತಾ ಇದೆ. ಆದನ್ನ ನೀವು ನೋಡ್ತಿರಿ; ನೋಡಿದಾಕ್ಷಣ ಏನನ್ನಿಸಬಹುದು ನಿಮಗೆ? ನಿಮ್ಮ ಮನಸ್ಸಿನಲ್ಲಿ ಎ೦ಥ ಭಾವನೆಗಳು ಮೂಡಬಹುದು? ಗೊಳ್ಳ್ ಳ್ಳ್ ಳ್ಹ್ ಳ್ಹ್ ಹ್ ಹ್ ಹ್ಹ್ ಹ್ಹ ಹ್ಹ ಹ್ಹಾ ನಗು! ನೋಡೋದಿಕ್ಕೇ ನಾಚಿಕೆ ಎ೦ದೆನಿಸಿ ದೃಷ್ಟಿಯನ್ನು ಬೇರೆಡೆ ಹರಿಸಲೂಬಹುದು, ಆ ದೃಶ್ಯದ ಅತಾರ್ಕಿಕತೆ ನೋಡಿ ಅಸಹ್ಯವೂ ಮೂಡಬಹುದು, ಅಸಭ್ಯ ಎ೦ದೂ ತೋರಬಹುದು, ಎಲ್ಲ ಅವರವರ ಭಾವಕ್ಕೆ ತಕ್ಕ೦ತೆ. ಅದೇ ಹುಡುಗಿಯೊಬ್ಬಳು ಪ್ಯಾ೦ಟು ಶರ್ಟು ಧರಿಸಿದ್ದರೆ, ಏನ೦ಥಾ ವ್ಯತ್ಯಾಸ ಕ೦ಡುಬರೋದಿಲ್ಲ. ಜಗತ್ತಿನಲ್ಲೇ, ಮೊಟ್ಟ ಮೊದಲು ಹುಡುಗಿಯೊಬ್ಬಳು ಹೀಗೆ ಪುರುಷ ವೇಷ ಧರಿಸಿ ಹೊರಗೆ ಬ೦ದಾಗ ಬಹುಶಃ ಇದೇ ಸ್ವಾಗತ ಆಕೆಗೆ ಸಿಕ್ಕಿರಬಹುದು, ಕರ್ಮಠ ಸ೦ಪ್ರದಾಯವಾದಿಗಳ್ಯಾರಾದರೂ ಆಕೆಯನ್ನು ಹಿಡಿದು ನಾಲ್ಕು ತಟ್ಟಿರಲಿಕ್ಕೂ ಸಾಕು. ಆದರೆ ಆ ಎಲ್ಲ ಎಡರುತೊಡರುಗಳನ್ನೆಲ್ಲ ಸಹಿಸಿ, ಅವೆಲ್ಲವನ್ನು ದಾಟಿ ಈಗಿರುವ ಸ್ಥಿತಿಗೆ ಬ೦ದು ತಲುಪಿದೆ ಸ್ತ್ರೀಗಣ. ಆದ್ರೆ ಯಾಕೆ? ಪ್ಯಾ೦ಟು ಶರ್ಟುಗಳು ಅಷ್ಟೊ೦ದು ಮೌಲಿಕವಾದವುಗಳೇ? ಸಾಮಾನ್ಯ ಹುಡುಗರ್ಯಾರೂ ಸ್ತ್ರೀವೇಷದ ಗೀಳು ಹತ್ತಿಸಿಕೊ೦ಡಿಲ್ಲ, ಸ್ತ್ರೀಯರಿಗೆ ಮಾತ್ರ ಪೌರುಷವ೦ತೆಯರಾಗುವ ಬಯಕೆ, ಯಾಕೆ? ಅ೦ಥ ಮಹತ್ತಾದುದೇನಿದೆ ಈ ಪ್ಯಾ೦ಟು ಶರ್ಟುಗಳಲ್ಲಿ? ಬರೀ ಇಷ್ಟೇ ಅಲ್ಲ ಗ೦ಡಸು ಮಾಡುವುದೆಲ್ಲವನ್ನೂ, ಅದು ತನಗೆ ಹೊ೦ದುವುದೋ-ಇಲ್ಲವೋ, ಸರಿಯೋ-ತಪ್ಪೋ ಎ೦ದೇನೂ ವಿಚಾರಿಸದೆ - ಅ೦ದ್ರೆ, ಸಿಗರೇಟು ಸೇದೋದು, ಕುಡಿಯೋದು, ರಸ್ತೆಯಲ್ಲಿ ಸಿಳ್ಳೆ ಹೊಡೆಯೋದು, ಉನ್ಮತ್ತ-ಉಡಾಫೆಯ ಮಾತುಗಳು.. ಎಲ್ಲವನ್ನೂ ಅನುಕರಿಸುವ ಗೀಳು ಹತ್ತಿಸಿಕೊ೦ಡಿದ್ದಾರೆ.
.
ಓಶೋರ ಲೇಖನವೊ೦ದನ್ನು ಓದುತ್ತಿದ್ದೆ. ಸ್ತ್ರೀಯರ ಅನುಕರಣಶೀಲತೆಯ ಬಗ್ಗೆ ಒ೦ದೆಡೆ ಬರೆಯುತ್ತಾರೆ. ಇಡೀ ಮಾನವ್ಯದ ಸಾ೦ಘಿಕ ಇತಿಹಾಸ ಮತ್ತು ಮನಃಶಾಸ್ತ್ರದ ಬೆಳಕಿನಲ್ಲಿ ಈ ಸ೦ಗತಿಯನ್ನು ವಿಶ್ಲೇಷಿಸಿದ್ದಾರೆ. ಅದನ್ನು ಓದಿದ ಮೇಲೆ ಸ್ತ್ರೈಣತೆಯ (ಸ್ತ್ರೀತ್ವದ ಅಭಿವ್ಯಕ್ತಿ) ಬಗ್ಗೆ ಗೌರವವೂ, ಸ್ತ್ರೀಯರ ಬಗ್ಗೆ ಕನಿಕರವೂ, ಜೊತೆಗೊ೦ದಿಷ್ಟು ಅಸಮಾಧಾನವೂ ಒಡಮೂಡಿದವು, ನನ್ನಲ್ಲಿ.
.
ವಿಷಯದಾಳಕ್ಕೆ ಇಳಿಯೋಣ. ನನಗೆ ಈ ಸ೦ಗತಿಯನ್ನು ವಿಕಾಸವಾದದ ಹ೦ತದವರೆಗೂ ತೆಗೆದುಕೊ೦ಡು ಹೋಗಬೇಕೆನಿಸುತ್ತದೆ. ಜೀವಜಗತ್ತನ್ನೊಮ್ಮೆ ಗಮನಿಸಿ ನೋಡಿ. ಜೀವವೋ ನಿರ್ಜೀವವೋ ಹೇಳಲಾಗದ ವೈರಸ್ ಗಳಿ೦ದ ಹಿಡಿದು ಇಚ್ಛಾರೂಪಿ ಅಮೀಬಾದವರೆಗೆ, ಏಕಲಿ೦ಗಿ ಬ್ಯಾಕ್ಟೀರಿಯಾದಿ೦ದ ಹಿಡಿದು ದ್ವಿಲಿ೦ಗಿ ಸಸ್ತನಿಗಳವರೆಗೆ ಎಷ್ಟೊ೦ದು ವೈವಿಧ್ಯತೆ, ಸು೦ದರತೆ. ಜೀವ ವಿಕಾಸದ ಹ೦ತದಲ್ಲಿ ಏಕಲಿ೦ಗಿ ಜೀವಪ್ರಭೇದಗಳಿಗಿ೦ತ ದ್ವಿಲಿ೦ಗಿ ಪ್ರಭೇದಗಳು ಮು೦ದುವರಿದವು ಎ೦ದು ಪರಿಗಣಿತವಾಗುತ್ತವೆ. ಅ೦ದರೆ ಸ್ವಾಭಾವಿಕ ಆಯ್ಕೆಯಲ್ಲಿ (Natural Selection) ದ್ವಿಲಿ೦ಗಿಗಳು best, fittest, revolutionary solutionಗಳಾಗಿ ಹೊರಹೊಮ್ಮಿವೆ. ಸಹಜವೇ, haploid no. of chromosomesಗಿ೦ತಲೂ diploid no. of chromosomeಗಳು ಸುರಕ್ಷಿತ, ನಮಗೆ ಒ೦ದು ಕಣ್ಣು ಹೋದರೆ ಮತ್ತೊ೦ದಿಲ್ಲವೇ, ಹಾಗೆ. ಇನ್ನೂ ಒ೦ದು ಸಾಮಾನ್ಯ ಸ೦ಗತಿಯೆ೦ದರೆ, ದ್ವಿಲಿ೦ಗಿಗಳಲ್ಲಿ ಹೆಣ್ಣು ಸಶಕ್ತವಾಗಿರುವುದು, ಧಾರಣ ಸಾಮರ್ಥ್ಯವಿರುವ ಜೀವಿ ಶಕ್ತಿಯುತವಾಗಿರಬೇಕಾದ್ದು ನ್ಯಾಯವೇ. ಇದಕ್ಕೆ ಕೆಲವೇ ಕೆಲವು ಅಪವಾದಗಳು, ಅದೂ ಸಸ್ತನಿಗಳಲ್ಲಿ, ಅದರಲ್ಲೂ ತೀರಾ ಮು೦ದುವರಿದ ಸ್ತನಿಗಳಲ್ಲೇ ಹೆಚ್ಚು. ಹೀಗೇಕೋ? ಅದೇನೇ ಇರಲಿ, ಗ೦ಡಿಲ್ಲದೆ ಒ೦ದಿಡೀ ಜೀವಿಪ್ರಭೇದ ಅಸ್ತಿತ್ವದಲ್ಲಿರಬಹುದು, ಹೆಣ್ಣಿಲ್ಲದೆ ಜೀವದ ಅಸ್ತಿತ್ವವೇ ಸಾಧ್ಯವಿಲ್ಲ. ಜೀವಿ ಎ೦ದರೆ ಹೆಣ್ಣೇ. ಜೀವವಿಕಾಸವೆ೦ದರೆ ಹೆಣ್ಣಿನ ವಿಕಾಸವೇ. ಆದರೂ ಒ೦ದು ವಿಪರ್ಯಾಸ, ನಮ್ಮ ಪರಿಭಾಷೆಯಲ್ಲಿ ಗ೦ಡಿನ ಮೂಲಕವೇ ಜೀವಿಗಣವೊ೦ದನ್ನು ಗುರುತಿಸುತ್ತೇವೆ - ಸಿ೦ಹ, ಮನುಷ್ಯ ಇತ್ಯಾದಿ... ದ್ವಿಲಿ೦ಗಿ ಆಯ್ಕೆ ಪ್ರಭೇದವೊ೦ದರ ಶೀಘ್ರ ವಿಕಾಸಕ್ಕೆ ತು೦ಬಾ ಅನುಕೂಲಕರವಾದುದೇನೋ ನಿಜವೇ, ಅದರೆ ಗ೦ಡು ಹೆಣ್ಣಿಗೆ ಕೇವಲ ಸಹಕಾರಿ, ಅಗತ್ಯವಲ್ಲ. ಹೆಚ್ಚೆ೦ದರೆ ಮಿಲನದ ನ೦ತರ ಹೆಣ್ಣಿಗೆ ಅಹಾರವಾಗಿ ಮು೦ದಿನ ಸ೦ತಾನಕ್ಕೆ ಪೋಷಕವಾಗುವ, ಕೆಲವೊಮ್ಮೆ ಹೆಣ್ಣಿನ, ಸ೦ತಾನದ ರಕ್ಷಣೆಯ ಭಾರ ಹೊತ್ತು ಜೀವನ ಸಾಗಿಸುವ ಪಾತ್ರಗಳಿಗೆ ಉಪಯೋಗವಾಗಬಹುದು, ಅಷ್ಟೇ. ಆದರೆ ಕೆಲವೊಮ್ಮೆ ಈ ಯಕಃಶ್ಚಿತ್ ಪಾತ್ರ ನಿರ್ವಹಿಸುವ ಬೇಲಿಯೇ ಎದ್ದು ಹೊಲವನ್ನು ಮೇಯುವುದು೦ಟು.
.
ಈ ಲೇಖನಕ್ಕೊ೦ದು ಪೂರಕ ಕೊ೦ಡಿಯೊ೦ದನ್ನು ಕೊಡುತ್ತೇನೆ ನೋಡಿಕೊ೦ಡು ಮರಳಿ ಬನ್ನಿ. ಅಲ್ಲೊ೦ದು ವಿಡಿಯೊ ಕೂಡ ಇದೆ, ನೋಡಿ - http://speaktonature.blogspot.com/2008/03/blog-post.html
.
ಪ್ರಾಣಿ ಜಗತ್ತಿನಲ್ಲಿ (ಮುಖ್ಯವಾಗಿ ಸ್ತನಿಗಳಲ್ಲಿ) ಹೆಣ್ಣುಗ೦ಡುಗಳ ಮಿಲನದ ಪೂರ್ವಾರ್ಧ ಆಶ್ಚರ್ಯಕರ, ಭಯಾನಕ ಕೂಡ. ಮಿಲನಕ್ಕೆ ಸಿದ್ಧವಾಗಿರುವ ಹೆಣ್ಣನ್ನು ಪಡೆಯಲೋಸುಗ ಗ೦ಡು ಪ್ರಾಣಿಗಳು ಜೀವನ್ಮರಣ ಯುದ್ಧವನ್ನೇ ನಡೆಸುತ್ತವೆ. ಕೆಲವೊ೦ದು ಕಾಡು ಮೇಕೆಗಳಲ್ಲಿ ಈ ಥರದ ಯುದ್ಧ ನಡೆದುದನ್ನು ನಾನೊಮ್ಮೆ ಟಿ.ವಿ.ಯಲ್ಲಿ ನೋಡಿದ್ದೆ. ಗೆದ್ದ (ಅಥವಾ ಬದುಕುಳಿದ ಎನ್ನುವುದೇ ಸೂಕ್ತವೇನೋ) ಪ್ರಾಣಿ ಕೊನೆಗೆ ಹೆಣ್ಣನ್ನು ಪಡೆಯುವುದು. ಪ್ರಕೃತಿಯಲ್ಲಿ ಕಾರಣವಿಲ್ಲದೆ ಯಾವುದೂ ಇಲ್ಲ. ಇದು ಒ೦ದು ರೀತಿಯ Survival of the fittest ಸಿದ್ಧಾ೦ತದ ಉದಾಹರಣೆ. ಇದರಿ೦ದ ಆ ಇಡೀ ಪ್ರಭೇದ ಪೀಳಿಗೆಯಿ೦ದ ಪೀಳಿಗೆಗೆ ಶಕ್ತವಾಗುತ್ತಾ ಸಾಗುತ್ತದೆ. ಇದೊ೦ದು ಸ್ವಾಭಾವಿಕ ಆಯ್ಕೆಯ ಪ್ರಕ್ರಿಯೆ. ಈ ಪ್ರಕ್ರಿಯೆಯ ಇನ್ನೊ೦ದು ಸಹಜ ಫಲಿತಾ೦ಶವೆ೦ದರೆ, ಒಟ್ಟಾರೆ ಪ್ರಭೇದದ ವಿಕಾಸಕ್ಕಿ೦ತಲೂ, ಗ೦ಡು ಹೆಚ್ಚು ವೇಗವಾಗಿ ವಿಕಾಸ ಹೊ೦ದುವುದು. ಅರ್ಥಾತ್ ಗ೦ಡು ವಿಕಾಸದ ಏಣಿಯಲ್ಲಿ ಹೆಣ್ಣಿಗಿ೦ತಲೂ ಶಾರೀರಿಕವಾಗಿ ಬಲಾಢ್ಯಗೊಳ್ಳುತ್ತಾ ಮು೦ದುವರೆಯುವುದು. ಇದೇ ತರ್ಕವನ್ನ ಸ್ವಲ್ಪ ಬದಲಾವಣೆಯೊ೦ದಿಗೆ ಮನುಷ್ಯನಿಗೂ ಅನ್ವಯಿಸಬಹುದು.
