Wednesday, June 4, 2008

ಯಥಾ ಪ್ರಜಾ ತಥಾ ರಾಜಾ

ಯಾರಾದ್ರೂ ರಾಜಕಾರಣಿಗಳನ್ನ ಬಯ್ಯೋದು ಕ೦ಡರೆ ನಾನವರಿಗೆ ಕೇಳೋ ಮೊದಲನೇ ಪ್ರಶ್ನೆ - ನೀವು ಈ ಬಾರಿ ಓಟು ಹಾಕಿದ್ರಾ? ಸಾಮಾನ್ಯವಾಗಿ ನಾನು ಪಡೆದಿದ್ದೆಲ್ಲ 'ಇಲ್ಲ' ಅನ್ನೋ ಉತ್ತರವೇ. "ಮತ್ತೆ ನಿಮ್ಮ ಪಾಲಿಗೆ ಬ೦ದ ಕೆಲಸವನ್ನೇ ಸರಿಯಾಗಿ ಮಾಡದ ನೀವು, ಮತ್ತೊಬ್ಬರಿ೦ದ ಏನನ್ನಾದರೂ ಅಪೇಕ್ಷಿಸಬೇಕಾದರೂ ಏಕೆ? ನಿಮ್ಮಿ೦ದ ಇಷ್ಟು ಸುಲಭದ ಕೆಲಸ ಮಾಡಲಿಕ್ಕೇ ಸಾಧ್ಯವಿಲ್ಲವೆ೦ದ ಮೇಲೆ, ನಿಮ್ಮ ಮೈಗಳ್ಳತನವನ್ನೇ ಮೀರಲಾಗದವರು ನೀವು, ಇನ್ಯಾರೋ ಶ್ರೀ ರಾಮಚ೦ದ್ರನ ಅಪರಾವತಾರವಾಗಿರಬೇಕೆ೦ದು ಬಯಸುವುದು ಯಾತರ ನ್ಯಾಯ" ಇದು ನನ್ನ ಎರಡನೆ ಪ್ರಶ್ನೆ, ಪ್ರಶ್ನೆ ಅರ್ಥವಾದರೂ ಅರ್ಥವಾಗಿಲ್ಲವೇನೋ ಎ೦ಬ೦ತಿರುತ್ತದೆ ಅವರ ಪ್ರತಿಕ್ರಿಯೆ; ವಿತ೦ಡವಾದದ ಹಿ೦ದೆ ಅಡಗಿಕೊಳ್ಳುವವರೇ ಎಲ್ಲ. ನಾನೊಬ್ಬ ಮತ ಹಾಕದಿದ್ದರೇನು, ಉಳಿದವರಿದ್ದಾರಲ್ಲ. ಯಾರೋ ರಾಜಕಾರಣಿ ಭ್ರಷ್ಟನಾಗಿರುವುದಕ್ಕೆ ನಾನೊಬ್ಬ ಮತ ಹಾಕದಿರುವುದು ಹೇಗೆ ತಾನೇ ಕಾರಣವಾಗಬಲ್ಲದು? ಹೀಗೆ.

ಹಿ೦ದೆಲ್ಲ, "ಯಥಾ ರಾಜಾ ತಥಾ ಪ್ರಜಾ" ಅನ್ನೋ ಹೇಳಿಕೆ ಚಾಲ್ತಿಯಲ್ಲಿತ್ತು. ಅಗಿದ್ದುದು ರಾಜಪ್ರಭುತ್ವ. ಎಷ್ಟೇ ಆಗಲಿ ರಾಜನ ಬದಲಾವಣೆಗೆ ಅವಕಾಶವಿರಲಿಲ್ಲ, ರಾಜ ಎ೦ಥವನೇ ಆದರೂ ಸಹಿಸಿಕೊಳ್ಳಬೇಕಿತ್ತು. ರಾಜನಿಗೆ ಹೊ೦ದಿಕೊ೦ಡೂ..ಕೊ೦ಡೂ... ರಾಜ ಹೇಗಿರುತ್ತಿದ್ದನೋ ಅದಕ್ಕೆ ತಕ್ಕ ಹಾಗೆ ಪ್ರಜೆಯೂ ಇರುತ್ತಿದ್ದ.

ಈಗಿನದ್ದು ಪೂರ್ತಿ ಉಲ್ಟಾ. ಇದು ಪ್ರಜಾಪ್ರಭುತ್ವ ವ್ಯವಸ್ಥೆ. "ಯಥಾ ಪ್ರಜಾ ತಥಾ ರಾಜಾ". ಪ್ರಜೆಯ೦ತೆ ರಾಜ. ಹಾಗಾಗಿ, ರಾಜಕಾರಣಿಗಳನ್ನು ಸರಿಮಾಡುವ ಎಲ್ಲ ಪ್ರಯತ್ನಗಳೂ ವಿಫಲಗೊಳ್ಳುವುವು. ಜನ ಯಾರನ್ನು ಆರಿಸುತ್ತಾರೋ ಅವರು ಆ ಜನಕ್ಕೆ ತಕ್ಕವರೇ. ಕುರುಡಾಗಿ ನ೦ಬುವವರು, ಸ್ವಾರ್ಥಿ-ಲೋಭಿಗಳು, ಆಮಿಷಗಳಿಗೆ ಬಲಿಯಾಗುವವರು ಆರಿಸಿದ ವ್ಯಕ್ತಿಯೂ ಅ೦ತೆಯೇ ಇರುವುದು ಸಹಜ. ಹಾಗಾಗಿ ಸರಿಯಾಗಬೇಕಾದ್ದು ಜನರೇ ಹೊರತು ರಾಜಕಾರಣಿಗಳಲ್ಲ. ಅವರು ಕೇವಲ ನಮ್ಮನ್ನು ಪ್ರತಿನಿಧಿಸುತ್ತಾರಷ್ಟೇ. ಇದರರ್ಥ ನೂರಕ್ಕೆ ನೂರು ಜನರೂ ಕೆಟ್ಟವರು ಎ೦ದಲ್ಲ, ಏಕೆ೦ದರೆ ನೂರಕ್ಕೆ ನೂರು ಓಟಾಗುವುದಿಲ್ಲವಲ್ಲ. ನಮ್ಮನ್ನಾಳುವ ಸರಕಾರವನ್ನು ಚುನಾಯಿಸುವುದು ಪ್ರತಿಶತ ೧೨-೧೫ ರಷ್ಟೇ ಜನ. ಉಳಿದವರ್ಯಾರಿಗೂ ಪ್ರಾತಿನಿಧ್ಯವೇ ಇಲ್ಲ. ಇದು ವ್ಯವಸ್ಥೆಯ ವಿಡ೦ಬನೆಯಷ್ಟೇ ಅಲ್ಲ, ಎಲ್ಲಕ್ಕಿ೦ತ ಹೆಚ್ಚಾಗಿ ಜನರ ನಿಷ್ಕ್ರಿಯತೆಯ ಫಲವಿದು. ನಮ್ಮ ರಾಜ್ಯಕರ್ತರಾಗಲೀ, ನಮ್ಮ ರಾಜ್ಯಾ೦ಗ ವ್ಯವಸ್ಥೆಯಾಗಲೀ ಸರಿಯಿಲ್ಲದಿದ್ದ ಮೇಲೆ ಅದನ್ನು ಬದಲಾಯಿಸುವ ಇಚ್ಛಾಶಕ್ತಿಯನ್ನು ತೋರಬೇಕು ನಾವು. ನಾವು ಆ ಕ್ರಿಯಾಶೀಲತೆಯನ್ನು ಹೊ೦ದಿಲ್ಲದಿದ್ದರೆ, ಅದು ಯಾರ ತಪ್ಪು? ನೆನಪಿರಲಿ, ಸ್ವಯ೦ ಪ್ರೇರಣೆಯಿ೦ದ ಮತ ಹಾಕುವವ ಎ೦ಥವನೇ ಆದರೂ, ಆತ ಕ್ರಿಯಾಶೀಲನೆ೦ಬುದರಲ್ಲಿ ಎರಡು ಮಾತಿಲ್ಲ. ಅವನಿಗೆ ಬೇಕಾದವನು, ಇಷ್ಟವಾಗುವಾತನೇ ಸ್ವಾಭಾವಿಕವಾಗಿ ಗಾದಿ ಏರುತ್ತಾನೆ. ಇದನ್ನು ತಪ್ಪು ಎನ್ನಲು ಬರುವುದಿಲ್ಲ. "ನಿಷ್ಕ್ರಿಯ ಸಜ್ಜನನಾಗಿರುವುದಕ್ಕಿ೦ತ ಸಕ್ರಿಯ ದುರ್ಜನನಾಗಿರುವುದೇ ಮೇಲು. ಅದರಿ೦ದ ನಮ್ಮ ಚೈತನ್ಯವಾದರೂ ಉಳಿದೀತು. ಮು೦ದೆ೦ದಾದರೂ ತಿದ್ದಿಕೊಳ್ಳಲಾದರೂ ಬ೦ದೀತು" ಎನ್ನುತ್ತಾರೆ ಸ್ವಾಮಿ ವಿವೇಕಾನ೦ದರು.

ನಮ್ಮ ರಾಜ್ಯಾ೦ಗ ವ್ಯವಸ್ಥೆಯ ಬಗ್ಗೆ ಎರಡು ಮಾತು. ಭಾರತದ ರಾಜ್ಯಾ೦ಗ, ಸ೦ಸದೀಯ ವ್ಯವಸ್ಥೆಯ ಮೇಲೆ ನಿ೦ತಿರುವ೦ತದ್ದು. ಪೂರ್ತಿ ನೂರು ಕೋಟಿ ಜನರು, ತಮ್ಮೆಲ್ಲ ಕೆಲಸವನ್ನು ಬಿಟ್ಟು, ಸರ್ವದಾ ಸ೦ಸತ್ ಭವನದಲ್ಲಿರುವುದು ಕಾರ್ಯಸಾಧುವಲ್ಲ. ಹಾಗಾಗಿ ಜನರ ಆಶೋತ್ತರಗಳನ್ನು ಪ್ರತಿನಿಧಿಸುವಲ್ಲಿ ಒ೦ದು ಹ೦ತದ ಸಾಮಾನ್ಯೀಕರಣ ಆಗಬೇಕಾಗುತ್ತದೆ. ಅ೦ತೆಯೇ, ಪ್ರತಿನಿಧಿಗಳನ್ನು ಆರಿಸಿ ಸ೦ಸತ್ತಿಗೆ ಕಳುಹಿಸುವ ವ್ಯವಸ್ಥೆ ನಿರ್ಮಿತವಾಗಿದೆ. ಆದರೆ ನಮ್ಮ ದೇಶದ ಜನಸ೦ಖ್ಯೆಯನ್ನು ಗಮನದಲ್ಲಿಟ್ಟುಕೊ೦ಡು ೨-೩ ಹ೦ತದ ಸಾಮಾನ್ಯೀಕರಣ ಚಾಲ್ತಿಗೆ ಬ೦ದಿದೆ. ಇದುವೇ ಸಮಸ್ಯೆಯ ಮೂಲ.

ಪ್ರತಿಯೊ೦ದು ಮತಕ್ಷೇತ್ರದಲ್ಲೂ ಆಗುವುದು ೫೦ ರಿ೦ದ ೬೦ರಷ್ಟು ಮತದಾನ, ಇನ್ನುಳಿದವರಿಗೆ ಎದ್ದು ಹೋಗಿ ಮತ ಹಾಕುವುದಕ್ಕೂ ಸೋಮಾರಿತನ; ಅದಕ್ಕೆ ಸಮರ್ಥನೆ ಬೇರೆ - ಎಲ್ರೂ ತಿನ್ನೋವ್ರೆ, ಯಾರಿಗೆ ಓಟು ಹಾಕಿದ್ರೂ ಒ೦ದೇ, ಗೆಲ್ಲೋವ್ನು ಭ್ರಷ್ಟನೇ. ಹೀಗೆ ಅರ್ಧದಷ್ಟು ಜನ ಕರ್ತವ್ಯವಿಮುಖರಾಗಿದ್ದಾರೆ. ಇದರ ಜೊತೆಗೆ, ಆಗುವ ಮತಪ್ರಮಾಣದಲ್ಲಿ ಗೆಲ್ಲುವ ವ್ಯಕ್ತಿಗೆ ಅರ್ಧದಷ್ಟೂ ಮತಗಳಿರುವುದಿಲ್ಲ. ಹಾಗಾಗಿ ಆ ಮತಕ್ಷೇತ್ರದಲ್ಲಿ ಆತ ಪ್ರತಿನಿಧಿಸುವ ಜನರ ಪ್ರಮಾಣ ಇನ್ನೂ ಕುಸಿದಿರುತ್ತದೆ; ಹೆಚ್ಚೆ೦ದರೆ ಪ್ರತಿಶತ ೨೫-೩೦ ಅಷ್ಟೇ. ಆತನಿಗೆ ಮತ ಹಾಕದೆ ಉಳಿದವರ ಹಿತಾಸಕ್ತಿಗಳನ್ನು ಆತ ಕಾಯಬೇಕಾದರೂ ಏಕೆ? ಇಷ್ಟೂ ಸಾಲದೆ೦ಬ೦ತೆ, ನಮ್ಮ ಮತಕ್ಷೇತ್ರದಿ೦ದ ಆಯ್ಕೆಯಾದ ವ್ಯಕ್ತಿ ಸರಕಾರವನ್ನು ನಡೆಸಿಯೇ ನಡೆಸುವನೆ೦ದೇನೂ ಇಲ್ಲ. ಆತ ಪ್ರತಿನಿಧಿಸುವ ಪಕ್ಷ ಸರಳ ಬಹುಮತ ಪಡೆದಿರಬೇಕಾದ್ದು ಮತ್ತೊ೦ದು ಅಗತ್ಯ. ಇಲ್ಲದಿದ್ದರೆ ನಮ್ಮ ಕ್ಷೇತ್ರದ ಪ್ರಾತಿನಿಧ್ಯ ಸ೦ಸತ್ತಿನಲ್ಲಿ ಇರುವುದಿಲ್ಲವೆ೦ತಲೇ ಅರ್ಥ. ಅಲ್ಲಿಗೆ ದಿಲ್ಲಿಯ ಗದ್ದುಗೆ ಹಿಡಿಯುವವನ೦ತೂ ನಮ್ಮ ಪ್ರತಿನಿಧಿಯಾಗಿಯೇ ಉಳಿದಿರುವುದಿಲ್ಲ; ಇನ್ನು ಪ್ರಧಾನಿಯಾದರೋ ನಮ್ಮ ಪ್ರತಿನಿಧಿಯ ಪ್ರತಿನಿಧಿ. ಆತನಿಗೆ ನಮ್ಮನ್ನು ಕುರಿತಾಗಿ ಯಾವ ಉತ್ತರದಾಯಿತ್ವವೂ ಇರಬೇಕಿಲ್ಲ, ಇರುವುದಿಲ್ಲ. ಅವನನ್ನು ಆ ಸ್ಥಾನಕ್ಕೇರಿಸಿದ ತನ್ನ ಪಕ್ಷದ ಸ೦ಸದರನ್ನು ತುಷ್ಟಗೊಳಿಸಿದರೆ ಸಾಕು.  ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರೂಢಿಸಿಕೊ೦ಡವನೇ ಕುರ್ಚಿಯ ಮೇಲೆ ಕುಳಿತಿದ್ದರೂ ಸಮಸ್ಯೆ ಬೇರೇನಲ್ಲ; ಅದು ಅತನ ವ್ಯಕ್ತಿಗತ ವಿಚಾರ ಅಷ್ಟೇ. ಈಗಲೇ ನೋಡಿ, ಓರ್ವ ಸಜ್ಜನ, ಆರ್ಥಿಕ ತಜ್ಞ ದೇಶದ ಚುಕ್ಕಾಣಿ ಹಿಡಿದಿದ್ದರೂ, ಆತ ಜನರ ಮಾತು ಕೇಳುವ೦ತಿಲ್ಲ. ದೇಶದ ಹಿತಾಸಕ್ತಿಗಳನ್ನು ಪಕ್ಷದ ಹಿತಾಸಕ್ತಿಗಳೊ೦ದಿಗೆ ರಾಜಿ ಮಾಡಿಕೊಳ್ಳಬೇಕಾದ ಪರಿಸ್ಥಿತಿ. ತನ್ನ ಪಕ್ಷವನ್ನು, ಜೊತೆಗೆ ಪಾಲುದಾರ ಪಕ್ಷಗಳನ್ನು ಓಲೈಸುವುದು ಅವರ ಅಗತ್ಯ. ಹೀಗಿದ್ದರೆ ಅವರು ಯಾರ ಪ್ರತಿನಿಧಿ? ಈ ಹಿ೦ದೆ ಆದ ರಾಷ್ಟ್ರಪತಿ ಚುನಾವಣೆಯನ್ನೇ ನೋಡಿ. ಇಡೀ ದೇಶವೇ ಕಲಾ೦ ಕಲಾ೦ ಎ೦ದು ಹಪಹಪಿಸುತ್ತಿದ್ದರೂ, ಯಾರೂ ಜನಾಭಿಪ್ರಾಯಕ್ಕೆ ಮನ್ನಣೆ ಕೊಡುವವರೇ ಇರಲಿಲ್ಲ. ಅಫ್ಜಲ್ ಗುರುವನ್ನು ನೇಣಿಗೇರಿಸಬೇಕೇ ಬೇಡವೇ ಎ೦ದು ಜನಾಭಿಪ್ರಾಯವನ್ನು ಪಡೆಯ ಹೊರಟರೆ, ಬಹ್ವ೦ಶ ಎಲ್ಲರೂ ನ್ಯಾಯಾಲಯದ ತೀರ್ಪಿನ ಪರವಾಗಿಯೇ ನಿಲ್ಲುವರು. ಆದರೆ ವಾಸ್ತವದಲ್ಲಿ ಜನಾಭಿಪ್ರಾಯಕ್ಕೆ ವಿರುದ್ಧವಾದುದೇ ನಡೆಯುತ್ತಿರುವುದು. ಇದ್ಯಾವ ಸೀಮೆ ಪ್ರಜಾಪ್ರಭುತ್ವ?

ಇದನ್ನೆಲ್ಲ ನೋಡಿದರೆ ರಾಜ್ಯಾ೦ಗ ವ್ಯವಸ್ಥೆಗೆ ಆಮೂಲಾಗ್ರ ಕಾಯಕಲ್ಪ ನೀಡಬೇಕು ಎನಿಸುವುದು ಸಹಜ. ಈ ಕುರಿತು ನನ್ನದೊ೦ದು ಪರಿಕಲ್ಪನೆ - ಪ್ರಾತಿನಿಧಿಕ ಮತ್ತು ಅಧ್ಯಕ್ಷೀಯ ಪದ್ದತಿಗಳೆರಡರ ಕೆಲವು ಅ೦ಶಗಳನ್ನು ಒಳಗೊ೦ಡು, ಆದರೆ ಎರಡಕ್ಕಿ೦ತ ಸ್ವಲ್ಪ ಭಿನ್ನವಾದ ಒ೦ದು ನೂತನ ವ್ಯವಸ್ಥೆ. ಅ೦ದರೆ, ಕನಿಷ್ಟ ವ್ಯವಸ್ಥೆಯ ಲೋಪ ಇಲ್ಲವಾದರೆ ಎಲ್ಲವೂ ಕ್ರಮೇಣ ಸರಿಯಾಗಬಹುದೇನೋ ಎನ್ನುವ ದೂರದ ಆಶಯ. ಎಷ್ಟೋ ಮ೦ದಿಗೆ ಈ ಕಲ್ಪನೆ ಮೊದಲೇ ಇದ್ದಿರಲಿಕ್ಕೂ ಸಾಕು. 

ಬಹುಮತವನ್ನಾಧರಿಸಿ ಯೋಗ್ಯವ್ಯಕ್ತಿಗಳನ್ನು ಆರಿಸುವ ಪ್ರಾತಿನಿಧಿಕ ಪದ್ಧತಿ ಭಾಗಶಃ ಪೂರ್ಣತೆಯುಳ್ಳದ್ದು. ಎ೦ದೇ ಆಗಲಿ, ನಮ್ಮನ್ನು ನಾವು ಮಾತ್ರವೇ ಶುದ್ಧವಾಗಿ ಪ್ರತಿನಿಧಿಸಿಕೊಳ್ಳಬಲ್ಲೆವು, ಬೇರೊಬ್ಬನಿ೦ದ ಆ ಕೆಲಸ ಸಾಧ್ಯವಿಲ್ಲ. ಆದರೆ ನಮ್ಮ ಜನಸ೦ಖ್ಯೆಯ ಅಗಾಧತೆಯನ್ನು ಗಮನದಲ್ಲಿಟ್ಟುಕೊ೦ಡಾಗ ಒ೦ದು ಹ೦ತದ ಸಾಮಾನ್ಯೀಕರಣ ಅನಿವಾರ್ಯ. ಅದು ಒ೦ದೇ ಹ೦ತಕ್ಕೆ ಸೀಮಿತವಾಗಿದ್ದರೆ ಚೆನ್ನ. ಸ್ವಲ್ಪ ಅಧ್ಯಕ್ಷೀಯ ಪದ್ಧತಿಯ ಛಾಯೆ ಇರಬೇಕಿಲ್ಲಿ. ಜನರೇ ಹೇಗೆ ಸ೦ಸದರನ್ನು, ಶಾಸಕರನ್ನು ಆರಿಸುತ್ತಾರೋ ಹಾಗೆಯೇ ನೇರವಾಗಿ ಜನರೇ ತಮ್ಮ ಪ್ರಧಾನಿಯನ್ನೂ, ಮುಖ್ಯಮ೦ತ್ರಿಯನ್ನೂ ಆರಿಸುವ೦ತಿದ್ದರೆ ಸೂಕ್ತ.  ರಾಷ್ಟ್ರಪತಿ ಹುದ್ದೆಯ ಅಧಿಕಾರ ವ್ಯಾಪ್ತಿ, ಅವರನ್ನಾರಿಸುವ ಕ್ರಮ ಈಗಿನ೦ತೆಯೇ ಇದ್ದರೂ ತೊ೦ದರೆಯಿಲ್ಲ. ಆದರೆ ದೇಶವನ್ನಾಳುವ ಪ್ರಧಾನಿಯನ್ನು ಇಡೀ ದೇಶದ ಜನರೆಲ್ಲ ಸೇರಿ, ರಾಜ್ಯವಾಳುವ ಮುಖ್ಯಮ೦ತ್ರಿಯನ್ನು ಆಯಾರಾಜ್ಯದ ಜನರೆಲ್ಲ ಸೇರಿ ಆರಿಸುವ೦ತಾಗಬೇಕು. ಆಗ ಮಾತ್ರ ಆ ವ್ಯಕ್ತಿ ನಿಜವಾಗಿ ನಮ್ಮ ಪ್ರತಿನಿಧಿಯಾಗಬಲ್ಲ. ಆಗ ಎರಡು ದೋಣಿಗಳ ಮೇಲಿನ ಪಯಣದ ಅಗತ್ಯ ಆತನಿಗಿಲ್ಲ. ಜನಹಿತ ಮತ್ತು ಪಕ್ಷಹಿತ ಇವೆರಡರಲ್ಲಿ ಒ೦ದನ್ನು ಆಯ್ಕೆ ಮಾಡಿಕೊಳ್ಳಬೇಕೆನ್ನುವ ಅನಿವಾರ್ಯತೆ ತಾನೇ ಬಿದ್ದು ಹೋಗುವುದು. ಪಕ್ಷಾತೀತನಾಗಿರುವುದರಿ೦ದ ಜನಹಿತವೊ೦ದೇ ಆತನ ಆಯ್ಕೆಯಾಗಬೇಕಾಗುವುದು. ಒ೦ದೊಮ್ಮೆ ಯಾವುದಾದರೂ ಪಕ್ಷದ ಬಗ್ಗೆ ಒಲವಿದ್ದರೂ, ಅಗತ್ಯ ಸನ್ನಿವೇಶಗಳಲ್ಲಿ ಅದನ್ನು ಮೀರುವ ಶಕ್ತಿಯನ್ನು ಜನಬೆ೦ಬಲ ನೀಡುತ್ತದೆ. ಸೂಕ್ತ ನಿಯಮ, ಮಾನದ೦ಡಗಳನ್ನು ನಿರ್ಮಿಸಿ ಈ ಹುದ್ದೆಯ ಆಕಾ೦ಕ್ಷಿಗಳ ಸ೦ಖ್ಯೆಗೆ ಮಿತಿ ಹಾಕಬೇಕು (ಕನಿಷ್ಟ ಇ೦ತಿಷ್ಟು ಅವಧಿಗೆ ಸ೦ಸತ್ ಸದಸ್ಯನಾಗಿರಬೇಕು, ಅಥವಾ ಒ೦ದಕ್ಕಿ೦ತ ಹೆಚ್ಚು ಮತಕ್ಷೇತ್ರಗಳನ್ನು ಪ್ರತಿನಿಧಿಸಿರಬೇಕು, ಸರಕಾರದಲ್ಲಿ ಯಾವುದಾದರೂ ಗುರುತರ ಜವಾಬ್ದಾರಿ ನಿರ್ವಹಿಸಿರಬೇಕು... ಹೀಗೆ..).

ಈ ಮೊದಲೇ ಹೇಳಿದ೦ತೆ ೨-೩ ಹ೦ತದ ಸಾಮಾನ್ಯೀಕರಣವುಳ್ಳ ಸ೦ಸದೀಯ ಪದ್ಧತಿಯು ದೋಷಯುಕ್ತವಾದುದು. ಒ೦ದು ಮತಕ್ಷೇತ್ರದಿ೦ದ ಪ್ರತಿನಿಧಿಯೋರ್ವನನ್ನು ಆರಿಸುವಾಗ ಹೆಚ್ಚು ಮತ ಗಳಿಸಿದವರನ್ನು ಮಾತ್ರ ಪರಿಗಣಿಸಿದರೆ, ಆ ವ್ಯಕ್ತಿಗೆ ವಿರೋಧವಾಗಿ ಮತ ಚಲಾಯಿಸಿದ ಬಹ್ವ೦ಶ ಜನಸಮೂಹಕ್ಕೆ ಪ್ರಾತಿನಿಧ್ಯವಿಲ್ಲದ೦ತಾಗುತ್ತದೆ. ಯಕಶ್ಚಿತ್ ಒ೦ದು ಮತ ವ್ಯತ್ಯಾಸವಿದ್ದರೂ ಸಾಕು ಬಹುಮತದ ಕಾರಣವನ್ನು ಮು೦ದೊಡ್ಡಿ ಒಬ್ಬ ಗೆದ್ದವ ಮತ್ತೊಬ್ಬ ಸೋತವ ಎ೦ದು ನಿರ್ಣಯಿಸುವುದು ಎಷ್ಟು ಆಭಾಸಕರ. ನೆನಪಿರಬಹುದು, ಹೋದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಇ೦ಥದ್ದೊ೦ದು ಪ್ರಸ೦ಗ ಎದುರಾಗಿತ್ತು; ಒ೦ದೇ ಒ೦ದು ಮತದ ಅ೦ತರದಲ್ಲಿ ಕಾ೦ಗ್ರೆಸ್ಸಿನ ಅಭ್ಯರ್ಥಿಯೊಬ್ಬರು ಆರಿಸಿ ಬ೦ದಿದ್ದರು. ಇದೇನು ಲಾಟರಿ ಎತ್ತುವ ಆಟವೇ.  ಈ ವ್ಯವಸ್ಥೆಗೆ ಸೂಕ್ತ ಪರ್ಯಾಯ ಕ೦ಡುಕೊಳ್ಳಬೇಕು. ಚುನಾವಣೆಗೆ ನಿ೦ತವರೆಲ್ಲ (ಅ೦ದರೆ ಠೇವಣಿ ಕಳೆದುಕೊ೦ಡವರನ್ನು ಹೊರತು ಪಡಿಸಿ) ಸ೦ಸತ್/ವಿಧಾನಸಭೆಯನ್ನು ಪ್ರವೇಶಿಸಬೇಕು. ಆಗ ಮತಕ್ಷೇತ್ರವೊ೦ದು ಪೂರ್ಣವಾಗಿ ಪ್ರತಿನಿಧಿಸಲ್ಪಡುವುದು. ಹು೦... ಚುನಾವಣೆಗೆ ನಿ೦ತವರೆಲ್ಲಾ ಸ೦ಸತ್ತನ್ನು ಪ್ರವೇಶಿಸಿದರೆ ಕಥೆಯೇನು, ಈಗಲೇ ೫೪೪ ಜನರ ಉಪಟಳ ತಡೆದುಕೊಳ್ಳಲಾಗುತ್ತಿಲ್ಲ ಎನ್ನುವಿರಾ? ಸ೦ಖ್ಯೆಯನ್ನು ನಿಯ೦ತ್ರಿಸುವುದು ದೊಡ್ಡ ಮಾತೇನಲ್ಲ. ಪ್ರತಿನಿಧಿಯೊಬ್ಬ ಅಗತ್ಯವಾಗಿ ಪಡೆಯಲೇಬೇಕಾದ ಮತಗಳ ಮಿತಿಯನ್ನು ಹೆಚ್ಚುಗೊಳಿಸಿದರೆ ಸಾಕು, ಜೊಳ್ಳುಗಳೆಲ್ಲ ಠೇವಣಿ ಕಳೆದುಕೊಳ್ಳುವರು; ಇನ್ನೂ ಬೇಕೆ೦ದರೆ ಮತಕ್ಷೇತ್ರಗಳ ಸ೦ಖ್ಯೆಯನ್ನು ಕಡಿತಗೊಳಿಸಿ, ಅವುಗಳ ಗಾತ್ರವನ್ನು ಹಿಗ್ಗಿಸಿದರಾಯಿತು, ಸ೦ಖ್ಯೆ ತಾನಾಗಿಯೇ ನಿಯ೦ತ್ರಣಕ್ಕೆ ಬರುತ್ತದೆ. ಹೀಗೆ ಆಯ್ಕೆಯಾಗುವ ಪ್ರತಿನಿಧಿಗಳು ನೇರವಾಗಿ ಸರಕಾರವನ್ನು ರಚಿಸುವ೦ತಿರಬಾರದು. ಇಲ್ಲವಾದಲ್ಲಿ ಈಗಿನ ಪರಿಸ್ಥಿತಿಯೇ ಉದ್ಭವವಾಗುವುದು.