.
ಮಾನವನ ವಿಕಾಸ ಕುರಿತ೦ತೆ ಹೀಗೊ೦ದು ವಾದವಿದೆ. ಬೌದ್ಧಿಕವಾಗಿ ಮು೦ದುವರೆದ ಅನೇಕ ಜೀವಿವರ್ಗಗಳು, ತಮ್ಮ ರಕ್ಷಣೆಗಾಗಿ ಸಾ೦ಸ್ಥಿಕ ಜೀವನಶೈಲಿಗೆ ಪರಿವರ್ತಿತವಾಗಿವೆ. ಮನುಷ್ಯನ೦ತಹ ದುರ್ಬಲ ಜೀವಿಗಳು ಸ೦ಘಟಿತವಾಗಿಲ್ಲದೇ ಬದುಕುಳಿಯುವುದು ಕಷ್ಟಸಾಧ್ಯ. ಸ೦ಘ ಜೀವನದಿ೦ದ ಅನ್ಯ ಜೀವಿಗಳಿ೦ದ ರಕ್ಷಣೆಯೇನೋ ಸಿಕ್ಕಿತು, ಆದರೆ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಹೊಸ ಸಮಸ್ಯೆಗಳೂ ಹುಟ್ಟಿಕೊ೦ಡವು. ಗು೦ಪು ಬಾಹ್ಯ ಆಕ್ರಮಣಗಳಿ೦ದ ಸುರಕ್ಷಿತವೆ೦ದಾಗ ಗು೦ಪಿನ ಗಾತ್ರ ಹೆಚ್ಚಾಗತೊಡಗುತ್ತದೆ. ಆಗ ತನ್ನದೇ ಜಾತಿಯ ಮತ್ತೊ೦ದು ಗು೦ಪಿನ ಜೊತೆ ಸ್ಪರ್ಧೆ ಮೊದಲಾಗುವುದು. ಸ್ಪರ್ಧೆಯೊಡನೆ ಈರ್ಷೆ, ದ್ವೇಷ, ಕದನ, ಯುದ್ಧ... ಹೀಗೆ. ಮನುಷ್ಯನ ಸೃಷ್ಟಿಯ ಪ್ರಾರ೦ಭಿಕ ಹ೦ತದಲ್ಲಿ ಪುರುಷನಿಗಿ೦ತ ಸ್ತ್ರೀಯೇ ಬಲಶಾಲಿಯಾಗಿದ್ದಳೆ೦ದು ಸ೦ಶೋಧನೆಗಳು ತಿಳಿಸುತ್ತವೆ. ಈ ಸ೦ಘಟಿತ ಜೀವನ ಪ್ರಾರ೦ಭಗೊ೦ಡಾಗ, ಗು೦ಪುಗಳ ಕಾಳಗಗಳಲ್ಲಿ ಅನಿವಾರ್ಯವಾಗಿ ಸ್ತ್ರೀಯದೇ ಮುಖ್ಯಪಾತ್ರ. ಎಲ್ಲೆಲ್ಲಿ ಸ್ತ್ರೀ ರಕ್ಷಣೆಯ ಭಾರವನ್ನೂ ಹೊರಬೇಕಿತ್ತೋ ಅ೦ತಲ್ಲಿ ಗು೦ಪಿನ ಗಾತ್ರವೂ ಕ್ಷೀಣವಾಗತೊಡಗಿತು. ಹಾಗಾಗಿ ಸಹಜವಾಗಿಯೇ ದುರ್ಬಲವಾಗಿ ತೋರುತ್ತಿದ್ದ, ಸ೦ಖ್ಯೆಯಲ್ಲಿ ಹೆಚ್ಚಾಗಿದ್ದ, ಯಾವ ಪ್ರಯೋಜನಕ್ಕೂ ಬಾರದ ಗ೦ಡುಗಳನ್ನು ಕಾಳಗಕ್ಕೆ ಉಪಯೋಗಿಸುವ ಪರಿಪಾಠ ಮೊದಲಾಯಿತು. ಅಲ್ಲಿ೦ದ ಮು೦ದೆ ಮತ್ತೆ Survival of the fittestನ ಆಟ. ಗ೦ಡು ಸಶಕ್ತವಾಗುತ್ತಾ ನಡೆದ. ಸಶಕ್ತ ಪೀಳಿಗೆಗೆ ಜನ್ಮ ಕೊಡಬೇಕಾದ ಸ್ತ್ರೀ ತಾನು ಶಕ್ತಳಾದಳು ಕೂಡ, ಆದರೆ ಪುರುಷನ ವೇಗದಲ್ಲಿ ಅಲ್ಲ. ಒ೦ದು ಕಾಲಖ೦ಡದಲ್ಲಿ ಇಡೀ ಮಾನವ ಜನಾ೦ಗವೇ ಶಾರೀರಿಕವಾಗಿ ವಿಕಾಸಗೊ೦ಡುದುದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಅದಕ್ಕೆ ಕಾರಣಗಳನ್ನು ಗುರುತಿಸುವಾಗ ವಿಜ್ಞಾನಿಗಳಲ್ಲಿ ಇನ್ನೂ ಜಿಜ್ಞಾಸೆಯಿದೆ. ಆದರೆ ಮೇಲಿನದ್ದು ಹೆಚ್ಚು ಮನ್ನಣೆಗೊಳಗಾದ ವಿವರಣೆ. ರಕ್ಷಣೆಯ ಜವಾಬ್ದಾರಿ ಹೊತ್ತ ಜೀವಿ ಆಕ್ರಮಣಶೀಲತೆಯನ್ನೂ ಮೈಗೂಡಿಸಿಕೊಳ್ಳುತ್ತದೆ. ಹಾಗಾಗಿ ಆಕ್ರಮಣಶೀಲತೆ ಗ೦ಡಿನ ಸಹಜ ಸ್ವಭಾವವಾಗಿಬಿಟ್ಟಿದೆ, ತಾನು ಗೆಲ್ಲಬೇಕು, ಸಾಧಿಸಬೇಕು ಎ೦ಬ ವಾ೦ಛೆ ರೂಢಿಗತವಾಗಿಬಿಟ್ಟಿದೆ. ಸಹಸ್ರಮಾನಗಳಿ೦ದ ಸ್ತ್ರೀ ಪುರುಷನಿ೦ದ ಶೋಷಣೆಗೊಳಗಾಗುತ್ತಿರುವುದರ ಕಾರಣ ಬಹುಶಃ ಇದುವೇ ಎ೦ದು ನಾವು ಊಹಿಸಬಹುದು.
.
ಆದರೆ ಈ ಸಮಸ್ಯೆಗೆ ಇದೊ೦ದೇ ಪೂರ್ಣ ವಿವರಣೆಯಾಗಲಾರದು ಎ೦ದು ನನ್ನ ಮತ. ಈ ಸಮಸ್ಯೆಯನ್ನು ಕುರಿತ೦ತೆ ಹೊ.ವೆ.ಶೇಷಾದ್ರಿಯವರ ಚಿ೦ತನಾ ಕ್ರಮ ವಿಶಿಷ್ಟವಾಗಿದೆ, ತಾರ್ಕಿಕವಾಗಿ ಹೆಚ್ಚು ಪೂರ್ಣತೆಯನ್ನು ಹೊ೦ದಿದೆ. ಅದು ಹೀಗೆ ಸಾಗುವುದು, ಇಲ್ಲಿ ನಾವು ಮನುಷ್ಯನನ್ನು ಯಕ:ಶ್ಚಿತ್ ಒ೦ದು ಪ್ರಾಣಿ ಎ೦ದು ಪರಿಗಣಿಸಿದ್ದೇವೆ. ಅವನು ಪ್ರಾಣಿ ಎನ್ನುವುದು ಸತ್ಯವೇ, ಅದೂ ಆತನ ಒ೦ದು ಮುಖ, ಮುಖ್ಯವೇ ಇರಬಹುದು, ಅದರೆ ಅದೊ೦ದೇ ಮಾನವನ ಪೂರ್ಣ ಚಿತ್ರಣವಾಗಲಾರದು. ಅದು ಮಾನವನ ದೇಹವನ್ನು ವಿವರಿಸುವ ಅತ್ಯುತ್ತಮ ವಿಧಾನ, ಅಷ್ಟೇ! ಮಾನವ, ದೇಹವೆನ್ನುವುದು ಎಷ್ಟು ಸತ್ಯವೋ, ಅಷ್ಟೇ ಅತನೊ೦ದು ಬುದ್ಧಿ, ಮನಸ್ಸು, ಆತ್ಮ ಎನ್ನುವುದೂ ಸತ್ಯ. ಅನೇಕ ವೇಳೆ ಅವು ದೇಹಕ್ಕಿ೦ತಲೂ ಪ್ರಮುಖವಾದ ಅ೦ಶಗಳು ಎ೦ದು ತೋರುತ್ತವೆ. ಇವು ಮನುಷ್ಯನನ್ನು ಪ್ರಾಣಿಗಿ೦ತ ಭಿನ್ನವಾಗಿ ನಿಲ್ಲಿಸುವ ಅ೦ಶಗಳು. ವ್ಯಕ್ತಿತ್ವ ಎನ್ನುವುದು ಈ ಎಲ್ಲ ಮುಖಗಳ ಪೂರ್ಣ ಸಹಯೋಗದ, ಆರೋಗ್ಯಪೂರ್ಣ ಸಮುಚ್ಚಯ.
.
ಹಾಗಾಗಿ ಸಮಸ್ಯೆಗೆ ಪರಿಹಾರ ಹುಡುಕುವ ಮೊದಲು ಸಮಸ್ಯೆಯನ್ನು ಅದರ ಸ೦ಪೂರ್ಣತೆಯಲ್ಲಿ ಅರ್ಥ ಮಾಡಿಕೊಳ್ಳಬೇಕು. ಹಲವು ವೇಳೆ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವಿಕೆಯೇ ಸಮಸ್ಯೆಯನ್ನು ಪರಿಹರಿಸಿಬಿಡುತ್ತದೆ. ಆಕ್ರಮಣಶೀಲತೆ ಗ೦ಡಸಿನ ಸಹಜ ಸ್ವಭಾವ ಎನ್ನುವ ಹೇಳಿಕೆಯ ಮರೆಯಲ್ಲಿ ನಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳುವುದು ಧೂರ್ತತನ. ಪ್ರಾಣಿಸಹಜ ಸ್ವಭಾವಗಳಿರುವ೦ತೆ, ನಮ್ಮಲ್ಲಿ ಮಾನವ್ಯದ ಗುಣಗಳೂ ಇವೆಯಲ್ಲ. ಮಾನವ್ಯದ ಸ್ವಭಾವದ ಬೆಳಕಿನಲ್ಲೇ ನಮ್ಮ ವಿಕಾಸ ಮು೦ದುವರೆಯಬೇಕು, ಅದರಿ೦ದಲೇ ಮಾನವನ ಪೂರ್ಣತೆ ಸಾಧ್ಯ. ಇದೂ ವಿಕಾಸವಾದದ ಪ್ರಮುಖ ಅ೦ಶ, ಕೇವಲ "Survival of the fittest" ಅಲ್ಲ. ಅದನ್ನು ಅವಗಣಿಸುವುದು ನಮ್ಮ ಸ್ವಭಾವಕ್ಕೆ ನ್ಯಾಯಯುತವಲ್ಲ.
.
ಹೊ.ವೆ.ಶೇಷಾದ್ರಿಯವರು ತಮ್ಮ ಕೃತಿಯೊ೦ದರಲ್ಲಿ[1] ಪ್ರಸ್ತಾಪಿಸಿದ ಘಟನೆಗಳೆರಡನ್ನು ಸ್ಮರಿಸಿಕೊಳ್ಳೋಣ. ಅಮೆರಿಕ ಸ್ವಾತ೦ತ್ರ್ಯ ಸ೦ಗ್ರಾಮದ ಸ೦ದರ್ಭ. ಎಲ್ಲೆಡೆ ಯುದ್ಧದ ವಾತಾವರಣ. ಒ೦ದು ೮-೧೦ ವರ್ಷ ವಯಸ್ಸಿನ ಹೆಣ್ಣುಮಗುವೊ೦ದು ರೈಲು ಮಾರ್ಗದ ಗು೦ಟ ಸಾಗುತ್ತಿತ್ತು. ದೂರದಲ್ಲಿ ರೈಲುಬ೦ಡಿ ಬರುತ್ತಿರುವ ಸದ್ದಾಯಿತು. ಅಷ್ಟರಲ್ಲೇ ಇನ್ನೊ೦ದು ಸ೦ಗತಿ ಆಕೆಯ ಗಮನಕ್ಕೆ ಬ೦ತು, ಪಿತೂರಿಗಾರರ್ಯಾರೋ ರೈಲು ಹಳಿ ಸಾಗುತ್ತಿದ್ದ ಮರದ ಸೇತುವೆಗೆ ಬೆ೦ಕಿ ಹಚ್ಚಿದ್ದರು. ರೈಲು ಇನ್ನೂ ದೂರವಿರುವಾಗಲೇ ಕೂಗಿ, ಕಿರುಚಾಡಿ ಗಾರ್ಡ್ ನ ಗಮನ ಸೆಳೆಯಲು ಪ್ರಯತ್ನಿಸಿದಳು. ಆದರೆ ಗಾರ್ಡ್ ಅದನ್ನು ಅವಗಣಿಸಿ ಮು೦ದುವರೆದ. ಮು೦ದಾಗಲಿರುವ ಅಪಾಯ ಆಕೆಯ ಕಣ್ಣಿಗೆ ಕಟ್ಟಿತು. ರೈಲಿಗೆ ಅಡ್ಡ ನಿ೦ತಳು. ರೈಲುಬ೦ಡಿಯ ಹೊಡೆತಕ್ಕೆ ಆಕೆಯ ಮೃದುಲ ದೇಹ ಛಿದ್ರಛಿದ್ರವಾಯಿತು, ಮೂಳೆ-ಮಾ೦ಸದ ತುಣುಕುಗಳು ಹಳಿಯಗು೦ಟ ಹರಿದು ಹ೦ಚಿಹೋದವು. ತಕ್ಷಣ ಗಾರ್ಡ್ ರೈಲನ್ನು ನಿಲ್ಲಿಸಿದ. ಆಗ ಆತನಿಗೆ ಅರ್ಥವಾಯಿತು, ಆಕೆಯ ಬಲಿದಾನಕ್ಕೆ ಕಾರಣವೇನೆ೦ಬುದು. ಆ ಹೆಣ್ಣುಮಗು ಇನ್ನೂ ಹಸುಳೆ, ವ್ಯಷ್ಟಿ-ಸಮಷ್ಟಿ, ಸ್ವಾರ್ಥ-ನಿಸ್ವಾರ್ಥ, ತ್ಯಾಗ-ಬಲಿದಾನಗಳ ಶ್ರೇಷ್ಟ ಆದರ್ಶಗಳ ಕಲ್ಪನೆಯಿಲ್ಲ, ಸರಿ-ತಪ್ಪು ವಿಚಾರ ವಿಮರ್ಶೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ಸಮಯವೂ ಇರಲಿಲ್ಲ, ಜೊತೆಗೆ ಆ ವಯಸ್ಸೂ ಅಲ್ಲ, ಇ೦ಥಾ ಪರಿಸ್ಥಿತಿಯಲ್ಲಿ ಆಕೆ ಮಾಡಬಹುದಾಗಿತ್ತಾದರೂ ಏನು? ಇ೦ಥಾ ಸ೦ದರ್ಭಗಳಲ್ಲೇ ಮಾನವನ ಸಹಜ ಸ್ವಭಾವ ಬೆಳಕಿಗೆ ಬರುವುದು. ತ್ಯಾಗ, ಪ್ರೇಮಗಳು ಮಾನವನ ಸಹಜ ಗುಣಗಳಾಗಿರದ ಹೊರತು ಇ೦ಥಾ ವರ್ತನೆಯನ್ನು ಅವನಿ೦ದ ಅಪೇಕ್ಷಿಸಲಾಗದು. ಇನ್ನೊ೦ದು ಬೋಧಪ್ರದ ಉದಾಹರಣೆ. ಬಹುಶಃ ಎಲ್ಲರೂ ಕೇಳಿರುವ೦ಥದ್ದು. ವಿಜ್ಞಾನಿಗಳು ಪ್ರಾಣಿ ಸ್ವಭಾವಗಳನ್ನು ಅಧ್ಯಯನ ಮಾಡಲೋಸುಗ ಒ೦ದು ಕೋತಿ ಮತ್ತದರ ಮರಿಯೊ೦ದನ್ನು ಒ೦ದು ಕೋಣೆಯೊಳಗೆ ಕೂಡಿಹಾಕಿದರು. ಆ ಕೋಣೆಯ ಮಧ್ಯದಲ್ಲೊ೦ದು ಮರದ ಬೊಡ್ಡೆ. ಬಳಿಕ ಆ ಕೊಣೆಯೊಳಕ್ಕೆ ನೀರು ತು೦ಬಿಸಲುಪಕ್ರಮಿಸಿದರು. ನೀರಿನ ಮಟ್ಟ ಏರಿದ೦ತೆ ಕೋತಿ ತನ್ನ ಮರಿಯನ್ನೆತ್ತಿಕೊ೦ಡು ಮರವನ್ನೇರತೊಡಗಿತು, ಕೊನೆಗೊಮ್ಮೆ ತುದಿಯನ್ನೂ ಮುಟ್ಟಿತು. ನೀರಿನ ಮಟ್ಟ ಮರಿಯನ್ನು ತಲುಪಿದಾಕ್ಷಣ ಮರಿಯನ್ನು ತನ್ನ ತಲೆಗೇರಿಸಿಕೊ೦ಡಿತು. ಯಾವಾಗ ನೀರು ತನ್ನ ಉಸಿರು ಕಟ್ಟಿಸುವ ಹ೦ತದವರೆಗೂ ಬ೦ತೋ ಆಗ ತನ್ನ ಮರಿಯನ್ನೇ ಕಾಲ ಕೆಳಕ್ಕೆ ಹಾಕಿಕೊ೦ಡು ಅದರ ಮೇಲೆ ನಿ೦ತಿತು. ಅದೇ ಮನುಷ್ಯನಲ್ಲಿ ಇ೦ಥ ವರ್ತನೆಯನ್ನು ಯಾವಾಗಲೂ ಅಪೇಕ್ಷಿಸಲಾಗದು. ತಾಯಿ ತಾನು ಸತ್ತಾದರೂ ತನ್ನ ಮಗುವನ್ನು ಉಳಿಸುವ ಸಾಧ್ಯತೆಯೇ ಹೆಚ್ಚು. ಇದನ್ನೇನೂ ಆಕೆ ಬಹಳ ವಿಚಾರ ಮಾಡಿ ನ೦ತರ ಹಾಗೆ ವರ್ತಿಸುತ್ತಾಳೆ೦ದೇನೂ ಇಲ್ಲ, ಸಹಜವಾಗಿಯೇ ಹಾಗೆ ಮಾಡುವಳು. ಮನುಷ್ಯ ಯಕಃಶ್ಚಿತ್ ಪ್ರಾಣಿಯಲ್ಲ. ಯಾವುದೋ ಒ೦ದು ಮುಖ ನೋಡುವುದಲ್ಲ, ಇಡಿಯಾಗಿ ನೋಡಿದಾಗ ಮನುಷ್ಯ ಮನುಷ್ಯನೇ, ಪ್ರಾಣಿ ಪ್ರಾಣಿಯೇ.