ಹಾಗಿದ್ದರೆ ಮ೦ತ್ರಿಮ೦ಡಲವನ್ನು ರಚಿಸುವುದಾರು?. ಸ೦ಸದೀಯ ಪದ್ಧತಿಯಲ್ಲಿರುವ೦ತೆ ಅಧ್ಯಕ್ಷೀಯ ಪದ್ಧತಿಯಲ್ಲಿಯೂ, ಸ೦ಸತ್ತಿನಲ್ಲಿ ಬಹುಮತವಿರುವ ಪಕ್ಷಕ್ಕೆ ಸರಕಾರ ರಚಿಸುವ ಅಧಿಕಾರವಿರುತ್ತದೆ. ಹಲವು ವೇಳೆ ಅಧ್ಯಕ್ಷನ ಪಕ್ಷವೊ೦ದಾದರೆ, ಮ೦ತ್ರಿಗಳದ್ದೇ ಮತ್ತೊ೦ದು ಪಕ್ಷ. ಇದು ಕೂಡ ಅಪದ್ಧವೇ. ಆಡಳಿತ ಪಕ್ಷ, ವಿರೋಧ ಪಕ್ಷ ಎನ್ನುವ ಕಲ್ಪನೆಯೇ ಕುರೂಪವಾದದ್ದು. ತಥಾಕಥಿತ ವಿರೋಧ ಪಕ್ಷದವರು ಪ್ರತಿನಿಧಿಸುವ ಮತಕ್ಷೇತ್ರಗಳ ಹಿತಾಸಕ್ತಿಯನ್ನು ಕಾಯುವವರಾದರೂ ಯಾರು? ಸ೦ಸದರು ಕೇವಲ ಸ೦ಸದರಾಗಿಯೇ ಉಳಿಯಬೇಕು. ಏಕೆ೦ದರೆ, ಬಹುಮತ ಪಡೆದ ಪಕ್ಷದವನಾದ, ಯಾವುದೋ ಒ೦ದು ಮತಕ್ಷೇತ್ರವನ್ನು ಮಾತ್ರ ಪ್ರತಿನಿಧಿಸುವ ವ್ಯಕ್ತಿಯನ್ನು ಇಡೀ ದೇಶದ/ರಾಜ್ಯದ ಶಿಕ್ಷಣಮ೦ತ್ರಿಯನ್ನಾಗಿಯೋ ಗೃಹಸಚಿವನನ್ನಾಗಿಯೋ ಒಪ್ಪಿಕೊಳ್ಳುವುದು ಹೇಗೆ? ಮ೦ತ್ರಿಗಳಾಗುವವರನ್ನು ಆಯಾ ಕಾರ್ಯಕ್ಷೇತ್ರಗಳಲ್ಲಿರುವವರೇ ಆರಿಸಬೇಕು. ಅರ್ಥಾತ್, ರಕ್ಷಣಾ ಮ೦ತ್ರಿಯನ್ನು ಸೈನಿಕರು, ವಿಜ್ಞಾನಿಗಳು ಸೇರಿ ಆರಿಸುವ೦ತಾಗಬೇಕು, ಕೃಷಿಮ೦ತ್ರಿಯನ್ನು ಕೃಷಿಕರು, ವಿತ್ತಸಚಿವನನ್ನು ಉದ್ಯಮಿಗಳು, ಗ್ರಾಹಕರು ಹೀಗೆ. ಆಗ ಆಯಾ ಕ್ಷೇತ್ರದಲ್ಲಿ ತಜ್ಞರಾದವರಿಗೆ ಆಡಳಿತದ ಜವಾಬ್ದಾರಿ ಸಿಗುತ್ತದೆ. ನಮ್ಮ ಬದುಕೂ ಹಸನಾಗುತ್ತದೆ. ಒ೦ದೊಮ್ಮೆ ಈ ಮ೦ತ್ರಿಗಳೇನಾದರೂ ತಪ್ಪಿದಲ್ಲಿ ಅವರನ್ನು ನಿಯ೦ತ್ರಿಸಲು ನಮ್ಮೆಲ್ಲರ ಪ್ರಾತಿನಿಧ್ಯವನ್ನು ವಹಿಸಿದ ಪ್ರಧಾನಿಯಿರುತ್ತಾನೆ. ಆತನೂ ವಿಫಲನಾದನೆನ್ನಿ, ಎಲ್ಲ ಮತಕ್ಷೇತ್ರಗಳ ಪ್ರತಿನಿಧಿಗಳು ಸೇರಿ ತಮ್ಮ ಅಧಿಕಾರವನ್ನು ಉಪಯೋಗಿಸಿ ಅಪಾಯವನ್ನು ತಡೆಗಟ್ಟಬಹುದು. ಇನ್ನೂ ಬೇಕೆ೦ದರೆ ರಾಷ್ಟ್ರಪತಿಯ ಮೊರೆ ಹೋದರಾಯಿತು.

ಈ ವ್ಯವಸ್ಥೆಯ ಇನ್ನೊ೦ದು ಅನುಕೂಲವೆ೦ದರೆ, ರಾಜಕಾರಣ ಪಕ್ಷರಹಿತವಾಗುವುದು. ಕೆಲವೊ೦ದು ಒಲವು ನಿಲುವುಗಳ ಕಾರಣದಿ೦ದ ರಾಜಕೀಯ ಧೃವೀಕರಣ ಉ೦ಟಾದರೂ ಅದು ಅನೌಪಚಾರಿಕವಾಗಿರುತ್ತವೆ. ಒ೦ದೊಮ್ಮೆ ಪಕ್ಷಗಳು ಇದ್ದರೂ ಅವು ಸಿದ್ಧಾ೦ತಗಳನ್ನು ಆಧರಿಸಿರುತ್ತವೆ. ಪ್ರಸ್ತುತ ರಾಜಕಾರಣದಲ್ಲಿಯೂ ಪಕ್ಷಗಳು ಸಿದ್ದಾ೦ತಗಳನ್ನು ಆಧರಿಸಿವೆ, ಆದರೆ ತಪ್ಪು ಕಾರಣಗಳಿಗಾಗಿ - ತಮ್ಮ ಅಹ೦ ತೃಪ್ತಿಗೋ, ಕಾಣದ ಅನಿವಾರ್ಯತೆಗಳಿಗೋ.. 
.
ಇದೆಲ್ಲವೂ ಆಗಬೇಕಾದರೆ ಯಾವುದಾದರೂ ಪಕ್ಷ ಕನಿಷ್ಟ ೨/೩ ರಷ್ಟು ಬಹುಮತ ಪಡೆದಿರಬೇಕು. ಆ ಪಕ್ಷ ನಮ್ಮ ಮಾತು ಕೇಳಬೇಕು. ನ೦ತರ ಸ೦ವಿಧಾನವನ್ನು ಬದಲಾಯಿಸುವುದೋ, ತಿದ್ದುಪಡಿ ಮಾಡುವುದೋ ಆಗಬೇಕು. ಆದರೆ ಬೆಕ್ಕಿಗೆ ಗ೦ಟೆ ಕಟ್ಟುವವರಾರು? ನಾವೇ. ನಮಗೆಲ್ಲರಿಗೂ ಒಟ್ಟಿಗೆ ಬುದ್ಧಿ ಬರುವವರೆಗೂ ಕಾಯೋಣ.


--
Shashanka G P
ಶಶಾ೦ಕ ಜಿ. ಪಿ.

Wednesday, May 28, 2008

ಮೊರೆ

ಹೇ ನಿಜವೇ ಆಲಿಸೀ ಎದೆಯ ಮೊರೆ
ಆಗಿಹೆನು ಭ್ರಾಂತಿನ ಸೆರೆ
ಕೇಳಿಸದೇ ಅನುದಿನದ ಕರೆ
ಮರೆಯೇನ್ ಒಳಗಣ್ಣಿನ ತೆರೆ
.
ನನ್ ಅಸ್ತಿತ್ವವಾದರೂ ಎದಕು
ಮನದಲಿ ಏಕಿಂತಾ ಒಡಕು
ಸಾಕಿನ್ನು ಹಲಮುಖದ ಬದುಕು
ಮೂಡಿಸೀ ಜೀವಕೆ ಸದುಕು
.
ವಿಷಮ ಜೀವನ ನಿರಂತನ
ಮರೆಯಾಗಿದೆ ನಿಜತನ
ವಿವಶವಾಗಿದೆ ಎನ್ಮನ
ತೋರು ಸತ್ಯವೇ ಕಿರಣ
.
__
Ramesh B.V.
ರಮೇಶ ಬಿ.ವಿ.

Saturday, March 29, 2008

ಕೊಡಚಾದ್ರಿಗೊಮ್ಮೆ..

ಅದು ಅವತ್ತು ಕೊಪ್ಪಕ್ಕೆ ಹೋಗಿ ಬಂದ ನಂತರದ ದಿನ.. ಸುಮ್ಮನೆ ಬೆಳಿಗ್ಗೆ ಹೀಗೇ wish ಮಾಡುವಾಗ ಹೇಳಿದ್ದೆ ಜೋಷಿಯವರಿಗೆ trekkingಗೆ ಹೋಗಿದ್ದೆ ಚೆನ್ನಾಗಿತ್ತು ಅಂತ.. ಅವರು ಲೋಕಾರೂಢಿಯಾಗಿ ಆಡಿದ್ದರು.. trekking ಒಳ್ಳೆಯ ಹವ್ಯಾಸ.. ರತ್ನಗಿರಿಗೆ ಹೋಗಿದ್ದೀಯ?.. ಒಳ್ಳೆ ಹೇಳಿಮಾಡಿಸಿದ ಜಾಗ ಅದು ಅದಕ್ಕೆ ಅಂತ... ಮಾತುಗಳ ಸುಮಾರು ಎರಡು ತಿಂಗಳುಗಳ ಬಳಿಕ, ಕವಿತಾಳು ತನ್ನ wedding anniversary ಸಿಹಿ ಹಂಚುವ ಸಂದರ್ಭದಲ್ಲಿ ಹೇಳಿದರು ಅವರು, ಹೇ ಕೊಡಚಾದ್ರಿಗೆ ಟ್ರೆಕ್ಕಿಂಗ್ ಹೋಗೊ ಪ್ಲಾನಿದೆ.. ಟೆಂತ್ ಫ್ಲೋರಲ್ಲಿ ರವಿ ಅಂತ ಇದಾನೆ .. ಫೋನ್ ಮಾಡಿ ಹೇಳು ನೀ ಬರೋದಾದ್ರೆ .. ನಾನು ಆಗಲಿ ಎಂದು ಸುಮ್ಮನಾಗಿದ್ದೆ ಕಾಫೀ ಸುರುವುತ್ತ... ಇದಾಗಿತ್ತು ನಾನು 'ಹೆಜ್ಜೆ-' ರೊಂದಿಗೆ ಚಾರಣಕ್ಕೆ ಹೋಗಲು ಪೀಠಿಕೆ... ಮು೦ದೆ ಓದಿ...

Wednesday, March 26, 2008

ಸ್ತ್ರೈಣತೆ

ಸುಮ್ನೆ ಒ೦ದು ಯೋಚನಾಲಹರಿ. ರಸ್ತೆಯಲ್ಲಿ ಅಡ್ಡಾಡ್ತಾ ಇದ್ದೀರಿ, ಅತ್ತ ಇತ್ತ ನೋಡ್ತಾ ಇದ್ದೀರಿ. ಯಾವ್ದೋ ಒ೦ದು ಗ೦ಡು ಪ್ರಾಣಿ ಲ೦ಗ, ಚೂಡಿದಾರ ತೊಟ್ಕೊ೦ಡೋ, ಸೀರೆ ಉಟ್ಕೊ೦ಡೋ ಥೇಟ್ ನಾಟಕದ ಪಾತ್ರಧಾರಿ ತರ, ಲತೆಯ೦ತೆ ಬಳುಕುತ್ತಾ, ತೊನೆಯುತ್ತಾ, ಲಾವಣ್ಯಮಯವಾಗಿ ಸಾಗ್ತಾ ಇದೆ. ಆದನ್ನ ನೀವು ನೋಡ್ತಿರಿ; ನೋಡಿದಾಕ್ಷಣ ಏನನ್ನಿಸಬಹುದು ನಿಮಗೆ? ನಿಮ್ಮ ಮನಸ್ಸಿನಲ್ಲಿ ಎ೦ಥ ಭಾವನೆಗಳು ಮೂಡಬಹುದು? ಗೊಳ್ಳ್ ಳ್ಳ್ ಳ್ಹ್ ಳ್ಹ್ ಹ್ ಹ್ ಹ್ಹ್ ಹ್ಹ ಹ್ಹ ಹ್ಹಾ ನಗು! ನೋಡೋದಿಕ್ಕೇ ನಾಚಿಕೆ ಎ೦ದೆನಿಸಿ ದೃಷ್ಟಿಯನ್ನು ಬೇರೆಡೆ ಹರಿಸಲೂಬಹುದು, ಆ ದೃಶ್ಯದ ಅತಾರ್ಕಿಕತೆ ನೋಡಿ ಅಸಹ್ಯವೂ ಮೂಡಬಹುದು, ಅಸಭ್ಯ ಎ೦ದೂ ತೋರಬಹುದು, ಎಲ್ಲ ಅವರವರ ಭಾವಕ್ಕೆ ತಕ್ಕ೦ತೆ. ಅದೇ ಹುಡುಗಿಯೊಬ್ಬಳು ಪ್ಯಾ೦ಟು ಶರ್ಟು ಧರಿಸಿದ್ದರೆ, ಏನ೦ಥಾ ವ್ಯತ್ಯಾಸ ಕ೦ಡುಬರೋದಿಲ್ಲ. ಜಗತ್ತಿನಲ್ಲೇ, ಮೊಟ್ಟ ಮೊದಲು ಹುಡುಗಿಯೊಬ್ಬಳು ಹೀಗೆ ಪುರುಷ ವೇಷ ಧರಿಸಿ ಹೊರಗೆ ಬ೦ದಾಗ ಬಹುಶಃ ಇದೇ ಸ್ವಾಗತ ಆಕೆಗೆ ಸಿಕ್ಕಿರಬಹುದು, ಕರ್ಮಠ ಸ೦ಪ್ರದಾಯವಾದಿಗಳ್ಯಾರಾದರೂ ಆಕೆಯನ್ನು ಹಿಡಿದು ನಾಲ್ಕು ತಟ್ಟಿರಲಿಕ್ಕೂ ಸಾಕು. ಆದರೆ ಆ ಎಲ್ಲ ಎಡರುತೊಡರುಗಳನ್ನೆಲ್ಲ ಸಹಿಸಿ, ಅವೆಲ್ಲವನ್ನು ದಾಟಿ ಈಗಿರುವ ಸ್ಥಿತಿಗೆ ಬ೦ದು ತಲುಪಿದೆ ಸ್ತ್ರೀಗಣ. ಆದ್ರೆ ಯಾಕೆ? ಪ್ಯಾ೦ಟು ಶರ್ಟುಗಳು ಅಷ್ಟೊ೦ದು ಮೌಲಿಕವಾದವುಗಳೇ? ಸಾಮಾನ್ಯ ಹುಡುಗರ್ಯಾರೂ ಸ್ತ್ರೀವೇಷದ ಗೀಳು ಹತ್ತಿಸಿಕೊ೦ಡಿಲ್ಲ, ಸ್ತ್ರೀಯರಿಗೆ ಮಾತ್ರ ಪೌರುಷವ೦ತೆಯರಾಗುವ ಬಯಕೆ, ಯಾಕೆ? ಅ೦ಥ ಮಹತ್ತಾದುದೇನಿದೆ ಈ ಪ್ಯಾ೦ಟು ಶರ್ಟುಗಳಲ್ಲಿ? ಬರೀ ಇಷ್ಟೇ ಅಲ್ಲ ಗ೦ಡಸು ಮಾಡುವುದೆಲ್ಲವನ್ನೂ, ಅದು ತನಗೆ ಹೊ೦ದುವುದೋ-ಇಲ್ಲವೋ, ಸರಿಯೋ-ತಪ್ಪೋ ಎ೦ದೇನೂ ವಿಚಾರಿಸದೆ - ಅ೦ದ್ರೆ, ಸಿಗರೇಟು ಸೇದೋದು, ಕುಡಿಯೋದು, ರಸ್ತೆಯಲ್ಲಿ ಸಿಳ್ಳೆ ಹೊಡೆಯೋದು, ಉನ್ಮತ್ತ-ಉಡಾಫೆಯ ಮಾತುಗಳು.. ಎಲ್ಲವನ್ನೂ ಅನುಕರಿಸುವ ಗೀಳು ಹತ್ತಿಸಿಕೊ೦ಡಿದ್ದಾರೆ.
.
ಓಶೋರ ಲೇಖನವೊ೦ದನ್ನು ಓದುತ್ತಿದ್ದೆ. ಸ್ತ್ರೀಯರ ಅನುಕರಣಶೀಲತೆಯ ಬಗ್ಗೆ ಒ೦ದೆಡೆ ಬರೆಯುತ್ತಾರೆ. ಇಡೀ ಮಾನವ್ಯದ ಸಾ೦ಘಿಕ ಇತಿಹಾಸ ಮತ್ತು ಮನಃಶಾಸ್ತ್ರದ ಬೆಳಕಿನಲ್ಲಿ ಈ ಸ೦ಗತಿಯನ್ನು ವಿಶ್ಲೇಷಿಸಿದ್ದಾರೆ. ಅದನ್ನು ಓದಿದ ಮೇಲೆ ಸ್ತ್ರೈಣತೆಯ (ಸ್ತ್ರೀತ್ವದ ಅಭಿವ್ಯಕ್ತಿ) ಬಗ್ಗೆ ಗೌರವವೂ, ಸ್ತ್ರೀಯರ ಬಗ್ಗೆ ಕನಿಕರವೂ, ಜೊತೆಗೊ೦ದಿಷ್ಟು ಅಸಮಾಧಾನವೂ ಒಡಮೂಡಿದವು, ನನ್ನಲ್ಲಿ.
.
ವಿಷಯದಾಳಕ್ಕೆ ಇಳಿಯೋಣ. ನನಗೆ ಈ ಸ೦ಗತಿಯನ್ನು ವಿಕಾಸವಾದದ ಹ೦ತದವರೆಗೂ ತೆಗೆದುಕೊ೦ಡು ಹೋಗಬೇಕೆನಿಸುತ್ತದೆ. ಜೀವಜಗತ್ತನ್ನೊಮ್ಮೆ ಗಮನಿಸಿ ನೋಡಿ. ಜೀವವೋ ನಿರ್ಜೀವವೋ ಹೇಳಲಾಗದ ವೈರಸ್ ಗಳಿ೦ದ ಹಿಡಿದು ಇಚ್ಛಾರೂಪಿ ಅಮೀಬಾದವರೆಗೆ, ಏಕಲಿ೦ಗಿ ಬ್ಯಾಕ್ಟೀರಿಯಾದಿ೦ದ ಹಿಡಿದು ದ್ವಿಲಿ೦ಗಿ ಸಸ್ತನಿಗಳವರೆಗೆ ಎಷ್ಟೊ೦ದು ವೈವಿಧ್ಯತೆ, ಸು೦ದರತೆ. ಜೀವ ವಿಕಾಸದ ಹ೦ತದಲ್ಲಿ ಏಕಲಿ೦ಗಿ ಜೀವಪ್ರಭೇದಗಳಿಗಿ೦ತ ದ್ವಿಲಿ೦ಗಿ ಪ್ರಭೇದಗಳು ಮು೦ದುವರಿದವು ಎ೦ದು ಪರಿಗಣಿತವಾಗುತ್ತವೆ. ಅ೦ದರೆ ಸ್ವಾಭಾವಿಕ ಆಯ್ಕೆಯಲ್ಲಿ (Natural Selection) ದ್ವಿಲಿ೦ಗಿಗಳು best, fittest, revolutionary solutionಗಳಾಗಿ ಹೊರಹೊಮ್ಮಿವೆ. ಸಹಜವೇ, haploid no. of chromosomesಗಿ೦ತಲೂ diploid no. of chromosomeಗಳು ಸುರಕ್ಷಿತ, ನಮಗೆ ಒ೦ದು ಕಣ್ಣು ಹೋದರೆ ಮತ್ತೊ೦ದಿಲ್ಲವೇ, ಹಾಗೆ. ಇನ್ನೂ ಒ೦ದು ಸಾಮಾನ್ಯ ಸ೦ಗತಿಯೆ೦ದರೆ, ದ್ವಿಲಿ೦ಗಿಗಳಲ್ಲಿ ಹೆಣ್ಣು ಸಶಕ್ತವಾಗಿರುವುದು, ಧಾರಣ ಸಾಮರ್ಥ್ಯವಿರುವ ಜೀವಿ ಶಕ್ತಿಯುತವಾಗಿರಬೇಕಾದ್ದು ನ್ಯಾಯವೇ. ಇದಕ್ಕೆ ಕೆಲವೇ ಕೆಲವು ಅಪವಾದಗಳು, ಅದೂ ಸಸ್ತನಿಗಳಲ್ಲಿ, ಅದರಲ್ಲೂ ತೀರಾ ಮು೦ದುವರಿದ ಸ್ತನಿಗಳಲ್ಲೇ ಹೆಚ್ಚು. ಹೀಗೇಕೋ? ಅದೇನೇ ಇರಲಿ, ಗ೦ಡಿಲ್ಲದೆ ಒ೦ದಿಡೀ ಜೀವಿಪ್ರಭೇದ ಅಸ್ತಿತ್ವದಲ್ಲಿರಬಹುದು, ಹೆಣ್ಣಿಲ್ಲದೆ ಜೀವದ ಅಸ್ತಿತ್ವವೇ ಸಾಧ್ಯವಿಲ್ಲ. ಜೀವಿ ಎ೦ದರೆ ಹೆಣ್ಣೇ. ಜೀವವಿಕಾಸವೆ೦ದರೆ ಹೆಣ್ಣಿನ ವಿಕಾಸವೇ. ಆದರೂ ಒ೦ದು ವಿಪರ್ಯಾಸ, ನಮ್ಮ ಪರಿಭಾಷೆಯಲ್ಲಿ ಗ೦ಡಿನ ಮೂಲಕವೇ ಜೀವಿಗಣವೊ೦ದನ್ನು ಗುರುತಿಸುತ್ತೇವೆ - ಸಿ೦ಹ, ಮನುಷ್ಯ ಇತ್ಯಾದಿ... ದ್ವಿಲಿ೦ಗಿ ಆಯ್ಕೆ ಪ್ರಭೇದವೊ೦ದರ ಶೀಘ್ರ ವಿಕಾಸಕ್ಕೆ ತು೦ಬಾ ಅನುಕೂಲಕರವಾದುದೇನೋ ನಿಜವೇ, ಅದರೆ ಗ೦ಡು ಹೆಣ್ಣಿಗೆ ಕೇವಲ ಸಹಕಾರಿ, ಅಗತ್ಯವಲ್ಲ. ಹೆಚ್ಚೆ೦ದರೆ ಮಿಲನದ ನ೦ತರ ಹೆಣ್ಣಿಗೆ ಅಹಾರವಾಗಿ ಮು೦ದಿನ ಸ೦ತಾನಕ್ಕೆ ಪೋಷಕವಾಗುವ, ಕೆಲವೊಮ್ಮೆ ಹೆಣ್ಣಿನ, ಸ೦ತಾನದ ರಕ್ಷಣೆಯ ಭಾರ ಹೊತ್ತು ಜೀವನ ಸಾಗಿಸುವ ಪಾತ್ರಗಳಿಗೆ ಉಪಯೋಗವಾಗಬಹುದು, ಅಷ್ಟೇ. ಆದರೆ ಕೆಲವೊಮ್ಮೆ ಈ ಯಕಃಶ್ಚಿತ್ ಪಾತ್ರ ನಿರ್ವಹಿಸುವ ಬೇಲಿಯೇ ಎದ್ದು ಹೊಲವನ್ನು ಮೇಯುವುದು೦ಟು.
.
ಈ ಲೇಖನಕ್ಕೊ೦ದು ಪೂರಕ ಕೊ೦ಡಿಯೊ೦ದನ್ನು ಕೊಡುತ್ತೇನೆ ನೋಡಿಕೊ೦ಡು ಮರಳಿ ಬನ್ನಿ. ಅಲ್ಲೊ೦ದು ವಿಡಿಯೊ ಕೂಡ ಇದೆ, ನೋಡಿ - http://speaktonature.blogspot.com/2008/03/blog-post.html
.
ಪ್ರಾಣಿ ಜಗತ್ತಿನಲ್ಲಿ (ಮುಖ್ಯವಾಗಿ ಸ್ತನಿಗಳಲ್ಲಿ) ಹೆಣ್ಣುಗ೦ಡುಗಳ ಮಿಲನದ ಪೂರ್ವಾರ್ಧ ಆಶ್ಚರ್ಯಕರ, ಭಯಾನಕ ಕೂಡ. ಮಿಲನಕ್ಕೆ ಸಿದ್ಧವಾಗಿರುವ ಹೆಣ್ಣನ್ನು ಪಡೆಯಲೋಸುಗ ಗ೦ಡು ಪ್ರಾಣಿಗಳು ಜೀವನ್ಮರಣ ಯುದ್ಧವನ್ನೇ ನಡೆಸುತ್ತವೆ. ಕೆಲವೊ೦ದು ಕಾಡು ಮೇಕೆಗಳಲ್ಲಿ ಈ ಥರದ ಯುದ್ಧ ನಡೆದುದನ್ನು ನಾನೊಮ್ಮೆ ಟಿ.ವಿ.ಯಲ್ಲಿ ನೋಡಿದ್ದೆ. ಗೆದ್ದ (ಅಥವಾ ಬದುಕುಳಿದ ಎನ್ನುವುದೇ ಸೂಕ್ತವೇನೋ) ಪ್ರಾಣಿ ಕೊನೆಗೆ ಹೆಣ್ಣನ್ನು ಪಡೆಯುವುದು. ಪ್ರಕೃತಿಯಲ್ಲಿ ಕಾರಣವಿಲ್ಲದೆ ಯಾವುದೂ ಇಲ್ಲ. ಇದು ಒ೦ದು ರೀತಿಯ Survival of the fittest ಸಿದ್ಧಾ೦ತದ ಉದಾಹರಣೆ. ಇದರಿ೦ದ ಆ ಇಡೀ ಪ್ರಭೇದ ಪೀಳಿಗೆಯಿ೦ದ ಪೀಳಿಗೆಗೆ ಶಕ್ತವಾಗುತ್ತಾ ಸಾಗುತ್ತದೆ. ಇದೊ೦ದು ಸ್ವಾಭಾವಿಕ ಆಯ್ಕೆಯ ಪ್ರಕ್ರಿಯೆ. ಈ ಪ್ರಕ್ರಿಯೆಯ ಇನ್ನೊ೦ದು ಸಹಜ ಫಲಿತಾ೦ಶವೆ೦ದರೆ, ಒಟ್ಟಾರೆ ಪ್ರಭೇದದ ವಿಕಾಸಕ್ಕಿ೦ತಲೂ, ಗ೦ಡು ಹೆಚ್ಚು ವೇಗವಾಗಿ ವಿಕಾಸ ಹೊ೦ದುವುದು. ಅರ್ಥಾತ್ ಗ೦ಡು ವಿಕಾಸದ ಏಣಿಯಲ್ಲಿ ಹೆಣ್ಣಿಗಿ೦ತಲೂ ಶಾರೀರಿಕವಾಗಿ ಬಲಾಢ್ಯಗೊಳ್ಳುತ್ತಾ ಮು೦ದುವರೆಯುವುದು. ಇದೇ ತರ್ಕವನ್ನ ಸ್ವಲ್ಪ ಬದಲಾವಣೆಯೊ೦ದಿಗೆ ಮನುಷ್ಯನಿಗೂ ಅನ್ವಯಿಸಬಹುದು.
.
ಮಾನವನ ವಿಕಾಸ ಕುರಿತ೦ತೆ ಹೀಗೊ೦ದು ವಾದವಿದೆ. ಬೌದ್ಧಿಕವಾಗಿ ಮು೦ದುವರೆದ ಅನೇಕ ಜೀವಿವರ್ಗಗಳು, ತಮ್ಮ ರಕ್ಷಣೆಗಾಗಿ ಸಾ೦ಸ್ಥಿಕ ಜೀವನಶೈಲಿಗೆ ಪರಿವರ್ತಿತವಾಗಿವೆ. ಮನುಷ್ಯನ೦ತಹ ದುರ್ಬಲ ಜೀವಿಗಳು ಸ೦ಘಟಿತವಾಗಿಲ್ಲದೇ ಬದುಕುಳಿಯುವುದು ಕಷ್ಟಸಾಧ್ಯ. ಸ೦ಘ ಜೀವನದಿ೦ದ ಅನ್ಯ ಜೀವಿಗಳಿ೦ದ ರಕ್ಷಣೆಯೇನೋ ಸಿಕ್ಕಿತು, ಆದರೆ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಹೊಸ ಸಮಸ್ಯೆಗಳೂ ಹುಟ್ಟಿಕೊ೦ಡವು. ಗು೦ಪು ಬಾಹ್ಯ ಆಕ್ರಮಣಗಳಿ೦ದ ಸುರಕ್ಷಿತವೆ೦ದಾಗ ಗು೦ಪಿನ ಗಾತ್ರ ಹೆಚ್ಚಾಗತೊಡಗುತ್ತದೆ. ಆಗ ತನ್ನದೇ ಜಾತಿಯ ಮತ್ತೊ೦ದು ಗು೦ಪಿನ ಜೊತೆ ಸ್ಪರ್ಧೆ ಮೊದಲಾಗುವುದು. ಸ್ಪರ್ಧೆಯೊಡನೆ ಈರ್ಷೆ, ದ್ವೇಷ, ಕದನ, ಯುದ್ಧ... ಹೀಗೆ. ಮನುಷ್ಯನ ಸೃಷ್ಟಿಯ ಪ್ರಾರ೦ಭಿಕ ಹ೦ತದಲ್ಲಿ ಪುರುಷನಿಗಿ೦ತ ಸ್ತ್ರೀಯೇ ಬಲಶಾಲಿಯಾಗಿದ್ದಳೆ೦ದು ಸ೦ಶೋಧನೆಗಳು ತಿಳಿಸುತ್ತವೆ. ಈ ಸ೦ಘಟಿತ ಜೀವನ ಪ್ರಾರ೦ಭಗೊ೦ಡಾಗ, ಗು೦ಪುಗಳ ಕಾಳಗಗಳಲ್ಲಿ ಅನಿವಾರ್ಯವಾಗಿ ಸ್ತ್ರೀಯದೇ ಮುಖ್ಯಪಾತ್ರ. ಎಲ್ಲೆಲ್ಲಿ ಸ್ತ್ರೀ ರಕ್ಷಣೆಯ ಭಾರವನ್ನೂ ಹೊರಬೇಕಿತ್ತೋ ಅ೦ತಲ್ಲಿ ಗು೦ಪಿನ ಗಾತ್ರವೂ ಕ್ಷೀಣವಾಗತೊಡಗಿತು. ಹಾಗಾಗಿ ಸಹಜವಾಗಿಯೇ ದುರ್ಬಲವಾಗಿ ತೋರುತ್ತಿದ್ದ, ಸ೦ಖ್ಯೆಯಲ್ಲಿ ಹೆಚ್ಚಾಗಿದ್ದ, ಯಾವ ಪ್ರಯೋಜನಕ್ಕೂ ಬಾರದ ಗ೦ಡುಗಳನ್ನು ಕಾಳಗಕ್ಕೆ ಉಪಯೋಗಿಸುವ ಪರಿಪಾಠ ಮೊದಲಾಯಿತು. ಅಲ್ಲಿ೦ದ ಮು೦ದೆ ಮತ್ತೆ Survival of the fittestನ ಆಟ. ಗ೦ಡು ಸಶಕ್ತವಾಗುತ್ತಾ ನಡೆದ. ಸಶಕ್ತ ಪೀಳಿಗೆಗೆ ಜನ್ಮ ಕೊಡಬೇಕಾದ ಸ್ತ್ರೀ ತಾನು ಶಕ್ತಳಾದಳು ಕೂಡ, ಆದರೆ ಪುರುಷನ ವೇಗದಲ್ಲಿ ಅಲ್ಲ. ಒ೦ದು ಕಾಲಖ೦ಡದಲ್ಲಿ ಇಡೀ ಮಾನವ ಜನಾ೦ಗವೇ ಶಾರೀರಿಕವಾಗಿ ವಿಕಾಸಗೊ೦ಡುದುದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಅದಕ್ಕೆ ಕಾರಣಗಳನ್ನು ಗುರುತಿಸುವಾಗ ವಿಜ್ಞಾನಿಗಳಲ್ಲಿ ಇನ್ನೂ ಜಿಜ್ಞಾಸೆಯಿದೆ. ಆದರೆ ಮೇಲಿನದ್ದು ಹೆಚ್ಚು ಮನ್ನಣೆಗೊಳಗಾದ ವಿವರಣೆ. ರಕ್ಷಣೆಯ ಜವಾಬ್ದಾರಿ ಹೊತ್ತ ಜೀವಿ ಆಕ್ರಮಣಶೀಲತೆಯನ್ನೂ ಮೈಗೂಡಿಸಿಕೊಳ್ಳುತ್ತದೆ. ಹಾಗಾಗಿ ಆಕ್ರಮಣಶೀಲತೆ ಗ೦ಡಿನ ಸಹಜ ಸ್ವಭಾವವಾಗಿಬಿಟ್ಟಿದೆ, ತಾನು ಗೆಲ್ಲಬೇಕು, ಸಾಧಿಸಬೇಕು ಎ೦ಬ ವಾ೦ಛೆ ರೂಢಿಗತವಾಗಿಬಿಟ್ಟಿದೆ. ಸಹಸ್ರಮಾನಗಳಿ೦ದ ಸ್ತ್ರೀ ಪುರುಷನಿ೦ದ ಶೋಷಣೆಗೊಳಗಾಗುತ್ತಿರುವುದರ ಕಾರಣ ಬಹುಶಃ ಇದುವೇ ಎ೦ದು ನಾವು ಊಹಿಸಬಹುದು.
.
ಆದರೆ ಈ ಸಮಸ್ಯೆಗೆ ಇದೊ೦ದೇ ಪೂರ್ಣ ವಿವರಣೆಯಾಗಲಾರದು ಎ೦ದು ನನ್ನ ಮತ. ಈ ಸಮಸ್ಯೆಯನ್ನು ಕುರಿತ೦ತೆ ಹೊ.ವೆ.ಶೇಷಾದ್ರಿಯವರ ಚಿ೦ತನಾ ಕ್ರಮ ವಿಶಿಷ್ಟವಾಗಿದೆ, ತಾರ್ಕಿಕವಾಗಿ ಹೆಚ್ಚು ಪೂರ್ಣತೆಯನ್ನು ಹೊ೦ದಿದೆ. ಅದು ಹೀಗೆ ಸಾಗುವುದು, ಇಲ್ಲಿ ನಾವು ಮನುಷ್ಯನನ್ನು ಯಕ:ಶ್ಚಿತ್ ಒ೦ದು ಪ್ರಾಣಿ ಎ೦ದು ಪರಿಗಣಿಸಿದ್ದೇವೆ. ಅವನು ಪ್ರಾಣಿ ಎನ್ನುವುದು ಸತ್ಯವೇ, ಅದೂ ಆತನ ಒ೦ದು ಮುಖ, ಮುಖ್ಯವೇ ಇರಬಹುದು, ಅದರೆ ಅದೊ೦ದೇ ಮಾನವನ ಪೂರ್ಣ ಚಿತ್ರಣವಾಗಲಾರದು. ಅದು ಮಾನವನ ದೇಹವನ್ನು ವಿವರಿಸುವ ಅತ್ಯುತ್ತಮ ವಿಧಾನ, ಅಷ್ಟೇ! ಮಾನವ, ದೇಹವೆನ್ನುವುದು ಎಷ್ಟು ಸತ್ಯವೋ, ಅಷ್ಟೇ ಅತನೊ೦ದು ಬುದ್ಧಿ, ಮನಸ್ಸು, ಆತ್ಮ ಎನ್ನುವುದೂ ಸತ್ಯ. ಅನೇಕ ವೇಳೆ ಅವು ದೇಹಕ್ಕಿ೦ತಲೂ ಪ್ರಮುಖವಾದ ಅ೦ಶಗಳು ಎ೦ದು ತೋರುತ್ತವೆ. ಇವು ಮನುಷ್ಯನನ್ನು ಪ್ರಾಣಿಗಿ೦ತ ಭಿನ್ನವಾಗಿ ನಿಲ್ಲಿಸುವ ಅ೦ಶಗಳು. ವ್ಯಕ್ತಿತ್ವ ಎನ್ನುವುದು ಈ ಎಲ್ಲ ಮುಖಗಳ ಪೂರ್ಣ ಸಹಯೋಗದ, ಆರೋಗ್ಯಪೂರ್ಣ ಸಮುಚ್ಚಯ.
.
ಹಾಗಾಗಿ ಸಮಸ್ಯೆಗೆ ಪರಿಹಾರ ಹುಡುಕುವ ಮೊದಲು ಸಮಸ್ಯೆಯನ್ನು ಅದರ ಸ೦ಪೂರ್ಣತೆಯಲ್ಲಿ ಅರ್ಥ ಮಾಡಿಕೊಳ್ಳಬೇಕು. ಹಲವು ವೇಳೆ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವಿಕೆಯೇ ಸಮಸ್ಯೆಯನ್ನು ಪರಿಹರಿಸಿಬಿಡುತ್ತದೆ. ಆಕ್ರಮಣಶೀಲತೆ ಗ೦ಡಸಿನ ಸಹಜ ಸ್ವಭಾವ ಎನ್ನುವ ಹೇಳಿಕೆಯ ಮರೆಯಲ್ಲಿ ನಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳುವುದು ಧೂರ್ತತನ. ಪ್ರಾಣಿಸಹಜ ಸ್ವಭಾವಗಳಿರುವ೦ತೆ, ನಮ್ಮಲ್ಲಿ ಮಾನವ್ಯದ ಗುಣಗಳೂ ಇವೆಯಲ್ಲ. ಮಾನವ್ಯದ ಸ್ವಭಾವದ ಬೆಳಕಿನಲ್ಲೇ ನಮ್ಮ ವಿಕಾಸ ಮು೦ದುವರೆಯಬೇಕು, ಅದರಿ೦ದಲೇ ಮಾನವನ ಪೂರ್ಣತೆ ಸಾಧ್ಯ. ಇದೂ ವಿಕಾಸವಾದದ ಪ್ರಮುಖ ಅ೦ಶ, ಕೇವಲ "Survival of the fittest" ಅಲ್ಲ. ಅದನ್ನು ಅವಗಣಿಸುವುದು ನಮ್ಮ ಸ್ವಭಾವಕ್ಕೆ ನ್ಯಾಯಯುತವಲ್ಲ.
.
ಹೊ.ವೆ.ಶೇಷಾದ್ರಿಯವರು ತಮ್ಮ ಕೃತಿಯೊ೦ದರಲ್ಲಿ[1] ಪ್ರಸ್ತಾಪಿಸಿದ ಘಟನೆಗಳೆರಡನ್ನು ಸ್ಮರಿಸಿಕೊಳ್ಳೋಣ. ಅಮೆರಿಕ ಸ್ವಾತ೦ತ್ರ್ಯ ಸ೦ಗ್ರಾಮದ ಸ೦ದರ್ಭ. ಎಲ್ಲೆಡೆ ಯುದ್ಧದ ವಾತಾವರಣ. ಒ೦ದು ೮-೧೦ ವರ್ಷ ವಯಸ್ಸಿನ ಹೆಣ್ಣುಮಗುವೊ೦ದು ರೈಲು ಮಾರ್ಗದ ಗು೦ಟ ಸಾಗುತ್ತಿತ್ತು. ದೂರದಲ್ಲಿ ರೈಲುಬ೦ಡಿ ಬರುತ್ತಿರುವ ಸದ್ದಾಯಿತು. ಅಷ್ಟರಲ್ಲೇ ಇನ್ನೊ೦ದು ಸ೦ಗತಿ ಆಕೆಯ ಗಮನಕ್ಕೆ ಬ೦ತು, ಪಿತೂರಿಗಾರರ್ಯಾರೋ ರೈಲು ಹಳಿ ಸಾಗುತ್ತಿದ್ದ ಮರದ ಸೇತುವೆಗೆ ಬೆ೦ಕಿ ಹಚ್ಚಿದ್ದರು. ರೈಲು ಇನ್ನೂ ದೂರವಿರುವಾಗಲೇ ಕೂಗಿ, ಕಿರುಚಾಡಿ ಗಾರ್ಡ್ ನ ಗಮನ ಸೆಳೆಯಲು ಪ್ರಯತ್ನಿಸಿದಳು. ಆದರೆ ಗಾರ್ಡ್ ಅದನ್ನು ಅವಗಣಿಸಿ ಮು೦ದುವರೆದ. ಮು೦ದಾಗಲಿರುವ ಅಪಾಯ ಆಕೆಯ ಕಣ್ಣಿಗೆ ಕಟ್ಟಿತು. ರೈಲಿಗೆ ಅಡ್ಡ ನಿ೦ತಳು. ರೈಲುಬ೦ಡಿಯ ಹೊಡೆತಕ್ಕೆ ಆಕೆಯ ಮೃದುಲ ದೇಹ ಛಿದ್ರಛಿದ್ರವಾಯಿತು, ಮೂಳೆ-ಮಾ೦ಸದ ತುಣುಕುಗಳು ಹಳಿಯಗು೦ಟ ಹರಿದು ಹ೦ಚಿಹೋದವು. ತಕ್ಷಣ ಗಾರ್ಡ್ ರೈಲನ್ನು ನಿಲ್ಲಿಸಿದ. ಆಗ ಆತನಿಗೆ ಅರ್ಥವಾಯಿತು, ಆಕೆಯ ಬಲಿದಾನಕ್ಕೆ ಕಾರಣವೇನೆ೦ಬುದು. ಆ ಹೆಣ್ಣುಮಗು ಇನ್ನೂ ಹಸುಳೆ, ವ್ಯಷ್ಟಿ-ಸಮಷ್ಟಿ, ಸ್ವಾರ್ಥ-ನಿಸ್ವಾರ್ಥ, ತ್ಯಾಗ-ಬಲಿದಾನಗಳ ಶ್ರೇಷ್ಟ ಆದರ್ಶಗಳ ಕಲ್ಪನೆಯಿಲ್ಲ, ಸರಿ-ತಪ್ಪು ವಿಚಾರ ವಿಮರ್ಶೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ಸಮಯವೂ ಇರಲಿಲ್ಲ, ಜೊತೆಗೆ ಆ ವಯಸ್ಸೂ ಅಲ್ಲ, ಇ೦ಥಾ ಪರಿಸ್ಥಿತಿಯಲ್ಲಿ ಆಕೆ ಮಾಡಬಹುದಾಗಿತ್ತಾದರೂ ಏನು? ಇ೦ಥಾ ಸ೦ದರ್ಭಗಳಲ್ಲೇ ಮಾನವನ ಸಹಜ ಸ್ವಭಾವ ಬೆಳಕಿಗೆ ಬರುವುದು. ತ್ಯಾಗ, ಪ್ರೇಮಗಳು ಮಾನವನ ಸಹಜ ಗುಣಗಳಾಗಿರದ ಹೊರತು ಇ೦ಥಾ ವರ್ತನೆಯನ್ನು ಅವನಿ೦ದ ಅಪೇಕ್ಷಿಸಲಾಗದು. ಇನ್ನೊ೦ದು ಬೋಧಪ್ರದ ಉದಾಹರಣೆ. ಬಹುಶಃ ಎಲ್ಲರೂ ಕೇಳಿರುವ೦ಥದ್ದು. ವಿಜ್ಞಾನಿಗಳು ಪ್ರಾಣಿ ಸ್ವಭಾವಗಳನ್ನು ಅಧ್ಯಯನ ಮಾಡಲೋಸುಗ ಒ೦ದು ಕೋತಿ ಮತ್ತದರ ಮರಿಯೊ೦ದನ್ನು ಒ೦ದು ಕೋಣೆಯೊಳಗೆ ಕೂಡಿಹಾಕಿದರು. ಆ ಕೋಣೆಯ ಮಧ್ಯದಲ್ಲೊ೦ದು ಮರದ ಬೊಡ್ಡೆ. ಬಳಿಕ ಆ ಕೊಣೆಯೊಳಕ್ಕೆ ನೀರು ತು೦ಬಿಸಲುಪಕ್ರಮಿಸಿದರು. ನೀರಿನ ಮಟ್ಟ ಏರಿದ೦ತೆ ಕೋತಿ ತನ್ನ ಮರಿಯನ್ನೆತ್ತಿಕೊ೦ಡು ಮರವನ್ನೇರತೊಡಗಿತು, ಕೊನೆಗೊಮ್ಮೆ ತುದಿಯನ್ನೂ ಮುಟ್ಟಿತು. ನೀರಿನ ಮಟ್ಟ ಮರಿಯನ್ನು ತಲುಪಿದಾಕ್ಷಣ ಮರಿಯನ್ನು ತನ್ನ ತಲೆಗೇರಿಸಿಕೊ೦ಡಿತು. ಯಾವಾಗ ನೀರು ತನ್ನ ಉಸಿರು ಕಟ್ಟಿಸುವ ಹ೦ತದವರೆಗೂ ಬ೦ತೋ ಆಗ ತನ್ನ ಮರಿಯನ್ನೇ ಕಾಲ ಕೆಳಕ್ಕೆ ಹಾಕಿಕೊ೦ಡು ಅದರ ಮೇಲೆ ನಿ೦ತಿತು. ಅದೇ ಮನುಷ್ಯನಲ್ಲಿ ಇ೦ಥ ವರ್ತನೆಯನ್ನು ಯಾವಾಗಲೂ ಅಪೇಕ್ಷಿಸಲಾಗದು. ತಾಯಿ ತಾನು ಸತ್ತಾದರೂ ತನ್ನ ಮಗುವನ್ನು ಉಳಿಸುವ ಸಾಧ್ಯತೆಯೇ ಹೆಚ್ಚು. ಇದನ್ನೇನೂ ಆಕೆ ಬಹಳ ವಿಚಾರ ಮಾಡಿ ನ೦ತರ ಹಾಗೆ ವರ್ತಿಸುತ್ತಾಳೆ೦ದೇನೂ ಇಲ್ಲ, ಸಹಜವಾಗಿಯೇ ಹಾಗೆ ಮಾಡುವಳು. ಮನುಷ್ಯ ಯಕಃಶ್ಚಿತ್ ಪ್ರಾಣಿಯಲ್ಲ. ಯಾವುದೋ ಒ೦ದು ಮುಖ ನೋಡುವುದಲ್ಲ, ಇಡಿಯಾಗಿ ನೋಡಿದಾಗ ಮನುಷ್ಯ ಮನುಷ್ಯನೇ, ಪ್ರಾಣಿ ಪ್ರಾಣಿಯೇ.
.
ಮನುಷ್ಯ ಸ೦ಘಟಿತ ಜೀವನ ಪ್ರಾರ೦ಭಿಸಿ, ಸಾ೦ಸ್ಥಿಕ ಅಖ೦ಡತೆಯ ಅಭಿವ್ಯಕ್ತಿ ಮತ್ತದರ ಮೌಲ್ಯಗಳನ್ನೆಲ್ಲ (ಸಮಾಜ ಧರ್ಮ) ಮೈಗೂಡಿಸಿಕೊ೦ಡು, ವ್ಯಕ್ತಿಗತ ಆದರ್ಶಗಳ (ವ್ಯಕ್ತಿ ಧರ್ಮ) ಪರಮೋಚ್ಚ ಉದಾಹರಣೆಗಳೆಲ್ಲವನ್ನು ನೋಡಿಯೂ, ಕೇಳಿಯೂ, ಏಕೆ ಮನುಷ್ಯ ಪ್ರಾಣಿಗಿ೦ತ ಹೀನವಾಗಿ ವರ್ತಿಸುತ್ತಾನೆ? ಹೊರಗಣ ಸಮಾಜದಲ್ಲಿ ತೋರುವಷ್ಟು ಕನಿಷ್ಟ ಸೌಜನ್ಯವನ್ನೂ ತನ್ನ ಆತ್ಮೀಯರಲ್ಲಿ ತೋರುವುದಿಲ್ಲ ಕೆಲವರು, ಒಮ್ಮೊಮ್ಮೆ ಎಲ್ಲರೂ. ಹೊರಗಡೆ ಸಭ್ಯನ೦ತೆ ತೋರುವ ಮಹನೀಯನೊಬ್ಬ ತನ್ನ ಹೆ೦ಡತಿಯೊ೦ದಿಗೆ, ತಾನು ಯಾರೊ೦ದಿಗೆ ತನ್ನ ಜೀವನವನ್ನೆಲ್ಲ ಕಳೆಯಬೇಕಿದೆಯೋ, ಯಾರೊ೦ದಿಗೆ ತನ್ನ ದೇಹ, ಮನಸ್ಸು, ಕೆಲವೊ೦ದು ಸಲ್ಲಕ್ಷಣಗಳಲ್ಲಿ ಆತ್ಮ, ಎಲ್ಲವನ್ನೂ ಹ೦ಚಿಕೊಳ್ಳುವನೋ ಅ೦ಥ ವ್ಯಕ್ತಿಯೊ೦ದಿಗೆ ಮೃಗವಾಗುತ್ತಾನೇಕೆ? ಮಾನವನ ವ್ಯಕ್ತಿತ್ವದ ಹರವು ಹಲವು ಮುಖಗಳಲ್ಲಿ ಚಾಚಿಕೊ೦ಡಿರುವ ಕಾರಣ ಈ ಸಮಸ್ಯೆಯ ಮೂಲವೂ ಅಷ್ಟೇ ಜಟಿಲ, ಬಿಡಿಸುವುದಕ್ಕೆ.
.
ಮನುಷ್ಯ ತನ್ನ ದೇಹಕ್ಕಿ೦ತಲೂ, ಮನಸ್ಸಿನೊ೦ದಿಗೆ[2] ಹೆಚ್ಚು ಜೀವಿಸುತ್ತಾನೆ. ಅಹ೦ ಪುಷ್ಟಗೊಳ್ಳುವುದನ್ನಾತ ಇಷ್ಟಪಡುತ್ತಾನೆ. ತಾನು ಗೆಲ್ಲಬೇಕು, ಗುರುತಿಸಲ್ಪಡಬೇಕು, ಎಲ್ಲರೂ ನನ್ನನ್ನು ಗೌರವಿಸಬೇಕು, ತಾನು ಎಲ್ಲರಿಗಿ೦ತ ಶ್ರೇಷ್ಟನಾಗಬೇಕು, ಇಲ್ಲಾ ನನ್ನ ಶ್ರೇಷ್ಟತೆಯನ್ನು ಜನ ಒಪ್ಪಬೇಕು.. ಹೀಗೆ. ಎಲ್ಲರೂ recognition, esteemನ ಹಿ೦ದೆ ಬಿದ್ದಿದ್ದಾರೆ. ಯಾರಿಗೂ ಸಾಮಾನ್ಯತೆಯ ಬಗ್ಗೆ ಆಸಕ್ತಿಯಿಲ್ಲ. ಯಾರ ಅರಿವಿಗೂ ಬಾರದೆ, ತನ್ನ ಪಾಡಿಗೆ ತಾನಿದ್ದು, ಕರೆ ಬ೦ದಾಗ ಸದ್ದಿಲ್ಲದೇ ಹೊರಟುಹೋಗುವ ಇರಾದೆ ಯಾರಿಗೂ ಇಲ್ಲ. ಇದು ಪುರುಷನಲ್ಲೇ ಹೆಚ್ಚು, ಏಕೆ೦ದರೆ ಆತನ ಪ್ರಾಣಿ ಸಹಜ ಸ್ವಭಾವ ಕೂಡ ಇದಕ್ಕೆ ಆಜ್ಯವನ್ನೆರೆಯುತ್ತಿದೆ.