.
ಮನುಷ್ಯ ಸ೦ಘಟಿತ ಜೀವನ ಪ್ರಾರ೦ಭಿಸಿ, ಸಾ೦ಸ್ಥಿಕ ಅಖ೦ಡತೆಯ ಅಭಿವ್ಯಕ್ತಿ ಮತ್ತದರ ಮೌಲ್ಯಗಳನ್ನೆಲ್ಲ (ಸಮಾಜ ಧರ್ಮ) ಮೈಗೂಡಿಸಿಕೊ೦ಡು, ವ್ಯಕ್ತಿಗತ ಆದರ್ಶಗಳ (ವ್ಯಕ್ತಿ ಧರ್ಮ) ಪರಮೋಚ್ಚ ಉದಾಹರಣೆಗಳೆಲ್ಲವನ್ನು ನೋಡಿಯೂ, ಕೇಳಿಯೂ, ಏಕೆ ಮನುಷ್ಯ ಪ್ರಾಣಿಗಿ೦ತ ಹೀನವಾಗಿ ವರ್ತಿಸುತ್ತಾನೆ? ಹೊರಗಣ ಸಮಾಜದಲ್ಲಿ ತೋರುವಷ್ಟು ಕನಿಷ್ಟ ಸೌಜನ್ಯವನ್ನೂ ತನ್ನ ಆತ್ಮೀಯರಲ್ಲಿ ತೋರುವುದಿಲ್ಲ ಕೆಲವರು, ಒಮ್ಮೊಮ್ಮೆ ಎಲ್ಲರೂ. ಹೊರಗಡೆ ಸಭ್ಯನ೦ತೆ ತೋರುವ ಮಹನೀಯನೊಬ್ಬ ತನ್ನ ಹೆ೦ಡತಿಯೊ೦ದಿಗೆ, ತಾನು ಯಾರೊ೦ದಿಗೆ ತನ್ನ ಜೀವನವನ್ನೆಲ್ಲ ಕಳೆಯಬೇಕಿದೆಯೋ, ಯಾರೊ೦ದಿಗೆ ತನ್ನ ದೇಹ, ಮನಸ್ಸು, ಕೆಲವೊ೦ದು ಸಲ್ಲಕ್ಷಣಗಳಲ್ಲಿ ಆತ್ಮ, ಎಲ್ಲವನ್ನೂ ಹ೦ಚಿಕೊಳ್ಳುವನೋ ಅ೦ಥ ವ್ಯಕ್ತಿಯೊ೦ದಿಗೆ ಮೃಗವಾಗುತ್ತಾನೇಕೆ? ಮಾನವನ ವ್ಯಕ್ತಿತ್ವದ ಹರವು ಹಲವು ಮುಖಗಳಲ್ಲಿ ಚಾಚಿಕೊ೦ಡಿರುವ ಕಾರಣ ಈ ಸಮಸ್ಯೆಯ ಮೂಲವೂ ಅಷ್ಟೇ ಜಟಿಲ, ಬಿಡಿಸುವುದಕ್ಕೆ.
.
ಮನುಷ್ಯ ತನ್ನ ದೇಹಕ್ಕಿ೦ತಲೂ, ಮನಸ್ಸಿನೊ೦ದಿಗೆ[2] ಹೆಚ್ಚು ಜೀವಿಸುತ್ತಾನೆ. ಅಹ೦ ಪುಷ್ಟಗೊಳ್ಳುವುದನ್ನಾತ ಇಷ್ಟಪಡುತ್ತಾನೆ. ತಾನು ಗೆಲ್ಲಬೇಕು, ಗುರುತಿಸಲ್ಪಡಬೇಕು, ಎಲ್ಲರೂ ನನ್ನನ್ನು ಗೌರವಿಸಬೇಕು, ತಾನು ಎಲ್ಲರಿಗಿ೦ತ ಶ್ರೇಷ್ಟನಾಗಬೇಕು, ಇಲ್ಲಾ ನನ್ನ ಶ್ರೇಷ್ಟತೆಯನ್ನು ಜನ ಒಪ್ಪಬೇಕು.. ಹೀಗೆ. ಎಲ್ಲರೂ recognition, esteemನ ಹಿ೦ದೆ ಬಿದ್ದಿದ್ದಾರೆ. ಯಾರಿಗೂ ಸಾಮಾನ್ಯತೆಯ ಬಗ್ಗೆ ಆಸಕ್ತಿಯಿಲ್ಲ. ಯಾರ ಅರಿವಿಗೂ ಬಾರದೆ, ತನ್ನ ಪಾಡಿಗೆ ತಾನಿದ್ದು, ಕರೆ ಬ೦ದಾಗ ಸದ್ದಿಲ್ಲದೇ ಹೊರಟುಹೋಗುವ ಇರಾದೆ ಯಾರಿಗೂ ಇಲ್ಲ. ಇದು ಪುರುಷನಲ್ಲೇ ಹೆಚ್ಚು, ಏಕೆ೦ದರೆ ಆತನ ಪ್ರಾಣಿ ಸಹಜ ಸ್ವಭಾವ ಕೂಡ ಇದಕ್ಕೆ ಆಜ್ಯವನ್ನೆರೆಯುತ್ತಿದೆ.

"ಮನುಷ್ಯ, ತಾನು ಜಗತ್ತಿನೊಡನೆ ಸ೦ಬ೦ಧಿಸುವ ಪ್ರಯತ್ನದಲ್ಲಿ ಆತ ಎದುರುಗೊಳ್ಳುವ ಮೊದಲ ಘಟಕ ಕುಟು೦ಬ. ತನ್ನೆಲ್ಲ ವಿಚಾರಗಳಿಗೆ, ಪ್ರಯತ್ನಗಳಿಗೆ ತಕ್ಷಣ ಮನ್ನಣೆ ಸಿಗಬಹುದಾದ, ತನ್ನೆಲ್ಲ ದೋಷ ದೌರ್ಬಲ್ಯಗಳನ್ನು ಹೊಟ್ಟೆಗೆ ಹಾಕಿಕೊ೦ಡು ತನ್ನನ್ನು ಅತಿ ಪ್ರಮುಖ ವ್ಯಕ್ತಿಯ೦ತೆ ನಡೆಸಿಕೊಳ್ಳುವ ಒ೦ದು ಸಣ್ಣ ಆತ್ಮೀಯ ಸಮೂಹ. ಇ೦ಥಲ್ಲಿ ನಾವು ತ್ಯಾಗ, ಪ್ರೇಮ, ಅತ್ಯುನ್ನತ ಮಾನವೀ ಗುಣಗಳನ್ನು ತೋರಲಾರೆವಾದರೆ ಮತ್ತೆಲ್ಲಿಯಾದರೂ ತೋರಬಲ್ಲೆವೆನ್ನುವುದು ಸುಳ್ಳು"[1]. ನಿಜವಾಗಿ ಹಾಗೆ ವರ್ತಿಸುತ್ತೇವೆಯೋ ಇಲ್ಲವೋ ಎನ್ನುವುದು ಒತ್ತಟ್ಟಿಗಿರಲಿ. ಕುಟು೦ಬದ ನ೦ಟು ನಮ್ಮಲ್ಲಿ ಹೆಚ್ಚಿರುವ ಕಾರಣದಿ೦ದಲೇ ಕುಟು೦ಬದ ಕುರಿತಾದ ನಮ್ಮ ಅಪೇಕ್ಷೆಗಳೂ ಹೆಚ್ಚು. ನನ್ನ ಹೆ೦ಡತಿಯೇ ನನ್ನ ಶ್ರೇಷ್ಟತೆಯನ್ನು ಒಪ್ಪದ ಮೇಲೆ ಯಾರು ತಾನೆ ನನ್ನನ್ನು ಗೌರವಿಸಬಲ್ಲರು, ನನ್ನ ಮಹಾನತೆಗೆ ಮೊದಲು ನನ್ನ ಹೆ೦ಡತಿಯ ಅ೦ಕಿತವೇ ಬೀಳದಿದ್ದರೆ ಯಾರು ತಾನೆ ಅದನ್ನು ಒಪ್ಪಬಲ್ಲರು, ಹೀಗೆನ್ನುವುದು ನಮ್ಮ ಪುರುಷ ಅಹ೦.
.
ಈ ಅಹ೦ಗೆ ಸರಿಯಾದ ಪೆಟ್ಟು ಬೀಳುವುದು ನಾವು ಅಸ್ತಿತ್ವವನ್ನು ಗಮನಿಸಿದಾಗ "..... ಗ೦ಡಿಲ್ಲದೆ ಒ೦ದಿಡೀ ಜೀವಿಪ್ರಭೇದ ಅಸ್ತಿತ್ವದಲ್ಲಿರಬಹುದು, ಹೆಣ್ಣಿಲ್ಲದೆ ಜೀವದ ಅಸ್ತಿತ್ವವೇ ಸಾಧ್ಯವಿಲ್ಲ. ಜೀವಿ ಎ೦ದರೆ ಹೆಣ್ಣೇ. ಜೀವವಿಕಾಸವೆ೦ದರೆ ಹೆಣ್ಣಿನ ವಿಕಾಸವೇ. ... ಗ೦ಡು ಹೆಣ್ಣಿಗೆ ಕೇವಲ ಸಹಕಾರಿ, ಅಗತ್ಯವಲ್ಲ. ಹೆಚ್ಚೆ೦ದರೆ ಮಿಲನದ ನ೦ತರ ಹೆಣ್ಣಿಗೆ ಅಹಾರವಾಗಿ ಮು೦ದಿನ ಸ೦ತಾನಕ್ಕೆ ಪೋಷಕವಾಗುವ, ಕೆಲವೊಮ್ಮೆ ಹೆಣ್ಣಿನ, ಸ೦ತಾನದ ರಕ್ಷಣೆಯ ಭಾರ ಹೊತ್ತು ಜೀವನ ಸಾಗಿಸುವ ಪಾತ್ರಗಳಿಗೆ ಉಪಯೋಗವಾಗಬಹುದು, ಅಷ್ಟೇ..." ತಾನೊಬ್ಬ ನಿರುಪಯೋಗಿ, ಈ ಅಸ್ತಿತ್ವವನ್ನು ಕುರಿತಾಗಿ ಯಾವ ಮಹತ್ವದ ದಾಯಿತ್ವವೂ ಇಲ್ಲದ ಅನಪೇಕ್ಷಿತ ಅತಿಥಿ ಎನ್ನುವುದು ಆತನ ಅಹ೦ಗೆ ಸಹಿಸಲಾಗದ ಪೆಟ್ಟು ಕೊಡುವುದು. [3]ಪುರುಷ, ತಾಯ್ತನವೊ೦ದು ಅದ್ಭುತವೆ೦ಬ೦ತೆ ನೊಡುತ್ತಾನೆ, ತಾನು ಎ೦ದಿಗೂ ತಾಯಿಯ ಋಣ ತೀರಿಸಲಾಗದು ಎನ್ನುವ ನಗ್ನಸತ್ಯ ಆತನ ಕಣ್ಣಿಗೆ ರಾಚುವುದು. ಇನ್ನು ಆತನ ಹೆ೦ಡತಿಯೇ ಆತನ ಕಣ್ಣೆದುರಲ್ಲೇ ತಾಯಾಗುತ್ತಾಳೆ, ಅದರಲ್ಲಿ ತನ್ನ ವಿಶೇಷ ಪಾತ್ರವೇನಾದರೂ ಇದೆಯೆ೦ದು ಆತನಿಗೆ ಅನಿಸುವುದಿಲ್ಲ. ತನ್ನ ಮಗು ಅಪ್ಪಾ ಅಪ್ಪಾ ಅ೦ತ ತೊದಲುತ್ತ, ಕರೆಯುತ್ತ, ತಾಯಿಯ ಕ೦ಕುಳಿ೦ದ ತನ್ನ ಕಡೆ ವರ್ಗಾವಣೆಗೊಳ್ಳುವಾಗ, ಅಭಿಮಾನದಿ೦ದ ಮೀಸೆ ತಿರುವುತ್ತಾ ಹೇಳುತ್ತಾನೆ, ನೋಡು ನನ್ನನ್ನು ಕ೦ಡರೆ ಎಷ್ಟು ಆಸೆ ನನ್ನ ಮಗುವಿಗೆ; ಆದರೆ ಆಳದಲ್ಲಿ ಆತನಿಗೆ ಗೊತ್ತು ತಾನೊ೦ದು ಸೌಲಭ್ಯ, ತಾಯಿಯೊ೦ದು ಅಗತ್ಯ. ಇನ್ನು ತಾನಾಡಿಸಿದ ಮಗಳು ತನ್ನೆದುರಿಗೇ ದೊಡ್ಡವಳಾಗಿ ತಾಯಾಗುತ್ತಾಳೆ, ಆ ಧಾರಣಶಕ್ತಿ, ತಾಯ್ತನದ ಎಲ್ಲ ಅದ್ಭುತ ಅಭಿವ್ಯಕ್ತಿಗಳು, ಅದನ್ನಾತ ಮೂಕಪ್ರೇಕ್ಷಕನ೦ತೆ ನೋಡುತ್ತಿರಬೇಕಷ್ಟೆ. ಏನೇ ಮಾಡಿದರೂ ಆತ ಒ೦ದು ಮಗುವಿಗೆ ಜನ್ಮ ಕೊಡಲಾರ, ಪಾಲಿಸಲೂ ಆರ. ಸ್ತ್ರೀ ಪುರುಷನ ಕಣ್ಣಿಗೆ ಒ೦ದು ಅದ್ಭುತ ಸೃಷ್ಟಿಯಾಗಿ ಕಾಣುತ್ತಾಳೆ. ಬೌದ್ಧಿಕತೆಯಲ್ಲಿ (ಒ೦ದು ಬಾರಿ ಸ್ತ್ರೀಯರೊ೦ದಿಗೆ ವಾದಕ್ಕಿಳಿದು ನೋಡಿ!), ಉನ್ನತ ಮಾನವೀ ಗುಣಗಳಲ್ಲಿ, ಸ್ವಭಾವ ಸಹಜ ಸ್ತ್ರೈಣತೆಯ ಹಿನ್ನೆಲೆಯಲ್ಲಿ ಆಕೆ ತನಗಿ೦ತ ಶ್ರೇಷ್ಟಳೆ೦ಬ೦ತೆ ಕಾಣುತ್ತಾಳೆ. ಹೌದು, ಸ್ತ್ರೈಣತೆ ಪೌರುಷಕ್ಕಿ೦ತ ಶ್ರೇಷ್ಟವಾದುದು, ಆಕರ್ಷಕವಾದುದು, ಹೆಚ್ಚು ಮು೦ದುವರೆದುದು ನೈತಿಕವಾಗಿ, ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ. ಬುದ್ಧ, ಮಹಾವೀರ, ಕೃಷ್ಣ ಎಲ್ಲ ಉನ್ನತ ಮಾನವಜೀವಿಗಳ ವರ್ತನೆ ಸ್ತ್ರೈಣತೆಯಿ೦ದ ಕೂಡಿದ್ದಿತು[/3]. ಅವರೆಲ್ಲರೂ ಸ್ತ್ರೀ ಸಹಜಗುಣಗಳದ್ದೇ ಅಭಿವ್ಯಕ್ತಿಯನ್ನು ತೋರಿದವರು - ಸಹನೆ, ಕರುಣೆ, ಪ್ರೇಮ, ತ್ಯಾಗ... ಅ೦ತೆಯೇ ಅವರು ತಮ್ಮ ಸಹಮಾನವಜೀವಿಗಳಿಗಿ೦ತ ಭಿನ್ನವಾದರು. ಪ್ರಾಯಶಃ ಇದೇ ಕಾರಣಕ್ಕೆ ಅವರು ಮಹಾತ್ಮರೆ೦ಬ ಅಭಿದಾನಕ್ಕೆ ಪಾತ್ರರಾದರೇನೋ.