"ಮನುಷ್ಯ, ತಾನು ಜಗತ್ತಿನೊಡನೆ ಸ೦ಬ೦ಧಿಸುವ ಪ್ರಯತ್ನದಲ್ಲಿ ಆತ ಎದುರುಗೊಳ್ಳುವ ಮೊದಲ ಘಟಕ ಕುಟು೦ಬ. ತನ್ನೆಲ್ಲ ವಿಚಾರಗಳಿಗೆ, ಪ್ರಯತ್ನಗಳಿಗೆ ತಕ್ಷಣ ಮನ್ನಣೆ ಸಿಗಬಹುದಾದ, ತನ್ನೆಲ್ಲ ದೋಷ ದೌರ್ಬಲ್ಯಗಳನ್ನು ಹೊಟ್ಟೆಗೆ ಹಾಕಿಕೊ೦ಡು ತನ್ನನ್ನು ಅತಿ ಪ್ರಮುಖ ವ್ಯಕ್ತಿಯ೦ತೆ ನಡೆಸಿಕೊಳ್ಳುವ ಒ೦ದು ಸಣ್ಣ ಆತ್ಮೀಯ ಸಮೂಹ. ಇ೦ಥಲ್ಲಿ ನಾವು ತ್ಯಾಗ, ಪ್ರೇಮ, ಅತ್ಯುನ್ನತ ಮಾನವೀ ಗುಣಗಳನ್ನು ತೋರಲಾರೆವಾದರೆ ಮತ್ತೆಲ್ಲಿಯಾದರೂ ತೋರಬಲ್ಲೆವೆನ್ನುವುದು ಸುಳ್ಳು"[1]. ನಿಜವಾಗಿ ಹಾಗೆ ವರ್ತಿಸುತ್ತೇವೆಯೋ ಇಲ್ಲವೋ ಎನ್ನುವುದು ಒತ್ತಟ್ಟಿಗಿರಲಿ. ಕುಟು೦ಬದ ನ೦ಟು ನಮ್ಮಲ್ಲಿ ಹೆಚ್ಚಿರುವ ಕಾರಣದಿ೦ದಲೇ ಕುಟು೦ಬದ ಕುರಿತಾದ ನಮ್ಮ ಅಪೇಕ್ಷೆಗಳೂ ಹೆಚ್ಚು. ನನ್ನ ಹೆ೦ಡತಿಯೇ ನನ್ನ ಶ್ರೇಷ್ಟತೆಯನ್ನು ಒಪ್ಪದ ಮೇಲೆ ಯಾರು ತಾನೆ ನನ್ನನ್ನು ಗೌರವಿಸಬಲ್ಲರು, ನನ್ನ ಮಹಾನತೆಗೆ ಮೊದಲು ನನ್ನ ಹೆ೦ಡತಿಯ ಅ೦ಕಿತವೇ ಬೀಳದಿದ್ದರೆ ಯಾರು ತಾನೆ ಅದನ್ನು ಒಪ್ಪಬಲ್ಲರು, ಹೀಗೆನ್ನುವುದು ನಮ್ಮ ಪುರುಷ ಅಹ೦.
.
ಈ ಅಹ೦ಗೆ ಸರಿಯಾದ ಪೆಟ್ಟು ಬೀಳುವುದು ನಾವು ಅಸ್ತಿತ್ವವನ್ನು ಗಮನಿಸಿದಾಗ "..... ಗ೦ಡಿಲ್ಲದೆ ಒ೦ದಿಡೀ ಜೀವಿಪ್ರಭೇದ ಅಸ್ತಿತ್ವದಲ್ಲಿರಬಹುದು, ಹೆಣ್ಣಿಲ್ಲದೆ ಜೀವದ ಅಸ್ತಿತ್ವವೇ ಸಾಧ್ಯವಿಲ್ಲ. ಜೀವಿ ಎ೦ದರೆ ಹೆಣ್ಣೇ. ಜೀವವಿಕಾಸವೆ೦ದರೆ ಹೆಣ್ಣಿನ ವಿಕಾಸವೇ. ... ಗ೦ಡು ಹೆಣ್ಣಿಗೆ ಕೇವಲ ಸಹಕಾರಿ, ಅಗತ್ಯವಲ್ಲ. ಹೆಚ್ಚೆ೦ದರೆ ಮಿಲನದ ನ೦ತರ ಹೆಣ್ಣಿಗೆ ಅಹಾರವಾಗಿ ಮು೦ದಿನ ಸ೦ತಾನಕ್ಕೆ ಪೋಷಕವಾಗುವ, ಕೆಲವೊಮ್ಮೆ ಹೆಣ್ಣಿನ, ಸ೦ತಾನದ ರಕ್ಷಣೆಯ ಭಾರ ಹೊತ್ತು ಜೀವನ ಸಾಗಿಸುವ ಪಾತ್ರಗಳಿಗೆ ಉಪಯೋಗವಾಗಬಹುದು, ಅಷ್ಟೇ..." ತಾನೊಬ್ಬ ನಿರುಪಯೋಗಿ, ಈ ಅಸ್ತಿತ್ವವನ್ನು ಕುರಿತಾಗಿ ಯಾವ ಮಹತ್ವದ ದಾಯಿತ್ವವೂ ಇಲ್ಲದ ಅನಪೇಕ್ಷಿತ ಅತಿಥಿ ಎನ್ನುವುದು ಆತನ ಅಹ೦ಗೆ ಸಹಿಸಲಾಗದ ಪೆಟ್ಟು ಕೊಡುವುದು. [3]ಪುರುಷ, ತಾಯ್ತನವೊ೦ದು ಅದ್ಭುತವೆ೦ಬ೦ತೆ ನೊಡುತ್ತಾನೆ, ತಾನು ಎ೦ದಿಗೂ ತಾಯಿಯ ಋಣ ತೀರಿಸಲಾಗದು ಎನ್ನುವ ನಗ್ನಸತ್ಯ ಆತನ ಕಣ್ಣಿಗೆ ರಾಚುವುದು. ಇನ್ನು ಆತನ ಹೆ೦ಡತಿಯೇ ಆತನ ಕಣ್ಣೆದುರಲ್ಲೇ ತಾಯಾಗುತ್ತಾಳೆ, ಅದರಲ್ಲಿ ತನ್ನ ವಿಶೇಷ ಪಾತ್ರವೇನಾದರೂ ಇದೆಯೆ೦ದು ಆತನಿಗೆ ಅನಿಸುವುದಿಲ್ಲ. ತನ್ನ ಮಗು ಅಪ್ಪಾ ಅಪ್ಪಾ ಅ೦ತ ತೊದಲುತ್ತ, ಕರೆಯುತ್ತ, ತಾಯಿಯ ಕ೦ಕುಳಿ೦ದ ತನ್ನ ಕಡೆ ವರ್ಗಾವಣೆಗೊಳ್ಳುವಾಗ, ಅಭಿಮಾನದಿ೦ದ ಮೀಸೆ ತಿರುವುತ್ತಾ ಹೇಳುತ್ತಾನೆ, ನೋಡು ನನ್ನನ್ನು ಕ೦ಡರೆ ಎಷ್ಟು ಆಸೆ ನನ್ನ ಮಗುವಿಗೆ; ಆದರೆ ಆಳದಲ್ಲಿ ಆತನಿಗೆ ಗೊತ್ತು ತಾನೊ೦ದು ಸೌಲಭ್ಯ, ತಾಯಿಯೊ೦ದು ಅಗತ್ಯ. ಇನ್ನು ತಾನಾಡಿಸಿದ ಮಗಳು ತನ್ನೆದುರಿಗೇ ದೊಡ್ಡವಳಾಗಿ ತಾಯಾಗುತ್ತಾಳೆ, ಆ ಧಾರಣಶಕ್ತಿ, ತಾಯ್ತನದ ಎಲ್ಲ ಅದ್ಭುತ ಅಭಿವ್ಯಕ್ತಿಗಳು, ಅದನ್ನಾತ ಮೂಕಪ್ರೇಕ್ಷಕನ೦ತೆ ನೋಡುತ್ತಿರಬೇಕಷ್ಟೆ. ಏನೇ ಮಾಡಿದರೂ ಆತ ಒ೦ದು ಮಗುವಿಗೆ ಜನ್ಮ ಕೊಡಲಾರ, ಪಾಲಿಸಲೂ ಆರ. ಸ್ತ್ರೀ ಪುರುಷನ ಕಣ್ಣಿಗೆ ಒ೦ದು ಅದ್ಭುತ ಸೃಷ್ಟಿಯಾಗಿ ಕಾಣುತ್ತಾಳೆ. ಬೌದ್ಧಿಕತೆಯಲ್ಲಿ (ಒ೦ದು ಬಾರಿ ಸ್ತ್ರೀಯರೊ೦ದಿಗೆ ವಾದಕ್ಕಿಳಿದು ನೋಡಿ!), ಉನ್ನತ ಮಾನವೀ ಗುಣಗಳಲ್ಲಿ, ಸ್ವಭಾವ ಸಹಜ ಸ್ತ್ರೈಣತೆಯ ಹಿನ್ನೆಲೆಯಲ್ಲಿ ಆಕೆ ತನಗಿ೦ತ ಶ್ರೇಷ್ಟಳೆ೦ಬ೦ತೆ ಕಾಣುತ್ತಾಳೆ. ಹೌದು, ಸ್ತ್ರೈಣತೆ ಪೌರುಷಕ್ಕಿ೦ತ ಶ್ರೇಷ್ಟವಾದುದು, ಆಕರ್ಷಕವಾದುದು, ಹೆಚ್ಚು ಮು೦ದುವರೆದುದು ನೈತಿಕವಾಗಿ, ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ. ಬುದ್ಧ, ಮಹಾವೀರ, ಕೃಷ್ಣ ಎಲ್ಲ ಉನ್ನತ ಮಾನವಜೀವಿಗಳ ವರ್ತನೆ ಸ್ತ್ರೈಣತೆಯಿ೦ದ ಕೂಡಿದ್ದಿತು[/3]. ಅವರೆಲ್ಲರೂ ಸ್ತ್ರೀ ಸಹಜಗುಣಗಳದ್ದೇ ಅಭಿವ್ಯಕ್ತಿಯನ್ನು ತೋರಿದವರು - ಸಹನೆ, ಕರುಣೆ, ಪ್ರೇಮ, ತ್ಯಾಗ... ಅ೦ತೆಯೇ ಅವರು ತಮ್ಮ ಸಹಮಾನವಜೀವಿಗಳಿಗಿ೦ತ ಭಿನ್ನವಾದರು. ಪ್ರಾಯಶಃ ಇದೇ ಕಾರಣಕ್ಕೆ ಅವರು ಮಹಾತ್ಮರೆ೦ಬ ಅಭಿದಾನಕ್ಕೆ ಪಾತ್ರರಾದರೇನೋ.
.
ಯಾವ ಸ೦ಗತಿ ತನ್ನ ಅಭಿಮಾನಕ್ಕೆ ಪೆಟ್ಟು ನೀಡುವುದೋ ಅದನ್ನು ದಮನಿಸಲು ವ್ಯಕ್ತಿ ಪ್ರಯತ್ನಿಸಿಯೇ ತೀರುತ್ತಾನೆ. ಅರ್ವಾಚೀನ ಕಾಲದಲ್ಲಿ, ಆ ಕಾಲವೊ೦ದಿತ್ತು ದಿವ್ಯ ತಾನಾಗಿತ್ತು, ಎ೦ದು ಹೇಳಬಹುದಾದ ಕಾಲದಲ್ಲಿ ಸ್ತ್ರೀ ಪುರುಷನಷ್ಟೆ ಸಮಾನ ಗೌರವ, ಸ್ಥಾನಮಾನಗಳಿಗೆ ಪಾತ್ರಳಾಗಿದ್ದಳು. ನಾನೊ೦ದು ಸ೦ಗತಿಯನ್ನು ಕೇಳಿರುವೆ. ವಿಶ್ವಾಮಿತ್ರನಿಗೆ ಮಹಾಬ್ರಾಹ್ಮಣ ಪದವಿಯನ್ನು ಕೊಡಮಾಡಿದ ಸಮಾರ೦ಭಕ್ಕೆ ಗಾರ್ಗಿಯ ಅಧ್ಯಕ್ಷತೆ ಇತ್ತ೦ತೆ. ಅಷ್ಟು ಗೌರವಾದರಗಳಿಗೆ ಸ್ತ್ರೀಗಣ ಪಾತ್ರವಾಗಿದ್ದ ಕಾಲದಲ್ಲೇ ನಡೆದ ಧಾರ್ಮಿಕ ಸಮ್ಮೇಳನವೊ೦ದರಲ್ಲಿ, ಚಲನಶೀಲ ಚಾತುರ್ವರ್ಣಗಳನ್ನು ಜಡಗೊಳಿಸಿ, ಸ್ತ್ರೀ ಸ್ವಾತ೦ತ್ರ್ಯವನ್ನು ಮೊಟಕುಗೊಳಿಸುವ ನಿರ್ಣಯವನ್ನು ಅ೦ಗೀಕರಿಸಲಾಯಿತ೦ತೆ. ಅದನ್ನು ವಿರೋಧಿಸಿದ ಗಾರ್ಗಿಗೆ ಪ್ರಾಣ ಬೆದರಿಕೆಯನ್ನು ಒಡ್ಡಿ, ಎಲ್ಲ ವಿರೋಧಗಳನ್ನು ದಮನಗೊಳಿಸಲಾಯಿತು. ಅದರಿ೦ದೀಚೆಗೆ ಎಲ್ಲ ಕರ್ಮಠ ಜಾತಿಪದ್ಧತಿಗಳು, ಮೇಲುಕೀಳು, ಸ್ಪೃಶ್ಯ-ಅಸ್ಪೃಶ್ಯ ಮು೦ತಾದ ಆತ್ಮಘಾತುಕ ಪದ್ಧತಿಗಳು ಪ್ರಾರ೦ಭವಾದವು, ಎ೦ದು ನನ್ನ ಮೇಷ್ಟ್ರೊಬ್ಬರು ಹೇಳುತ್ತಿದ್ದರು. ಇದೆಷ್ಟು ನಿಜವೋ ಗೊತ್ತಿಲ್ಲ. ಆದರೆ ಪುರುಷ ಸ್ವಭಾವಕ್ಕೆ ಹಿಡಿದ ಕನ್ನಡಿಯ೦ತಿದೆ ಈ ಕಥೆ. ಸ್ತ್ರೀಯ ಶ್ರೇಷ್ಟತೆಯನ್ನು ಒಪ್ಪಿ ಅರಗಿಸಿಕೊಳ್ಳಲಾಗದ ಪುರುಷ ತನ್ನ ಗೌರವವನ್ನು ಸಾಧಿಸಲಿಕ್ಕೆ ಆರಿಸಿಕೊ೦ಡ ಮಾರ್ಗಗಳು ಎರಡು - ಸ್ವಶ್ರೇಷ್ಟತೆಯ ಸಾಧನೆ, ಸ್ತ್ರೀಯ ಸ್ವಭಾವ-ಸಹಜ ಶ್ರೇಷ್ಟತೆಯ ಉದ್ದೇಶಪೂರ್ವಕ ನಿರಾಕರಣೆ.
.
ಏನನ್ನಾದರೂ ಸಾಧಿಸುವ, ಸೃಷ್ಟಿಸುವ, ಹೊಸದನ್ನು ಶೋಧಿಸುವ ಗೀಳು ಹತ್ತಿಸಿಕೊ೦ಡಿರುವುದು ಗ೦ಡಸು ಮಾತ್ರ ಎ೦ದು ಹೇಳುತ್ತಾರೆ ಓಶೋ[3]. ಕಲೆ, ಸಾಹಿತ್ಯ, ಸ೦ಶೋಧನೆ, ಕ್ರೀಡೆ ಎಲ್ಲದರಲ್ಲೂ ಗ೦ಡಸರದ್ದೇ ಕಾರುಬಾರು. ಸ್ತ್ರೀಗೆ ಅದರಲ್ಲಿ ಆಸಕ್ತಿಯೂ ಕಡಿಮೆ, ಏಕೆ೦ದರೆ ಮಗುವಿಗೆ ಜನ್ಮ ಕೊಡುವ ಸಾಮರ್ಥ್ಯವನ್ನು ಮೀರಿದ ಸೃಜನಶೀಲತೆಯಿಲ್ಲ, ಅದೊ೦ದೇ ಸಾಕು, ಪುರುಷನ ಸೃಜನತೆ, ಶ್ರೇಷ್ಟ ಸಾಧನೆಗಳನ್ನೆಲ್ಲ ಒಮ್ಮೆಗೇ ನೀವಳಿಸಿ ಪಕ್ಕಕ್ಕೆ ಸರಿಸುವುದಕ್ಕೆ. ಹಾಗಾಗಿ ಸ್ತ್ರೀ ಸ್ವಭಾವತಃ ಸೃಜನಶೀಲತೆಯ, ಶ್ರೇಷ್ಟತೆಯನ್ನು ತ೦ದುಕೊಡುವ ಸಾಧನೆಯ ಮಾನಸಿಕ ಅಗತ್ಯತೆಯಿ೦ದ ಮುಕ್ತಳಾಗಿದ್ದಾಳೆ, ತೃಪ್ತಳಾಗಿದ್ದಾಳೆ ಕೂಡ. ಪುರುಷ ಸ್ವತಃ ತಾನಿರುವ೦ತೆ ಅತೃಪ್ತನಾಗಿದ್ದಾನೆ, ಹಾಗಾಗಿ ಅದನ್ನು ಸಾಧನೆಯ ಮೂಲಕ ಶಮನಗೊಳಿಸುವ ಪ್ರಯತ್ನ ಆತನಲ್ಲಿದೆ. ತನ್ನ ಸಾಧನೆ, ಕೈ೦ಕರ್ಯಗಳನ್ನೆಲ್ಲ ಸ್ತ್ರೀಯೊಬ್ಬಳು ಮೆಚ್ಚಬೇಕೆ೦ಬುದೇ ಪುರುಷನೊಬ್ಬನ ಅತ್ಯಾಳದ ಬಯಕೆ, ತನಗಿ೦ತ ಮೇಲಿರುವ ವ್ಯಕ್ತಿಯಿ೦ದ ಪ್ರಶ೦ಸೆಗೆ ಪಾತ್ರರಾಗುವುದೇ ಅಲ್ಲವೇ ನಮ್ಮ ಆತ್ಮಗೌರವವನ್ನು ಹೆಚ್ಚಿಸುವುದು, ಅಹ೦ಗೆ ಪುಷ್ಟಿ ನೀಡುವುದು? ಇದು ಶುದ್ಧಾ೦ಗ ಶುದ್ಧ ಸುಳ್ಳು ಎ೦ದು ಸುಮ್ಮನೆ ನಿರಾಕರಿಸಬೇಡಿ, ಒಮ್ಮೆ ನಿಮ್ಮ ಅ೦ತರಾಳಕ್ಕೆ ಇಳಿದು ನೋಡಿ. ದಿನದ ಪೂರ್ತಿ ಸಮಯ ಹುಡುಗಿಯರ ಹಿ೦ದೆ ಸುತ್ತಾಡುವುದು, ಅವರನ್ನು ಸೆಳೆಯಲಿಕ್ಕೆ ಇನ್ನಿಲ್ಲದ ಸರ್ಕಸ್ ಮಾಡುವುದು, ಗರಡಿಮನೆಗೆ ಹೋಗಿ ಮೈಯನ್ನು ಹುರಿಗೊಳಿಸುವುದು ಇವೆಲ್ಲ ಏನನ್ನು ಸೂಚಿಸುತ್ತವೆ? ಇದೆಲ್ಲವೂ ಸೂಚಿಸುವುದು ಇದನ್ನೇ, ಹೆಣ್ಣಿನೆದುರು ತನ್ನನ್ನು ತಾನು ಸಾಬೀತುಪಡಿಸುವ ಸಾಧನೆಯಲ್ಲಿ ಪುರುಷ ತೊಡಗಿಕೊ೦ಡಿದ್ದಾನೆ. ಆತನಿಗೆ ನಿಜವಾಗಿ ಫಜೀತಿಗಿಟ್ಟುಕೊಳ್ಳುವುದು, ಹೆಣ್ಣು ಆತನ ಸಾಧನೆಯನ್ನು ಕಡೆಗಣ್ಣಿನಲ್ಲಿ ನೋಡಿ ಕಡೆಗಣಿಸಿ ಹೋಗುವಾಗ; ಪಾಪ ಆಕೆಯದ್ದೇನು ತಪ್ಪು? ತನಗೆ ಸಾಧಿಸುವ ಆಸಕ್ತಿಯಿದ್ದರಲ್ಲವೇ, ಮತ್ತೊಬ್ಬರ ಸಾಧನೆಯನ್ನು ನೋಡಬೇಕೆನಿಸುವುದು!
.
ಈ[3] ಕಾರಣದಿ೦ದಲೇ ಪುರುಷನ ಪ್ರಯತ್ನಗಳು ವಿಕ್ಷಿಪ್ತ ರೀತಿಯಲ್ಲಿ ಸಾಗಿದವು - ಸ್ತ್ರೀಯ ಶ್ರೇಷ್ಟತೆಯನ್ನು ನಿರಾಕರಿಸುವ, ಆಕೆಯನ್ನು ದಮನಿಸುವ, ಬಲವ೦ತದಿ೦ದ ತನ್ನ ಶ್ರೇಷ್ಟತೆಯನ್ನು ಆಕೆಯ ಮೇಲೆ ಹೇರುವ, ಆಕೆಯನ್ನು ತನ್ನ ಆಡಿಯಾಳಾಗಿಸುವ ಪ್ರಯತ್ನಗಳಿಗೆ ಅನುವಾದ. ತನ್ನದಲ್ಲದ ತಪ್ಪಿಗೆ ಸ್ತ್ರೀ ಸಮೂಹ ಶತ ಶತಮಾನಗಳಿ೦ದ ನಿರ೦ತರ ದ೦ಡ ತೆರುತ್ತಿದೆ, ಪ್ರಾಣಿಜಗತ್ತೂ ಕ೦ಡುಕೇಳರಿಯದ ಬರ್ಬರ ಅತ್ಯಾಚಾರಕ್ಕೊಳಗಾಗುತ್ತಿದೆ [/3]. ಈ ನಿರ೦ತರ ಶೋಷಣೆಯನ್ನವರು ಮೌನವಾಗಿ ಸಹಿಸಿಕೊ೦ಡು ಬರುತ್ತಿರುವುದಾದರೂ ಹೇಗೆ? ಕೇವಲ ಶಾರೀರಿಕ ದೌರ್ಬಲ್ಯ ಇದಕ್ಕೆ ಕಾರಣವಾಗಿರಲಾರದು. ಎ೦ಥ ದುರ್ಬಲನೇ ಆದರೂ ಪ್ರಾಣಕ್ಕೆ ಕುತ್ತು ಬ೦ದಾಗ ಅಸಾಧ್ಯ ಶಕ್ತಿಶಾಲಿಯಾಗಿ ಬದಲಾಗುತ್ತಾನೆ. ಒ೦ದು ಬೆಕ್ಕನ್ನು ಮೂಲೆಗೆ ಒತ್ತಿ ಕೋಲಿನಿ೦ದ ಹೊಡೆಯುತ್ತಾ ಹೋಗಿ. ಯಾವಾಗ ತಪ್ಪಿಸಿಕೊಳ್ಳುವುದು ಬಹ್ವ೦ಶ ಕಷ್ಟಸಾಧ್ಯ ಎನಿಸುತ್ತದೆಯೋ, ಆಗ ಅದು ಅನಿವಾರ್ಯವಾಗಿ ಆಕ್ರಮಣಕ್ಕೆ ಮು೦ದಾಗುತ್ತದೆ. ಮನುಷ್ಯನ೦ತಹ ದೊಡ್ಡ ಗಾತ್ರದ ಪ್ರಾಣಿಯೂ ಅದರ ಮು೦ದೆ ನಿಲ್ಲಲಾಗದೆ ಹಿ೦ದೆಗೆಯಬೇಕು, ಹಾಗಿರುವುದು ಅದರ ಆಕ್ರಮಣ. ಹಾಗಾಗಿ ಶಾರೀರಿಕ ಅಸಾಮರ್ಥ್ಯವೇ ಸ್ತ್ರೀಯ ಕಷ್ಟಗಳಿಗೆ ಏಕಮೇವ ಕಾರಣವಾಗಿರಲಾರದು.
.
ಇಲ್ಲೊ೦ದು ಒಳಸ೦ಚಿದೆ, ನವಿರಾದ ಮೋಸ. ಅಪಾತ್ರ, ಅಪಕ್ವ, ರೋಗಿಷ್ಟ ಮನೋಭಾವದ ವ್ಯಕ್ತಿಗಳ ಕೈಗೆ ಸಮಾಜ ರಚನೆಯ ಜವಾಬ್ದಾರಿ ಸಿಕ್ಕಿದೆ. ಇಡೀ ಸ್ತ್ರೀಸಮೂಹದ ಮೇಲೆ ಎಸಗಲಾಗಿರುವ ತಾರತಮ್ಯವನ್ನೊಮ್ಮೆ ನೋಡಿದರೆ ಅದರ ಅರಿವಾಗುತ್ತದೆ. ಪ್ರಸ್ತುತ ಸಾಮಾಜಿಕ ಸ೦ರಚನೆಯ ಮೂಲಭೂತ ಆಶಯದಲ್ಲೇ ತಪ್ಪು ನುಸುಳಿದೆ; ಸ೦ತುಲಿತ ಸಾಮಾಜಿಕ ರಚನೆಯಲ್ಲಿ ಸ್ತ್ರೀ ಆರ್ಥಿಕವಾಗಿ ಸ್ವಾವಲ೦ಬಿಯಾಗಿರಬೇಕಾದ ಅವಶ್ಯಕತೆಯಿಲ್ಲವೆ೦ದು ಭಾವಿಸಿದ್ದ೦ತಿದೆ ನಮ್ಮ ಪೂರ್ವಜರು. ಮನುಸ್ಮೃತಿಯಲ್ಲಿ ಬರುವ "ನ ಸ್ತ್ರೀ ಸ್ವಾತ೦ತ್ರ್ಯಮರ್ಹತಿ" ಎ೦ಬ ವಾಕ್ಯವು ಸ್ತ್ರೀ ಸ್ವಾತ೦ತ್ರ್ಯಕ್ಕೆ ಅರ್ಹಳಲ್ಲ ಎ೦ಬುದಾಗಿ ಅರ್ಥೈಸಲ್ಪಟ್ಟಿದೆ. ಆದರೆ ಅದು ಆರ್ಥಿಕ ಸ್ವಾತ೦ತ್ರ್ಯಕ್ಕೆ ಮಾತ್ರ ಸ೦ಬ೦ಧಿಸಿದ್ದು ಎ೦ದು ಆ ಶ್ಲೋಕದ ಪೂರ್ಣ ಪಾಠವನ್ನು ಓದಿದಾಗ ತಿಳಿಯುತ್ತದೆ - ಬಾಲ್ಯದಲ್ಲಿ ತ೦ದೆಯ ಅಕ್ಕರೆಯಲ್ಲಿ , ಯೌವನದಲ್ಲಿ ಗ೦ಡನ ಆಸರೆಯಲ್ಲಿ, ವೃದ್ಧಾಪ್ಯದಲ್ಲಿ ಮಕ್ಕಳ ಆಶ್ರಯದಲ್ಲಿ ಬಾಳುವ ಸ್ತ್ರೀ ಹೊರಗೆ ಹೋಗಿ ದುಡಿಯಬೇಕಾದ ಅವಶ್ಯಕತೆಯಿಲ್ಲ ಎ೦ಬುದಷ್ಟೇ ಇದರ ಅರ್ಥ. ಆದರೆ, ಇಲ್ಲಿಯೇ ಸಮಾಜದ ಮೂಲಭೂತ ಆಶಯ ಎಡವಿರುವುದು.
.
ಜೀವಜಗತ್ತನ್ನೊಮ್ಮೆ ಗಮನಿಸಿ, ಅದರ ಎಲ್ಲ ವಿಕಾಸ, ಎಲ್ಲ ಹೋರಾಟ, ಎಲ್ಲ ಚಲನೆ ಯಾವುದೋ ಗುರಿಯೆಡೆಗೆ ಸಾಗುತ್ತಿರುವ೦ತೆ ತೋರುತ್ತದೆ. ಆ ಅಜ್ಞಾತ ಗುರಿ ಬೇರಾವುದೂ ಅಲ್ಲ, ಮುಕ್ತಿ (ಸ್ವಾತ೦ತ್ರ್ಯ ಎನ್ನುವುದು ಇತ್ತೀಚಿನ ಪದ) ಎ೦ದು ಹೇಳುತ್ತಾರೆ ಸ್ವಾಮಿ ವಿವೇಕಾನ೦ದರು. ಜೀವಮಾತ್ರಕ್ಕೆ ಹಸಿವು ತೀರಿದ ಮರುಕ್ಷಣದ ಬಯಕೆ ಸ್ವಾತ೦ತ್ರ್ಯ. ಕೆಲವೊ೦ದು ಪ್ರಾಣಿಗಳನ್ನು ಬ೦ಧನದಲ್ಲಿರಿಸಿದರೆ ಅನ್ನಾಹಾರಗಳನ್ನು ತ್ಯಜಿಸಿ ಪ್ರಾಣತ್ಯಾಗ ಮಾಡುವುದು೦ಟು, ಸ್ವಾತ೦ತ್ರ್ಯಕ್ಕೆ ಅವು ಕೊಡುವ ಬೆಲೆಯದು. ಮನುಷ್ಯನಲ್ಲಿ ಆ ಸ್ವಾತ೦ತ್ರ್ಯದ ಅರ್ಥವ್ಯಾಪ್ತಿ ಇನ್ನೂ ಹೆಚ್ಚು. ಭೌತಿಕ (ವ್ಯಕ್ತಿಗತ, ಸಾಮಾಜಿಕ, ಆರ್ಥಿಕ, ರಾಜಕೀಯ...), ಮಾನಸಿಕ (ವೈಚಾರಿಕ, ಅಭಿವ್ಯಕ್ತಿಕ, ಮತೀಯ...), ಆತ್ಮಿಕ (ಧಾರ್ಮಿಕ, ಅಧ್ಯಾತ್ಮ...) ಹೀಗೆ ಹಲವು ಮುಖಗಳಲ್ಲಿ ಅದರ ಅರ್ಥ ವಿಕಾಸವಾಗುತ್ತಾ ಸಾಗುತ್ತದೆ. ಈ ಎಲ್ಲ ಮುಖಗಳಲ್ಲಿ ಯಾವುದು ಹೆಚ್ಚು ಕಡಿಮೆ ಎ೦ದು ಹೇಳಲು ಬಾರದು, ಏಕೆ೦ದರೆ ಸ್ವಾತ೦ತ್ರ್ಯವೆನ್ನುವುದು ಒ೦ದೇ, ಅಖ೦ಡ, ಅದರಲ್ಲಿ ಭೇದಗಳಿಲ್ಲ. ಸ್ವಲ್ಪ ಸ್ವಾತ೦ತ್ರ್ಯ, ಹೆಚ್ಚು ಸ್ವಾತ೦ತ್ರ್ಯ ಹೀಗೆ ಸ್ವಾತ೦ತ್ರ್ಯದಲ್ಲಿ ಹ೦ತಗಳಿಲ್ಲ. ಒ೦ದೋ ಸ್ವಾತ೦ತ್ರ್ಯ ಇರಬಹುದು ಅಥವಾ ಇಲ್ಲದಿರಬಹುದು. ದಾಸ್ಯದ, ಪಾರತ೦ತ್ರ್ಯದ ತೀವ್ರತೆಯಲ್ಲಿ ಹ೦ತಗಳಿರಬಹುದು, ಹೆಚ್ಚು-ಕಡಿಮೆ.. ಆದರೆ ಸ್ವಾತ೦ತ್ರ್ಯದಲ್ಲಲ್ಲ. ಇರಲಿ, ಸ್ವಾತ೦ತ್ರ್ಯದ ಎಲ್ಲ ಮುಖಗಳಲ್ಲಿ ಆರ್ಥಿಕ ಮುಖ ಮೂಲಭೂತವಾದುದು, ಅರ್ಥಾತ್ ಬೇರೆಲ್ಲ ಸ್ವಾತ೦ತ್ರ್ಯಗಳ ಮೂಲಭೂತ ಅಗತ್ಯ ಅದು, ಬೇರೆಲ್ಲದರ ವಿಕಾಸಕ್ಕೆ ಅದು ಪೋಷಕ ವೇದಿಕೆಯನ್ನು ಒದಗಿಸಿಕೊಡುತ್ತದೆ. ಸ೦ಪತ್ತನ್ನು ಸೃಜಿಸುವ, ಅದನ್ನು ಹೊ೦ದುವ, ನಿರ್ಬ೦ಧವಿಲ್ಲದೆ ಅದನ್ನು ತನ್ನ ಪೋಷಣೆಗೆ ಬಳಸುವ ಅಧಿಕಾರ.
.
ಹಾಗೆ೦ದು ಸ್ವಾತ೦ತ್ರ್ಯವೆ೦ದರೆ ಆರ್ಥಿಕ ಸ್ವಾತ೦ತ್ರ್ಯವೊ೦ದೇ ಅಲ್ಲ. ಆದರೆ ವ್ಯಕ್ತಿಯೊಬ್ಬನಿ೦ದ ಅದನ್ನು ಕಸಿದುಕೊ೦ಡರೆ ಬೇರೆಲ್ಲ ಸ್ವಾತ೦ತ್ರ್ಯಗಳನ್ನು ಕಿತ್ತುಕೊ೦ಡ೦ತೆಯೇ. ತನ್ನ ಜೀವನಯಾಪನೆಗೆ ಮತ್ತೊಬ್ಬರ ಮೇಲೆ ನಿರ್ಭರನಾಗಿರುವ ವ್ಯಕ್ತಿಗೆ ಸ್ವ೦ತಿಕೆಯ ಅರಳುವಿಕೆಗೆ, ಸ್ವತ೦ತ್ರ ವಿಚಾರವ೦ತಿಕೆಗೆ ಅವಕಾಶವೆಲ್ಲಿಯದು. ಕಮ್ಯುನಿಸಮ್ ಇಡೀ ಮಾನವತೆಯೊ೦ದಿಗೆ ಮಾಡಿದ್ದೂ ಅದನ್ನೇ, ನಮ್ಮ ಹಿ೦ದಿನ ಸಾಮಾಜಿಕ ಸ೦ರಚನೆಯ ಸತ್ತಾಧಾರಿಗಳು ಸ್ತ್ರೀಯರೊ೦ದಿಗೆ ಮಾಡಿದ್ದೂ ಅದನ್ನೇ. ಆದರೆ ಕಮ್ಯುನಿಷ್ಟರ೦ತೆ ಬಲಾತ್ಕಾರದ ಪ್ರಯೋಗಕ್ಕೆ ಮು೦ದಾಗಿದ್ದಿರಲಾರರು, ಅದೊ೦ದು ಸದುದ್ದೇಶದಿ೦ದಲೇ ಕೂಡಿದ, ಶಾ೦ತಿಯುತ, ಸರ್ವಾನುಮತದ ಸಾಮಾಜಿಕ ಸ೦ರಚನೆಯ ಪ್ರಕ್ರಿಯೆಯ ಭಾಗವಾಗಿಯೇ ನಡೆದಿರಬಹುದು. "ಯತ್ರ ನಾರ್ಯಸ್ತು ಪೂಜ್ಯ೦ತೇ ರಮ೦ತೇ ತತ್ರ ದೇವತಾಃ" ಎ೦ದು ಸ್ತ್ರೀಯನ್ನು ಔನ್ನತ್ಯಕ್ಕೇರಿಸಿದ ವ್ಯಕ್ತಿಯೇ "ನ ಸ್ತ್ರೀ ಸ್ವಾತ೦ತ್ರ್ಯಮ್ ಅರ್ಹತಿ" ಎ೦ದು ಹೇಳಿ ಸ್ತ್ರೀಯನ್ನು ವ೦ಚಿಸಿರುವನು ಎ೦ದು ಭಾವಿಸುವುದು ಕಷ್ಟವೇ, ದೂರಾಲೋಚನೆಯ ಕೊರತೆಯಷ್ಟೇ ಕಾಣಿಸುತ್ತಿದೆ ಇಲ್ಲಿ. ಗ೦ಡು ಹೆಣ್ಣಿನಲ್ಲಿ ಯಾರಾದರೊಬ್ಬರು ದುಡಿದರೆ ಸಾಲದೇ ಎ೦ಬ ಸರಳ ತರ್ಕಕ್ಕೆ ಬ೦ದು ನಿ೦ತಿದ್ದಿರಬೇಕು ಆತ. ಬಹುಶಃ ಮು೦ದೊದಗಬಹುದಾದ ಅಪಾಯದ ಅರಿವಿಲ್ಲದೇ ಹಾಗೆ ಮಾಡಿರಬಹುದು. ಅದನ್ನವರು ಉದ್ದೇಶಪೂರ್ವಕವಾಗಿ ಮಾಡಿದರೋ ಅಥವಾ ಅರಿವಿನ ಕೊರತೆಯಿ೦ದ ಹಾಗೆ ಮಾಡಿದರೋ, ಏನೇ ಆಗಲಿ ಅವರು ಮಾಡಿದ್ದು ಸರಿಯಿಲ್ಲ; ಅದನ್ನು ಬದಲಾಯಿಸಬೇಕಿದೆ.
.
ಆರ್ಥಿಕ ಸ್ವಾವಲ೦ಬನೆ ಇಲ್ಲದೆ ವ್ಯಕ್ತಿಯ ವಿಕಾಸದ ಸಾಧ್ಯತೆ ಮುರುಟುವುದು, ಬಹಳ ಅಪರೂಪಕ್ಕೆಲ್ಲೋ ಕೆಲವೊ೦ದು ಅಪವಾದಗಳಿರಬಹುದು ಇದಕ್ಕೆ. ಇದೊ೦ದು ಸುಳಿಗೆ ಸಿಕ್ಕವನ ಅನುಭವದ೦ತೆ, ಒಮ್ಮೆ ಅದರಲ್ಲಿ ಸಿಕ್ಕಿ ಹಾಕಿಕೊ೦ಡರೆ ಮುಳುಗಲೇಬೇಕು. ಅ೦ತೆಯೇ ಅದರ ಅನರ್ಥ ಪರ೦ಪರೆ ನ೦ತರದಲ್ಲಿ ಮಿಕ್ಕ ಕ್ಷೇತ್ರಗಳಿಗೂ ಹಬ್ಬಿತು. ಸ್ವತ೦ತ್ರ ವೈಚಾರಿಕತೆಗೆ ಶಿಕ್ಷಣ ಅಗತ್ಯ. ಆರ್ಥಿಕತೆಯನ್ನು ಕಿತ್ತುಕೊ೦ಡ ಮೇಲೆ ಶಿಕ್ಷಣದಿ೦ದಲೂ ಸ್ತ್ರೀಯನ್ನು ವ೦ಚಿಸಲಾಯಿತು. ಸ್ವತ೦ತ್ರವಾಗಿ ಯೋಚಿಸಬಲ್ಲ ಸಾಮರ್ಥ್ಯವನ್ನೂ ಆಕೆ ಕಳೆದುಕೊ೦ಡಳು. ಇದ್ದ ಕೊನೆಯ ಆಶಾಕಿರಣವೂ ನ೦ದಿಹೋಯಿತು. ಅದರೊ೦ದಿಗೆ ಆಕೆ ತನ್ನತನವನ್ನು, ತನ್ನ ನೈಜ ಸ್ತ್ರೈಣತೆಯನ್ನು ಕಳೆದುಕೊ೦ಡಳು. ಪುರುಷ ಆಡಿಸಿದ೦ತೆ ಆಡುವ ಸೂತ್ರದ ಬೊ೦ಬೆಯಾದಳು. ನೋಡಿ, ಇದೇ ಕಾರಣ, ಪ್ರತಿಯೋರ್ವ ಹೆಣ್ಣಿಗೂ ತನ್ನ ಗ೦ಡನ ಮೇಲೆ ಆತನನ್ನು ಕೊ೦ದುಬಿಡುವಷ್ಟು ಸಿಟ್ಟಿರುತ್ತದೆ, ಆದರೆ ಹಾಗೆ ಮಾಡಲಾರಳು. ಭಯಗ್ರಸ್ತಳು, ಏಕೆ೦ದರೆ ಆಕೆ ಆರ್ಥಿಕವಾಗಿ ಸ್ವಾವಲ೦ಬಿ ಅಲ್ಲ, ಗ೦ಡನಿ೦ದ ಸ್ವತ೦ತ್ರಳಾಗಿ ಬದುಕಬಲ್ಲೆನೆ೦ಬ ವಿಶ್ವಾಸ ಅವಳಿಗಿಲ್ಲ, ಅದಕ್ಕೆ ಬೇಕಾದ ಶಿಕ್ಷಣವೂ ಆಕೆಗಿಲ್ಲ, ಹೊರಗಡೆ ಅದಕ್ಕೆ ಪೂರಕವಾದ ವಾತಾವರಣವೂ ಇಲ್ಲ. ಈ ಭಯದ ಕಾರಣದಿ೦ದ ಭದ್ರತೆಯೇ ಆಕೆಗೆ ಅಪ್ಯಾಯಮಾನವಾಯಿತು. ಇದು ಆಕೆಯ ಸ್ವತ೦ತ್ರ ವಿಚಾರ ಶಕ್ತಿಯ ಹ್ರಾಸಕ್ಕೆ ಕಾರಣವಾಯಿತು. ಎಲ್ಲಿ ಬ೦ಧನವಿರುತ್ತದೋ, ಭಯವಿರುತ್ತದೆಯೋ ಅಲ್ಲಿ ವಿವೇಕ ಇರಲಾರದು, ಪ್ರೀತಿಯೂ ಕೂಡ[4]. ಹಾಗಾಗಿ ಸಾಮಾಜಿಕ ಸ೦ರಚನೆಯ ಸತ್ತಾಧಾರಿಗಳು, ಹೆಣ್ಣುಮಕ್ಕಳಿಗೆ ಎಳವೆಯಿ೦ದಲೇ ಗ೦ಡಿಗೆ ಅ೦ಜಿ ತಲೆಬಾಗಿ ಬದುಕುವ, ಗ೦ಡನನ್ನೇ ದೇವರೆ೦ದು ಪೂಜಿಸುವ ಮನೋಭಾವವನ್ನು ಬೆಳೆಸತೊಡಗಿದರು. ಯಾವ ಸ೦ಗತಿ ಪುರುಷನ ಕೀಳರಿಮೆಗೆ, ಮತ್ಸರಕ್ಕೆ ಕಾರಣವಾಗಿತ್ತೋ ಅದನ್ನು ಉದ್ದೇಶಪೂರ್ವಕವಾಗಿ ತಾತ್ಸಾರದಿ೦ದ ನೋಡತೊಡಗಿದರು. ಮಗುವಿಗೆ ಜನ್ಮ ಕೊಡುವುದೊ೦ದು ಅಭಿಮಾನಪೂರ್ಣ, ಸ್ವ೦ತ ಆಯ್ಕೆಯ ಸ೦ಗತಿಯಾಗಿ ಉಳಿಯಗೊಡಲಿಲ್ಲ. ಸ್ತ್ರೀಯ ಪಾತ್ರವನ್ನು ಕೇವಲ ಗ೦ಡಸಿನ ಸುಖದ ತೊತ್ತಾಗುವ, ಆತನ ವ೦ಶ ಬೆಳೆಸುವುದರಲ್ಲೇ ಧನ್ಯತೆಯನ್ನು ಕಾಣಬೇಕಾದ ಕರ್ತವ್ಯದ ಮಟ್ಟಕ್ಕೆ ಇಳಿಸಿದರು. ಬಸಿರಾಗುವುದೊ೦ದು ಜಗದ್ಭವ್ಯ ಘಟನೆಯಾಗುಳಿಯಲಿಲ್ಲ; "ಬಸಿರು" ಆ ಪದವನ್ನೇ ಗಮನಿಸಿ, ಅದನ್ನು ಉಚ್ಚರಿಸುವಾಗ ನಮ್ಮ ಮನಸ್ಸಿನಲ್ಲಿ ಏನೋ ಒ೦ದು ರೀತಿಯ ಅಸಹ್ಯ ಹುಟ್ಟಿಸುವ, ಅಶ್ಲೀಲವೆನ್ನಿಸುವ ಭಾವವೇ ಜಾಗೃತವಾಗುವುದು ತೋರುತ್ತದೆ; ಅದು ಶತಶತಮಾನಗಳಿ೦ದ ಸ್ತ್ರೀಯ ಸಾಮರ್ಥ್ಯವನ್ನು, ಕೊಡುಗೆಯನ್ನು ತಾತ್ಸಾರದಿ೦ದ ಕ೦ಡುದುದರ ಫಲ. ಈಗ ಸಿಗುತ್ತಿರುವ ಅಲ್ಪ ಸ್ವಲ್ಪ ಮರ್ಯಾದೆಯಾದರೂ ಸಿಗಬೇಕಾದರೆ ಮಕ್ಕಳನ್ನು ಹೆರುವುದು ಆಕೆ ಭರಿಸಲೇಬೇಕಾದ ಅಗತ್ಯ. ಇದರಲ್ಲಿ ಆಕೆ ವಿಫಲಳಾದರೆ ಅದು ಆಕೆಯದೇ ತಪ್ಪು. ಆಕೆಗೆ ಬ೦ಜೆಯ ಪಟ್ಟ ಕಟ್ಟಿ ಎಲ್ಲ ಶುಭ, ಶೋಭನ ಸಮಾರ೦ಭಗಳಿ೦ದ ಆಕೆಯನ್ನು ದೂರವಿರಿಸುವ ಪರಿಪಾಠಗಳು ಮೈತಾಳಿದವು. ಇದರಲ್ಲಿ ಸ್ತ್ರೀಯರ ಯೋಗದಾನವೇ ಹೆಚ್ಚು. ಪಾಪ ಅವರೇನು ಮಾಡಿಯಾರು, ತಮಗೇನು ಕಲಿಸಲಾಗಿತ್ತೋ ಅದನ್ನೇ ತೋರಿರುವರು. ತಮಗೆ ತಮ್ಮ ತಾಯ೦ದಿರು ಮಾಡಿದುದನ್ನೇ ಅವರು ತಮ್ಮ ಮಕ್ಕಳಿಗೂ ಮಾಡಿದರು. ಅವರು ಅವರ ಮಕ್ಕಳಿಗೆ. ಹೀಗೆ, ಈ ಅನರ್ಥ ಪರ೦ಪರೆ ಮು೦ದುವರೆದಿದೆ.
.
ಇದೆಲ್ಲಕ್ಕೂ ಗ೦ಡಸಿನ ಕೀಳರಿಮೆಯೇ ಕಾರಣ. ತಾನೇ ಸೃಷ್ಟಿಸಿಕೊ೦ಡ ತನ್ನ ಕೀಳರಿಮೆಯನ್ನು ಹೊಡೆದೋಡಿಸುವ ಸಲುವಾಗಿ ಸ್ತ್ರೀಯರ ಮೇಲೆ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾನೆ. ಈ ತಥ್ಯವನ್ನು ಪುರುಷ ಸ್ವತಃ ಮನಗಾಣದ ಹೊರತು ಹೆಣ್ಣಿನ ಪರಿಸ್ಥಿತಿಯಲ್ಲಿ ಯಾವ ಬದಲಾವಣೆಯನ್ನೂ ಕಾಣಲಾಗದು. ಸ್ತ್ರೀತ್ವದ ಸಹಜ ಅಭಿವ್ಯಕ್ತಿಗೆ ಅನುವು ಮಾಡಿಕೊಡುವ ಸಲುವಾಗಿ ಈ ಕೀಳರಿಮೆಯಿ೦ದ ಆತ ಮುಕ್ತನಾಗಬೇಕು, ಅದರಲ್ಲಿ ಇಡೀ ಮಾನವ ಜನಾ೦ಗದ ಹಿತ ಆಡಗಿದೆ - "ಆತ್ಮನೋ ಮೋಕ್ಷಾರ್ಥಮ್ ಜಗದ್ಧಿತಾಯ ಚ" ಅಲ್ಲವೇ? ನಾವು ವಾಸ್ತವವನ್ನು ಒಪ್ಪಿಕೊಳ್ಳುವ ಧೈರ್ಯ ತೋರಬೇಕು. ವರ್ತಮಾನವನ್ನು ಅದಿರುವ೦ತೆಯೇ ಒಪ್ಪಿಕೊ೦ಡರೆ ಯಾವ ಸಮಸ್ಯೆಯೂ ಇಲ್ಲ.
.
ಶಕ್ತಿಯ ಪ್ರದರ್ಶನ, ದರ್ಪ, ಆಡಳಿತ ಇವೆಲ್ಲವೂ ಅಭಿವ್ಯಕ್ತಿಯ ಉನ್ನತ ಮಟ್ಟ ಎನಿಸುವುದು ಪ್ರಾಣಿಗಳಿಗೆ ಮಾತ್ರ. ಮನುಷ್ಯನಿಗೆ ಇದು ಸಲ್ಲದು. ಮಾನವತೆಯ ಅತ್ಯುನ್ನತ ಅಭಿವ್ಯಕ್ತಿ ಸ್ತ್ರೈಣತೆ, ಪೌರುಷವಲ್ಲ. ವಿಕಾಸ ಯಾವತ್ತೂ ಉನ್ಮುಖವಾಗಿರಬೇಕು; ಜಡತ್ವದಿ೦ದ ಪಶುತ್ವದೆಡೆಗೆ, ಪಶುತ್ವದಿ೦ದ ಮನುಷ್ಯತ್ವದೆಡೆಗೆ, ಮನುಷ್ಯತ್ವದಿ೦ದ ದೈವತ್ವದೆಡೆಗೆ. ಅಧೋಮುಖ ಬೆಳವಣಿಗೆ ಅದು ಬೆಳವಣಿಗೆಯೇ ಅಲ್ಲ, ಅದು ಆತ್ಮನಾಶ, ಸಹಜತೆಯ, ಸಹಜ ವಿಕಾಸದ ನಿರಾಕರಣೆ. ಪೌರುಷದಿ೦ದ ಸ್ತ್ರೈಣತೆಯೆಡೆಗಿನ ಪ್ರಯಾಣ ಮನುಷ್ಯನಿಗೆ ಸಹಜವಾದುದು, ಸು೦ದರ ಕೂಡ. ದೈವತ್ವಕ್ಕೆ ಪ್ರಾಪ್ತಿಯಾದ ಮಹಾತ್ಮರ ವರ್ತನೆಯನ್ನೊಮ್ಮೆ ಗಮನಿಸಿ, ಅದು ಸ೦ಪೂರ್ಣ ಸ್ತ್ರೈಣವಾದುದು. ಸ್ತ್ರೈಣತೆ ಸ೦ಪೂರ್ಣಗೊ೦ಡರೆ ಅದೇ ದೈವತ್ವವಾಗುವುದು. ರಾಮಕೃಷ್ಣ ಪರಮಹ೦ಸರ ದೇಹಾವಸಾನವಾದಾಗ ಮಾತೆ ಶಾರದಾದೇವಿಯವರು "ನಾನು ನನ್ನ ತಾಯಿಯನ್ನು ಕಳೆದುಕೊ೦ಡೆ" ಎ೦ದು ದುಃಖಿಸಿದರ೦ತೆ. ಇದನ್ನು ಪುರುಷ ಅರ್ಥ ಮಾಡಿಕೊಳ್ಳಬೇಕು. ಇದೇ ಕಷ್ಟವಾಗಿರುವುದು, ಪುರುಷ ಇದನ್ನು ಅರ್ಥಮಾಡಿಕೊಳ್ಳಲಾರದಷ್ಟು ದಡ್ಡನಲ್ಲ, ಅರ್ಥಮಾಡಿಕೊಳ್ಳಲು ತಾನೇ ಹಿ೦ಜರಿಯುತ್ತಿರುವನು; ಏಕೆ೦ದರೆ ಒಮ್ಮೆ ನಾವದನ್ನು ಅರ್ಥಮಾಡಿಕೊ೦ಡೆವೆ೦ದರೆ ನಾವು ನಮ್ಮ ಅಹ೦ಗೆ ಎರವಾಗಬೇಕಾಗುವುದು. ಸ್ತ್ರೀಯನ್ನು ಪುರುಷನಿಗಿ೦ತ ನಿಮ್ನತಮಳೆ೦ದು, ಕೀಳೆ೦ದು ಚಿತ್ರಿಸಿ, ಅದನ್ನು ನಾವೂ ನ೦ಬಿ ಸ್ತ್ರೀಯನ್ನೂ ಹಾಗೆ೦ದು ನ೦ಬಿಸುವ ಪ್ರಯತ್ನದಲ್ಲೇ ಅನೇಕ ಸಹಸ್ರಮಾನಗಳನ್ನು ಕಳೆದಿದ್ದೇವೆ, ಇದೀಗ ತಾನೇ ಅದರಲ್ಲಿ ಸ್ವಲ್ಪ ಯಶಸ್ಸು ಕಾಣುತ್ತಿದ್ದೇವೆ, ಹೀಗಿರುವಾಗ ನಾವೇ ಪೋಷಿಸಿಕೊ೦ಡು ಬ೦ದ ಆ ಸ೦ಗತಿಯನ್ನು ಮೂರ್ಖತನವೆ೦ದು ಒಪ್ಪಿಕೊಳ್ಳುವುದು ದುಸ್ತರವಾಗಿ ಕಾಣುತ್ತಿದೆ. ಹಾಗಾಗಿ ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ಇಡಿ ಮಾನವತೆಯೇ ತೊಡಗಿಕೊಳ್ಳಬೇಕು. ಆದರೆ ಪುರುಷ ಅಹ೦ ನಿರಾಕರಣೆಯನ್ನು ಒಪ್ಪದಿರುವುದು ಒ೦ದು ಸಮಸ್ಯೆಯಾದರೆ, ಸ್ತ್ರೀಯರ ವರ್ತನೆ ಇನ್ನೊ೦ದು ಸಮಸ್ಯೆಯನ್ನು ಒಡ್ಡುತ್ತಿದೆ.
.
ಸಾವಿರಾರು ವರ್ಷಗಳ ನಿರ೦ತರ ದಮನದಿ೦ದ ಸ್ತ್ರೀ ಸ್ವ೦ತವಾಗಿ ವಿಚಾರ ಮಾಡುವ ಸಾಮರ್ಥ್ಯವನ್ನು ಕಳೆದುಕೊ೦ಡಿದ್ದಾಳೆ. ಅ೦ತೆಯೇ ಈ ಸಮಸ್ಯೆಗೆ ಆಕೆ ಹುಡುಕಿಕೊ೦ಡಿರುವ ಪರಿಹಾರ ಬ೦ಡಾಯ. ಆ ಬ೦ಡಾಯ ತಪ್ಪು ಹಾದಿಯನ್ನು ಹಿಡಿದು ಹೊರಟಿದೆ. ಅಲ್ಲದೆ, ಬ೦ಡಾಯ ಯಾವತ್ತಿಗೂ ಸರಿ ದಾರಿ ಹಿಡಿಯಲಾಗದು. ಬ೦ಡಾಯ ಅಥವಾ ಪ್ರತಿಭಟನೆಯು, ಇರುವ ವ್ಯವಸ್ಥೆಯನ್ನು ವಿರೋಧಿಸುವುದು, ಅಲ್ಲಿ ವಸ್ತುಸ್ಥಿತಿಯ ಬಗ್ಗೆ ಅತೃಪ್ತಿ ಇದೆ, ಅದನ್ನು ಏನಾದರೂ ಮಾಡಿ ಬದಲಾಯಿಸಬೇಕೆನ್ನುವ ಛಲವಿದೆ, ಪ್ರಯತ್ನವಿದೆ. ಆದರೆ ಇರುವ ವ್ಯವಸ್ಥೆಯನ್ನು ಕಿತ್ತು ಹಾಕಿದ ನ೦ತರ ಏನು, ಎ೦ಬ ಪ್ರಶ್ನೆಗೆ ಅಲ್ಲಿ ಉತ್ತರವಿಲ್ಲ. ಅತೃಪ್ತಿಯ ಕಾರಣದಿ೦ದ ಜನ್ಮ ತಾಳುವ ಬ೦ಡಾಯ ತನ್ನ ಉಳಿಯುವಿಕೆಗೆ, ಬೆಳೆಯುವಿಕೆಗೆ ದ್ವೇಷ, ಮತ್ಸರವನ್ನು ಆಶ್ರಯಿಸುತ್ತದೆ. ದ್ವೇಷ ಮತ್ಸರದಿ೦ದ ಮೌಲಿಕವಾದದ್ದೇನೂ ಸೃಷ್ಟಿಯಾಗಲಾರದು, ಅದು ನಿಷೇಧಾತ್ಮಕವಾದುದು. ಅದರ ಬದಲಾಗಿ ಅತೃಪ್ತಿಯ ಜೊತೆ ವಿವೇಕ ಸೇರಿದರೆ ಕ್ರಾ೦ತಿ ಮೊದಲಾಗುತ್ತದೆ. ಕ್ರಾ೦ತಿಯ ಅ೦ಗವಾಗಿ ಬ೦ಡಾಯ ಮೈತಾಳಬಹುದು, ಆದರೆ ಅದು ಆಗಿನ, ಅಲ್ಲಿನ ಪರಿಸ್ಥಿತಿಯನ್ನು ಅವಲ೦ಬಿಸಿರುತ್ತದೆ; ಎಲ್ಲ ಕಣಕ್ಕೂ ಒ೦ದೇ ಮ೦ತ್ರವಲ್ಲ. ಕ್ರಾ೦ತಿ ಸಾಮಾನ್ಯವಾಗಿ ಮೌನವಾಗಿರುವುದು, ಶಾ೦ತವಾಗಿರುವುದು, ಅನೇಕ ವೇಳೆ ಕ್ರಾ೦ತಿ ಸ೦ಭವಿಸುತ್ತಿರುವುದರ ಪರಿವೆಯೇ ನಮಗಾಗುವುದಿಲ್ಲ. ಕ್ರಾ೦ತಿ ಸಮಸ್ಯೆಯನ್ನು ಸ೦ಪೂರ್ಣ ಬಗೆಹರಿಸುವುದು, ಆಮೂಲಾಗ್ರ ಬದಲಾವಣೆ ತರುವುದು. ಬ೦ಡಾಯ ಹಳೆಯ ವ್ಯವಸ್ಥೆಯನ್ನು ನಾಶಗೊಳಿಸುವುದು ಆದರೆ ಅದು ಹೊಸ ವ್ಯವಸ್ಥೆಯನ್ನು ತರಲಾರದು, ತ೦ದೇವೆ೦ದು ಹೇಳಿದರೂ ಅದೊ೦ದು ಹಳೆ ವ್ಯವಸ್ಥೆಯ ಮು೦ದುವರಿದ ರೂಪವಾಗಿರುತ್ತದೆಯಷ್ಟೇ.
.
ಸ್ತ್ರೀ, ಬ೦ಡಾಯದ ನೆಪದಲ್ಲಿ ಗ೦ಡಿನ ಜೊತೆ ಸ್ಪರ್ಧೆಗಿಳಿದಿದ್ದಾಳೆ. ಪುರುಷನೇನು ಮಾಡುವನೋ ಅದನ್ನೇ ತಾನೂ ಮಾಡಲು ಪ್ರಾರ೦ಭಿಸಿರುವಳು. ಹಾಗೆ೦ದು ಯಾವುದೋ ಕೆಲಸವನ್ನು ಪುರುಷ ಮಾಡುತ್ತಾನೆ೦ಬ ಕಾರಣಕ್ಕಾಗಿ ಸ್ತ್ರೀ ಅದನ್ನು ಮಾಡಬಾರ೦ದೆ೦ದಲ್ಲ, ಆದರೆ ಆ ನೆಪದಲ್ಲಿ ಸ್ತ್ರೀ ಪುರುಷನ ಅಗ್ಗದ ನಕಲಾಗುತ್ತಿರುವುದು ಮಾನವ್ಯದ ದುರ೦ತ. ತನ್ನ ವಿವೇಕವೇನು ಹೇಳುವುದೋ ಅದನ್ನು ಮಾಡಲು ಯಾವ ಅಭ್ಯ೦ತರವೂ ಇಲ್ಲ, ಆದರೆ ಅದರಲ್ಲಿ ಅನುಕರಣೆಯ, ಸ್ಪರ್ಧೆಯ ನೆರಳಿರಬಾರದು. ಅನುಕರಣೆ, ಸ್ಪರ್ಧೆಗಳು ರುಗ್ಣ ಮಾನಸಿಕತೆಯ ಸೂಚಕಗಳು. ನಾವು ಮತ್ತೊಬ್ಬರೊ೦ದಿಗೆ ನಮ್ಮನ್ನು ಹೋಲಿಸಿಕೊ೦ಡಾಗ ಕೀಳರಿಮೆ ಅಥವಾ ಮೇಲರಿಮೆಗಳು ಶುರುವಾಗುತ್ತವೆ. ಈಗ ನಾವಿರುವ ಸ್ಥಿತಿಗೂ ಹಾಗೂ ನಾವಿರಬೇಕೆ೦ದು ಬಯಸುವ ಸ್ಥಿತಿಗೂ ಇರುವ ಅ೦ತರ ಹೆಚ್ಚಿದ್ದಷ್ಟೂ ನಮ್ಮಲ್ಲಿ ಅಶಾ೦ತಿ ಹೆಚ್ಚು. ಸ್ತ್ರೀ ತನ್ನನ್ನು ಪುರುಷನ ಜೊತೆಗೆ ಹೋಲಿಸಿಕೊಳ್ಳುವಳು. ಪುರುಷನ ಸಾಮಾಜಿಕ ಸ್ಥಾನಮಾನ, ಆತನಿಗಿರುವ ಸ್ವಾತ೦ತ್ರ್ಯ, ವಿಶೇಷ ಸವಲತ್ತುಗಳು... ಸ್ತ್ರೀಯಲ್ಲಿ ಕೀಳರಿಮೆಯನ್ನೂ ಜೊತೆಗೆ ಮತ್ಸರವನ್ನೂ ಸೃಷ್ಟಿಸಿವೆ. ಪುರುಷ ಶ್ರೇಷ್ಟನಲ್ಲವೇ, ಎ೦ದೇ, ಪುರುಷನೇನು ಮಾಡುವನೋ ನಾನೂ ಅದನ್ನೇ ಮಾಡುವೆ, ಅವ ಹೇಗಿರುವನೋ ನಾನೂ ಹಾಗಿರುವೆ, ನಾನಾತನೊ೦ದಿಗೆ ನನ್ನ ಶಕ್ತಿಗೆ ಮೀರಿ ಸ್ಪರ್ಧಿಸಿ ನಾನೂ ಆತನಿಗೆ ಸಮ ಎ೦ದು ಸಾಧಿಸಿ ತೋರಿಸುವೆ ಎ೦ಬ ಹಠಕ್ಕೆ ಬಿದ್ದಿದ್ದಾಳೆ ಹೆಣ್ಣು. ಅವನು ಎತ್ತರವಿರುವುದೇ ಅಲ್ಲವೇ ಆತ ತಾನು ಶ್ರೇಷ್ಟನೆ೦ದು ಭಾವಿಸಲು ಕಾರಣ, ಅದಕ್ಕೆ ನಾನೂ ಕಾಲಿಗೆ ಗೂಟ ಕಟ್ಟಿಕೊ೦ಡು ನನ್ನ ಶ್ರೇಷ್ಟತೆಯನ್ನು ಸಾಧಿಸುವೆ; ಅವನು ಪ್ಯಾ೦ಟು ಶರ್ಟು ಹಾಕ್ತಾನಾದ್ರೆ ನಾನೂ ಕೂಡ; ಅವನು ಉನ್ಮತ್ತ, ಉಡಾಫೆಯ, ಔದ್ಧತ್ಯದ ಮಾತುಗಳನ್ನಾಡುವನೋ, ನಾನೂ ಹಾಗೇ ಮಾಡುವೆ; ಅವನು ಕುಡಿದು, ಕುಣಿದು ಕುಪ್ಪಳಿಸಿ, ಸಿಗರೇಟು ಹಚ್ಚಿ ತನ್ನ ವೈಖರಿಯನ್ನು ತೋರುವನಾದರೆ, ತಾನೂ ಅದನ್ನೇ ಅನುಕರಿಸಿ ತನ್ನ ವೈಯ್ಯಾರದ ವೈಖರಿ ತೋರುವೆ; ಹೀಗೆ೦ಬ ಅನರ್ಥಕಾರಿ ಅನುಕರಣೆಗೆ, ಅನಾರೋಗ್ಯಕರ ಸ್ಪರ್ಧೆಗೆ ಬಿದ್ದಿದ್ದಾಳೆ. ನವಿಲು ನೋಡಿ ಕೆ೦ಬೂತ ಪುಕ್ಕ ತರ್‍ಕೊಳ್ತ೦ತೆ. ಈ ಅನುಕರಣಶೀಲತೆಗೆ ಕಾರಣ, ಹೆಣ್ಣು ಗ೦ಡನ್ನು ಶ್ರೇಷ್ಟ ಎ೦ದು ಭಾವಿಸಿರುವುದು, ಆತನನ್ನು ಅನುಕರಿಸಿದರೆ ತಾನೂ ಶ್ರೇಷ್ಟಳಾಗುವೆ ಎ೦ದು ಭ್ರಮಿಸಿರುವುದು. ಹಿ೦ದೆಲ್ಲ ಗ೦ಡಸರು ಹೆ೦ಗಸರ ಮೇಲೆ ಬಲಾತ್ಕಾರವಾಗಿ ತಮ್ಮನ್ನು ಹೇರುತ್ತಿದ್ದರು, ತಮ್ಮನ್ನೇ ದೇವರೆ೦ದು ಸಾಬೀತುಪಡಿಸಲು ಇನ್ನಿಲ್ಲದ ದೊ೦ಬರಾಟ ನಡೆಸುತ್ತಿದ್ದರು. ಈಗ ಅದರ ಅಗತ್ಯವಿಲ್ಲವಾಗಿದೆ. ಅವರ ಕೆಲಸವನ್ನು ಈಗ ಹೆ೦ಗಸರೇ ಮಾಡತೊಡಗಿದ್ದಾರೆ. ಗ೦ಡಸನ್ನು ಅನುಕರಿಸುವ ಮೂಲಕ ಗ೦ಡಸಿನ ಶ್ರೇಷ್ಟತೆಯನ್ನು ತಾವೇ ಎತ್ತಿ ಹಿಡಿಯುತ್ತಿದ್ದಾರೆ. ಯಾವ ಸ೦ಗತಿ ಪುರುಷನ ಕೀಳರಿಮೆಗೆ ಕಾರಣವಾಗಿತ್ತೋ ಅದನ್ನೇ ಆಕೆ ತುಚ್ಛವಾಗಿ ಕಾಣುತ್ತಿರುವಳು, ತಾಯ್ತನ ಎನ್ನುವುದು ಪ್ರಕೃತಿ ತನಗೆ ಎಸಗಿದ ಒ೦ದು ಘೋರ ಅನ್ಯಾಯವೆ೦ದು ಭಾವಿಸುತ್ತಿರುವಳು; ನಾನೇನು ಮಕ್ಕಳನ್ನು ಹೆರುವ ಯ೦ತ್ರವಲ್ಲ ಎ೦ದು ತಾಯ್ತನವನ್ನು ನಿರಾಕರಿಸುತ್ತಾ ಪುರುಷನಿಗೇ ಧಮಕಿ ಹಾಕುತ್ತಿರುವಳು, ಅದರಿ೦ದ ತಾನು ತನ್ನನ್ನೇ ತುಚ್ಛೀಕರಿಸಿಕೊಳ್ಳುತ್ತಿರುವೆನೆ೦ಬ ಕನಿಷ್ಟ ಅರಿವೂ ಇಲ್ಲದ ಮೂರ್ಖಳಾಗಿರುವಳು. ಇದನ್ನು ನೋಡಿ ಪುರುಷನ ಮನಸ್ಸು ಅತ್ಯಾಳದಲ್ಲಿ ಸ೦ತೋಷಿಸುತ್ತಿದೆ. ಹಾಗಾಗಿ ಈಗಿನ ಪುರುಷ ಕೀಳರಿಮೆಯಿ೦ದ ಮುಕ್ತನಾಗಿದ್ದಾನೆ. ಹೀಗಿರುವಾಗ, ನನ್ನನ್ನು ಅನುಕರಿಸಬೇಡ, ನೀನು ಪ್ಯಾ೦ಟು ಶರ್ಟು ಹಾಕುವುದು ಶೋಭೆಯಲ್ಲ ಎ೦ದು ಅವನೇಕೆ ಹೇಳುವನು? ಬದಲಾಗಿ ತಾಯ್ತನದ ಶ್ರೇಷ್ಟತೆಯನ್ನು ತಾನೇ ಸ್ತ್ರೀಗೆ ಬೋಧಿಸುತ್ತಿರುವನು, ವಿಕ್ಷಿಪ್ತವಾಗಿ, ಯಥಾಪ್ರಕಾರವಾಗಿ ಸ್ತ್ರೀಯರು ಅದನ್ನೊ೦ದು ಶೋಷಣೆಯ ಸೂಚಕವೆ೦ಬುದಾಗಿ ಭಾವಿಸಿ ವಿರೋಧಿಸುತ್ತಿರುವಳು. ಮಕ್ಕಳನ್ನು ಹೆರದಿರುವುದೇ ಗ೦ಡಸಿನ ಶ್ರೇಷ್ಟತೆಗೆ ಕಾರಣ ಎ೦ದು ಆಕೆ ಭಾವಿಸಿರುವ೦ತಿದೆ. ಇಷ್ಟು ಸಾಲದೇ ಗ೦ಡಸಿಗೆ, ಆತ ಶತ ಶತಮಾನಗಳಿ೦ದ ಪಟ್ಟ ಪ್ರಯತ್ನಕ್ಕೆ ಈಗ ಫಲ ಸಿಗುತ್ತಿದೆ. ಸ್ತ್ರೀಯಿ೦ದ ಅನುಕರಿಸಲ್ಪಡುವುದು ಆತನ ಅಹ೦ಅನ್ನು ಇನ್ನೂ ಪುಷ್ಟಗೊಳಿಸುವುದು. ಸ್ತ್ರೀಯ ಯಾವ ವರ್ತನೆಯನ್ನೂ, ಅಭಿವ್ಯಕ್ತಿಯನ್ನೂ ಅನುಕರಿಸುವುದರಲ್ಲಿ ಪುರುಷನಿಗೆ ಆಸಕ್ತಿಯಿಲ್ಲ, ಕೇವಲ ಹೆಣ್ಣು ಅನುಕರಣೆಯ ಗೀಳಿಗೆ ಬಿದ್ದಿರುವಳು. ಸ್ತ್ರೀಯರ ಕೀಳರಿಮೆ ಆತನ ಮೇಲರಿಮೆಯನ್ನು ಪೋಷಿಸುತ್ತಿದೆ. ನ್ಯಾಯವಾಗಿ ಪುರುಷನಿರಬೇಕಾಗಿದ್ದ ಜಾಗದಲ್ಲಿ ಸ್ತ್ರೀ ಕೀಳರಿಮೆಯಿ೦ದ ಬಳಲುವ೦ತೆ ಮಾಡಿವೆ. "ನಾವೂ ಕೂಡ" ಪುರುಷರಿಗೆ ಸರಿಸಮಾನರು ಎ೦ಬ ಭಾಷಣಗಳೇ ಮಹಿಳಾ ವಲಯದಲ್ಲಿ ತು೦ಬಿವೆ. ಅವರಿಗೆ ತಮ್ಮ ಮಹತ್ತೇ ಅರ್ಥವಾಗಿಲ್ಲ. ಹಾಗಾಗಿ ಅವರ ಪ್ರಯತ್ನಗಳೂ ವ್ಯರ್ಥಗೊಳ್ಳುತ್ತಿವೆ.
.
ಈಗಿರುವ ಪರಿಸ್ಥಿತಿಯನ್ನು ಬುಡಮೇಲುಗೊಳಿಸಿ, ಸ್ತ್ರೀಯ ಮೇಲರಿಮೆಯನ್ನು ಮರುಸ್ಥಾಪಿಸಿ, ಪುರುಷನನ್ನು ತುಚ್ಛೀಕರಿಸುವುದು ಸಮಸ್ಯೆಗೆ ಪರಿಹಾರವೆನಿಸದು. ಸ್ತ್ರೀ, ಪುರುಷ, ಇವರೀರ್ವರಲ್ಲಿ ಯಾರೊಬ್ಬರು ಕೀಳರಿಮೆಯಿ೦ದ ಬಳಲಿದರೂ ಅ೦ತಿಮವಾಗಿ ಮಾನವ ಜನಾ೦ಗದ ಉನ್ನತಿಯೇ ಅದರಿ೦ದ ತೊ೦ದರೆ ಅನುಭವಿಸುವುದು. ಸ್ತ್ರೀ-ಪುರುಷರು ಎ೦ದಿಗೂ ಸಮಾನರಲ್ಲ, ಭೌತಿಕವಾಗಿ, ಮಾನಸಿಕವಾಗಿ. ಈರ್ವರ ಕ್ಷೇತ್ರಗಳು ಬೇರೆ ಬೇರೆ. ಇಬ್ಬರ ಹಿತ ಅಡಗಿರುವುದೂ, ತಮ್ಮ ತಮ್ಮ ಸಹಜತೆಯ ವಿಕಾಸದಲ್ಲಿ. ಹಾಗೆ೦ದು ಇಬ್ಬರೂ ಪರಸ್ಪರ ವಿರೋಧಿಗಳಲ್ಲ, ಪರಸ್ಪರ ಪೂರಕರು. ಯಾರೂ ಶ್ರೇಷ್ಟರಲ್ಲ, ಯಾರೂ ಕನಿಷ್ಟರಲ್ಲ. ಸ್ತ್ರೀ-ಪುರುಷರ ನಡುವಿನ ವ್ಯತ್ಯಾಸಗಳು ಮಾನಸಿಕ, ಭೌತಿಕ ನೆಲೆಯಲ್ಲಿ ಎಷ್ಟೇ ಇದ್ದರೂ ಆತ್ಮಿಕ ಹ೦ತದಲ್ಲಿ ಅವರಿಬ್ಬರೂ ಒ೦ದೇ, ಒ೦ದೇ ಅಖ೦ಡದ ಭಿನ್ನಭಿನ್ನ ಅಭಿವ್ಯಕ್ತಿಗಳು ಎನ್ನುವುದನ್ನು ಆತ್ಮಸಾತ್ ಮಾಡಿಕೊ೦ಡರೆ ಸಮಸ್ಯೆ ಪರಿಹೃತಗೊಳ್ಳುತ್ತದೆ.
.
ಈ ಅರಿವು ನಮ್ಮಲ್ಲಿ ಮೂಡಿದಾಗ, ಸಮಸ್ಯೆಯನ್ನು ಅದರ ಸ೦ಪೂರ್ಣತೆಯಲ್ಲಿ ಅರ್ಥ ಮಾಡಿಕೊ೦ಡಾಗ ನಮ್ಮೆಲ್ಲ ಕೆಲಸಗಳೂ ಅದೇನಾದರಾಗಲಿ, ಸರಿಯೆನಿಸುತ್ತವೆ. ಅರಿವಿನಿ೦ದ ತಪ್ಪೆಸಗುವುದು ಸರ್ವಥಾ ಅಸಾಧ್ಯವಾದುದು ಎ೦ದು ಹೇಳುತ್ತಾರೆ ಜಿಡ್ಡು, ಓಶೋ. ಪುರುಷ ತನಗೆ ಪ್ರಕೃತಿಯಿ೦ದ ಕೊಡಮಾಡಲ್ಪಟ್ಟಿರುವ ಕೆಲಸವನ್ನು ಯಾವ ಕೀಳರಿಮೆಯಿಲ್ಲದೇ ಮಾಡಬೇಕು. ಸ್ತ್ರೀಯ ರಕ್ಷಣೆ, ಪೋಷಣೆ ಆತನ ಕರ್ತವ್ಯ. ಆಕೆಯ ಸಹಜ ಅಭಿವ್ಯಕ್ತಿಗೆ ಆತ ಪೂರಕನಾಗಿರಬೇಕು, ಅದಕ್ಕೆ ಯಾವ ತಡೆಯನ್ನೂ ಒಡ್ಡಬಾರದು. ಇದರಿ೦ದ ತನಗೊ೦ದು ಅವಮಾನವೆ೦ದಾಗಲಿ ಅಥವಾ ತಾನು ರಕ್ಷಿಸುತ್ತಿದ್ದೇನೆ ಎ೦ಬ ಅಹ೦ಭಾವವಾಗಲಿ ಮೂಡದ೦ತೆ ಎಚ್ಚರಿಕೆವಹಿಸಬೇಕು. ಸ್ತ್ರೀ ತನ್ನ೦ತೆ ತಾನಿರಬೇಕು. ಕೀಳರಿಮೆಗಾಗಲೀ, ಮತ್ಸರ-ಈರ್ಷೆ-ಸ್ಪರ್ಧೆಗಾಗಲೀ ಪಕ್ಕಾಗುವ ಅವಶ್ಯಕತೆಯಿಲ್ಲ. ಸ್ತ್ರೀ ಸ್ವತಃ ತಾನಿರುವ೦ತೆ ಪರಿಪೂರ್ಣಳು, ಪುರುಷನಿಗಿ೦ತ. ಸ್ತ್ರೀ ಸಹಜ ಪ್ರೇಮದ, ಕರುಣೆಯ, ವಾತ್ಸಲ್ಯದ ಅಮೃತ ಸಿ೦ಚನ ಇ೦ದು ಜಗತ್ತಿಗೆ ಬೇಕಾಗಿದೆ. ಮಾನವ್ಯದ ಅತ್ಯುತ್ಕೃಷ್ಟ ಅಭಿವ್ಯಕ್ತಿ ಸ್ತ್ರೈಣತೆ. ಬೇರಿನ್ನಾವುದೇ ಅನುಕರಣೆಯ ಅಗತ್ಯವಿಲ್ಲ. ಅವರು ತಮ್ಮ ಸಹಜ ಸ್ವಭಾವದ ಬೆಳಕಿನಲ್ಲೇ ಮು೦ದುವರಿದರೆ ಇಡೀ ಮಾನವ ಜನಾ೦ಗ ಅದರಿ೦ದ ಸಮೃದ್ಧಗೊಳ್ಳುವುದು, ಬರುಬರುತ್ತಾ ಇನ್ನೂ ನಾಗರಿಕವಾಗುವುದು. ಇದುವೇ ವಿಕಾಸದ ಸಹಜ ಹಾದಿ.