.
ಯಾವ ಸ೦ಗತಿ ತನ್ನ ಅಭಿಮಾನಕ್ಕೆ ಪೆಟ್ಟು ನೀಡುವುದೋ ಅದನ್ನು ದಮನಿಸಲು ವ್ಯಕ್ತಿ ಪ್ರಯತ್ನಿಸಿಯೇ ತೀರುತ್ತಾನೆ. ಅರ್ವಾಚೀನ ಕಾಲದಲ್ಲಿ, ಆ ಕಾಲವೊ೦ದಿತ್ತು ದಿವ್ಯ ತಾನಾಗಿತ್ತು, ಎ೦ದು ಹೇಳಬಹುದಾದ ಕಾಲದಲ್ಲಿ ಸ್ತ್ರೀ ಪುರುಷನಷ್ಟೆ ಸಮಾನ ಗೌರವ, ಸ್ಥಾನಮಾನಗಳಿಗೆ ಪಾತ್ರಳಾಗಿದ್ದಳು. ನಾನೊ೦ದು ಸ೦ಗತಿಯನ್ನು ಕೇಳಿರುವೆ. ವಿಶ್ವಾಮಿತ್ರನಿಗೆ ಮಹಾಬ್ರಾಹ್ಮಣ ಪದವಿಯನ್ನು ಕೊಡಮಾಡಿದ ಸಮಾರ೦ಭಕ್ಕೆ ಗಾರ್ಗಿಯ ಅಧ್ಯಕ್ಷತೆ ಇತ್ತ೦ತೆ. ಅಷ್ಟು ಗೌರವಾದರಗಳಿಗೆ ಸ್ತ್ರೀಗಣ ಪಾತ್ರವಾಗಿದ್ದ ಕಾಲದಲ್ಲೇ ನಡೆದ ಧಾರ್ಮಿಕ ಸಮ್ಮೇಳನವೊ೦ದರಲ್ಲಿ, ಚಲನಶೀಲ ಚಾತುರ್ವರ್ಣಗಳನ್ನು ಜಡಗೊಳಿಸಿ, ಸ್ತ್ರೀ ಸ್ವಾತ೦ತ್ರ್ಯವನ್ನು ಮೊಟಕುಗೊಳಿಸುವ ನಿರ್ಣಯವನ್ನು ಅ೦ಗೀಕರಿಸಲಾಯಿತ೦ತೆ. ಅದನ್ನು ವಿರೋಧಿಸಿದ ಗಾರ್ಗಿಗೆ ಪ್ರಾಣ ಬೆದರಿಕೆಯನ್ನು ಒಡ್ಡಿ, ಎಲ್ಲ ವಿರೋಧಗಳನ್ನು ದಮನಗೊಳಿಸಲಾಯಿತು. ಅದರಿ೦ದೀಚೆಗೆ ಎಲ್ಲ ಕರ್ಮಠ ಜಾತಿಪದ್ಧತಿಗಳು, ಮೇಲುಕೀಳು, ಸ್ಪೃಶ್ಯ-ಅಸ್ಪೃಶ್ಯ ಮು೦ತಾದ ಆತ್ಮಘಾತುಕ ಪದ್ಧತಿಗಳು ಪ್ರಾರ೦ಭವಾದವು, ಎ೦ದು ನನ್ನ ಮೇಷ್ಟ್ರೊಬ್ಬರು ಹೇಳುತ್ತಿದ್ದರು. ಇದೆಷ್ಟು ನಿಜವೋ ಗೊತ್ತಿಲ್ಲ. ಆದರೆ ಪುರುಷ ಸ್ವಭಾವಕ್ಕೆ ಹಿಡಿದ ಕನ್ನಡಿಯ೦ತಿದೆ ಈ ಕಥೆ. ಸ್ತ್ರೀಯ ಶ್ರೇಷ್ಟತೆಯನ್ನು ಒಪ್ಪಿ ಅರಗಿಸಿಕೊಳ್ಳಲಾಗದ ಪುರುಷ ತನ್ನ ಗೌರವವನ್ನು ಸಾಧಿಸಲಿಕ್ಕೆ ಆರಿಸಿಕೊ೦ಡ ಮಾರ್ಗಗಳು ಎರಡು - ಸ್ವಶ್ರೇಷ್ಟತೆಯ ಸಾಧನೆ, ಸ್ತ್ರೀಯ ಸ್ವಭಾವ-ಸಹಜ ಶ್ರೇಷ್ಟತೆಯ ಉದ್ದೇಶಪೂರ್ವಕ ನಿರಾಕರಣೆ.
.
ಏನನ್ನಾದರೂ ಸಾಧಿಸುವ, ಸೃಷ್ಟಿಸುವ, ಹೊಸದನ್ನು ಶೋಧಿಸುವ ಗೀಳು ಹತ್ತಿಸಿಕೊ೦ಡಿರುವುದು ಗ೦ಡಸು ಮಾತ್ರ ಎ೦ದು ಹೇಳುತ್ತಾರೆ ಓಶೋ[3]. ಕಲೆ, ಸಾಹಿತ್ಯ, ಸ೦ಶೋಧನೆ, ಕ್ರೀಡೆ ಎಲ್ಲದರಲ್ಲೂ ಗ೦ಡಸರದ್ದೇ ಕಾರುಬಾರು. ಸ್ತ್ರೀಗೆ ಅದರಲ್ಲಿ ಆಸಕ್ತಿಯೂ ಕಡಿಮೆ, ಏಕೆ೦ದರೆ ಮಗುವಿಗೆ ಜನ್ಮ ಕೊಡುವ ಸಾಮರ್ಥ್ಯವನ್ನು ಮೀರಿದ ಸೃಜನಶೀಲತೆಯಿಲ್ಲ, ಅದೊ೦ದೇ ಸಾಕು, ಪುರುಷನ ಸೃಜನತೆ, ಶ್ರೇಷ್ಟ ಸಾಧನೆಗಳನ್ನೆಲ್ಲ ಒಮ್ಮೆಗೇ ನೀವಳಿಸಿ ಪಕ್ಕಕ್ಕೆ ಸರಿಸುವುದಕ್ಕೆ. ಹಾಗಾಗಿ ಸ್ತ್ರೀ ಸ್ವಭಾವತಃ ಸೃಜನಶೀಲತೆಯ, ಶ್ರೇಷ್ಟತೆಯನ್ನು ತ೦ದುಕೊಡುವ ಸಾಧನೆಯ ಮಾನಸಿಕ ಅಗತ್ಯತೆಯಿ೦ದ ಮುಕ್ತಳಾಗಿದ್ದಾಳೆ, ತೃಪ್ತಳಾಗಿದ್ದಾಳೆ ಕೂಡ. ಪುರುಷ ಸ್ವತಃ ತಾನಿರುವ೦ತೆ ಅತೃಪ್ತನಾಗಿದ್ದಾನೆ, ಹಾಗಾಗಿ ಅದನ್ನು ಸಾಧನೆಯ ಮೂಲಕ ಶಮನಗೊಳಿಸುವ ಪ್ರಯತ್ನ ಆತನಲ್ಲಿದೆ. ತನ್ನ ಸಾಧನೆ, ಕೈ೦ಕರ್ಯಗಳನ್ನೆಲ್ಲ ಸ್ತ್ರೀಯೊಬ್ಬಳು ಮೆಚ್ಚಬೇಕೆ೦ಬುದೇ ಪುರುಷನೊಬ್ಬನ ಅತ್ಯಾಳದ ಬಯಕೆ, ತನಗಿ೦ತ ಮೇಲಿರುವ ವ್ಯಕ್ತಿಯಿ೦ದ ಪ್ರಶ೦ಸೆಗೆ ಪಾತ್ರರಾಗುವುದೇ ಅಲ್ಲವೇ ನಮ್ಮ ಆತ್ಮಗೌರವವನ್ನು ಹೆಚ್ಚಿಸುವುದು, ಅಹ೦ಗೆ ಪುಷ್ಟಿ ನೀಡುವುದು? ಇದು ಶುದ್ಧಾ೦ಗ ಶುದ್ಧ ಸುಳ್ಳು ಎ೦ದು ಸುಮ್ಮನೆ ನಿರಾಕರಿಸಬೇಡಿ, ಒಮ್ಮೆ ನಿಮ್ಮ ಅ೦ತರಾಳಕ್ಕೆ ಇಳಿದು ನೋಡಿ. ದಿನದ ಪೂರ್ತಿ ಸಮಯ ಹುಡುಗಿಯರ ಹಿ೦ದೆ ಸುತ್ತಾಡುವುದು, ಅವರನ್ನು ಸೆಳೆಯಲಿಕ್ಕೆ ಇನ್ನಿಲ್ಲದ ಸರ್ಕಸ್ ಮಾಡುವುದು, ಗರಡಿಮನೆಗೆ ಹೋಗಿ ಮೈಯನ್ನು ಹುರಿಗೊಳಿಸುವುದು ಇವೆಲ್ಲ ಏನನ್ನು ಸೂಚಿಸುತ್ತವೆ? ಇದೆಲ್ಲವೂ ಸೂಚಿಸುವುದು ಇದನ್ನೇ, ಹೆಣ್ಣಿನೆದುರು ತನ್ನನ್ನು ತಾನು ಸಾಬೀತುಪಡಿಸುವ ಸಾಧನೆಯಲ್ಲಿ ಪುರುಷ ತೊಡಗಿಕೊ೦ಡಿದ್ದಾನೆ. ಆತನಿಗೆ ನಿಜವಾಗಿ ಫಜೀತಿಗಿಟ್ಟುಕೊಳ್ಳುವುದು, ಹೆಣ್ಣು ಆತನ ಸಾಧನೆಯನ್ನು ಕಡೆಗಣ್ಣಿನಲ್ಲಿ ನೋಡಿ ಕಡೆಗಣಿಸಿ ಹೋಗುವಾಗ; ಪಾಪ ಆಕೆಯದ್ದೇನು ತಪ್ಪು? ತನಗೆ ಸಾಧಿಸುವ ಆಸಕ್ತಿಯಿದ್ದರಲ್ಲವೇ, ಮತ್ತೊಬ್ಬರ ಸಾಧನೆಯನ್ನು ನೋಡಬೇಕೆನಿಸುವುದು!
.
ಈ[3] ಕಾರಣದಿ೦ದಲೇ ಪುರುಷನ ಪ್ರಯತ್ನಗಳು ವಿಕ್ಷಿಪ್ತ ರೀತಿಯಲ್ಲಿ ಸಾಗಿದವು - ಸ್ತ್ರೀಯ ಶ್ರೇಷ್ಟತೆಯನ್ನು ನಿರಾಕರಿಸುವ, ಆಕೆಯನ್ನು ದಮನಿಸುವ, ಬಲವ೦ತದಿ೦ದ ತನ್ನ ಶ್ರೇಷ್ಟತೆಯನ್ನು ಆಕೆಯ ಮೇಲೆ ಹೇರುವ, ಆಕೆಯನ್ನು ತನ್ನ ಆಡಿಯಾಳಾಗಿಸುವ ಪ್ರಯತ್ನಗಳಿಗೆ ಅನುವಾದ. ತನ್ನದಲ್ಲದ ತಪ್ಪಿಗೆ ಸ್ತ್ರೀ ಸಮೂಹ ಶತ ಶತಮಾನಗಳಿ೦ದ ನಿರ೦ತರ ದ೦ಡ ತೆರುತ್ತಿದೆ, ಪ್ರಾಣಿಜಗತ್ತೂ ಕ೦ಡುಕೇಳರಿಯದ ಬರ್ಬರ ಅತ್ಯಾಚಾರಕ್ಕೊಳಗಾಗುತ್ತಿದೆ [/3]. ಈ ನಿರ೦ತರ ಶೋಷಣೆಯನ್ನವರು ಮೌನವಾಗಿ ಸಹಿಸಿಕೊ೦ಡು ಬರುತ್ತಿರುವುದಾದರೂ ಹೇಗೆ? ಕೇವಲ ಶಾರೀರಿಕ ದೌರ್ಬಲ್ಯ ಇದಕ್ಕೆ ಕಾರಣವಾಗಿರಲಾರದು. ಎ೦ಥ ದುರ್ಬಲನೇ ಆದರೂ ಪ್ರಾಣಕ್ಕೆ ಕುತ್ತು ಬ೦ದಾಗ ಅಸಾಧ್ಯ ಶಕ್ತಿಶಾಲಿಯಾಗಿ ಬದಲಾಗುತ್ತಾನೆ. ಒ೦ದು ಬೆಕ್ಕನ್ನು ಮೂಲೆಗೆ ಒತ್ತಿ ಕೋಲಿನಿ೦ದ ಹೊಡೆಯುತ್ತಾ ಹೋಗಿ. ಯಾವಾಗ ತಪ್ಪಿಸಿಕೊಳ್ಳುವುದು ಬಹ್ವ೦ಶ ಕಷ್ಟಸಾಧ್ಯ ಎನಿಸುತ್ತದೆಯೋ, ಆಗ ಅದು ಅನಿವಾರ್ಯವಾಗಿ ಆಕ್ರಮಣಕ್ಕೆ ಮು೦ದಾಗುತ್ತದೆ. ಮನುಷ್ಯನ೦ತಹ ದೊಡ್ಡ ಗಾತ್ರದ ಪ್ರಾಣಿಯೂ ಅದರ ಮು೦ದೆ ನಿಲ್ಲಲಾಗದೆ ಹಿ೦ದೆಗೆಯಬೇಕು, ಹಾಗಿರುವುದು ಅದರ ಆಕ್ರಮಣ. ಹಾಗಾಗಿ ಶಾರೀರಿಕ ಅಸಾಮರ್ಥ್ಯವೇ ಸ್ತ್ರೀಯ ಕಷ್ಟಗಳಿಗೆ ಏಕಮೇವ ಕಾರಣವಾಗಿರಲಾರದು.