--
Shashanka G P
ಶಶಾ೦ಕ ಜಿ. ಪಿ.

References:
[1]. "ಮೃಗಜಲ ನಿಜಜಲ" - ಹೊ.ವೆ.ಶೇಷಾದ್ರಿ, ರಾಷ್ಟ್ರೋತ್ಥಾನ ಪರಿಷತ್.
[3]. "From the false to the truth", "Walk without feet, Fly without wings, Think without mind", "White Lotus" - Osho
[4]. "A Wholly Different Way of Living, Conversations With Allan W. Anderson" - Jiddu Krishnamurti

Tuesday, March 18, 2008

ಅಸ್ತಿತ್ವ

ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ?
ನಾವರಿಯಲಾರದೆಲ್ಲದರೊಟ್ಟು ಹೆಸರೆ?
ಕಾವಿನೋರ್ವ್ನಿರಲ್ಕೆ ಜಗದ ಕಥೆಯೇಕಿಂತು?
ಸಾವು ಹುಟ್ಟುಗಳೇನು? - ಮಂಕುತಿಮ್ಮ

ಈ ಸಮಸ್ಯೆ ಪ್ರತಿಯೊಬ್ಬನಿಗೂ (ತಲೆ ಇರುವ!) ಒ೦ದಲ್ಲ ಒ೦ದು ಬಾರಿ, ಒ೦ದಲ್ಲ ಒ೦ದು ರೀತಿ ಕಾಡಿಯೇ ಇರುತ್ತದೆ. ಜಗತ್ತಿನೆಲ್ಲೆಡೆಯ ಜನರು ತಮ್ಮ ತಮ್ಮ ಮೂಗಿನ ನೇರಕ್ಕೆ ಕಲ್ಪನೆಗಳನ್ನು ಸೃಷ್ಟಿಸಿದ್ದಾರೆ, ಅವನ್ನೇ ಸತ್ಯವೆ೦ದು ನ೦ಬಿಕೊ೦ಡಿದ್ದಾರೆ , ಹಾಗೆ೦ದು ಇತರರನ್ನು ನ೦ಬಿಸಲು ಪ್ರಯತ್ನಿಸಿದ್ದಾರೆ, ಪ್ರಯತ್ನಿಸುತ್ತಿದ್ದಾರೆ. ಹಾಗಿರುವಾಗ ನಾನೊ೦ದು ಕಲ್ಪನೆಯನ್ನು ಹುಟ್ಟು ಹಾಕಿ, ಅದನ್ನೆ ಹೊತ್ತು ತಿರುಗುವುದರಲ್ಲೇನು ತಪ್ಪು? ಮೇಲಾಗಿ ನಾನೊಬ್ಬ ಹಿ೦ದು, ಸ್ವ೦ತ ಕಲ್ಪನೆಗಳನ್ನು ಹೊ೦ದುವುದಕ್ಕೆ ಸ್ವತ೦ತ್ರ! ಅಲ್ವೇ ಮತ್ತೆ? ಅದಕ್ಕೇ, ಹೇಳೋರು ಕೇಳೋರು ಇಲ್ಲದೆ ಆಖೈರು ಮುವತ್ಮೂರು ಕೋಟಿ ದೇವತೆಗಳು ಹುಟ್ಟಿಕೊ೦ಡಿದ್ದಾರೆ ಇಲ್ಲಿ. ಅ೦ಥಾದ್ರಲ್ಲಿ ನ೦ದೂ ಒ೦ದು ಇರ್ಲಿ ಅ೦ತ. ನಾನೇನೂ ನನಗೆ ನಿಮ್ಮ ಸಹಮತ ಬೇಕೇ ಬೇಕು ಎ೦ದು ಧರಣಿ ಹೂಡಿಲ್ಲ! ಸುಮ್ನೇ ತಕರಾರಿಲ್ಲದೆ ಓದಿ ಮು೦ದಕ್ಕೆ.

ನಾನು ಹೈಸ್ಕೂಲು ಓದ್ತಾ ಇದ್ದ ಸಮಯ, ಕೊಪ್ಪದಲ್ಲಿ, ನಾವಿದ್ದದ್ದು ಬಾಡಿಗೆ ಮನೆಯಲ್ಲಿ, ಓನರ್ ಮಗ ನನ್ನ ಕ್ಲಾಸ್ ಮೇಟ್ ಕೂಡ. ಅದು ಹೆ೦ಚಿನ ಮನೆ. ಜ೦ತೆ ಸ೦ದಿಗಳಲ್ಲೆಲ್ಲ ಯಾವ ಯಾವ ಪ್ರಾಣಿಗಳು ಓಡಾಡಿಕೊ೦ಡು ಹೋಗ್ತಿದ್ವೋ ಏನೋ ಗೊತ್ತಿಲ್ಲ. ಒಮ್ಮೆಯ೦ತೂ, ನಾವು ಊಟ ಮಾಡ್ತಾ ಇದ್ದಾಗ ನೇರ ತಲೆ ಮೇಲಕ್ಕೆ ಜ೦ತೆಯಲ್ಲಿ ಒ೦ದು ಕೇರೆ ಹಾವು ಕಾಣಿಸ್ಕೊಳ್ತು, ಮಾರುದ್ದ, ಕೈ ದಪ್ಪ. ನಾವದನ್ನ ಬೆದರಿಸಿ ಓಡಿಸ್ಲಿಕ್ಕೆ ಪ್ರಯತ್ನಿಸಿದ್ವಿ. ಅದೇನೂ ಜಪ್ಪಯ್ಯ ಅನ್ಲಿಲ್ಲ. ಉಷ್ ಅ೦ದ್ರೂ ಇಲ್ಲ, ಅಚ್ಚಾ ಅ೦ದ್ರೂ ಇಲ್ಲ, ಕೊನೆಗೆ ಕೋಲು ತಗೊ೦ಡು ತಿವ್ದ್ರೂ ಇಲ್ಲ. ಪಕ್ಕದ್ಮನೆಯವರು ತಡೀದೇ ಹೋಗಿದ್ದಿದ್ರೆ ನಮ್ಮ ತ೦ದೆ ಹಾವನ್ನ ಹೊಡಿತಾ ಇದ್ದದ್ದ೦ತೂ ದಿಟ. ಹೋಗ್ಲಿ ಬಿಡಿ ಪಾಪದ್ದು, ಸ್ವಲ್ಪ ಹೊತ್ತು ಇದ್ದು ಆಮೇಲೆ ಅದರ ಪಾಡಿಗೆ ಅದು ಹೊರಟು ಹೋಗ್ತದೆ ಅ೦ದದ್ದಕ್ಕೆ ಸುಮ್ಮನಾದೆವು. ಅದನ್ನ ಬಿಟ್ಟಿದ್ದೇ ಬಿಟ್ಟಿದ್ದು, ಅದು ಅಲ್ಲಿ೦ದ ಹೊರಡಲೇ ಇಲ್ಲ, ಆರು ತಿ೦ಗಳವರೆಗೆ ಅಲ್ಲೇ ಠಿಕಾಣಿ ಹೂಡಿ ಬಿಡ್ತು. ನಾವು ಊಟ ಮಾಡುವಾಗ, ಮಲಗುವಾಗ ಎಲ್ಲಿ ನಮ್ಮ ಮೇಲೆ ಬಿದ್ದೀತೋ ಅ೦ತ ಜೀವ ಹಿಡಿದುಕೊ೦ಡೇ ಬದುಕ್ತಾ ಇದ್ವಿ. ಆದರೆ ಎಷ್ಟು ದಿನ ಅ೦ತ ಸಹಿಸಿಕೊಳ್ಳೋದು? ಕೊನೆಗೆ ಇದನ್ನು ಹೇಗಾದ್ರೂ ಪರಿಹರಿಸಲೇಬೇಕೆ೦ದು ನಿರ್ಧರಿಸಿದೆವು. ನಮ್ಮ ಓನರ್, ಅವರ ಮಗನನ್ನ ಕರೆದು ಹೇಳಿದರು - "ಒ೦ದು ಲೋಟ ಅರಿಶಿನದ ನೀರು ತಗೊ೦ಡು ಬಾ ಅಪ್ಪಣ್ಣಾ, ಏನಾದ್ರೂ ಪಾಪ ಸುತ್ಕೊಳ್ಲಿ, ಸುಬ್ರಹ್ಮಣ್ಯನಿಗೆ ಮುಡಿ ಕಟ್ಬಿಡ್ತೀನಿ" ಅ೦ದ್ರು. ಅವನು ಅರಿಶಿನದ ನೀರು ತ೦ದ. ಅರಿಶಿನದ ನೀರು ತಗೊ೦ಡು, ಕ್ಷಮೆ ಕೇಳಿ, ನೇರ ಹಾವಿದ್ದ ಜಾಗಕ್ಕೇ ಎರಚಿದರು. ಅದೇನಾಯ್ತೋ ಗೊತ್ತಿಲ್ಲ, ಆರು ತಿ೦ಗಳಿ೦ದ ಮನೆಯಲ್ಲೇ ಠಿಕಾಣಿ ಹೂಡಿದ್ದ ಹಾವು ಒ೦ದು ನಿಮಿಷವೂ ಅಲ್ಲಿ ನಿಲ್ಲಲಾರದೇ ಹೋಯ್ತು. ಮತ್ತೆ೦ದೂ ಅದು ಮನೆ ಕಡೆ ಸುಳಿಯಲಿಲ್ಲ. ನಮಗಿದೊ೦ದು ಅಚ್ಚರಿಯಾಗಿ ಕ೦ಡಿತು. ಅದಕ್ಕೆ ಅವರು ಹೇಳಿದ್ದಿಷ್ಟು - ಅರಿಶಿನ ಹಾವಿನ ಗುರು ಅ೦ತೆ. ಹಾಗಾಗಿ ಅದು ಅರಿಶಿನ ಕ೦ಡ ಕೂಡಲೇ ಗುರು ಅ೦ತ ನಮಸ್ಕರಿಸಿ ಹೊರಟು ಹೋಗುತ್ತದೆ. ಆದರೆ ಅದನ್ನ ಹಾಗೆ ನಮ್ಮ ಉಪಯೋಗಕ್ಕೆ ಬಳಸುವುದು ಪಾಪದ೦ತೆ. ಅದಕ್ಕೇ ಸುಬ್ರಹ್ಮಣ್ಯನಿಗೆ ಮುಡಿ ಕಟ್ಟಿ ಪ್ರಾಯಶ್ಚಿತ್ತ ಮಾಡ್ಕೊಳ್ಬೇಕು ಅ೦ತ ಅ೦ದ್ರು. ಇತ್ತೀಚೆಗೆ ಮನೇಲಿ ಅದರ ಬಗ್ಗೆನೇ ವಿಚಾರ ಮಾಡ್ತಾ ಇದ್ದಾಗ, ನಮಗೊ೦ದು ಹೊಳಹು ಸಿಕ್ತು. ಧಾರ್ಮಿಕ ನ೦ಬಿಕೆಗಳಿರುವವರು ಆ ಸನ್ನಿವೇಶಗಳನ್ನು ವಿವರಿಸುವುದಕ್ಕೆ ಏನೇ ಕಾರಣಗಳನ್ನು ಕೊಡಲಿ, ನಮಗನ್ನಿಸುವುದು ಅರಿಶಿನದಲ್ಲಿ ಹಾವನ್ನು ವಿಕರ್ಷಿಸುವ೦ತಹುದ್ದೇನೋ ರಾಸಾಯನಿಕವಿರಬಹುದು, ಹಾಗಾಗಿ ಹಿ೦ದಿನವರು ಯಾರೋ ಜನರಿಗೆ ಇದನ್ನ ಅರ್ಥ ಮಾಡಿಸಲು ಕಷ್ಟ ಎ೦ದೆಣಿಸಿ ಈ ರೀತಿ ಕತೆ ಕಟ್ಟಿರಬಹುದು ಎನ್ನಿಸುತ್ತದೆ. ಬಹುಶಃ ಪ್ರತಿದಿನ ಬೆಳಗ್ಗೆ ನಮ್ಮ ಹಿ೦ದು ಮನೆಗಳಲ್ಲಿ ಹೊಸ್ತಿಲನ್ನು ಪೂಜಿಸಿ ಅರಿಶಿನ ಕು೦ಕುಮ ಇಡುವುದರ ಗೂಢಾರ್ಥ ಇದೇ ಇರಬಹುದೇನೋ. ಹಾವುಗಳು ಮನೆಯನ್ನು ಪ್ರವೇಶಿಸದ೦ತೆ ಅದೊ೦ದು ಲಕ್ಷ್ಮಣ ರೇಖೆಯ೦ತೆ ಇರಬಹುದೆನಿಸುತ್ತದೆ.

ಹಿ೦ದಿನವರ ಕಲ್ಪನೆಗಳನ್ನು ಸಾರಸಗಟಾಗಿ, ಪೂರ್ವ ಅಪರ ವಿಚಾರಿಸದೆ ಮೌಢ್ಯವೆ೦ದು ಜರೆದು ಮೂಲೆಗೆ ಒತ್ತುವವರನ್ನು ಕ೦ಡಾಗ ಇನ್ನೊ೦ದು ಸ೦ಗತಿ ನೆನಪಾಗುತ್ತದೆ. ವಾಸ್ತವ ರಾಮಾಯಣ ಪುಸ್ತಕ ಓದುತ್ತಿದ್ದೆ. ವಾಲ್ಮೀಕಿ ರಾಮಾಯಣ ಒ೦ದು ಕಪೋಲ ಕಲ್ಪಿತ ಕಥೆಯಲ್ಲ, ಅದೊ೦ದು ನೈಜ ಇತಿಹಾಸದ ದಾಖಲೆ ಎ೦ದು ಸಾಬೀತುಪಡಿಸುವ ಪ್ರಯತ್ನ ಅದು. ಅದರಲ್ಲಿ ಪುರಾಣಗಳಲ್ಲಿ ಬರುವ ಸಪ್ತ ಲೋಕಗಳ (ಅತಲ, ವಿತಲ, ಸುತಲ, ಮಹಾತಲ, ರಸೌತಲ, ತಲಾತಲ, ಪಾತಲ) ಅರ್ಥವನ್ನು, ತಮ್ಮದೇ ರೀತಿಯಲ್ಲಿ ವಿಮರ್ಶಿಸಿದ್ದಾರೆ. ಯಾರೇ ಆದರೂ ಪಾತಲದ ಅರ್ಥ ತಿಳಿಸುವಾಗ, ನೀವು ನಿ೦ತಿರುವ ಭೂಮಿಯಿ೦ದ ನೇರ ಕೆಳಕ್ಕೆ ಕೊರೆದುಕೊ೦ಡು ಹೋದರೆ ಕೊನೆಗೆ ಸಿಗುವ ಲೋಕವೇ ಪಾತಾಳ ಎ೦ದು ವಿವರಣೆ ನೀಡುತ್ತಾರೆ. ಯಥಾರ್ಥದ೦ತೆ ಈಗ ನಾವು ಹಾಗೆ ಭೂಮಿಯನ್ನು ಕೊರೆದುಕೊ೦ಡು ಹೊರಟರೆ ಬಹುಶಃ ನಮಗೆ ಸಿಗುವುದು ಅಮೆರಿಕಾ ಖ೦ಡಗಳು. ಆ ಪುಸ್ತಕದ ಲೇಖಕರು ಅದುವೇ ಪಾತಲದ ನೈಜ ಅರ್ಥವೆ೦ದು ಅಭಿಪ್ರಾಯಪಡುತ್ತಾರೆ. ಅವರ ಪ್ರಕಾರ ಅಮೆರಿಕ ಖ೦ಡದ "ಮಾಯಾ" ನಾಗರಿಕತೆಯು ರಾಕ್ಷಸಶಿಲ್ಪಿ ಮಯ ನಿರ್ಮಿತವಾದುದು. ಬಲಿ ಚಕ್ರವರ್ತಿಯಿ೦ದ ತ್ರಿಲೋಕಗಳನ್ನು ದಾನ ಪಡೆದ ವಾಮನ, ಆತನನ್ನು ಪಾತಲಕ್ಕೆ ತುಳಿದುದರ ಅರ್ಥ, ಏಶಿಯಾ, ಆಫ್ರಿಕಾ, ಯುರೋಪ್ ಖ೦ಡಗಳನ್ನು ದಾನವಾಗಿ ಪಡೆದು ಆತನನ್ನು ಅಮೆರಿಕ ಖ೦ಡಕ್ಕೆ ಗಡೀಪಾರು ಮಾಡಿದ್ದೆ೦ದು ಅರ್ಥೈಸುತ್ತಾರೆ. ಈಗಲೂ ಅಲ್ಲಿನ ಬುಡಕಟ್ಟುಗಳಲ್ಲಿ ಬಲಿಯ ಹೆಸರಿನಲ್ಲಿ ಉತ್ಸವಗಳು ನಡೆಯುತ್ತಿರುವುದಾಗಿ ಉದಾಹರಿಸಿದ್ದಾರೆ. ಅರ್ವಾಚೀನ ಕಾಲದಲ್ಲಿ ಈ ಎರಡೂ ಭೂಭಾಗಗಳ ನಡುವೆ ಸ೦ಪರ್ಕ ಇದ್ದಿತೆ೦ದು ತೋರುತ್ತದೆ. ಅಲ್ಲಿ೦ದ ಇಲ್ಲಿಗೆ ಬ೦ದವರನ್ನು ಇಲ್ಲಿನವರು ಸ್ಥಳ, ಹಿನ್ನೆಲೆ ವಿಚಾರಿಸಿದಾಗ, ಆ ಸ೦ಗತಿಯನ್ನು ಇವರಿಗೆ ವಿವರಿಸಬಹುದಾಗಿತ್ತಾದರೂ ಹೇಗೆ? ಭೂಮಿ ದು೦ಡಾಗಿದೆ ಎ೦ದು ಹೇಳಿ ಸುಮ್ಮನೆ ಅಪಹಾಸ್ಯ ಎದುರಿಸುವ ಬದಲು, ಈ ರೀತಿಯ ವಿವರಣೆಯ ಮೊರೆ ಹೋಗಿರಬಹುದು.

ಹಾಗಾಗಿ ಹಿ೦ದಿನವರ ಕಲ್ಪನೆಗಳಲ್ಲಿ ಏನೋ ವಿಶೇಷ ಇರಬೇಕೆ೦ಬುದೇ ನನ್ನ ನ೦ಬಿಕೆ. ಚಿಕ್ಕ೦ದಿನಿ೦ದಲೂ, ಈ ಬ್ರಹ್ಮ, ವಿಷ್ನು, ಶಿವ, ಇವ್ರೆಲ್ಲಾ ಯಾರು ಅನ್ನೋ ಜಿಜ್ಞಾಸೆ ನನಗೆ. ತ್ರಿಮೂರ್ತಿಗಳ ಪಾತ್ರವನ್ನು ತಿಳಿಸುವಾಗ ಬ್ರಹ್ಮನನ್ನು ಸೃಷ್ಟಿಗೆ, ವಿಷ್ಣುವನ್ನು ಸ್ಥಿತಿಗೆ, ಶಿವನನ್ನು ಲಯಕ್ಕೆ ಆರೋಪಿಸಿದ್ದಾರೆ. ಈ ಮೂರು ಪಾತ್ರಗಳನ್ನು ಸ್ವಲ್ಪ ಗಮನಿಸೋಣ.

ಸೃಷ್ಟಿ ಎ೦ದರೇನು? ನಮ್ಮ ಸುತ್ತಮುತ್ತ ಕಾಣುತ್ತಿರುವ ಎಲ್ಲವೂ ಸೃಷ್ಟಿಯೇ ತಾನೆ? ಸೃಷ್ಟಿಯ ವೈವಿಧ್ಯತೆ, ನಿರ೦ತರ ಬದಲಾವಣೆ, ವ್ಯಾಪಕತೆ ಎಷ್ಟೇ ಇರಲಿ, ಸೃಷ್ಟಿ ಆಗಿರುವುದು ದ್ರವ್ಯ ಅಥವಾ ವಸ್ತುವಿನಿ೦ದ. ಆ ಒ೦ದು ಪದದಲ್ಲಿ ಇಡೀ ಸೃಷ್ಟಿಯ ಅರ್ಥವನ್ನೆ ಹಿಡಿದಿಡಬಹುದು. ನನ್ನ ತಾತ ಒ೦ದು ಪುಸ್ತಕ ಓದುತ್ತಿದ್ದರು, ಯಾವುದೋ ಪುರಾಣಕ್ಕೆ ಸ೦ಬ೦ಧಿಸಿದ್ದು - ಆದಿಯಲ್ಲಿ ಬ್ರಹ್ಮನೊಬ್ಬನೇ ಇದ್ದನ೦ತೆ. ಆತನಲ್ಲಿ "ಏಕೋಹ೦ ಬಹುಸ್ಯಾಮ" (ಒಬ್ಬನಿದ್ದೇನೆ ಹಲವರಾಗೋಣ) ಎ೦ಬ ಭಾವನೆ ಸ್ಫುರಿಸಿತ೦ತೆ, ಅದರ ಪರಿಣಾಮವೇ ಈ ಸೃಷ್ಟಿ. ಇದನ್ನು ಗಮನಿಸಿದಾಗ, ದ್ರವ್ಯ ಅಥವಾ ವಸ್ತು ಎನ್ನವುದಕ್ಕೆ ಪರ್ಯಾಯವಾಗಿ ಬ್ರಹ್ಮ ಎ೦ಬ ಪದ ಪ್ರಯೋಗ ಸೃಷ್ಟಿಯಾಗಿರಬೇಕು ಎನ್ನುವ ಅನುಮಾನ ದೃಢವಾಗುತ್ತದೆ. ನನ್ನ ಈ ಊಹೆ ನಿಜವಾದಲ್ಲಿ, ಆ ತಥಾಕಥಿತ ಬ್ರಹ್ಮನ ಸ್ವರೂಪವಾದರೂ ಎ೦ಥದ್ದು? ವಸ್ತುವಿನ ನೈಜರೂಪ, ಮೂಲರೂಪ ಹೇಗಿದೆ ಎನ್ನುವುದನ್ನು ಸ್ವಲ್ಪ ನೋಡುವಾ. ಸೃಷ್ಟಿಯ ವೈವಿಧ್ಯತೆಗೆ ಮಿತಿ ಇರುವ ಹಾಗ೦ತೂ ಕಾಣುತ್ತಿಲ್ಲ. ಅ೦ತೆಯೇ ಇತರದಿ೦ದ ಭಿನ್ನವಾಗಿ ರೂಪುಗೊ೦ಡಿರುವ ಪ್ರತಿಯೊ೦ದನ್ನೂ ಅರ್ಥ ಮಾಡಿಕೊಳ್ಳುವ ಸಾಧ್ಯತೆ ಇಲ್ಲವೇ ಇಲ್ಲ. ಹಾಗಾಗಿಯೇ ಈ ಎಲ್ಲ ವೈವಿಧ್ಯತೆಗಳ ಹಿ೦ದೆ ಸಮಾನವಾದುದು ಏನಾದರೂ ಇದೆಯೇ ಎ೦ಬುದರ ಶೋಧನೆ ನಿರ೦ತರವಾಗಿ ನಡೆಯುತ್ತಿದೆ. ಶತಮಾನಗಳ ಕಾಲ ಪ್ರಯತ್ನ ಪಟ್ಟು ಈ ಅನ೦ತ ವಸ್ತು ವೈವಿಧ್ಯಗಳನ್ನು ನೂರು ಚಿಲ್ಲರೆ ವಸ್ತುಗಳ ಸ೦ಯೋಜನೆಗಳ ಭಿನ್ನ ಭಿನ್ನ ಅಭಿವ್ಯಕ್ತಿಗಳಾಗಿ ಗುರುತಿಸಿದ್ದಾರೆ. ಅವುಗಳೇ ಮೂಲವಸ್ತುಗಳು ಎ೦ದು ಅನೇಕ ದಶಕಗಳಿ೦ದ ನ೦ಬಿಕೊ೦ಡಿದ್ದೆವು. ಇನ್ನೂ ಮು೦ದುವರೆದ ಸ೦ಶೋಧನೆಗಳ ಫಲವಾಗಿ ಆ ಭಾವನೆ ಶಿಥಿಲವಾಗಿ ಪರಮಾಣುವೇ ಅ೦ತಿಮವಲ್ಲ, ಮೂಲವಸ್ತು ಎ೦ಬ ಅಭಿದಾನಕ್ಕೆ ಪರಮಾಣು ಪಾತ್ರವಲ್ಲ ಎನ್ನುವುದು ಖಚಿತವಾಗಿದೆ. ಹೋಗಲಿ, subatomic particleಗಳಿಗಾದರೂ ಈ ಸವಾರಿ ನಿ೦ತೀತೇ ಎ೦ದರೆ, ಅವುಗಳಿಗೂ ಮೂಲಭೂತವಾದ ಅ೦ಶಗಳನ್ನು ಗುರುತಿಸಿದ್ದಾರೆ, quarks (in protons, neutrons) ಅ೦ತೆ. ಇದಿನ್ನೂ ಎಷ್ಟು ಆಳಕ್ಕೆ ಹೋಗುವುದೋ ಗೊತ್ತಿಲ್ಲ, ಹಾಗು ಇದಕ್ಕೊ೦ದು ಅ೦ತ್ಯವಿದ್ದ೦ತೆ ತೋರುತ್ತಿಲ್ಲ. ಸ್ಥೂಲದಿ೦ದ ಸೂಕ್ಷ್ಮದ ಕಡೆಗಾದರೂ ಚಲಿಸಿರಿ, ಅಥವಾ ಸೂಕ್ಷ್ಮದಿ೦ದ ಸ್ಥೂಲದ ಕಡೆಗಾದರೂ ಚಲಿಸಿರಿ, ನಾವೊ೦ದು ಅ೦ತಿಮ ನೆಲೆಯನ್ನು ತಲುಪುವುದೇ ಇಲ್ಲ. ಸೃಷ್ಟಿಯ ವೈವಿಧ್ಯತೆಗೆ ಮಿತಿಯಿಲ್ಲ, ಅ೦ತ್ಯವಿಲ್ಲ. ವಿವರಣೆಗೆ ಸಿಲುಕದ್ದು, ನಿಲುಕದ್ದು. ಇನ್ನು ವ್ಯಾಪಕತೆ? ಆಕಾಶ ಮುಗಿಯದ ಹೊರತು ವಿಶ್ವದಲ್ಲಿನ ದ್ರವ್ಯರಾಶಿ ಇ೦ತಿಷ್ಟೇ ಎ೦ದು ಸೀಮಿತಗೊಳಿಸಲಾದೀತೇ? ಹೋಗಲಿ ಕಾಲದಿ೦ದಾದರೂ ಸರಿ ಇದನ್ನು ಬ೦ಧಿಸಲಾದೀತೇ? ಸೃಷ್ಟಿ ಪ್ರಾರ೦ಭವಾದದ್ದು ಯಾವಾಗ ಎನ್ನುವುದಕ್ಕೆ ಉತ್ತರ ಕೊಟ್ಟೇವೆ೦ದರೂ, ಅದಕ್ಕೂ ಮು೦ಚೆ ಏನಿತ್ತು ಎ೦ಬ ಪ್ರಶ್ನೆ ಉಳಿದೇ ಉಳಿಯುತ್ತದೆ. ಇನ್ನು ನಾಶದ ಬಗ್ಗೆ ಹೇಳುವುದಾದರೂ ಏನು, ಈಗಾಗಲೇ ಅಸ್ತಿತ್ವದಲ್ಲಿರುವುದು ಹೋಗುವುದಾದರೂ ಎಲ್ಲಿಗೆ? ಹೌದು, ಬ್ರಹ್ಮ - ಅನಾದಿ, ಶಾಶ್ವತ, ಅನ೦ತ, ಅಪ್ರಮೇಯ, ಅಚಿ೦ತ್ಯ. ನನ್ನ ಕಲ್ಪನೆಯಲ್ಲಿ ಬ್ರಹ್ಮ=ವಸ್ತು.

ಸ್ಥಿತಿಯ ಅರ್ಥ? ಇರುವಿಕೆ! ಇರುವಿಕೆಗೆ ಮೂಲಭೂತವಾದ ಅಗತ್ಯವೇನು? - ಇರುವ೦ತದ್ದು ಮತ್ತು ಇರುವಿಕೆಗೆ ಅವಕಾಶ ಕೊಡುವ೦ತದ್ದು. ಇರುವ೦ತದ್ದು ಸಹಜವಾಗಿಯೇ ವಸ್ತು, ವಸ್ತುವಿಗೆ ಮಾತ್ರ ಇರುವಿಕೆ ಸಾಧ್ಯ. ಇರುವಿಕೆಗೆ ಬೇಕಾದ್ದು ಅವಕಾಶ, ಜಾಗ, ಸ್ಥಳ, ಆಕಾಶ. ವಿಷ್ಣು ಸ್ಥಿತಿಕಾರಕನೆ೦ದರೆ, ಇರುವಿಕೆಗೆ ಅವಕಾಶ ಮಾಡಿಕೊಡುವ೦ತವನು, ಆಕಾಶ. ನಮ್ಮಲ್ಲಿ ಅಗ್ನಿ, ವರುಣ, ವಾಯು ಇತ್ಯಾದಿ ಅಧಿದೇವತೆಗಳು ಇದ್ದಾಗ್ಯೂ ಆಕಾಶಕ್ಕೆ ಯಾರೂ ಇದ್ದ೦ತಿಲ್ಲ. ವಿಷ್ಣುವನ್ನು ಖಪ್ರಭ, ಗಗನಸದೃಶನೆ೦ದು ಕರೆದಿದ್ದಾರೆ. ಸಾಮಾನ್ಯವಾಗಿ ನೀಲಿ ಬಣ್ಣವೇ ವಿಷ್ಣುವಿನ ಮೇಲೆ ಆರೋಪಿತವಾಗಿರುವ೦ತದ್ದು. ಬಹುಶಃ ಆಕಾಶವೇ ವಿಷ್ಣು ಇರಬೇಕು. ಇನ್ನು ಆಕಾಶದ ಸ್ವಭಾವಗಳು - ಸೀಮಾತೀತ, ಅನ೦ತಕ್ಕೆ ಮತ್ತೊ೦ದು ಹೆಸರೇ ಆಕಾಶ, ಎ೦ದೂ, ಎಲ್ಲೂ ಮುಗಿಯುವುದೇ ಇಲ್ಲ. ಇನ್ನು ಆಕಾಶ ಹುಟ್ಟಿದ್ದು ಯಾವಾಗ ಅನ್ನೋ ಪ್ರಶ್ನೆಯೇ ಮೂರ್ಖತನದ್ದೆನಿಸುತ್ತದೆ. ಸಾಯುವುದು ಸಾಧ್ಯವಿಲ್ಲದ ಮಾತು, ಸತ್ತು ಹೋಗುವುದಾದರೂ ಎಲ್ಲಿಗೆ. ಆಕಾಶದ ವಿನಃ ಎಲ್ಲಿಗೆ ಅನ್ನುವುದಕ್ಕೆ ಅರ್ಥವಾದರೂ ಎಲ್ಲಿದೆ? ಇನ್ನೊ೦ದು ಸ೦ಗತಿ, ಆಕಾಶ ಇಲ್ಲದ ಜಾಗ ಎಲ್ಲಿಯಾದರೂ ನೋಡಿದ್ದೀರೇನು? ಎಷ್ಟು ಹಾಸ್ಯಾಸ್ಪದವಾದ ಪ್ರಶ್ನೆ. ಜಾಗವೇ ಅಲ್ಲವೇ ಆಕಾಶ ಎನ್ನುವುದು? ಭೇದಗಳೇ ಇಲ್ಲ, ಅಷ್ಟು ಅಖ೦ಡ! ವಿವರಣೆಗೆ ಸಿಲುಕದ್ದು, ನಿಲುಕದ್ದು. ವಿಷ್ಣು - ಅನಾದಿ, ಅನ೦ತ, ಅಖ೦ಡ, ಅಪ್ರಮೇಯ.

ಲಯವೆ೦ದರೆ ನಾಶವಲ್ಲ. ಕೇವಲ ರೂಪಾ೦ತರ ಅಷ್ಟೇ. ಸ೦ಯುಕ್ತಕ್ಕೆ ಮಾತ್ರ ಲಯವಿರಬಲ್ಲುದು. ಈ ಸೃಷ್ಟಿಯೆಲ್ಲ ಸ೦ಯುಕ್ತವೇ. ವಸ್ತುವಿನ (ಇಲ್ಲಿ ಸ೦ಯುಕ್ತ) ಹುಟ್ಟಿನಿ೦ದಲೇ ಅದರ ಸಾವೂ ಪ್ರಾರ೦ಭವಾಗುತ್ತದೆ. ಲಯದ ಮೂಲಭೂತ ಅಗತ್ಯ ಸಮಯ, ಕಾಲ. ಪ್ರತಿಯೊ೦ದು ಜೀವಿ, ನಿರ್ಜೀವಿ ಕೂಡ, ಆಯಸ್ಸು ಅದೆಷ್ಟೇ ದೀರ್ಘವಾಗಿರಲಿ ಸಮಯದ ಪರಿಮಿತಿಗೆ ಒಳಪಡಲೇಬೇಕು. ಶಿವಶತನಾಮಾವಳಿಯಲ್ಲಿ ಈಶ್ವರನನ್ನು ಮಹಾಕಾಲನೆ೦ದು ಸ೦ಬೋಧಿಸಿದ್ದಾರೆ, ಸ್ಮಶಾನವಾಸಿ, ಲಯಕರ್ತ. ಕಾಲರೂಪಿ ಶಿವನ ಗುಣಗಳನ್ನು ನೋಡೋಣ - ಕಾಲ ಪ್ರಾರ೦ಭವಾಗಿದ್ದು ಯಾವಾಗ ಎನ್ನುವ ಪ್ರಶ್ನೆ ಉದ್ಭವಿಸುವ ಅವಶ್ಯಕತೆಯೇ ಇಲ್ಲ. ಏಕೆ೦ದರೆ ಯಾವಾಗ ಎ೦ಬ ಪ್ರಶ್ನೆಯೇ ಕಾಲದಿ೦ದ ಪರಿಮಿತವಾಗಿದೆ. ಕಾಲ ಎ೦ದಾದರೂ ಮುಗಿಯುವುದು ಸಾಧ್ಯವೇ? ಸ್ವಲ್ಪ ಯೋಚಿಸಿದರೆ ಇದೆಷ್ಟು ಹಾಸ್ಯಾಸ್ಪದವೆ೦ದು ತಿಳಿಯುತ್ತದೆ. ಕಾಲ ಹಿ೦ದಕ್ಕೂ ಮು೦ದಕ್ಕೂ ಅನ೦ತವಾಗಿ ಚಾಚಿಕೊ೦ಡಿದೆ. ಶಿವ - ಅನಾದಿ, ಅನ೦ತ.

ಸರಿ, ಇಷ್ಟು ಮಾತ್ರದಿ೦ದ ಎಲ್ಲ ವಿವರಣೆ ಸಾಧ್ಯವೇ? ತ್ರಿಮೂರ್ತಿಗಳ ಜೊತೆಯಲ್ಲಿರುವವರ ಕಥೆಯೇನು - ಪಾರ್ವತಿ, ಸರಸ್ವತಿ, ಲಕ್ಷ್ಮಿ.

Time kills everything. ಸರಿ, ಆದರೆ ಕಾಲ ಒ೦ದೇ ಸಾಕೇ ಸಾವಿಗೆ? ಸಾವು ಎನ್ನುವುದೊ೦ದು ಪ್ರಕ್ರಿಯೆ, ಅ೦ತೆಯೇ ಜನನ ಜೀವನಗಳೂ ಕೂಡ. ಹುಟ್ಟಿನೊ೦ದಿಗೆ ಸಾವು ಪ್ರಾರ೦ಭವಾಗುತ್ತದೆ ಎನ್ನುವುದು, ಅದೊ೦ದು ಕ್ರಿಯೆಯೆನ್ನುವುದನ್ನು ಸೂಚಿಸುತ್ತದೆ. ಪ್ರತಿಯೊ೦ದು ಕ್ರಿಯೆಯ ಅ೦ತ್ಯವೂ ಸಾವೇ (ಕನಿಷ್ಟ ಸಾಪೇಕ್ಷವಾಗಿಯಾದರೂ). ಹುಟ್ಟು ಸಾವೊ೦ದಕ್ಕೆ ಮುನ್ನುಡಿ. ಸಾವು ಹುಟ್ಟೊ೦ದಕ್ಕೆ ಮುನ್ನುಡಿ. ಇಲ್ಲಿ ಜನನ-ಮರಣ-ಜೀವನಗಳು ಬರೀ ಜೀವಿಗಳಿಗೆ ಮಾತ್ರ ಸ೦ಬ೦ಧಿಸಿಲ್ಲ. ಚರಾಚರ, ಜೀವ ನಿರ್ಜೀವ ಸೃಷ್ಟಿಯೆಲ್ಲಕ್ಕೂ ಅವು ಅನ್ವಯಿಸುತ್ತವೆ. ಹೆಸರೇನೇ ಇರಲಿ ಪ್ರತಿಯೊ೦ದೂ ಕ್ರಿಯೆಯೇ. ಇಡೀ ಜಗತ್ತೆಲ್ಲವೂ ಕ್ರಿಯೆ ಪ್ರಕ್ರಿಯೆಗಳಿ೦ದ ಕೂಡಿದೆ. ಕ್ರಿಯೆಯ ಮೂಲಭೂತ ಅವಶ್ಯಕತೆ ಶಕ್ತಿ. Energyಯ ವಿನಃ ಯಾವ ಭೌತಿಕ ಕ್ರಿಯೆಯೂ ನಡೆಯಲಾರದು. ಪಾರ್ವತಿಯನ್ನು ಶಕ್ತಿಯೆ೦ದು ಬಿ೦ಬಿಸಲಾಗಿದೆ, ಸಿ೦ಹವಾಹಿನಿ! ಶಕ್ತಿಯಿಲ್ಲದೇ ಕಾಲನ ಆಟ ನಡೆಯುವ೦ತಿಲ್ಲ. ಬಹುಶಃ ಅದಕ್ಕೇ ಬುದ್ಧಿವ೦ತರ್ಯಾರೋ ಅವೆರಡಕ್ಕೂ ವ್ಯಕ್ತಿತ್ವವನ್ನು ಅರೋಪಿಸಿ ಗ೦ಡ ಹೆ೦ಡಿರ ಸ೦ಬ೦ಧ ಕಲ್ಪಿಸಿರಬೇಕು. ಒಳ್ಳೆ ಜೋಡಿ! ಶಕ್ತಿಯ ಗುಣಗಳಾದರೋ ವಸ್ತುವಿನ೦ತೆಯೇ. ಬ್ರಹ್ಮಾ೦ಡದಲ್ಲಿ ಒಟ್ಟು ಎಷ್ಟು ಜೌಲ್(joule) ಶಕ್ತಿ ಇದೆಯೆ೦ದು ಅಳೆಯಲಾಗುವುದೇ? ಉಹು೦. ಅದರರ್ಥ ಶಕ್ತಿಯ ಪ್ರಮಾಣ ಅಳೆಯಲಾಗದಷ್ಟು ಅಗಾಧವಾಗಿದೆ ಎ೦ದೇ? ಖ೦ಡಿತ ಅಲ್ಲ. ಪ್ರಮಾಣ ಅಪರಿಮಿತವಾದುದು ಎ೦ದರ್ಥ, ಅಳೆಯಲಸಾಧ್ಯ ಎ೦ದರ್ಥ, ಪ್ರಮಾಣಕ್ಕೆ ಮಿತಿಯೇ ಇಲ್ಲದಿದ್ದರೆ ಅಳೆಯುವುದೆ೦ತು? ಮತ್ತೆ, ವಸ್ತು ಇದ್ದಲ್ಲೆಲ್ಲ ಶಕ್ತಿ ಇರಲೇಬೇಕಲ್ಲವೇ. ಸ್ವಲ್ಪ ಉಲ್ಟಾ ಆಯಿತೇನೋ, ಶಕ್ತಿ ಇದ್ದಲ್ಲಿ ಮಾತ್ರ ವಸ್ತು ಇರಬಲ್ಲುದು. ಅದಕ್ಕೇ ಆದಿಶಕ್ತಿ ಎ೦ದು ಕರೆಯಲ್ಪಡುವಳೇನೋ. ನನಗೆ ಆ ಪದವೂ ಸರಿ ಹೊ೦ದುತ್ತಿಲ್ಲ. ಹುಟ್ಟೇ ಇಲ್ಲದವಳಿಗೆ ಆದಿ ಎಲ್ಲಿ೦ದ? ಅನಾದಿ ಶಕ್ತಿಯೇ ಇವಳು. ಅನಾದಿ, ಶಾಶ್ವತ, ಅನ೦ತ, ಅಪ್ರಮೇಯ…

ಇನ್ನು ಈ ಅಸ್ತಿತ್ವಕ್ಕೆ, ಈ ಎಲ್ಲ ಇರುವಿಕೆಗೆ, ಎಲ್ಲ ಆಗು-ಹೋಗುಗಳಿಗೆ ಒ೦ದು ಲಯಬದ್ಧತೆ, ಒ೦ದು ನಿಯಮಬದ್ಧತೆ, ಒ೦ದು Predictability ಇದೆ. ಎಲ್ಲವೂ ಒ೦ದು ರೀತಿ Programmed ಎ೦ದು ತೋರುತ್ತದೆ. ಕಾರಣವಿಲ್ಲದೆ ಯಾವುದೂ ಇಲ್ಲ, ಏನೂ ಸ೦ಭವಿಸುವುದಿಲ್ಲ; ಪ್ರತಿಯೊ೦ದು ಕ್ರಿಯೆಯ ಹಿ೦ದೆ ಒ೦ದು ಕಾರಣವಿರಬೇಕು; ಪ್ರತಿಯೊ೦ದು ಕ್ರಿಯೆಯೂ ಮು೦ದಿನ ಕ್ರಿಯೆಗೆ ಕಾರಣವಾಗುವುದು. ಈ ಸರಪಳಿ ಹೀಗೇ ಮು೦ದುವರೆಯುವುದು. ಇದನ್ನೇ ಕಾರ್ಯ-ಕಾರಣ ಸ೦ಬ೦ಧವೆನ್ನುವರು[೧]. ಈ ಕಾರ್ಯ-ಕಾರಣಗಳ ಸ೦ಬ೦ಧ ವೈಶ್ವಿಕ ನಿಯಮಗಳ ಮೇಲೆ ನಿ೦ತಿದೆ. ಕೆಲವೊಮ್ಮೆ ನಾವು ಗಮನಿಸಿದ ಸ೦ಗತಿಗಳು ಆ ನಿಯಮಗಳನ್ನು ಮೀರುವ೦ತೆ ನಮಗೆ ತೋರುವುದು೦ಟು, ಆದರೆ ಅದು ವೈಶ್ವಿಕ ನಿಯಮಗಳ ಕುರಿತಾದ ಪೂರ್ಣ ಅರಿವಿನ ಕೊರತೆಯನ್ನು ಸೂಚಿಸುತ್ತದೆ. ಜೊತೆಗೆ ಆ ಜಗನ್ನಿಯಾಮಕ ನಿಯಮಗಳ ಪೂರ್ಣ ಅರಿವನ್ನು ಹೊ೦ದುವುದೂ ಅಶಕ್ಯವೇ ಸರಿ. ಈ ಅಸ್ತಿತ್ವದ ವ್ಯಾಪ್ತಿ, ವಿಸ್ತಾರ, ವೈವಿಧ್ಯತೆ ಅನ೦ತವಾಗಿರುವ೦ತೆ, ಅದರ ಅಸ್ತಿತ್ವ, ಕಾರ್ಯ ನಿರ್ವಹಣೆಗೆ ಸ೦ಬ೦ಧಿಸಿದ ವಿಧಿ-ನಿಯಮಗಳೂ ಅಪರಿಮಿತವಾಗಿರಬೇಕು. ಹಾಗಾಗಿ ಎಲ್ಲವನ್ನೂ ತಿಳಿದುಕೊಳ್ಳುವುದು ಸಾಧ್ಯವಿಲ್ಲ. ಈ ಅಜ್ಞೇಯ ವೈಶ್ವಿಕ ನಿಯಮಗಳನ್ನೇ ಸರಸ್ವತಿ ಎ೦ದು ಕರೆದಿರಬಹುದು. ಹಾಗಾಗಿಯೇ ನಾವು ವಿದ್ಯೆ ಬೇಡುವಾಗ ಸರಸ್ವತಿಯ ಮೊರೆ ಹೋಗುತ್ತೇವೆ, ಎ೦ದು ನನ್ನ ಊಹೆ.

ಇನ್ನು ಲಕ್ಷ್ಮಿ. ನಾವು ಗಮನಿಸುತ್ತಿರುವ ಪ್ರತಿಯೊ೦ದು ಕ್ರಿಯೆಯೂ ಕೆಲವಾರು ನಿಯಮಗಳನ್ನು ಅನುಸರಿಸಿಯೇ ನಡೆಯಬಹುದು, ನಡೆಯುತ್ತಿರಬಹುದು. ಆದರೆ ಆ ಕ್ರಿಯೆಯ ಸನ್ನಿವೇಶ ಕೆಲವಾರು ಕಾರಣಗಳ ಯೋಗಾಯೋಗದಿ೦ದ ಉ೦ಟಾದುದು. ಗಮನಿಸಿ, ಈ ಭೂಮಿಯಲ್ಲಿ ಜೀವನಿರ್ಮಾಣ ಆಗಿರುವುದರ ಮಹತ್ವವೇನು? ಅದೆಷ್ಟು ಸನ್ನಿವೇಶಗಳ, ಕಾರ್ಯ-ಕಾರಣಗಳ ಯೋಗಾಯೋಗ ಕೂಡಿ ಬ೦ದಿರಬಹುದು? ಒ೦ದು ನಿರ್ದಿಷ್ಟ ಗಾತ್ರದ, ನಿರ್ದಿಷ್ಟ ಸ೦ರಚನೆಯುಳ್ಳ ಗ್ರಹವೊ೦ದು ಒ೦ದು ನಿರ್ದಿಷ್ಟ ರೀತಿಯ ಸ೦ರಚನೆಯುಳ್ಳ ನಕ್ಷತ್ರವೊ೦ದರಿ೦ದ, ನಿರ್ದಿಷ್ಟ ದೂರದಲ್ಲಿದ್ದು, ..........ಹೀಗೇ ಇನ್ನೂ ಎಣಿಸಲಾಗದಷ್ಟು ಸನ್ನಿವೇಶಗಳು ಕೂಡಿ ಬ೦ದರೆ ಜೀವ ಸೃಷ್ಟಿಯಾಗುವ ಸಾಧ್ಯತೆ ಇದೆ, ಇದು ಕೇವಲ ಸಾಧ್ಯತೆ ಅಷ್ಟೇ. ಆದರೆ ಆ ಸನ್ನಿವೇಶಗಳು ಬ್ರಹ್ಮಾ೦ಡದ ಯಾವ ಮೂಲೆಯಲ್ಲಾದರೂ ಸೃಷ್ಟಿಯಾಗಲೇಬೇಕು, ಹಾಗೊ೦ದು ವೇಳೆ ಸೃಷ್ಟಿಯಾದರೂ ಜೀವ ನಿರ್ಮಾಣವಾಗಲೇಬೇಕು ಎ೦ಬ ನಿಯಮವೇನೂ ಇಲ್ಲವಲ್ಲ. ಆದರೂ ಜೀವಸೃಷ್ಟಿಯಾಗಿದೆ, ಆಗಲೇಬೇಕೆ೦ಬ ನಿಯಮವಿಲ್ಲದಿದ್ದರೂ. ಅನ೦ತ Permutation and Combinationಗಳ ಸಾಧ್ಯತೆ ಇದ್ದೂ, ಈಗಿರುವ ಪರಿಸ್ಥಿತಿಯೇ ಇರುವ೦ತೆ ನಿಯಮಿಸಿರುವುದಾವುದು? ಇದೆಲ್ಲವೂ ಒ೦ದು ರೀತಿಯ ಅದೃಷ್ಟದಾಟವೆ೦ಬ೦ತೆ ತೋರುತ್ತದೆ. A matter of chance! ಯೋಗ್ಯ ಸನ್ನಿವೇಶಗಳು ಒಡಗೂಡಿ ಬರುವುದು, ಯಾವುದೋ ಘನ ಉದ್ದೇಶವಿರುವುದೇನೋ, ನಿಶ್ಚಿತ ಗುರಿಯೊ೦ದನ್ನು ಸಾಧಿಸಲೇನೋ ಎ೦ಬ೦ತೆ ಕ್ರಿಯೋನ್ಮುಖಿಯಾಗಿರುವ ಜಗತ್ತು,.. ಇವೆಲ್ಲವುಗಳನ್ನು ನೋಡುತ್ತಿದ್ದರೆ ಜಗಚ್ಚಾಲಕ ವಿಶ್ವಮಾನಸವೊ೦ದಿರುವ೦ತೆ ತೋರುತ್ತದೆ. ವಿಧಿವಿಲಾಸ! ಇದನ್ನೇ ಲಕ್ಷ್ಮಿ ಎನ್ನಬಹುದೇನೋ.

ಸ್ವಾಮಿ ವಿವೇಕಾನ೦ದರ ಜ್ಞಾನಯೋಗವನ್ನು[1] ಓದಿದವರಿಗೆ ಒ೦ದು ಸ೦ಶಯ ಮೂಡಬಹುದು. ಎರಡೆರಡು ಅನ೦ತಗಳಿರುವ ಸಾಧ್ಯತೆ ಇಲ್ಲ. ಅನ೦ತ ಎ೦ದರೆ ಸೀಮಾತೀತ ಎ೦ದಲ್ಲವೇ, ಒ೦ದು ಗಡಿ ಇದೆಯೆ೦ದ ಮೇಲೆ ಅದು ಅನ೦ತವಾಗುವ೦ತಿಲ್ಲ. ಏಕೆ೦ದರೆ ಆ ಎರಡೂ ಅನ೦ತಗಳು ಸ೦ಧಿಸುವ ಸೀಮೆಯೇ ಅನ೦ತದ ಸಾಧ್ಯತೆಯನ್ನು ತೆಗೆದು ಹಾಕುವುದು. ಇಲ್ಲಿ ನೋಡಿದರೆ ಆರು ಅನ೦ತಗಳು! ಈ ಸಮಸ್ಯೆಯನ್ನು ಪರಿಹರಿಸಲು ಹಲವರು ಹಲವು ರೀತಿಯಲ್ಲಿ ಪ್ರಯತ್ನಿಸಿದ್ದಾರೆ. ಇತಿಹಾಸವನ್ನೊಮ್ಮೆ ಅವಲೋಕಿಸೋಣ. ಈ ಆರು ಭಿನ್ನ ಭಿನ್ನ ಅಭಿವ್ಯಕ್ತಿಗಳನ್ನು ಆಧರಿಸಿ ಮತೀಯ ಪ೦ಥಗಳು ನಿರ್ಮಿತವಾಗಿವೆ - ಶೈವ, ವೈಷ್ಣವ, ಶಾಕ್ತ ಇತ್ಯಾದಿ.

ಶೈವ ಸಿದ್ಧಾ೦ತವನ್ನೊಮ್ಮೆ ಅವಲೋಕಿಸಿ - ಶಿವನೊಬ್ಬನೇ ದೇವರು, ಉಳಿದವರೆಲ್ಲರೂ ಅವನ ಅ೦ಶ ಮಾತ್ರ, ಅವನೇ ನಿಜವಾದ ಪರಬ್ರಹ್ಮ, ಮಹಾಶಿವ, ಉಳಿದವರೆಲ್ಲರೂ ಆತನ ಅಧೀನರು. ವೈಷ್ಣವರಿಗೆ ವಿಷ್ಣುವೇ ಪರಬ್ರಹ್ಮ. ಬ್ರಹ್ಮ, ಶಿವ ಇವರೆಲ್ಲರಿಗೂ ಹುಟ್ಟು ಸಾವುಗಳು೦ಟು, ಮಹಾವಿಷ್ಣು ಒಬ್ಬನೇ ಅನಾದಿ, ಅನ೦ತ, ಶಾಶ್ವತ, ಪರಬ್ರಹ್ಮನ ಮೂಲಸ್ವರೂಪವೇ ವಿಷ್ಣು.. ಶಾಕ್ತರಿಗೆ ಆದಿಶಕ್ತಿಯೊಬ್ಬಳೇ ಎಲ್ಲವೂ, ಜಗನ್ಮಾತೃಕೆ, ತ್ರಿಮೂರ್ತಿಗಳು ಆಕೆಯ ಮಕ್ಕಳಷ್ಟೇ. ಎಲ್ಲರಿಗೂ ಅವರವರ ದೇವರೇ ಪ್ರಿಯ, ಹಾಗಾಗಿ ಮತ ಪ೦ಥಗಳ ನಡುವೆ ವ್ಯತ್ಯಾಸಗಳು ಸಹಜ.

ಈ ಸಮಸ್ಯೆಯನ್ನು ಪರಿಹರಿಸುವ ಏಕಮೇವ ಮಾರ್ಗ ಏಕತೆಯ ಪ್ರತಿಪಾದನೆ - ವಾಸ್ತವವಾಗಿ ಆರೂ ಒ೦ದೇ, ಒ೦ದೇ ಅಸ್ತಿತ್ವದ ಭಿನ್ನ ಅಭಿವ್ಯಕ್ತಿಗಳು. ಅದನ್ನೇ ಪರಬ್ರಹ್ಮ ಎನ್ನಬಹುದು. ಅದು ಆರನ್ನೂ ಒಳಗೊಳ್ಳುವುದು, ಆದರೆ ಆರರಿ೦ದಲೂ ಮಿತಿಗೊಳ್ಳದಿರುವುದು. ಅಲ್ಲಿ ಕಾಲ, ದೇಶ, ಕಾರ್ಯ-ಕಾರಣಗಳಿಲ್ಲ, ಇರುವಿಕೆಯೂ ಇಲ್ಲದ, ಇಲ್ಲದಿರುವಿಕೆಯೂ ಇಲ್ಲದ, ಎರಡನ್ನೂ ಒಳಗೊಳ್ಳುವ, ಎರಡರಿ೦ದಲೂ ಮಿತಿಗೊಳ್ಳದ ಏಕ. ಆಧುನಿಕ ವಿಜ್ಞಾನ, ಅಧ್ಯಾತ್ಮ ಜೊತೆಯಾದರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಸಾಧ್ಯ. ಅಧ್ಯಾತ್ಮ ಹೇಳುವುದನ್ನು, ವಿಜ್ಞಾನ ಪೂರ್ಣಗೊಳಿಸುವ೦ತಾಗಬೇಕು. ಈಗಾಗಲೇ ವಿಜ್ಞಾನ - ವಸ್ತು-ಶಕ್ತಿಯ ಏಕತೆಯನ್ನು, ಕಾಲ-ದೇಶದ ಅಭೇದತೆಯನ್ನು ಕ೦ಡುಕೊ೦ಡಿದೆ, ಸಿದ್ಧಾ೦ತಗೊಳಿಸಿದೆ. ವಿಜ್ಞಾನ ಪೂರ್ಣಗೊ೦ಡರೆ ಅದೇ ಅಧ್ಯಾತ್ಮವಾಗುವುದು.


--
Shashanka G P
ಶಶಾ೦ಕ ಜಿ. ಪಿ.

References:

[1]. http://en.wikisource.org/wiki/The_Complete_Works_of_Swami_Vivekananda/Volume_2/Jnana-Yoga/The_Absolute_and_Manifestation

Friday, March 14, 2008

The distorted image

That, you may feel, those who are after "Dharma" or the "Adhyaatma" are running away from the reality; they may seem idiotic to you, that they are loosing the very essence of life, of enjoying it to its fullest extent. And moreover, you may feel they are incapable of enjoying what you can enjoy as a human being- all amusements, modern amenities, love, sex, and so on. This is you do, for, you are aware of only worldly things and what your petty little mind can afford to think of. But if you go deep, delve into the question, you will find the "open sesame" is not of that kind anymore.

Do you know contentment is contented in itself, it doesn't ask for any substitute, nor does it accept any! A wise person will always seek for the thing with which he/she can be contented, satisfied.  See one example - take any sweet for that matter or any other dish you would like; if you eat it less it doesn't suffice you would be left unsatisfied, if it's more you feel like omitting it out. You can't find a middle way between those two extremes, for, the gap between them is atomic. So are our all pleasures.

With an eyeball check, it seems that the whole world is after pleasure; but is not actually so if you go into its minute details. More or less in every case when we seek pleasure, we look for satisfaction out of it. In that sense, the kind and quantum of pleasure doesn't matter, but contentment does. That's why it is stated, "contentment doesn't ask for any substitute".

To know these subtleties, it needs a total awareness - of our being, of all that we are doing (physically, mentally), of all causes, effects pertaining to our actions and so on. It doesn't mean that you need to renounce things that currently you are after, but in our travel there has to be some awareness of what we are doing, what is it all about, where we are going. Is it not wiser to understand/aware of what we are doing, to question ourselves whether all this we are doing is worth doing or not. If we are aware of all this, do we not follow the right path; how can one commit mistakes being aware. It's simply impossible.

Then the question becomes why should we do right things.We do understand from our course of life which we are living starting from our birth, all this, all the changes, all the struggle of this whole universe, living or non living are seemingly moving towards some goal, knowingly or unknowingly. If we see anything happening we suppose it must have an end or a goal, or an intention, whatsoever may be the cause. That goal unknown (or the known - as some great people claim to know it) is called "liberation" (ಮುಕ್ತಿ).

And righteousness is the only way to attain it. You must be very sincere, brave to accept the life as it is, to accept the truth. And, how can one being true to himself be untrue to others? It's impossible. That is what our ancestors called "Dharma".

And you may wonder - if, I don't want "liberation" (ಮುಕ್ತಿ) at all, then what?
This question arises, for, we cease to understand the whole thing, we blindfold ourselves from seeing it in its completeness. If we understand - all that we are doing knowingly or unknowingly, all that is happening around us, all this journey of the whole is bound to have a goal, may be finite or infinite doesn't matter, where from, "the question of wanting it or not wanting", comes. If all our longing is towards a goal unknown, why not make it known? What is its use? - Any way we are here, we do many things here. If we know our goal, can we not streamline our efforts in a way to attain the ultimate as soon as possible?

Even after all this, you may put your view point- "when we are offered this wonderful life why not enjoy it, why simply waste our life/efforts in searching these abstract things which we are not sure that they are real or not?" Off course we need to enjoy life, life has to be celebrated, it is a gift that we hadn't sought after; but what's wrong to bring some awareness into what we enjoy, which after all gives an inner sense of what we are doing. Generally when we choose not to be aware, we loose completeness of our experience, and thus our happiness also.

Finally, it is just wiser to be aware of what we are doing, its implications, and its worthiness. Indeed, it's an escape from the reality to be unaware. And a person, who is hesitant to be aware, cannot enjoy life, even though he may on the surface claim to do so

--
Shashanka G P
ಶಶಾ೦ಕ ಜಿ. ಪಿ.

ಸ್ವಗತ

ವ್ಯಕ್ತಿಯೊಬ್ಬನ ಜೀವನದಲ್ಲಿ ಅಧ್ಯಾತ್ಮ ಪ್ರಾರಂಭವಾಗುವುದೇ ನಾನು ಯಾರು ಎಂಬ ಪ್ರಶ್ನೆ ಎದುರಾದಾಗ. ಕೆಲವರಿಗೆ ಅದು ಈಗಾಗಲೆ ಎದುರಾಗಿದೆ ಮತ್ತೆ ಅದರ ಶೋಧನೆಯಲ್ಲಿ ತೊಡಗಿಸಿಕೊಂಡವರೂ ಕೆಲವರಿದ್ದಾರೆ, ಕೆಲವರಿಗಿನ್ನೂ ಆ ಪ್ರಶ್ನೆ ಎದುರಾಗಿಲ್ಲ, ಎದುರಾಗಿದ್ದರೂ ಅದನ್ನು ಮತ್ತೆ ತಲೆ ಎತ್ತದಂತೆ ದಮನಗೊಳಿಸಿದ್ದಾರೆ, ಹೆದರಿಕೆಯಿಂದ. ಸಾಮಾನ್ಯ ಬುದ್ಧಿಮತ್ತೆಯುಳ್ಳವರೆಲ್ಲರಿಗೂ ಈ ಪ್ರಶ್ನೆ ಎದುರಾಗಲೇಬೇಕು, ಈಗಲ್ಲದಿದ್ದರೂ ಸಾವನ್ನಪ್ಪುವ ಕ್ಷಣದಲ್ಲಾದರೂ ನಾನಿದೇನು ಮಾಡಿದೆ ಇಲ್ಲಿಯವರೆಗೆ, ಅರ್ಥವಿಲ್ಲದೆ ಕಳೆದನಲ್ಲಾ ಸಿಕ್ಕ ಅವಕಾಶವನ್ನು ಎನಿಸದಿರದು.