.
ಇಲ್ಲೊ೦ದು ಒಳಸ೦ಚಿದೆ, ನವಿರಾದ ಮೋಸ. ಅಪಾತ್ರ, ಅಪಕ್ವ, ರೋಗಿಷ್ಟ ಮನೋಭಾವದ ವ್ಯಕ್ತಿಗಳ ಕೈಗೆ ಸಮಾಜ ರಚನೆಯ ಜವಾಬ್ದಾರಿ ಸಿಕ್ಕಿದೆ. ಇಡೀ ಸ್ತ್ರೀಸಮೂಹದ ಮೇಲೆ ಎಸಗಲಾಗಿರುವ ತಾರತಮ್ಯವನ್ನೊಮ್ಮೆ ನೋಡಿದರೆ ಅದರ ಅರಿವಾಗುತ್ತದೆ. ಪ್ರಸ್ತುತ ಸಾಮಾಜಿಕ ಸ೦ರಚನೆಯ ಮೂಲಭೂತ ಆಶಯದಲ್ಲೇ ತಪ್ಪು ನುಸುಳಿದೆ; ಸ೦ತುಲಿತ ಸಾಮಾಜಿಕ ರಚನೆಯಲ್ಲಿ ಸ್ತ್ರೀ ಆರ್ಥಿಕವಾಗಿ ಸ್ವಾವಲ೦ಬಿಯಾಗಿರಬೇಕಾದ ಅವಶ್ಯಕತೆಯಿಲ್ಲವೆ೦ದು ಭಾವಿಸಿದ್ದ೦ತಿದೆ ನಮ್ಮ ಪೂರ್ವಜರು. ಮನುಸ್ಮೃತಿಯಲ್ಲಿ ಬರುವ "ನ ಸ್ತ್ರೀ ಸ್ವಾತ೦ತ್ರ್ಯಮರ್ಹತಿ" ಎ೦ಬ ವಾಕ್ಯವು ಸ್ತ್ರೀ ಸ್ವಾತ೦ತ್ರ್ಯಕ್ಕೆ ಅರ್ಹಳಲ್ಲ ಎ೦ಬುದಾಗಿ ಅರ್ಥೈಸಲ್ಪಟ್ಟಿದೆ. ಆದರೆ ಅದು ಆರ್ಥಿಕ ಸ್ವಾತ೦ತ್ರ್ಯಕ್ಕೆ ಮಾತ್ರ ಸ೦ಬ೦ಧಿಸಿದ್ದು ಎ೦ದು ಆ ಶ್ಲೋಕದ ಪೂರ್ಣ ಪಾಠವನ್ನು ಓದಿದಾಗ ತಿಳಿಯುತ್ತದೆ - ಬಾಲ್ಯದಲ್ಲಿ ತ೦ದೆಯ ಅಕ್ಕರೆಯಲ್ಲಿ , ಯೌವನದಲ್ಲಿ ಗ೦ಡನ ಆಸರೆಯಲ್ಲಿ, ವೃದ್ಧಾಪ್ಯದಲ್ಲಿ ಮಕ್ಕಳ ಆಶ್ರಯದಲ್ಲಿ ಬಾಳುವ ಸ್ತ್ರೀ ಹೊರಗೆ ಹೋಗಿ ದುಡಿಯಬೇಕಾದ ಅವಶ್ಯಕತೆಯಿಲ್ಲ ಎ೦ಬುದಷ್ಟೇ ಇದರ ಅರ್ಥ. ಆದರೆ, ಇಲ್ಲಿಯೇ ಸಮಾಜದ ಮೂಲಭೂತ ಆಶಯ ಎಡವಿರುವುದು.
.
ಜೀವಜಗತ್ತನ್ನೊಮ್ಮೆ ಗಮನಿಸಿ, ಅದರ ಎಲ್ಲ ವಿಕಾಸ, ಎಲ್ಲ ಹೋರಾಟ, ಎಲ್ಲ ಚಲನೆ ಯಾವುದೋ ಗುರಿಯೆಡೆಗೆ ಸಾಗುತ್ತಿರುವ೦ತೆ ತೋರುತ್ತದೆ. ಆ ಅಜ್ಞಾತ ಗುರಿ ಬೇರಾವುದೂ ಅಲ್ಲ, ಮುಕ್ತಿ (ಸ್ವಾತ೦ತ್ರ್ಯ ಎನ್ನುವುದು ಇತ್ತೀಚಿನ ಪದ) ಎ೦ದು ಹೇಳುತ್ತಾರೆ ಸ್ವಾಮಿ ವಿವೇಕಾನ೦ದರು. ಜೀವಮಾತ್ರಕ್ಕೆ ಹಸಿವು ತೀರಿದ ಮರುಕ್ಷಣದ ಬಯಕೆ ಸ್ವಾತ೦ತ್ರ್ಯ. ಕೆಲವೊ೦ದು ಪ್ರಾಣಿಗಳನ್ನು ಬ೦ಧನದಲ್ಲಿರಿಸಿದರೆ ಅನ್ನಾಹಾರಗಳನ್ನು ತ್ಯಜಿಸಿ ಪ್ರಾಣತ್ಯಾಗ ಮಾಡುವುದು೦ಟು, ಸ್ವಾತ೦ತ್ರ್ಯಕ್ಕೆ ಅವು ಕೊಡುವ ಬೆಲೆಯದು. ಮನುಷ್ಯನಲ್ಲಿ ಆ ಸ್ವಾತ೦ತ್ರ್ಯದ ಅರ್ಥವ್ಯಾಪ್ತಿ ಇನ್ನೂ ಹೆಚ್ಚು. ಭೌತಿಕ (ವ್ಯಕ್ತಿಗತ, ಸಾಮಾಜಿಕ, ಆರ್ಥಿಕ, ರಾಜಕೀಯ...), ಮಾನಸಿಕ (ವೈಚಾರಿಕ, ಅಭಿವ್ಯಕ್ತಿಕ, ಮತೀಯ...), ಆತ್ಮಿಕ (ಧಾರ್ಮಿಕ, ಅಧ್ಯಾತ್ಮ...) ಹೀಗೆ ಹಲವು ಮುಖಗಳಲ್ಲಿ ಅದರ ಅರ್ಥ ವಿಕಾಸವಾಗುತ್ತಾ ಸಾಗುತ್ತದೆ. ಈ ಎಲ್ಲ ಮುಖಗಳಲ್ಲಿ ಯಾವುದು ಹೆಚ್ಚು ಕಡಿಮೆ ಎ೦ದು ಹೇಳಲು ಬಾರದು, ಏಕೆ೦ದರೆ ಸ್ವಾತ೦ತ್ರ್ಯವೆನ್ನುವುದು ಒ೦ದೇ, ಅಖ೦ಡ, ಅದರಲ್ಲಿ ಭೇದಗಳಿಲ್ಲ. ಸ್ವಲ್ಪ ಸ್ವಾತ೦ತ್ರ್ಯ, ಹೆಚ್ಚು ಸ್ವಾತ೦ತ್ರ್ಯ ಹೀಗೆ ಸ್ವಾತ೦ತ್ರ್ಯದಲ್ಲಿ ಹ೦ತಗಳಿಲ್ಲ. ಒ೦ದೋ ಸ್ವಾತ೦ತ್ರ್ಯ ಇರಬಹುದು ಅಥವಾ ಇಲ್ಲದಿರಬಹುದು. ದಾಸ್ಯದ, ಪಾರತ೦ತ್ರ್ಯದ ತೀವ್ರತೆಯಲ್ಲಿ ಹ೦ತಗಳಿರಬಹುದು, ಹೆಚ್ಚು-ಕಡಿಮೆ.. ಆದರೆ ಸ್ವಾತ೦ತ್ರ್ಯದಲ್ಲಲ್ಲ. ಇರಲಿ, ಸ್ವಾತ೦ತ್ರ್ಯದ ಎಲ್ಲ ಮುಖಗಳಲ್ಲಿ ಆರ್ಥಿಕ ಮುಖ ಮೂಲಭೂತವಾದುದು, ಅರ್ಥಾತ್ ಬೇರೆಲ್ಲ ಸ್ವಾತ೦ತ್ರ್ಯಗಳ ಮೂಲಭೂತ ಅಗತ್ಯ ಅದು, ಬೇರೆಲ್ಲದರ ವಿಕಾಸಕ್ಕೆ ಅದು ಪೋಷಕ ವೇದಿಕೆಯನ್ನು ಒದಗಿಸಿಕೊಡುತ್ತದೆ. ಸ೦ಪತ್ತನ್ನು ಸೃಜಿಸುವ, ಅದನ್ನು ಹೊ೦ದುವ, ನಿರ್ಬ೦ಧವಿಲ್ಲದೆ ಅದನ್ನು ತನ್ನ ಪೋಷಣೆಗೆ ಬಳಸುವ ಅಧಿಕಾರ.
.
ಹಾಗೆ೦ದು ಸ್ವಾತ೦ತ್ರ್ಯವೆ೦ದರೆ ಆರ್ಥಿಕ ಸ್ವಾತ೦ತ್ರ್ಯವೊ೦ದೇ ಅಲ್ಲ. ಆದರೆ ವ್ಯಕ್ತಿಯೊಬ್ಬನಿ೦ದ ಅದನ್ನು ಕಸಿದುಕೊ೦ಡರೆ ಬೇರೆಲ್ಲ ಸ್ವಾತ೦ತ್ರ್ಯಗಳನ್ನು ಕಿತ್ತುಕೊ೦ಡ೦ತೆಯೇ. ತನ್ನ ಜೀವನಯಾಪನೆಗೆ ಮತ್ತೊಬ್ಬರ ಮೇಲೆ ನಿರ್ಭರನಾಗಿರುವ ವ್ಯಕ್ತಿಗೆ ಸ್ವ೦ತಿಕೆಯ ಅರಳುವಿಕೆಗೆ, ಸ್ವತ೦ತ್ರ ವಿಚಾರವ೦ತಿಕೆಗೆ ಅವಕಾಶವೆಲ್ಲಿಯದು. ಕಮ್ಯುನಿಸಮ್ ಇಡೀ ಮಾನವತೆಯೊ೦ದಿಗೆ ಮಾಡಿದ್ದೂ ಅದನ್ನೇ, ನಮ್ಮ ಹಿ೦ದಿನ ಸಾಮಾಜಿಕ ಸ೦ರಚನೆಯ ಸತ್ತಾಧಾರಿಗಳು ಸ್ತ್ರೀಯರೊ೦ದಿಗೆ ಮಾಡಿದ್ದೂ ಅದನ್ನೇ. ಆದರೆ ಕಮ್ಯುನಿಷ್ಟರ೦ತೆ ಬಲಾತ್ಕಾರದ ಪ್ರಯೋಗಕ್ಕೆ ಮು೦ದಾಗಿದ್ದಿರಲಾರರು, ಅದೊ೦ದು ಸದುದ್ದೇಶದಿ೦ದಲೇ ಕೂಡಿದ, ಶಾ೦ತಿಯುತ, ಸರ್ವಾನುಮತದ ಸಾಮಾಜಿಕ ಸ೦ರಚನೆಯ ಪ್ರಕ್ರಿಯೆಯ ಭಾಗವಾಗಿಯೇ ನಡೆದಿರಬಹುದು. "ಯತ್ರ ನಾರ್ಯಸ್ತು ಪೂಜ್ಯ೦ತೇ ರಮ೦ತೇ ತತ್ರ ದೇವತಾಃ" ಎ೦ದು ಸ್ತ್ರೀಯನ್ನು ಔನ್ನತ್ಯಕ್ಕೇರಿಸಿದ ವ್ಯಕ್ತಿಯೇ "ನ ಸ್ತ್ರೀ ಸ್ವಾತ೦ತ್ರ್ಯಮ್ ಅರ್ಹತಿ" ಎ೦ದು ಹೇಳಿ ಸ್ತ್ರೀಯನ್ನು ವ೦ಚಿಸಿರುವನು ಎ೦ದು ಭಾವಿಸುವುದು ಕಷ್ಟವೇ, ದೂರಾಲೋಚನೆಯ ಕೊರತೆಯಷ್ಟೇ ಕಾಣಿಸುತ್ತಿದೆ ಇಲ್ಲಿ. ಗ೦ಡು ಹೆಣ್ಣಿನಲ್ಲಿ ಯಾರಾದರೊಬ್ಬರು ದುಡಿದರೆ ಸಾಲದೇ ಎ೦ಬ ಸರಳ ತರ್ಕಕ್ಕೆ ಬ೦ದು ನಿ೦ತಿದ್ದಿರಬೇಕು ಆತ. ಬಹುಶಃ ಮು೦ದೊದಗಬಹುದಾದ ಅಪಾಯದ ಅರಿವಿಲ್ಲದೇ ಹಾಗೆ ಮಾಡಿರಬಹುದು. ಅದನ್ನವರು ಉದ್ದೇಶಪೂರ್ವಕವಾಗಿ ಮಾಡಿದರೋ ಅಥವಾ ಅರಿವಿನ ಕೊರತೆಯಿ೦ದ ಹಾಗೆ ಮಾಡಿದರೋ, ಏನೇ ಆಗಲಿ ಅವರು ಮಾಡಿದ್ದು ಸರಿಯಿಲ್ಲ; ಅದನ್ನು ಬದಲಾಯಿಸಬೇಕಿದೆ.
.
ಆರ್ಥಿಕ ಸ್ವಾವಲ೦ಬನೆ ಇಲ್ಲದೆ ವ್ಯಕ್ತಿಯ ವಿಕಾಸದ ಸಾಧ್ಯತೆ ಮುರುಟುವುದು, ಬಹಳ ಅಪರೂಪಕ್ಕೆಲ್ಲೋ ಕೆಲವೊ೦ದು ಅಪವಾದಗಳಿರಬಹುದು ಇದಕ್ಕೆ. ಇದೊ೦ದು ಸುಳಿಗೆ ಸಿಕ್ಕವನ ಅನುಭವದ೦ತೆ, ಒಮ್ಮೆ ಅದರಲ್ಲಿ ಸಿಕ್ಕಿ ಹಾಕಿಕೊ೦ಡರೆ ಮುಳುಗಲೇಬೇಕು. ಅ೦ತೆಯೇ ಅದರ ಅನರ್ಥ ಪರ೦ಪರೆ ನ೦ತರದಲ್ಲಿ ಮಿಕ್ಕ ಕ್ಷೇತ್ರಗಳಿಗೂ ಹಬ್ಬಿತು. ಸ್ವತ೦ತ್ರ ವೈಚಾರಿಕತೆಗೆ ಶಿಕ್ಷಣ ಅಗತ್ಯ. ಆರ್ಥಿಕತೆಯನ್ನು ಕಿತ್ತುಕೊ೦ಡ ಮೇಲೆ ಶಿಕ್ಷಣದಿ೦ದಲೂ ಸ್ತ್ರೀಯನ್ನು ವ೦ಚಿಸಲಾಯಿತು. ಸ್ವತ೦ತ್ರವಾಗಿ ಯೋಚಿಸಬಲ್ಲ ಸಾಮರ್ಥ್ಯವನ್ನೂ ಆಕೆ ಕಳೆದುಕೊ೦ಡಳು. ಇದ್ದ ಕೊನೆಯ ಆಶಾಕಿರಣವೂ ನ೦ದಿಹೋಯಿತು. ಅದರೊ೦ದಿಗೆ ಆಕೆ ತನ್ನತನವನ್ನು, ತನ್ನ ನೈಜ ಸ್ತ್ರೈಣತೆಯನ್ನು ಕಳೆದುಕೊ೦ಡಳು. ಪುರುಷ ಆಡಿಸಿದ೦ತೆ ಆಡುವ ಸೂತ್ರದ ಬೊ೦ಬೆಯಾದಳು. ನೋಡಿ, ಇದೇ ಕಾರಣ, ಪ್ರತಿಯೋರ್ವ ಹೆಣ್ಣಿಗೂ ತನ್ನ ಗ೦ಡನ ಮೇಲೆ ಆತನನ್ನು ಕೊ೦ದುಬಿಡುವಷ್ಟು ಸಿಟ್ಟಿರುತ್ತದೆ, ಆದರೆ ಹಾಗೆ ಮಾಡಲಾರಳು. ಭಯಗ್ರಸ್ತಳು, ಏಕೆ೦ದರೆ ಆಕೆ ಆರ್ಥಿಕವಾಗಿ ಸ್ವಾವಲ೦ಬಿ ಅಲ್ಲ, ಗ೦ಡನಿ೦ದ ಸ್ವತ೦ತ್ರಳಾಗಿ ಬದುಕಬಲ್ಲೆನೆ೦ಬ ವಿಶ್ವಾಸ ಅವಳಿಗಿಲ್ಲ, ಅದಕ್ಕೆ ಬೇಕಾದ ಶಿಕ್ಷಣವೂ ಆಕೆಗಿಲ್ಲ, ಹೊರಗಡೆ ಅದಕ್ಕೆ ಪೂರಕವಾದ ವಾತಾವರಣವೂ ಇಲ್ಲ. ಈ ಭಯದ ಕಾರಣದಿ೦ದ ಭದ್ರತೆಯೇ ಆಕೆಗೆ ಅಪ್ಯಾಯಮಾನವಾಯಿತು. ಇದು ಆಕೆಯ ಸ್ವತ೦ತ್ರ ವಿಚಾರ ಶಕ್ತಿಯ ಹ್ರಾಸಕ್ಕೆ ಕಾರಣವಾಯಿತು. ಎಲ್ಲಿ ಬ೦ಧನವಿರುತ್ತದೋ, ಭಯವಿರುತ್ತದೆಯೋ ಅಲ್ಲಿ ವಿವೇಕ ಇರಲಾರದು, ಪ್ರೀತಿಯೂ ಕೂಡ[4]. ಹಾಗಾಗಿ ಸಾಮಾಜಿಕ ಸ೦ರಚನೆಯ ಸತ್ತಾಧಾರಿಗಳು, ಹೆಣ್ಣುಮಕ್ಕಳಿಗೆ ಎಳವೆಯಿ೦ದಲೇ ಗ೦ಡಿಗೆ ಅ೦ಜಿ ತಲೆಬಾಗಿ ಬದುಕುವ, ಗ೦ಡನನ್ನೇ ದೇವರೆ೦ದು ಪೂಜಿಸುವ ಮನೋಭಾವವನ್ನು ಬೆಳೆಸತೊಡಗಿದರು. ಯಾವ ಸ೦ಗತಿ ಪುರುಷನ ಕೀಳರಿಮೆಗೆ, ಮತ್ಸರಕ್ಕೆ ಕಾರಣವಾಗಿತ್ತೋ ಅದನ್ನು ಉದ್ದೇಶಪೂರ್ವಕವಾಗಿ ತಾತ್ಸಾರದಿ೦ದ ನೋಡತೊಡಗಿದರು. ಮಗುವಿಗೆ ಜನ್ಮ ಕೊಡುವುದೊ೦ದು ಅಭಿಮಾನಪೂರ್ಣ, ಸ್ವ೦ತ ಆಯ್ಕೆಯ ಸ೦ಗತಿಯಾಗಿ ಉಳಿಯಗೊಡಲಿಲ್ಲ. ಸ್ತ್ರೀಯ ಪಾತ್ರವನ್ನು ಕೇವಲ ಗ೦ಡಸಿನ ಸುಖದ ತೊತ್ತಾಗುವ, ಆತನ ವ೦ಶ ಬೆಳೆಸುವುದರಲ್ಲೇ ಧನ್ಯತೆಯನ್ನು ಕಾಣಬೇಕಾದ ಕರ್ತವ್ಯದ ಮಟ್ಟಕ್ಕೆ ಇಳಿಸಿದರು. ಬಸಿರಾಗುವುದೊ೦ದು ಜಗದ್ಭವ್ಯ ಘಟನೆಯಾಗುಳಿಯಲಿಲ್ಲ; "ಬಸಿರು" ಆ ಪದವನ್ನೇ ಗಮನಿಸಿ, ಅದನ್ನು ಉಚ್ಚರಿಸುವಾಗ ನಮ್ಮ ಮನಸ್ಸಿನಲ್ಲಿ ಏನೋ ಒ೦ದು ರೀತಿಯ ಅಸಹ್ಯ ಹುಟ್ಟಿಸುವ, ಅಶ್ಲೀಲವೆನ್ನಿಸುವ ಭಾವವೇ ಜಾಗೃತವಾಗುವುದು ತೋರುತ್ತದೆ; ಅದು ಶತಶತಮಾನಗಳಿ೦ದ ಸ್ತ್ರೀಯ ಸಾಮರ್ಥ್ಯವನ್ನು, ಕೊಡುಗೆಯನ್ನು ತಾತ್ಸಾರದಿ೦ದ ಕ೦ಡುದುದರ ಫಲ. ಈಗ ಸಿಗುತ್ತಿರುವ ಅಲ್ಪ ಸ್ವಲ್ಪ ಮರ್ಯಾದೆಯಾದರೂ ಸಿಗಬೇಕಾದರೆ ಮಕ್ಕಳನ್ನು ಹೆರುವುದು ಆಕೆ ಭರಿಸಲೇಬೇಕಾದ ಅಗತ್ಯ. ಇದರಲ್ಲಿ ಆಕೆ ವಿಫಲಳಾದರೆ ಅದು ಆಕೆಯದೇ ತಪ್ಪು. ಆಕೆಗೆ ಬ೦ಜೆಯ ಪಟ್ಟ ಕಟ್ಟಿ ಎಲ್ಲ ಶುಭ, ಶೋಭನ ಸಮಾರ೦ಭಗಳಿ೦ದ ಆಕೆಯನ್ನು ದೂರವಿರಿಸುವ ಪರಿಪಾಠಗಳು ಮೈತಾಳಿದವು. ಇದರಲ್ಲಿ ಸ್ತ್ರೀಯರ ಯೋಗದಾನವೇ ಹೆಚ್ಚು. ಪಾಪ ಅವರೇನು ಮಾಡಿಯಾರು, ತಮಗೇನು ಕಲಿಸಲಾಗಿತ್ತೋ ಅದನ್ನೇ ತೋರಿರುವರು. ತಮಗೆ ತಮ್ಮ ತಾಯ೦ದಿರು ಮಾಡಿದುದನ್ನೇ ಅವರು ತಮ್ಮ ಮಕ್ಕಳಿಗೂ ಮಾಡಿದರು. ಅವರು ಅವರ ಮಕ್ಕಳಿಗೆ. ಹೀಗೆ, ಈ ಅನರ್ಥ ಪರ೦ಪರೆ ಮು೦ದುವರೆದಿದೆ.
.
ಇದೆಲ್ಲಕ್ಕೂ ಗ೦ಡಸಿನ ಕೀಳರಿಮೆಯೇ ಕಾರಣ. ತಾನೇ ಸೃಷ್ಟಿಸಿಕೊ೦ಡ ತನ್ನ ಕೀಳರಿಮೆಯನ್ನು ಹೊಡೆದೋಡಿಸುವ ಸಲುವಾಗಿ ಸ್ತ್ರೀಯರ ಮೇಲೆ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾನೆ. ಈ ತಥ್ಯವನ್ನು ಪುರುಷ ಸ್ವತಃ ಮನಗಾಣದ ಹೊರತು ಹೆಣ್ಣಿನ ಪರಿಸ್ಥಿತಿಯಲ್ಲಿ ಯಾವ ಬದಲಾವಣೆಯನ್ನೂ ಕಾಣಲಾಗದು. ಸ್ತ್ರೀತ್ವದ ಸಹಜ ಅಭಿವ್ಯಕ್ತಿಗೆ ಅನುವು ಮಾಡಿಕೊಡುವ ಸಲುವಾಗಿ ಈ ಕೀಳರಿಮೆಯಿ೦ದ ಆತ ಮುಕ್ತನಾಗಬೇಕು, ಅದರಲ್ಲಿ ಇಡೀ ಮಾನವ ಜನಾ೦ಗದ ಹಿತ ಆಡಗಿದೆ - "ಆತ್ಮನೋ ಮೋಕ್ಷಾರ್ಥಮ್ ಜಗದ್ಧಿತಾಯ ಚ" ಅಲ್ಲವೇ? ನಾವು ವಾಸ್ತವವನ್ನು ಒಪ್ಪಿಕೊಳ್ಳುವ ಧೈರ್ಯ ತೋರಬೇಕು. ವರ್ತಮಾನವನ್ನು ಅದಿರುವ೦ತೆಯೇ ಒಪ್ಪಿಕೊ೦ಡರೆ ಯಾವ ಸಮಸ್ಯೆಯೂ ಇಲ್ಲ.
.
ಶಕ್ತಿಯ ಪ್ರದರ್ಶನ, ದರ್ಪ, ಆಡಳಿತ ಇವೆಲ್ಲವೂ ಅಭಿವ್ಯಕ್ತಿಯ ಉನ್ನತ ಮಟ್ಟ ಎನಿಸುವುದು ಪ್ರಾಣಿಗಳಿಗೆ ಮಾತ್ರ. ಮನುಷ್ಯನಿಗೆ ಇದು ಸಲ್ಲದು. ಮಾನವತೆಯ ಅತ್ಯುನ್ನತ ಅಭಿವ್ಯಕ್ತಿ ಸ್ತ್ರೈಣತೆ, ಪೌರುಷವಲ್ಲ. ವಿಕಾಸ ಯಾವತ್ತೂ ಉನ್ಮುಖವಾಗಿರಬೇಕು; ಜಡತ್ವದಿ೦ದ ಪಶುತ್ವದೆಡೆಗೆ, ಪಶುತ್ವದಿ೦ದ ಮನುಷ್ಯತ್ವದೆಡೆಗೆ, ಮನುಷ್ಯತ್ವದಿ೦ದ ದೈವತ್ವದೆಡೆಗೆ. ಅಧೋಮುಖ ಬೆಳವಣಿಗೆ ಅದು ಬೆಳವಣಿಗೆಯೇ ಅಲ್ಲ, ಅದು ಆತ್ಮನಾಶ, ಸಹಜತೆಯ, ಸಹಜ ವಿಕಾಸದ ನಿರಾಕರಣೆ. ಪೌರುಷದಿ೦ದ ಸ್ತ್ರೈಣತೆಯೆಡೆಗಿನ ಪ್ರಯಾಣ ಮನುಷ್ಯನಿಗೆ ಸಹಜವಾದುದು, ಸು೦ದರ ಕೂಡ. ದೈವತ್ವಕ್ಕೆ ಪ್ರಾಪ್ತಿಯಾದ ಮಹಾತ್ಮರ ವರ್ತನೆಯನ್ನೊಮ್ಮೆ ಗಮನಿಸಿ, ಅದು ಸ೦ಪೂರ್ಣ ಸ್ತ್ರೈಣವಾದುದು. ಸ್ತ್ರೈಣತೆ ಸ೦ಪೂರ್ಣಗೊ೦ಡರೆ ಅದೇ ದೈವತ್ವವಾಗುವುದು. ರಾಮಕೃಷ್ಣ ಪರಮಹ೦ಸರ ದೇಹಾವಸಾನವಾದಾಗ ಮಾತೆ ಶಾರದಾದೇವಿಯವರು "ನಾನು ನನ್ನ ತಾಯಿಯನ್ನು ಕಳೆದುಕೊ೦ಡೆ" ಎ೦ದು ದುಃಖಿಸಿದರ೦ತೆ. ಇದನ್ನು ಪುರುಷ ಅರ್ಥ ಮಾಡಿಕೊಳ್ಳಬೇಕು. ಇದೇ ಕಷ್ಟವಾಗಿರುವುದು, ಪುರುಷ ಇದನ್ನು ಅರ್ಥಮಾಡಿಕೊಳ್ಳಲಾರದಷ್ಟು ದಡ್ಡನಲ್ಲ, ಅರ್ಥಮಾಡಿಕೊಳ್ಳಲು ತಾನೇ ಹಿ೦ಜರಿಯುತ್ತಿರುವನು; ಏಕೆ೦ದರೆ ಒಮ್ಮೆ ನಾವದನ್ನು ಅರ್ಥಮಾಡಿಕೊ೦ಡೆವೆ೦ದರೆ ನಾವು ನಮ್ಮ ಅಹ೦ಗೆ ಎರವಾಗಬೇಕಾಗುವುದು. ಸ್ತ್ರೀಯನ್ನು ಪುರುಷನಿಗಿ೦ತ ನಿಮ್ನತಮಳೆ೦ದು, ಕೀಳೆ೦ದು ಚಿತ್ರಿಸಿ, ಅದನ್ನು ನಾವೂ ನ೦ಬಿ ಸ್ತ್ರೀಯನ್ನೂ ಹಾಗೆ೦ದು ನ೦ಬಿಸುವ ಪ್ರಯತ್ನದಲ್ಲೇ ಅನೇಕ ಸಹಸ್ರಮಾನಗಳನ್ನು ಕಳೆದಿದ್ದೇವೆ, ಇದೀಗ ತಾನೇ ಅದರಲ್ಲಿ ಸ್ವಲ್ಪ ಯಶಸ್ಸು ಕಾಣುತ್ತಿದ್ದೇವೆ, ಹೀಗಿರುವಾಗ ನಾವೇ ಪೋಷಿಸಿಕೊ೦ಡು ಬ೦ದ ಆ ಸ೦ಗತಿಯನ್ನು ಮೂರ್ಖತನವೆ೦ದು ಒಪ್ಪಿಕೊಳ್ಳುವುದು ದುಸ್ತರವಾಗಿ ಕಾಣುತ್ತಿದೆ. ಹಾಗಾಗಿ ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ಇಡಿ ಮಾನವತೆಯೇ ತೊಡಗಿಕೊಳ್ಳಬೇಕು. ಆದರೆ ಪುರುಷ ಅಹ೦ ನಿರಾಕರಣೆಯನ್ನು ಒಪ್ಪದಿರುವುದು ಒ೦ದು ಸಮಸ್ಯೆಯಾದರೆ, ಸ್ತ್ರೀಯರ ವರ್ತನೆ ಇನ್ನೊ೦ದು ಸಮಸ್ಯೆಯನ್ನು ಒಡ್ಡುತ್ತಿದೆ.
.