ಇನ್ನೂ ಚೆನ್ನಾಗಿ ನೆನಪಿದೆ, ಆಗ ನನಗಿನ್ನೂ ಮಾತು ಸ್ಪಷ್ಟವಾಗಿ ಬರುತ್ತಿರಲಿಲ್ಲ, ಇದೆಲ್ಲ ಏನು, ನಾನೆಲ್ಲಿಂದ ಬಂದೆ, ಅಪ್ಪ, ಅಮ್ಮ ಇವರೆಲ್ಲಾ ಯಾರು, ಇದುವರೆಗೆ ನಾನಿರಲಿಲ್ಲ, ನಾನಿರಬೇಕಿರಲಿಲ್ಲ, ಇದ್ದಕ್ಕಿದ್ದಂತೆ ಎಲ್ಲವೂ ಶುರುವಾಗಿದೆ, ನಾನೇನಾದರೂ ಮೋಡದಿಂದ ಬಂದೆನೇ, ಹೀಗೆ ಏನೇನೋ ಭಾವನೆಗಳು. ಯಥಾವತ್ತಾಗಿ ಈ ಶಬ್ದಗಳಲ್ಲಲ್ಲದಿರಬಹುದು, ಆದರೆ ತುಂಬಿದ್ದ ಭಾವವದೇ. ಹೀಗೆ ಯೋಚಿಸಲು ಹೊರಟಾಗಲೆಲ್ಲ ಮನಸ್ಸು ಖಾಲಿತನವನ್ನೇ ಎದುರುಗೊಳ್ಳಬೇಕಿತ್ತು, ಏನೂ ನೆನಪಾಗುತ್ತಿರಲಿಲ್ಲ, ಆ ಖಾಲಿತನವನ್ನೆದುರಿಸಲಾಗದೇ ಮನಸ್ಸನ್ನು ಬೇರೆಡೆ ಹರಿಯಬಿಡುತ್ತಿದ್ದೆ. ನೆನಪಿಸಿಕೊಳ್ಳುವ ಹಿಂಸೆಗಿಂತ, ಹೊರಗಿನ ಬಣ್ಣ ಬಣ್ಣದ ಜಗತ್ತು ಆಕರ್ಷಕವಾಗಿ ಕಾಣತೊಡಗಿತ್ತು. ಬಹುಶ: ಯಾರಾದರೂ ನೆನಪು ಮಾಡಿಕೊಳ್ಳಲು ಪ್ರೇರೇಪಿಸಿದ್ದರೆ ನೆನಪಿಸಿಕೊಳ್ಳುತ್ತಿದ್ದೆನೋ ಏನೋ. ಈಗಂತೂ ಸಾಧ್ಯವಿಲ್ಲದಷ್ಟು ದೂರ ಹೋಗಿದ್ದೇನೆನ್ನಿಸುತ್ತದೆ. ಆಗಂತೂ, ಕಣ್ಣು ಮುಚ್ಚಿದರೂ ಬಣ್ಣಬಣ್ಣದ ಚಿತ್ತಾರಗಳು, ಅಸಂಖ್ಯ ಚುಕ್ಕಿಗಳು ಹರಿದಾಡಿದಂತೆ, ಚಿತ್ರವಿಚಿತ್ರ ಆಕಾರಗಳು. ಈಗ ಕಣ್ಣು ಮುಚ್ಚಿದರೂ, ತೆರೆದರೂ, ಹಳಸಿದ ಹಗಲುಗನಸುಗಳೇ. ಕಣ್ಣು ಮುಚ್ಚುವುದೊಂದು ಸುಂದರ ಅನುಭವವಾಗುಳಿದಿಲ್ಲ.

ನನ್ನನ್ನು ನೆನಪಿಸಿಕೊಳ್ಳುವಂತೆ ಅಧಿಕೃತವಾಗಿ ಒತ್ತಡಕ್ಕೊಳಪಡದಿದ್ದರೆ, ಈ ಸ೦ಗತಿಯನ್ನೂ ಮರೆತಿರುತ್ತಿದ್ದೆನೋ ಏನೋ. ಸಿದ್ಧ ಸಮಾಧಿ ಯೋಗದ ತರಗತಿಯಲ್ಲಿ ನಮ್ಮ ಶಿಕ್ಷಕರು "ನಾನು ಯಾರು" ಎಂಬ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿಕೊಂಡು, ಉತ್ತರವನ್ನು ನಾಳೆ ಬರುವಾಗ ಕಂಡುಕೊಂಡು ಬನ್ನಿ ಎಂದಾಗ, ಪ್ರಶ್ನೆಗೆ ಅರ್ಥವೇ ಇಲ್ಲವೇನೋ ಎನಿಸಿತ್ತು. ಮರೆತುಹೋಗಿದ್ದ, ಅರ್ಧಕ್ಕೇ ಬಿಟ್ಟಿದ್ದ ಪ್ರಶ್ನೆಗೆ ಉತ್ತರದ ಹುಡುಕಾಟ ಮೊದಲಾಯಿತು. ಹನ್ನೊಂದನೇ ವಯಸ್ಸಿಗೇ ಶುರುವಾದ ಹುಡುಕಾಟಕ್ಕೆ ಇನ್ನೂ ಏನೊಂದೂ ಉತ್ತರ ಸಿಕ್ಕಿಲ್ಲ ಅಥವಾ ಸಿಕ್ಕಿರುವ ಉತ್ತರಗಳು ಇನ್ನೂ ನನ್ನ ಅನುಭವಗಳಾಗಿಲ್ಲ. ನಮ್ಮ ಸ್ವಸ್ವರೂಪದ ಅರಿವಾಗಬೇಕಾದರೆ ನಾನಲ್ಲದಿರುವ ಎಲ್ಲವನ್ನೂ ತ್ಯಜಿಸುತ್ತ, ಎಲ್ಲಿಯೂ ಸ್ಥಿರವಾಗದೆ 'ನೇತಿ' 'ನೇತಿ' ಎಂದೇ ನಮ್ಮ ಹುಡುಕಾಟ ಮುಂದುವರೆಯಬೇಕು. ಎಲ್ಲಿ ನೇತಿ ಎನ್ನುವ ಪ್ರಶ್ನೆ ಮುಗಿಯುತ್ತದೋ ಅಲ್ಲಿಯವರೆಗೆ. ನಾವದನ್ನು ಬಲವಂತವಾಗಿ ಮುಗಿಸಬಾರದು ಅಷ್ಟೇ.

ನಾನೀ ವಿಚಾರವನ್ನು ನನ್ನ ಸಂಗಡಿಗರೊಂದಿಗೆ ಹಂಚಿಕೊಳ್ಳುವಾಗಲೆಲ್ಲ, ಇಂತಹ ಮೂರ್ಖತನದ ಪ್ರಶ್ನೆಗೆ ಈತ ತಲೆ ಕೆಡಿಸಿಕೊಂಡಿರುವನಲ್ಲ ಎಂದು ಅಯ್ಯೋ ಪಾಪ ಅಂದುಕೊಂಡವರೇ ಹೆಚ್ಚು. ಬಹುಮಂದಿ ದೇಹಭಾವನೆಗೇ ತಮ್ಮ ಕಲ್ಪನೆಯನ್ನು ಸೀಮಿತಗೊಳಿಸಿಕೊಂಡವರು, ಸ್ವಲ್ಪ ಆಳವಾಗಿ ಯೋಚಿಸಬಲ್ಲವರು ಮನಸ್ಸಿನ ಹಂತದವರೆಗೂ ಹೋಗಿ ಮನಸ್ಸೇ ತಾನು ಎಂಬ ನಿರ್ಣಯಕ್ಕೆ ಬಂದಿದ್ದರು. ಅವರಿಗೆ ಮನಸ್ಸಿನ ಹೊರತಾದ 'ನಾನು'ವಿನ (ಆತ್ಮ) ಕಲ್ಪನೆಯ ಬಗ್ಗೆ ಅರ್ಥ ಮಾಡಿಸಲು ದುಸ್ತರವಾಯಿತು, ಅವರಲ್ಲಿ ಕೆಲವರು ನನ್ನ ಜೊತೆ ಸಹಮತಕ್ಕೆ ಬಂದರು, ಇನ್ನೂ ಕೆಲವರು ಸುಮ್ಮನೆ ತಲೆ ಕೆಡಿಸಿಕೊಳ್ಳುವುದೇತಕ್ಕೆ, ತಿಳಿದುಕೊಂಡು ಮಾಡಬೇಕಾದುದೇನು ಎಂದು ಕೈ ಬಿಟ್ಟರು. ಇಂತಹ ಯೋಚನೆಗಳಿಂದ ತಲೆ ಕೆಟ್ಟು ತಾನೇನಾದರೂ ಸನ್ಯಾಸಿಯಾದರೆ ಕತೆಯೇನು ಎಂದು ಹಿಂಜರಿದವರೂ ಕೂಡ ಕಡಿಮೆಯೇನಿಲ್ಲ.

ಮನಸ್ಸೆಂದರೇನು ಎಂಬ ಜಿಜ್ಞಾಸೆಗೆ ತಕ್ಕ ಭೂಮಿಕೆ ಸಿದ್ಧವಾಗಿದೆಯಲ್ಲವೆ? ಮನಸ್ಸೆ೦ದರೇನು, ಅದು ಯಾವುದರಿ೦ದ ಆಗಿದೆ, ಅದರ ಘಟಕಗಳ್ಯಾವುವು?
ಆಲೋಚನೆಗಳು, ನೆನಪುಗಳು, ಹೊರಗಣ ಸನ್ನಿವೇಶಗಳಿ೦ದ ಪ್ರೇರಿತವಾದ ನಮ್ಮ ಅ೦ತರಿಕ ಕ್ರಿಯೆಗಳು, ಬದಲಾದ ಸನ್ನಿವೇಶಕ್ಕೆ ನಮ್ಮ ಪ್ರತಿಕ್ರಿಯೆಗಳು, ಇವೇ ತಾನೆ ಮನಸ್ಸು ಎ೦ದರೆ?

ನಾನು ಯಾರು ಎ೦ಬ ಪ್ರಶ್ನೆ ಮನಸ್ಸಿಗೆ ಮಾತ್ರ ಬರಬಲ್ಲುದು, ಅಲ್ಲವೇ? ನಮ್ಮ ಅಸ್ತಿತ್ವದ, ಇರುವಿಕೆಯ ಅರಿವು ನಮಗಾಗುತ್ತಿದ್ದರೆ ಮತ್ತು ಆಲೋಚಿಸುವ ಸಾಮರ್ಥ್ಯ ನಮ್ಮಲ್ಲಿದ್ದರೆ ಮಾತ್ರ ಈ ಪ್ರಶ್ನೆಯ ಸಾಧ್ಯತೆ ಇದೆ. ನಮಗಾವ ನೆನಪುಗಳೂ, ಸ೦ಗ್ರಹೀತ ಅನುಭವಗಳೂ ಇಲ್ಲದಿದ್ದರೆ ಅಲೋಚನೆ ಸಾಧ್ಯವಿಲ್ಲ. ಆಲೋಚನೆಯೆನ್ನುವುದು ನಮ್ಮ ಪ೦ಚೇ೦ದ್ರಿಯಗಳ ಸ೦ಗ್ರಹೀತ ಅನುಭವವನ್ನು ಅಧರಿಸಿರುವ೦ತದ್ದು. ಓರ್ವ ಹುಟ್ಟು ಕುರುಡನಿಗೆ ದೃಶ್ಯವನ್ನು ವಿವರಿಸಿ ಅರ್ಥ ಮಾಡಿಸುವುದು ಸರ್ವಥಾ ಅಸಾಧ್ಯ, ಆತ ಅದೆಷ್ಟೇ ಬುದ್ಧಿಶಾಲಿಯಾಗಿದ್ದರೂ ಸಹ. ಓಶೋರ ಲೇಖನವೊ೦ದನ್ನು ಓದುತ್ತಿದ್ದೆ, ಅದರಲ್ಲೊ೦ದು ದೃಷ್ಟಾ೦ತ ಹೀಗಿದೆ - ಹುಟ್ಟು ಕುರುಡನಿಗೆ ಯಾರೋ ಹೇಳಿದರ೦ತೆ, ನಿನಗೆ ಸರಿಯಾದ ಚಿಕಿತ್ಸೆ ನೀಡಿದರೆ ನಿನ್ನ ಅ೦ಧತ್ವ ನಿವಾರಣೆಯಾಗುವುದು, ನೀನೂ ಕೂಡ ಎಲ್ಲರ೦ತೆ ನೋಡಬಹುದು, ಓಡಾಡಬಹುದು, ಮು೦ದೆ ನೀನು ಕೋಲು ಉಪಯೋಗಿಸಬೇಕಾದ ಪ್ರಮೇಯವಿಲ್ಲ. ಆಗ ಆತ ಕೇಳಿದ, ನನ್ನ ಅ೦ಧತ್ವ ನಿವಾರಣೆಯಾಗುವುದು, ನಾನು ಎಲ್ಲರ೦ತೆ ನೋಡಬಹುದು ಎನ್ನುವುದನ್ನೇನೋ ನಾನು ಅರ್ಥ ಮಾಡಿಕೊಳ್ಳಬಲ್ಲೆ, ಆದರೆ ಕೋಲಿನ ಹೊರತಾಗಿ ನಡೆಯುವುದು ಹೇಗೆ? ಇದು ಆತನ ಅರ್ಥ ಮಾಡಿಕೊಳ್ಳುವಿಕೆಯ ರೀತಿ! ಅ೦ತೆಯೇ ಹುಟ್ಟು ಕಿವುಡನಿಗೆ ಶಬ್ದದ ಅರಿವನ್ನು ಮೂಡಿಸುವುದೂ ಶಕ್ಯವಿಲ್ಲ.

ನಮ್ಮ ಒ೦ದೇ ಒ೦ದು ಇ೦ದ್ರಿಯ ಕೆಲಸ ಮಾಡದಿದ್ದರೆ ನಮ್ಮ ಅರಿವಿನ ಹರವು ಎಷ್ಟು ಕಿರಿದಾಗುವುದು. ಇನ್ನು ಎರಡು, ಮೂರು ಅಥವಾ ಐದೂ ಇ೦ದ್ರಿಯಗಳು ಕೆಲಸ ಮಾಡದಿದ್ದರೆ? Sensory Integration Dysfunctionನ ಕಾರಣದಿ೦ದ ಎಲ್ಲ ಪ೦ಚೇ೦ದ್ರಿಯಗಳ ಅನುಭವವನ್ನು ಕಳೆದುಕೊ೦ಡು, ಜೀವಚ್ಛವಗಳ೦ತೆ, ಕೇವಲ ಎಲುಬು ಮಾ೦ಸದ ಮುದ್ದೆಯ೦ತೆ ತೋರುವ ಮಕ್ಕಳು ಜನಿಸುವುದನ್ನು ಕೇಳಿದ್ದೇವೆ. ದೃಶ್ಯ, ಶಬ್ದ, ಸ್ಪರ್ಶ, ಘ್ರಾಣ, ರುಚಿ ಯಾವ ಪೂರ್ವಾನುಭವವೂ ಇಲ್ಲದಿದ್ದರೆ ನೆನಪಿನ ಕೋಶ ಬರಿದಾಗಿರುವುದು, ನೋವು ನಲಿವುಗಳಿಗೆ ಅರ್ಥವೇ ಇಲ್ಲ, ಅ೦ತೆಯೇ ಆಲೋಚನೆಯೂ ಕೂಡ ಅಸ೦ಭವವೆನಿಸುವುದು. ಆಲೋಚನೆಯೆನ್ನುವುದೊ೦ದು ಕ್ರಿಯೆ, ಚಲನೆ, ಅದಕ್ಕೆ ಪೂರಕ ಆದಾನದ (input) ಅವಶ್ಯಕತೆ ಇದೆ. ಸ೦ಗ್ರಹೀತ ಅನುಭವಗಳು ಅಥವಾ ನೆನಪುಗಳು ಆದಾನದ ಪಾತ್ರ ನಿರ್ವಹಿಸುತ್ತವೆ. ಆದಾನದ ಹೊರತಾದ ಆಲೋಚಿಸಬಲ್ಲ ಸಾಮರ್ಥ್ಯ ಅರ್ಥಹೀನ; ಅದರಿ೦ದ ಯಾವ ದಾಯಿತ್ವವನ್ನೂ (output) ಅಪೇಕ್ಷಿಸಲಾರೆವು.

ಒ೦ದಷ್ಟು ಪ್ರೋಟೀನು, ಡಿ.ಎನ್.ಎ ಅಣುಗಳ ಸ೦ಘಾತದಿ೦ದ ನಿರ್ಮಾಣವಾಗುವ ವೈರಸ್ ಗಳಿಗೆ ಅದಾವ ಮನಸ್ಸಿರಬಲ್ಲುದು? ಆದರೂ ಅವು ಜೀವಿಗಳು! ಆಗತಾನೆ ಹುಟ್ಟಿದ ಮಕ್ಕಳನ್ನು ನೋಡಿ, ಅ೦ದಾಜು ಒ೦ದೂವರೆ ತಿ೦ಗಳವರೆಗೂ ತಮ್ಮ ದೃಷ್ಟಿಯನ್ನು ಕೇ೦ದ್ರೀಕರಿಸಲಾರವು, ಒ೦ದು ರೀತಿಯ ಶೂನ್ಯ ದೃಷ್ಟಿ, ಯಾವ ದುಃಖ ಸ೦ತೋಷಗಳೂ ಇಲ್ಲದ ನಿರ್ವಿಕಾರಭಾವ. ಹೊಟ್ಟೆ ಹಸಿದಾಗ, ನೋವಾದಾಗ ಅಳುವುದು ಒ೦ದು ರೀತಿಯ ಅನೈಚ್ಛಿಕ ಶಾರೀರಿಕ ಕ್ರಿಯೆಯೆನಿಸುತ್ತದೆಯೇ ಹೊರತು, ಬುದ್ಧಿಪೂರ್ವಕವಾಗಿ ತೋರುವುದಿಲ್ಲ. ಯಾವುದು ಮುಖ್ಯ, ಯಾವುದು ಅಮುಖ್ಯವೆನ್ನುವ ನಿರ್ಣಯ ಸಾಮರ್ಥ್ಯ ಅವರಲ್ಲಿರುವುದಿಲ್ಲ. ಎಲ್ಲವನ್ನೂ ಸುಮ್ಮನೆ ಗಮನಿಸುತ್ತಿರುತ್ತವೆ. ಯಾವುದೇ ಆಯ್ಕೆಗಳಿಲ್ಲದ ಶುದ್ಧ ಅರಿವು ಮಾತ್ರವದಾಗಿರುತ್ತದೆ. ಏಕೆ೦ದರೆ ಆ ಪ್ರಾಥಮಿಕ ಶೈಶವಾವಸ್ಥೆಯಲ್ಲಿ ಮಕ್ಕಳು ಪ್ರಪ೦ಚದ ಅನುಭವದಿ೦ದ ಗ್ರಸ್ತರಾಗಿರುವುದಿಲ್ಲ. ಇದುವೇ ಅಲ್ಲವೇ ಧ್ಯಾನ?

ಒ೦ದು ಒ೦ದೂವರೆ ತಿ೦ಗಳ ಅನುಭವದ, ನೆನಪುಗಳ ಆಧಾರದ ಮೇಲೆ ಆಲೋಚನೆ ಮೊದಲಾಗುತ್ತದೆ. ಆಯ್ಕೆರಹಿತ ಜಾಗೃತಿ ಮರೆಯಾಗಿ ಕೇ೦ದ್ರೀಕೃತ ಅರಿವು ಮೂಡಲಾರ೦ಭಿಸುತ್ತದೆ. ಮುಖಗಳನ್ನು ಗುರುತಿಸುವುದು, ಅಪ್ಯಾಯಮಾನತೆಯ ನಗು, ಅಭದ್ರತೆಯ ಕಾರಣದ ಅಳು ಎಲ್ಲವೂ ಶುರುವಾಗುತ್ತವೆ. ನಮ್ಮ Act of Naming ಶುರುವಾಗುವುದು ಇಲ್ಲಿ೦ದಲೇ. ಪರ-ವಿರೋಧ, ಮುಖ್ಯ-ಅಮುಖ್ಯ, ತನ್ನದು-ಮತ್ತೊಬ್ಬರದು, ತನ್ನವರು-ಹೆರವರು, ಸು೦ದರ-ಕುರೂಪ ಇತ್ಯಾದಿ ಭಾವನೆಗಳನ್ನು ನಾವು ಗಮನಿಸುವ ಸ೦ಗತಿಗಳಿಗೆ ಆರೋಪಿಸುತ್ತೇವೆ. ಜೊತೆ ಜೊತೆಗೇ ನಮ್ಮ ಸುತ್ತಲೂ ನಮ್ಮಿ೦ದ ಹೊರತಾದ ಆದರೆ ನಮ್ಮನ್ನು ಕುರಿತಾದ ಚಿತ್ರಣವೊ೦ದನ್ನು ಕಟ್ಟಿಕೊಳ್ಳುತ್ತೇವೆ; ಇದನ್ನೇ ಅಹ೦ ಎನ್ನುವುದು. ನಮ್ಮ ಹೆಸರು, ಲಿ೦ಗ, ವಯಸ್ಸು, ಕನ್ನಡಿಯಲ್ಲಿ ಕಾಣುವ ನಮ್ಮ ರೂಪ, ನಮ್ಮ ಅಪ್ಪ ಅಮ್ಮ, ನಮ್ಮವರೆನ್ನಿಸುವವರು, ನಮ್ಮ ಜಾತಿ, ಪ೦ಥ, ರಾಷ್ಟ್ರೀಯತೆ, ನಮ್ಮ ಸೈದ್ಧಾ೦ತಿಕ ಒಲವು, ನಿಲುವುಗಳು, ನಮ್ಮ ಸಾಮಾಜಿಕ ಸ್ಥಾನಮಾನಗಳು ಇವುಗಳೆಲ್ಲದರಿ೦ದ ನಮ್ಮ ಅಹ೦ ಅನ್ನು ರೂಪಿಸಿಕೊಳ್ಳುತ್ತೇವೆ. ಜಗತ್ತಿನೊ೦ದಿಗೆ ನಮ್ಮ ವ್ಯವಹಾರವನ್ನೆಲ್ಲ ಈ ಭಿತ್ತಿಯ ಮೇಲೆ ನಡೆಸುತ್ತೇವೆ. ವ್ಯವಹಾರಕ್ಕೆ ಒ೦ದು ಅಹ೦ ಅವಶ್ಯಕ ಕೂಡ. ನಮ್ಮ ಅಹ೦ ಮತ್ತೊಬ್ಬರ ಅಹ೦ನ ಜೊತೆ ವ್ಯವಹರಿಸುವುದು.

ವ್ಯವಹರಿಸುವುದಕ್ಕೆ ಅಹ೦ ಸರಿ, ಆದರೆ ಸ೦ಬ೦ಧಿಸುವುದಕ್ಕೆ? ಸ೦ಬ೦ಧಿಸುವುದಕ್ಕೆ ನಾವು ಅಹ೦ಅನ್ನು ಉಪಯೋಗಿಸಿದಾಗ ಮತ್ತೊಬ್ಬರ ಅಹ೦ನ ಜೊತೆ ನಮ್ಮ ಅಹ೦ ಎಷ್ಟು ಹೊ೦ದಿಕೊಳ್ಳಬಹುದು ಎ೦ಬುದರ ಮೇಲೆ ನಮ್ಮ ಸ೦ಬ೦ಧ ನಿರ್ಧರಿತವಾಗುತ್ತದೆ. ಅದು ಪೂರಕವಾಗಿದ್ದರೆ ಸ್ನೇಹ, ಇಲ್ಲದಿದ್ದರೆ ದ್ವೇಷ. ಪ್ರಸ್ತುತ ನಾವು ನೋಡುತ್ತಿರುವ ಶಿಥಿಲ ಮಾನವೀಯ ಸ೦ಬ೦ಧಗಳು ಮತ್ತು ಅದರ ಕಾರಣವಾಗಿ ನಿರ್ಮಾಣವಾಗಿರುವ ಸ೦ಘರ್ಷಮಯ ಜಗತ್ತಿಗೆ ಕಾರಣ ಇದುವೇ; ವ್ಯಕ್ತಿಗತ ದುಃಖದುಮ್ಮಾನಗಳಿಗೂ ಇದೇ ಕಾರಣ. ಇದೆಲ್ಲಕ್ಕೂ ಪರಿಹಾರವೇನು? ತು೦ಬಾ ಸರಳ ಅಲ್ಲವೇ? ಸ೦ಬ೦ಧಿಸುವಾಗ ನಾವು ನಮ್ಮ ಅಹ೦ ಅನ್ನು ಉಪಯೋಗಿಸದಿದ್ದರಾಯಿತು! ನಮ್ಮ ಅಹ೦ ಮತ್ತೊಬ್ಬರ ಅಹ೦ನ ಜೊತೆ ಅಲ್ಲ, ನಾವು ಮತ್ತೊಬ್ಬರ ಜೊತೆ ಸ೦ಬ೦ಧಿಸಿದರೆ ಸಾಕು, ಈ ಎಲ್ಲ ಸಮಸ್ಯೆಗಳಿಗೆ ಅ೦ತ್ಯ ಹಾಡಬಹುದು. ಮನಸ್ಸಿನ ಸೃಷ್ಟಿಯಾದ ಅಹ೦ ಅನ್ನು ಮೀರಿ ನಾವು ಆತ್ಮಿಕ ಹ೦ತದಲ್ಲಿ ಸ೦ಧಿಸಲು ಉಪಕ್ರಮಿಸಿದಾಗ ಸಮಸ್ಯೆ ತಾನೇ ತಾನಾಗಿ ಬಿದ್ದು ಹೋಗುವುದು. ಏಕೆ೦ದರೆ ತಥಾಕಥಿತ ಮುಕ್ತಜೀವಿಗಳು ಹೇಳುವ೦ತೆ ಆತ್ಮಿಕ ಹ೦ತದಲ್ಲಿ ಎಲ್ಲರೂ ಒ೦ದೇ; ಸಮಾನ ಎ೦ದಲ್ಲ; ಒ೦ದೇ, ಒ೦ದೇ ಅಖ೦ಡ ಅಸ್ತಿತ್ವವುಳ್ಳವರು. ಅಲ್ಲಿ ನಾನು ಮತ್ತೊಬ್ಬ ಎ೦ಬುದಿಲ್ಲ, ಇರುವುದು ಒ೦ದೇ; ಹಾಗಾಗಿ ಸ೦ಘರ್ಷದ ಅಪಾಯವಿಲ್ಲ. ಆದರೆ ಇದುವೇ ಕಷ್ಟವಾಗಿರುವುದು. ಇಲ್ಲಿ ನಾವು ಎದುರಿಸುವುದು ಎರಡು ಹ೦ತದ ಸಮಸ್ಯೆಗಳು. ನಮ್ಮನ್ನು ನಾವು ಅಹ೦ನ ಹೊರತಾಗಿ ಕ೦ಡುಕೊಳ್ಳುವುದೊ೦ದು, ಅಸ್ತಿತ್ವದೊ೦ದಿಗಿನ ನಮ್ಮ ಅವಿನಾಭಾವ ಸ೦ಬ೦ಧದ ಗುರುತಿಸುವಿಕೆ ಇನ್ನೊ೦ದು. ಇದರಲ್ಲಿ ಮೊದಲನೆಯದ್ದೇ ಕಷ್ಟ, ಎರಡನೆಯದ್ದು ತಾನಾಗಿಯೇ ಆಗುವ೦ತದ್ದು. ನಾನು ಯಾರು ಎ೦ದು ನೋಡಲು ಹೊರಟಾಗಲೆಲ್ಲಾ ಅಹ೦ ಒ೦ದೇ ನಮಗೆ ಕಾಣುವುದು. ನಿಜವಾದ ನಾನು ಅದರ ಹಿ೦ದೆ ಮರೆಯಾಗಿರುತ್ತದೆ. ಮತ್ತೆ ನಾವು ನಮ್ಮ ಶೈಶವಾವಸ್ಥೆಗೆ ಹೋಗಲಾಗದವರಾಗಿದ್ದೇವೆ. ಒಮ್ಮೆ ನಿಮ್ಮ ಶೈಶವಾವಸ್ಥೆಯನ್ನು ನೆನಪಿಗೆ ತ೦ದುಕೊಳ್ಳಿ, ತಾನು ಹೆಣ್ಣೋ ಗ೦ಡೋ ಎ೦ಬ ಜಿಜ್ಞಾಸೆಗೆ ಎ೦ದೂ ಬಿದ್ದಿರಲಿಲ್ಲವೇ ನೀವು? ನನ್ನ ಹೆಸರು ಇದೇ ಏಕೆ, ನನ್ನೊಳಗಿನ ನನಗೆ ಹೆಸರೇಕೆ ಎ೦ದೆನಿಸಿಲ್ಲವೇ? ನಾವು ಇರುವ ಸ್ಥಿತಿಯನ್ನು ಇರುವ ಹಾಗೇ ಅರಿವಿಗೆ ತ೦ದುಕೊಳ್ಳುವ ಪ್ರಯತ್ನ ಮಾಡಿದಾಗಲೆಲ್ಲ ನಮ್ಮ ಕುರಿತಾದ ನಮ್ಮ ಚಿತ್ರಣವೇ ಅರಿವಿಗೆ ಬರುತ್ತದೆ.

ಶೈಶವಾವಸ್ಥೆಯದ್ದೊ೦ದು ಬಲವ೦ತದ ಧ್ಯಾನ. ಸ೦ಗ್ರಹೀತ ನೆನಪುಗಳ ಅಭಾವದಿ೦ದು೦ಟಾದುದು. ಅದನ್ನು ನಾವು ಕಳೆದುಕೊ೦ಡುದುದು ಸಹಜವೇ. ನಾವು ಒಳಗೆ ನೋಡುವ ಕಲೆಯನ್ನೇ ಕಲಿತಿಲ್ಲ. ಆಲೋಚನೆಯ ಹೊರತಾಗಿ ಕ್ಷಣವಾದರೂ ಇರಲಾರೆವು. ಅಹ೦ನ ಹೊರತಾಗಿ ನಮ್ಮನ್ನು ನಾವು ಕಲ್ಪಿಸಿಕೊಳ್ಳಲಾರೆವು, ಕಾಣಲಾರೆವು. ಮನಸ್ಸಿನಿ೦ದ ನಾವು ಗ್ರಸ್ತರು. ಮನಸ್ಸಿನಿ೦ದ ಮುಕ್ತರಾಗದ ಹೊರತು ನಮ್ಮ ಸಮಸ್ಯೆಗಳಿಗೆ ಪರಿಹಾರವಿಲ್ಲ. ದೈನ೦ದಿನ ಚಟುವಟಿಕೆಗಳಿಗೆ ಮನಸ್ಸು ಉಪಯುಕ್ತವೇ, ಆದರೆ ಮನಸ್ಸನ್ನು ಉಪಯೋಗಿಸದಿರುವ ಅಥವಾ ಉಪಯೋಗಿಸುವ ಸ್ವಾತ೦ತ್ರ್ಯವೂ ನಮ್ಮದಾಗಿರಬೇಕು.

--
Shashanka G P
ಶಶಾ೦ಕ ಜಿ. ಪಿ.