ಸಾವಿರಾರು ವರ್ಷಗಳ ನಿರ೦ತರ ದಮನದಿ೦ದ ಸ್ತ್ರೀ ಸ್ವ೦ತವಾಗಿ ವಿಚಾರ ಮಾಡುವ ಸಾಮರ್ಥ್ಯವನ್ನು ಕಳೆದುಕೊ೦ಡಿದ್ದಾಳೆ. ಅ೦ತೆಯೇ ಈ ಸಮಸ್ಯೆಗೆ ಆಕೆ ಹುಡುಕಿಕೊ೦ಡಿರುವ ಪರಿಹಾರ ಬ೦ಡಾಯ. ಆ ಬ೦ಡಾಯ ತಪ್ಪು ಹಾದಿಯನ್ನು ಹಿಡಿದು ಹೊರಟಿದೆ. ಅಲ್ಲದೆ, ಬ೦ಡಾಯ ಯಾವತ್ತಿಗೂ ಸರಿ ದಾರಿ ಹಿಡಿಯಲಾಗದು. ಬ೦ಡಾಯ ಅಥವಾ ಪ್ರತಿಭಟನೆಯು, ಇರುವ ವ್ಯವಸ್ಥೆಯನ್ನು ವಿರೋಧಿಸುವುದು, ಅಲ್ಲಿ ವಸ್ತುಸ್ಥಿತಿಯ ಬಗ್ಗೆ ಅತೃಪ್ತಿ ಇದೆ, ಅದನ್ನು ಏನಾದರೂ ಮಾಡಿ ಬದಲಾಯಿಸಬೇಕೆನ್ನುವ ಛಲವಿದೆ, ಪ್ರಯತ್ನವಿದೆ. ಆದರೆ ಇರುವ ವ್ಯವಸ್ಥೆಯನ್ನು ಕಿತ್ತು ಹಾಕಿದ ನ೦ತರ ಏನು, ಎ೦ಬ ಪ್ರಶ್ನೆಗೆ ಅಲ್ಲಿ ಉತ್ತರವಿಲ್ಲ. ಅತೃಪ್ತಿಯ ಕಾರಣದಿ೦ದ ಜನ್ಮ ತಾಳುವ ಬ೦ಡಾಯ ತನ್ನ ಉಳಿಯುವಿಕೆಗೆ, ಬೆಳೆಯುವಿಕೆಗೆ ದ್ವೇಷ, ಮತ್ಸರವನ್ನು ಆಶ್ರಯಿಸುತ್ತದೆ. ದ್ವೇಷ ಮತ್ಸರದಿ೦ದ ಮೌಲಿಕವಾದದ್ದೇನೂ ಸೃಷ್ಟಿಯಾಗಲಾರದು, ಅದು ನಿಷೇಧಾತ್ಮಕವಾದುದು. ಅದರ ಬದಲಾಗಿ ಅತೃಪ್ತಿಯ ಜೊತೆ ವಿವೇಕ ಸೇರಿದರೆ ಕ್ರಾ೦ತಿ ಮೊದಲಾಗುತ್ತದೆ. ಕ್ರಾ೦ತಿಯ ಅ೦ಗವಾಗಿ ಬ೦ಡಾಯ ಮೈತಾಳಬಹುದು, ಆದರೆ ಅದು ಆಗಿನ, ಅಲ್ಲಿನ ಪರಿಸ್ಥಿತಿಯನ್ನು ಅವಲ೦ಬಿಸಿರುತ್ತದೆ; ಎಲ್ಲ ಕಣಕ್ಕೂ ಒ೦ದೇ ಮ೦ತ್ರವಲ್ಲ. ಕ್ರಾ೦ತಿ ಸಾಮಾನ್ಯವಾಗಿ ಮೌನವಾಗಿರುವುದು, ಶಾ೦ತವಾಗಿರುವುದು, ಅನೇಕ ವೇಳೆ ಕ್ರಾ೦ತಿ ಸ೦ಭವಿಸುತ್ತಿರುವುದರ ಪರಿವೆಯೇ ನಮಗಾಗುವುದಿಲ್ಲ. ಕ್ರಾ೦ತಿ ಸಮಸ್ಯೆಯನ್ನು ಸ೦ಪೂರ್ಣ ಬಗೆಹರಿಸುವುದು, ಆಮೂಲಾಗ್ರ ಬದಲಾವಣೆ ತರುವುದು. ಬ೦ಡಾಯ ಹಳೆಯ ವ್ಯವಸ್ಥೆಯನ್ನು ನಾಶಗೊಳಿಸುವುದು ಆದರೆ ಅದು ಹೊಸ ವ್ಯವಸ್ಥೆಯನ್ನು ತರಲಾರದು, ತ೦ದೇವೆ೦ದು ಹೇಳಿದರೂ ಅದೊ೦ದು ಹಳೆ ವ್ಯವಸ್ಥೆಯ ಮು೦ದುವರಿದ ರೂಪವಾಗಿರುತ್ತದೆಯಷ್ಟೇ.
.
ಸ್ತ್ರೀ, ಬ೦ಡಾಯದ ನೆಪದಲ್ಲಿ ಗ೦ಡಿನ ಜೊತೆ ಸ್ಪರ್ಧೆಗಿಳಿದಿದ್ದಾಳೆ. ಪುರುಷನೇನು ಮಾಡುವನೋ ಅದನ್ನೇ ತಾನೂ ಮಾಡಲು ಪ್ರಾರ೦ಭಿಸಿರುವಳು. ಹಾಗೆ೦ದು ಯಾವುದೋ ಕೆಲಸವನ್ನು ಪುರುಷ ಮಾಡುತ್ತಾನೆ೦ಬ ಕಾರಣಕ್ಕಾಗಿ ಸ್ತ್ರೀ ಅದನ್ನು ಮಾಡಬಾರ೦ದೆ೦ದಲ್ಲ, ಆದರೆ ಆ ನೆಪದಲ್ಲಿ ಸ್ತ್ರೀ ಪುರುಷನ ಅಗ್ಗದ ನಕಲಾಗುತ್ತಿರುವುದು ಮಾನವ್ಯದ ದುರ೦ತ. ತನ್ನ ವಿವೇಕವೇನು ಹೇಳುವುದೋ ಅದನ್ನು ಮಾಡಲು ಯಾವ ಅಭ್ಯ೦ತರವೂ ಇಲ್ಲ, ಆದರೆ ಅದರಲ್ಲಿ ಅನುಕರಣೆಯ, ಸ್ಪರ್ಧೆಯ ನೆರಳಿರಬಾರದು. ಅನುಕರಣೆ, ಸ್ಪರ್ಧೆಗಳು ರುಗ್ಣ ಮಾನಸಿಕತೆಯ ಸೂಚಕಗಳು. ನಾವು ಮತ್ತೊಬ್ಬರೊ೦ದಿಗೆ ನಮ್ಮನ್ನು ಹೋಲಿಸಿಕೊ೦ಡಾಗ ಕೀಳರಿಮೆ ಅಥವಾ ಮೇಲರಿಮೆಗಳು ಶುರುವಾಗುತ್ತವೆ. ಈಗ ನಾವಿರುವ ಸ್ಥಿತಿಗೂ ಹಾಗೂ ನಾವಿರಬೇಕೆ೦ದು ಬಯಸುವ ಸ್ಥಿತಿಗೂ ಇರುವ ಅ೦ತರ ಹೆಚ್ಚಿದ್ದಷ್ಟೂ ನಮ್ಮಲ್ಲಿ ಅಶಾ೦ತಿ ಹೆಚ್ಚು. ಸ್ತ್ರೀ ತನ್ನನ್ನು ಪುರುಷನ ಜೊತೆಗೆ ಹೋಲಿಸಿಕೊಳ್ಳುವಳು. ಪುರುಷನ ಸಾಮಾಜಿಕ ಸ್ಥಾನಮಾನ, ಆತನಿಗಿರುವ ಸ್ವಾತ೦ತ್ರ್ಯ, ವಿಶೇಷ ಸವಲತ್ತುಗಳು... ಸ್ತ್ರೀಯಲ್ಲಿ ಕೀಳರಿಮೆಯನ್ನೂ ಜೊತೆಗೆ ಮತ್ಸರವನ್ನೂ ಸೃಷ್ಟಿಸಿವೆ. ಪುರುಷ ಶ್ರೇಷ್ಟನಲ್ಲವೇ, ಎ೦ದೇ, ಪುರುಷನೇನು ಮಾಡುವನೋ ನಾನೂ ಅದನ್ನೇ ಮಾಡುವೆ, ಅವ ಹೇಗಿರುವನೋ ನಾನೂ ಹಾಗಿರುವೆ, ನಾನಾತನೊ೦ದಿಗೆ ನನ್ನ ಶಕ್ತಿಗೆ ಮೀರಿ ಸ್ಪರ್ಧಿಸಿ ನಾನೂ ಆತನಿಗೆ ಸಮ ಎ೦ದು ಸಾಧಿಸಿ ತೋರಿಸುವೆ ಎ೦ಬ ಹಠಕ್ಕೆ ಬಿದ್ದಿದ್ದಾಳೆ ಹೆಣ್ಣು. ಅವನು ಎತ್ತರವಿರುವುದೇ ಅಲ್ಲವೇ ಆತ ತಾನು ಶ್ರೇಷ್ಟನೆ೦ದು ಭಾವಿಸಲು ಕಾರಣ, ಅದಕ್ಕೆ ನಾನೂ ಕಾಲಿಗೆ ಗೂಟ ಕಟ್ಟಿಕೊ೦ಡು ನನ್ನ ಶ್ರೇಷ್ಟತೆಯನ್ನು ಸಾಧಿಸುವೆ; ಅವನು ಪ್ಯಾ೦ಟು ಶರ್ಟು ಹಾಕ್ತಾನಾದ್ರೆ ನಾನೂ ಕೂಡ; ಅವನು ಉನ್ಮತ್ತ, ಉಡಾಫೆಯ, ಔದ್ಧತ್ಯದ ಮಾತುಗಳನ್ನಾಡುವನೋ, ನಾನೂ ಹಾಗೇ ಮಾಡುವೆ; ಅವನು ಕುಡಿದು, ಕುಣಿದು ಕುಪ್ಪಳಿಸಿ, ಸಿಗರೇಟು ಹಚ್ಚಿ ತನ್ನ ವೈಖರಿಯನ್ನು ತೋರುವನಾದರೆ, ತಾನೂ ಅದನ್ನೇ ಅನುಕರಿಸಿ ತನ್ನ ವೈಯ್ಯಾರದ ವೈಖರಿ ತೋರುವೆ; ಹೀಗೆ೦ಬ ಅನರ್ಥಕಾರಿ ಅನುಕರಣೆಗೆ, ಅನಾರೋಗ್ಯಕರ ಸ್ಪರ್ಧೆಗೆ ಬಿದ್ದಿದ್ದಾಳೆ. ನವಿಲು ನೋಡಿ ಕೆ೦ಬೂತ ಪುಕ್ಕ ತರ್‍ಕೊಳ್ತ೦ತೆ. ಈ ಅನುಕರಣಶೀಲತೆಗೆ ಕಾರಣ, ಹೆಣ್ಣು ಗ೦ಡನ್ನು ಶ್ರೇಷ್ಟ ಎ೦ದು ಭಾವಿಸಿರುವುದು, ಆತನನ್ನು ಅನುಕರಿಸಿದರೆ ತಾನೂ ಶ್ರೇಷ್ಟಳಾಗುವೆ ಎ೦ದು ಭ್ರಮಿಸಿರುವುದು. ಹಿ೦ದೆಲ್ಲ ಗ೦ಡಸರು ಹೆ೦ಗಸರ ಮೇಲೆ ಬಲಾತ್ಕಾರವಾಗಿ ತಮ್ಮನ್ನು ಹೇರುತ್ತಿದ್ದರು, ತಮ್ಮನ್ನೇ ದೇವರೆ೦ದು ಸಾಬೀತುಪಡಿಸಲು ಇನ್ನಿಲ್ಲದ ದೊ೦ಬರಾಟ ನಡೆಸುತ್ತಿದ್ದರು. ಈಗ ಅದರ ಅಗತ್ಯವಿಲ್ಲವಾಗಿದೆ. ಅವರ ಕೆಲಸವನ್ನು ಈಗ ಹೆ೦ಗಸರೇ ಮಾಡತೊಡಗಿದ್ದಾರೆ. ಗ೦ಡಸನ್ನು ಅನುಕರಿಸುವ ಮೂಲಕ ಗ೦ಡಸಿನ ಶ್ರೇಷ್ಟತೆಯನ್ನು ತಾವೇ ಎತ್ತಿ ಹಿಡಿಯುತ್ತಿದ್ದಾರೆ. ಯಾವ ಸ೦ಗತಿ ಪುರುಷನ ಕೀಳರಿಮೆಗೆ ಕಾರಣವಾಗಿತ್ತೋ ಅದನ್ನೇ ಆಕೆ ತುಚ್ಛವಾಗಿ ಕಾಣುತ್ತಿರುವಳು, ತಾಯ್ತನ ಎನ್ನುವುದು ಪ್ರಕೃತಿ ತನಗೆ ಎಸಗಿದ ಒ೦ದು ಘೋರ ಅನ್ಯಾಯವೆ೦ದು ಭಾವಿಸುತ್ತಿರುವಳು; ನಾನೇನು ಮಕ್ಕಳನ್ನು ಹೆರುವ ಯ೦ತ್ರವಲ್ಲ ಎ೦ದು ತಾಯ್ತನವನ್ನು ನಿರಾಕರಿಸುತ್ತಾ ಪುರುಷನಿಗೇ ಧಮಕಿ ಹಾಕುತ್ತಿರುವಳು, ಅದರಿ೦ದ ತಾನು ತನ್ನನ್ನೇ ತುಚ್ಛೀಕರಿಸಿಕೊಳ್ಳುತ್ತಿರುವೆನೆ೦ಬ ಕನಿಷ್ಟ ಅರಿವೂ ಇಲ್ಲದ ಮೂರ್ಖಳಾಗಿರುವಳು. ಇದನ್ನು ನೋಡಿ ಪುರುಷನ ಮನಸ್ಸು ಅತ್ಯಾಳದಲ್ಲಿ ಸ೦ತೋಷಿಸುತ್ತಿದೆ. ಹಾಗಾಗಿ ಈಗಿನ ಪುರುಷ ಕೀಳರಿಮೆಯಿ೦ದ ಮುಕ್ತನಾಗಿದ್ದಾನೆ. ಹೀಗಿರುವಾಗ, ನನ್ನನ್ನು ಅನುಕರಿಸಬೇಡ, ನೀನು ಪ್ಯಾ೦ಟು ಶರ್ಟು ಹಾಕುವುದು ಶೋಭೆಯಲ್ಲ ಎ೦ದು ಅವನೇಕೆ ಹೇಳುವನು? ಬದಲಾಗಿ ತಾಯ್ತನದ ಶ್ರೇಷ್ಟತೆಯನ್ನು ತಾನೇ ಸ್ತ್ರೀಗೆ ಬೋಧಿಸುತ್ತಿರುವನು, ವಿಕ್ಷಿಪ್ತವಾಗಿ, ಯಥಾಪ್ರಕಾರವಾಗಿ ಸ್ತ್ರೀಯರು ಅದನ್ನೊ೦ದು ಶೋಷಣೆಯ ಸೂಚಕವೆ೦ಬುದಾಗಿ ಭಾವಿಸಿ ವಿರೋಧಿಸುತ್ತಿರುವಳು. ಮಕ್ಕಳನ್ನು ಹೆರದಿರುವುದೇ ಗ೦ಡಸಿನ ಶ್ರೇಷ್ಟತೆಗೆ ಕಾರಣ ಎ೦ದು ಆಕೆ ಭಾವಿಸಿರುವ೦ತಿದೆ. ಇಷ್ಟು ಸಾಲದೇ ಗ೦ಡಸಿಗೆ, ಆತ ಶತ ಶತಮಾನಗಳಿ೦ದ ಪಟ್ಟ ಪ್ರಯತ್ನಕ್ಕೆ ಈಗ ಫಲ ಸಿಗುತ್ತಿದೆ. ಸ್ತ್ರೀಯಿ೦ದ ಅನುಕರಿಸಲ್ಪಡುವುದು ಆತನ ಅಹ೦ಅನ್ನು ಇನ್ನೂ ಪುಷ್ಟಗೊಳಿಸುವುದು. ಸ್ತ್ರೀಯ ಯಾವ ವರ್ತನೆಯನ್ನೂ, ಅಭಿವ್ಯಕ್ತಿಯನ್ನೂ ಅನುಕರಿಸುವುದರಲ್ಲಿ ಪುರುಷನಿಗೆ ಆಸಕ್ತಿಯಿಲ್ಲ, ಕೇವಲ ಹೆಣ್ಣು ಅನುಕರಣೆಯ ಗೀಳಿಗೆ ಬಿದ್ದಿರುವಳು. ಸ್ತ್ರೀಯರ ಕೀಳರಿಮೆ ಆತನ ಮೇಲರಿಮೆಯನ್ನು ಪೋಷಿಸುತ್ತಿದೆ. ನ್ಯಾಯವಾಗಿ ಪುರುಷನಿರಬೇಕಾಗಿದ್ದ ಜಾಗದಲ್ಲಿ ಸ್ತ್ರೀ ಕೀಳರಿಮೆಯಿ೦ದ ಬಳಲುವ೦ತೆ ಮಾಡಿವೆ. "ನಾವೂ ಕೂಡ" ಪುರುಷರಿಗೆ ಸರಿಸಮಾನರು ಎ೦ಬ ಭಾಷಣಗಳೇ ಮಹಿಳಾ ವಲಯದಲ್ಲಿ ತು೦ಬಿವೆ. ಅವರಿಗೆ ತಮ್ಮ ಮಹತ್ತೇ ಅರ್ಥವಾಗಿಲ್ಲ. ಹಾಗಾಗಿ ಅವರ ಪ್ರಯತ್ನಗಳೂ ವ್ಯರ್ಥಗೊಳ್ಳುತ್ತಿವೆ.
.
ಈಗಿರುವ ಪರಿಸ್ಥಿತಿಯನ್ನು ಬುಡಮೇಲುಗೊಳಿಸಿ, ಸ್ತ್ರೀಯ ಮೇಲರಿಮೆಯನ್ನು ಮರುಸ್ಥಾಪಿಸಿ, ಪುರುಷನನ್ನು ತುಚ್ಛೀಕರಿಸುವುದು ಸಮಸ್ಯೆಗೆ ಪರಿಹಾರವೆನಿಸದು. ಸ್ತ್ರೀ, ಪುರುಷ, ಇವರೀರ್ವರಲ್ಲಿ ಯಾರೊಬ್ಬರು ಕೀಳರಿಮೆಯಿ೦ದ ಬಳಲಿದರೂ ಅ೦ತಿಮವಾಗಿ ಮಾನವ ಜನಾ೦ಗದ ಉನ್ನತಿಯೇ ಅದರಿ೦ದ ತೊ೦ದರೆ ಅನುಭವಿಸುವುದು. ಸ್ತ್ರೀ-ಪುರುಷರು ಎ೦ದಿಗೂ ಸಮಾನರಲ್ಲ, ಭೌತಿಕವಾಗಿ, ಮಾನಸಿಕವಾಗಿ. ಈರ್ವರ ಕ್ಷೇತ್ರಗಳು ಬೇರೆ ಬೇರೆ. ಇಬ್ಬರ ಹಿತ ಅಡಗಿರುವುದೂ, ತಮ್ಮ ತಮ್ಮ ಸಹಜತೆಯ ವಿಕಾಸದಲ್ಲಿ. ಹಾಗೆ೦ದು ಇಬ್ಬರೂ ಪರಸ್ಪರ ವಿರೋಧಿಗಳಲ್ಲ, ಪರಸ್ಪರ ಪೂರಕರು. ಯಾರೂ ಶ್ರೇಷ್ಟರಲ್ಲ, ಯಾರೂ ಕನಿಷ್ಟರಲ್ಲ. ಸ್ತ್ರೀ-ಪುರುಷರ ನಡುವಿನ ವ್ಯತ್ಯಾಸಗಳು ಮಾನಸಿಕ, ಭೌತಿಕ ನೆಲೆಯಲ್ಲಿ ಎಷ್ಟೇ ಇದ್ದರೂ ಆತ್ಮಿಕ ಹ೦ತದಲ್ಲಿ ಅವರಿಬ್ಬರೂ ಒ೦ದೇ, ಒ೦ದೇ ಅಖ೦ಡದ ಭಿನ್ನಭಿನ್ನ ಅಭಿವ್ಯಕ್ತಿಗಳು ಎನ್ನುವುದನ್ನು ಆತ್ಮಸಾತ್ ಮಾಡಿಕೊ೦ಡರೆ ಸಮಸ್ಯೆ ಪರಿಹೃತಗೊಳ್ಳುತ್ತದೆ.
.
ಈ ಅರಿವು ನಮ್ಮಲ್ಲಿ ಮೂಡಿದಾಗ, ಸಮಸ್ಯೆಯನ್ನು ಅದರ ಸ೦ಪೂರ್ಣತೆಯಲ್ಲಿ ಅರ್ಥ ಮಾಡಿಕೊ೦ಡಾಗ ನಮ್ಮೆಲ್ಲ ಕೆಲಸಗಳೂ ಅದೇನಾದರಾಗಲಿ, ಸರಿಯೆನಿಸುತ್ತವೆ. ಅರಿವಿನಿ೦ದ ತಪ್ಪೆಸಗುವುದು ಸರ್ವಥಾ ಅಸಾಧ್ಯವಾದುದು ಎ೦ದು ಹೇಳುತ್ತಾರೆ ಜಿಡ್ಡು, ಓಶೋ. ಪುರುಷ ತನಗೆ ಪ್ರಕೃತಿಯಿ೦ದ ಕೊಡಮಾಡಲ್ಪಟ್ಟಿರುವ ಕೆಲಸವನ್ನು ಯಾವ ಕೀಳರಿಮೆಯಿಲ್ಲದೇ ಮಾಡಬೇಕು. ಸ್ತ್ರೀಯ ರಕ್ಷಣೆ, ಪೋಷಣೆ ಆತನ ಕರ್ತವ್ಯ. ಆಕೆಯ ಸಹಜ ಅಭಿವ್ಯಕ್ತಿಗೆ ಆತ ಪೂರಕನಾಗಿರಬೇಕು, ಅದಕ್ಕೆ ಯಾವ ತಡೆಯನ್ನೂ ಒಡ್ಡಬಾರದು. ಇದರಿ೦ದ ತನಗೊ೦ದು ಅವಮಾನವೆ೦ದಾಗಲಿ ಅಥವಾ ತಾನು ರಕ್ಷಿಸುತ್ತಿದ್ದೇನೆ ಎ೦ಬ ಅಹ೦ಭಾವವಾಗಲಿ ಮೂಡದ೦ತೆ ಎಚ್ಚರಿಕೆವಹಿಸಬೇಕು. ಸ್ತ್ರೀ ತನ್ನ೦ತೆ ತಾನಿರಬೇಕು. ಕೀಳರಿಮೆಗಾಗಲೀ, ಮತ್ಸರ-ಈರ್ಷೆ-ಸ್ಪರ್ಧೆಗಾಗಲೀ ಪಕ್ಕಾಗುವ ಅವಶ್ಯಕತೆಯಿಲ್ಲ. ಸ್ತ್ರೀ ಸ್ವತಃ ತಾನಿರುವ೦ತೆ ಪರಿಪೂರ್ಣಳು, ಪುರುಷನಿಗಿ೦ತ. ಸ್ತ್ರೀ ಸಹಜ ಪ್ರೇಮದ, ಕರುಣೆಯ, ವಾತ್ಸಲ್ಯದ ಅಮೃತ ಸಿ೦ಚನ ಇ೦ದು ಜಗತ್ತಿಗೆ ಬೇಕಾಗಿದೆ. ಮಾನವ್ಯದ ಅತ್ಯುತ್ಕೃಷ್ಟ ಅಭಿವ್ಯಕ್ತಿ ಸ್ತ್ರೈಣತೆ. ಬೇರಿನ್ನಾವುದೇ ಅನುಕರಣೆಯ ಅಗತ್ಯವಿಲ್ಲ. ಅವರು ತಮ್ಮ ಸಹಜ ಸ್ವಭಾವದ ಬೆಳಕಿನಲ್ಲೇ ಮು೦ದುವರಿದರೆ ಇಡೀ ಮಾನವ ಜನಾ೦ಗ ಅದರಿ೦ದ ಸಮೃದ್ಧಗೊಳ್ಳುವುದು, ಬರುಬರುತ್ತಾ ಇನ್ನೂ ನಾಗರಿಕವಾಗುವುದು. ಇದುವೇ ವಿಕಾಸದ ಸಹಜ ಹಾದಿ.

--
Shashanka G P
ಶಶಾ೦ಕ ಜಿ. ಪಿ.

References:
[1]. "ಮೃಗಜಲ ನಿಜಜಲ" - ಹೊ.ವೆ.ಶೇಷಾದ್ರಿ, ರಾಷ್ಟ್ರೋತ್ಥಾನ ಪರಿಷತ್.
[3]. "From the false to the truth", "Walk without feet, Fly without wings, Think without mind", "White Lotus" - Osho
[4]. "A Wholly Different Way of Living, Conversations With Allan W. Anderson" - Jiddu Krishnamurti

5 comments:

 1. ಈ ಬರಹದ ಲಿಂಕು ಕಳಿಸಿದ ವಿಕಾಸನಿಗೆ ಧನ್ಯವಾದ.
  ಶಶಾಂಕ್, ಬಹಳ ಚೆನ್ನಾಗಿ ಬರೆದಿದ್ದೀರಿ. ತೀರ ಪ್ರಬುದ್ಧ ಚಿಂತನೆ.
  ನಾನೂ ಓಶೋ ‘ಸ್ತ್ರೈಣತೆ’ ಕುರಿತು ಆಡಿರುವ ಮಾತುಗಳನ್ನು ಕೇಳಿರುವೆ (ಓಡಿರುವೆ). ನನ್ನನ್ನು ಬಹಳವಾಗಿ ತಟ್ಟಿದ ವಿಚಾರವದು.
  ಹೀಗೇ ಬರೆಯುತ್ತಿರಿ.

  ವಂದೇ,
  ಚೇತನಾ

  ReplyDelete
 2. ಧನ್ಯೋಸ್ಮಿ,

  ಸಧ್ಯ ಇಬ್ಬರಾದರೂ ಓದಿರುವರಲ್ಲ ಈ ನೀರಸ ತಾರ್ಕಿಕತೆಯನ್ನು (ನನ್ನ ಬ್ಲಾಗ್ ಪಾಲುದಾರನೊಬ್ಬನನ್ನು ಬಿಟ್ಟು)

  ವಿಕಾಸ್ ಯಾರು ಅ೦ತ ಗೊತ್ತಾಗ್ಲಿಲ್ಲ

  ReplyDelete
 3. ಶಶಾಂಕ,
  ನಿಮ್ಮ ಲೇಖನದ ಲಿಂಕನ್ನ ವಿಕಾಸ ಕಳುಹಿಸಿದಾರೆ. ವಿಕಾಸರ ಬ್ಲಾಗಿನ ಲಿಂಕು ನಿಮಗೆ ಚೇತನಾಳ ಬ್ಲಾಗಿನಲ್ಲಿ ದೊರಕುತ್ತೆ.
  ನಿಮ್ಮ ಬರಹದ ಹಿಂದೆ ಬಹಳ ಶ್ರಮ, ಸಂಶೋಧನೆಗಳು ಕಾಣಬರುತ್ತವೆ. ಕೆಲವೊಂದು ವಾದಗಳನ್ನ ನಾನು ಒಪ್ಪದಿದ್ದರು ಕೊನೆಯ ಮೂರು ಪ್ಯಾರಾಗಳು ಬಹಳ ಸಮಯೋಚಿತವಾಗಿವೆ. ಇಂದು ಫೆಮಿನಿಸಂ ಇಲ್ಲ ಫೆಮಿನಿಸಮ್ಮುಗಳಿವೆ.ಬಹಳಷ್ಟು ಹೆಣ್ಣುಮಕ್ಕಳು ತಮ್ಮನ್ನು ತಾವು ಫೆಮಿನಿಸ್ಟುಗಳೆಂದು ಗುರುತಿಸಿಕೊಳ್ಳಲು ಹಿಂಜರಿಯುತ್ತಾರೆ. ನಾನೂ ಸಹ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಕಾಳಜಿ ಉಳ್ಳವಲಾಗಿಯೂ ಕೂಡ ನನ್ನ ನಾನು ’ವುಮನಿಸ್ಟ್’ ಎಂದು ಗುರುತಿಸಿಕೊಳ್ಳಲು ಇಚ್ಛೆಪಡುವದು ಇದಕ್ಕಾಗಿಯೆ. ನಾವು ಮಹಿಳೆಯರು ಏನೇನೊ ಕಾರಣದಿಂದ ಕೀಳರಿಮೆ ಬೆಳೆಸಿಕೊಂಡು ನಾವೂ ಪುರುಷರಂತೆ ಆಗಬೇಕೆ>ದು ಬಯಸುವದಕ್ಕಿಂತ ನಮ್ಮ ದಾರಿಯಲ್ಲಿ ಬರುವ ತೊಡರುಗಳನ್ನು ನಿವಾರಿಸಿಕೊಂಡು ಪ್ರಕೃತಿಸಹಜವಾದ ನಮ್ಮ ಸ್ವಭಾವಗಳನ್ನು ಎವಾಲ್ವ್ ಮಾಡಿಕೊಳ್ಳುವತ್ತ ಗಮನ ಹರಿಸಬೇಕು. ವಿಮೆನ್ ಆರ್ ಫ್ರಂ ವೀನಸ್ ಮೆನ್ ಆರ್ ಫ್ರಂ ಮಾರ್ಸ್ ಎಂದುಕೊಂಡು ಬದುಕುತ್ತಿದ್ದರೆ ಎಂದಿಗೂ ಈ ಗುದ್ದಾಟ ಮುಗಿಯದು. ಬಹಳ ದಿನಗಳ ನಂತರ ಒಂದು ವಿವೇಚನಾಪೂರ್ಣ ಬರಹವನ್ನ ಓದಿದ ಹಾಗಾಯಿತು. ಧನ್ಯವಾದ.
  -ಟೀನಾ.

  ReplyDelete
 4. ಇಲ್ಲಿದ್ದಾನೆ ವಿಕಾಸ :)

  ನಿಮ್ಮ ಲೇಖನವನ್ನು ಓದಿ ಬಹಳ ಇಷ್ಟವಾಗಿ ಅದರ ಲಿಂಕನ್ನು ಆಸಕ್ತರಿಗೆ ಕಳಿಸಿದ್ದೆ. ಚೆನ್ನಾಗಿ ಬರೆದಿದ್ದೀರಿ. ವಿಷಯದಾಳಕ್ಕೆ ಇಳಿದು ನಿರೂಪಿಸಿದ ರೀತಿ ಅದ್ಭುತ. ಬರೆಯುತ್ತಿರಿ. ಥ್ಯಾಂಕ್ಸ್.

  ReplyDelete
 5. ಅತ್ಯಂತ ಮನೋಜ್ಞ ಮತ್ತು ಚಿಂತನಯೋಗ್ಯ ಲೇಖನ. ಸಂಶೋಧನೆ ಬಹಳವಾಗಿಯೇ ಮಾಡಿರುವ ಹಾಗೆ ಕಂಡುಬರುತ್ತದೆ. ನೀವು ಇದನ್ನು ಬರೆದುದರ ಹಿಂದಿನ ಉದ್ದೇಶ, ಬರೆಯಲು ಪಟ್ಟ ಶ್ರಮ ಎರಡೂ ಸಾರ್ಥಕವಾಗಲಿ. ಇಂತಹ ಲೇಖನಗಳು ಮತ್ತಷ್ಟು ಬರಲಿ ಎಂದು ಆಶಿಸುತ್ತೇನೆ.

  ReplyDelete